ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 16, 2023

Mahabharata Tatparya Nirnaya Kannada 32-148-153

 

ತಂ ಜಾತಮಾತ್ರಂ ಪ್ರಹಸನ್ತಮೀಕ್ಷ್ಯಸುವಿಸ್ಮಿತೈಃ ಪೃಷ್ಟ ಉವಾಚ ವಿಷ್ಣುಃ ।

ಬುದ್ಧೋSಹಮಿತ್ಯೇವ ಸುನಿತ್ಯಬೋಧಾಜ್ಜಗಾದ ಚೈಷಾಮಥ ಬುದ್ಧದರ್ಶನಮ್ ॥ ೩೨.೧೪೮ ॥

 

ಹುಟ್ಟಿದ ಕೂಡಲೇ ನಗುತ್ತಿರುವ ಆ ಮಗುವನ್ನು ಕಂಡು, ಅಚ್ಚರಿಗೊಂಡ ಅವರಿಂದ ಕೇಳಲ್ಪಟ್ಟವನಾದ ವಿಷ್ಣುವು, ನಿತ್ಯವಾಗಿರುವ ಜ್ಞಾನವಿರುವುದರಿಂದ ನಾನು ‘ಬುದ್ಧ’ ಎಂದೇ ಹೇಳಿಕೊಂಡನು. ಅವರಿಗೆ ಇದು ‘ಬುದ್ಧನ ಶಾಸ್ತ್ರಾ’ ಎಂದೂ ಹೇಳಿದನು.

 

ತಥಾSಪ್ಯವಿಶ್ವಾಸಮವೇಕ್ಷ್ಯ ತೇಷಾಂ ಸಸ್ಮಾರ ದೇವಾನಖಿಲಾನ್ ಜನಾರ್ದ್ದನಃ ।

ವಿಜ್ಞಾಯ ತೇ ತಸ್ಯ ಮನೋಗತಂ ನಿಜಾನ್  ಪ್ರಚಿಕ್ಷಿಪುರ್ಹೇತಿಗಣಾನಮುಷ್ಮಿನ್ ॥ ೩೨.೧೪೯ ॥

 

ಹೀಗೆ ಸ್ವಯಂ ದೇವರೇ ‘ನಾನು ಬುದ್ಧ, ಈ ಎಲ್ಲಾ ವೈದಿಕ ಕರ್ಮಗಳನ್ನು ಮಾಡಬೇಡಿ’ ಎಂದು ಹೇಳಿದಾಗ, ಅವರಿಗೆ ವಿಶ್ವಾಸವೇ ಬರಲಿಲ್ಲ. ಅವರ ಅವಿಶ್ವಾಸವನ್ನು ಕಂಡು, ಶ್ರೀಹರಿಯು ಎಲ್ಲಾ ದೇವತೆಗಳನ್ನು ಸ್ಮರಿಸಿದನು. ಆಗ ಎಲ್ಲಾ ದೇವತೆಗಳು ನಾರಾಯಣನ ಮನಸ್ಸಿನ ಅಭಿಪ್ರಾಯವನ್ನು ತಿಳಿದು, ಈ ಬುದ್ಧನ ಮೇಲೆ ತಮ್ಮ ಆಯುಧಗಳನ್ನು ಎಸೆದರು.

 

ಸ ಜಾತಮಾತ್ರಃ ಶಿವಪೂರ್ವಕಾಣಾಂ ಶೂಲಾದಿಹೇತೀರಖಿಲಾ ನಿಗೀರ್ಯ್ಯ ।

ದೈತ್ಯಾತಿಮೋಹಾಯ ನಿಜಂ ಚ ಚಕ್ರಂ ಸ್ವಮುಕ್ತಮಾಶ್ವೇವ ವಶೀ ಸಮಗ್ರಹೀತ್ ॥ ೩೨.೧೫೦ ॥

 

ಈಗಷ್ಟೇ ಹುಟ್ಟಿರುವ ಮಗುವಿನ(ಬುದ್ಧನ) ರೂಪದಲ್ಲಿರುವ ಆ ನಾರಾಯಣನು, ಶಿವ ಮೊದಲಾದ ಎಲ್ಲಾ ದೇವತೆಗಳ, ಶೂಲ ಮೊದಲಾದ ಆಯುಧಗಳನ್ನು ನುಂಗಿ, ದೈತ್ಯರನ್ನು ಮೋಹಗೊಳಿಸಲು, ವಿಷ್ಣುರೂಪದಲ್ಲಿ ತಾನೇ  ಬಿಟ್ಟ ತನ್ನ ಸುದರ್ಶನ ಚಕ್ರವನ್ನು ಶೀಘ್ರದಲ್ಲಿ ಹಿಡಿದುಕೊಂಡ.

 

ತದಾಸನತ್ವೇನ ವಿಧಾಯ ತಸ್ಮಿನ್ ಸಮಾಸ್ಥಿತಂ ದೇವಗಣಾಃ ಪ್ರಣಮ್ಯ ।

ಜಗ್ಮುಃ ಸ್ವಧಾಮಾನಿ ವಚಾಂಸಿ ಚಾಸ್ಯ ಸ್ವೀಚಕ್ರುರಾಶ್ವೇವ ಜಿನಾದಿದೈತ್ಯಾಃ ॥ ೩೨.೧೫೧ ॥

 

ಸುದರ್ಶನ ಚಕ್ರವನ್ನೇ ತನ್ನ ಆಸನವಾಗಿ ಮಾಡಿಕೊಂಡಿರುವ ಆ ಮಗುವಿನ ರೂಪದಲ್ಲಿರುವ ಶ್ರೀಹರಿಗೆ ದೇವತೆಗಳೆಲ್ಲರೂ ನಮಸ್ಕರಿಸಿ, ತಮ್ಮ ಧಾಮಕ್ಕೆ ತೆರಳಿದರು. ಆ ಬುದ್ಧನ ಮಾತುಗಳನ್ನು ಜಿನ ಮೊದಲಾದ ದೈತ್ಯರು ಕೂಡಲೇ ಸ್ವೀಕರಿಸಿದರು.

 

ತೇ ಜ್ಞಾನಧರ್ಮ್ಮಾವಪಹಾಯ ಪಾಪಾ ವಿಮೋಹಿತಾ ದೇವವರೇಣ ಸರ್ವೇ ।

ಜಗ್ಮುಸ್ತಮೋSನ್ಧಂ ಕ್ಷಣಿಕಂ ಸಮಸ್ತಂ ಜ್ಞಾನಂ ನಸಚ್ಛೇತಿ ದೃಢಂ ಸ್ಮರನ್ತಃ ॥ ೩೨.೧೫೨ ॥

 

ಪಾಪಿಷ್ಠರಾದ ಆ ಎಲ್ಲಾ ದೈತ್ಯರು ನಾರಾಯಣನಿಂದ ದಾರಿ ತಪ್ಪಿಸಲ್ಪಟ್ಟವರಾಗಿ, ಜ್ಞಾನ ಹಾಗೂ ಧರ್ಮವನ್ನು ಬಿಟ್ಟು, ಈ ಪ್ರಪಂಚ ಕ್ಷಣಿಕವೆಂದೂ, ಈ ಪ್ರಪಂಚದಲ್ಲಿ ಕೇವಲ  ಜ್ಞಾನ ಮಾತ್ರ ಇರುವುದು  ಎಂದೂ, ಈ ಪ್ರಪಂಚ ಅಸತ್ಯ, ಶೂನ್ಯ, ಎಂದೂ ಗಟ್ಟಿಯಾಗಿ ಸ್ಮರಣೆ ಮಾಡುತ್ತಾ, ಅನ್ಧಂತಮಸ್ಸನ್ನು ಹೊಂದಿದರು.

 

ನಾರಾಯಣೋSಪ್ಯಾಪ್ಯ ಸುರೇನ್ದ್ರವೃನ್ದಂ ವೃತ್ತಂ ಚ ತೇಷಾಮಖಿಲಂ ನಿಗದ್ಯ ।

ಪೃಷ್ಟಶ್ಚ ತೈರಾಹ ನಿಜಂ ಹೃದಿಸ್ಥಂ ಬೌದ್ಧಾಗಮಾರ್ತ್ಥಂ ಸೃತಿಬನ್ಧಮೋಚನಮ್ ॥ ೩೨.೧೫೩ ॥

 

ಬುದ್ಧರೂಪಿಯಾದ ನಾರಾಯಣನೂ ಕೂಡಾ ದೇವತಾ ಸಮೂಹವನ್ನು ಹೊಂದಿ, ಆ ದೇವತೆಗಳಿಗೆ ಎಲ್ಲಾ ವೃತ್ತಾಂತವನ್ನು ಹೇಳಿ, ಅವರಿಂದ ಬುದ್ಧಶಾಸ್ತ್ರದ ಕುರಿತು ಕೇಳಲ್ಪಟ್ಟವನಾಗಿ, ತನ್ನ ಹೃದಯದಲ್ಲಿ ಇರುವ, ತಾನೇ ರಚನೆ ಮಾಡಿದ, ಸಂಸಾರದ ಬಂಧನವನ್ನು ಬಿಡುಗಡೆ ಮಾಡುವ ಬೌದ್ಧಾಗಮನದ ನಿಜಾರ್ಥವನ್ನು  ಅವರಿಗೆ ಬಿಡಿಸಿ ಹೇಳಿದನು.

No comments:

Post a Comment