ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 17, 2023

Mahabharata Tatparya Nirnaya Kannada 32-170-175

 

ಆನನ್ದತೀರ್ತ್ಥಾಖ್ಯಮುನಿಃ ಸುಪೂರ್ಣ್ಣಪ್ರಜ್ಞಾಭಿಧೋ ಗ್ರನ್ಥಮಿಮಂ ಚಕಾರ ।

ನಾರಾಯಣೇನಾಭಿಹಿತೋ ಬದರ್ಯ್ಯಾಂ ತಸ್ಯೈವ ಶಿಷ್ಯೋ ಜಗದೇಕಭರ್ತ್ತುಃ ॥ ೩೨.೧೭೦ ॥

 

ಜಗತ್ತಿಗೇ ಒಡೆಯನಾಗಿರುವ ವೇದವ್ಯಾಸರ ಶಿಷ್ಯನಾಗಿರುವ ಈ ಆನಂದತೀರ್ಥ ಎಂಬ ಮುನಿಯು, ಬದರಿಯಲ್ಲಿ ನಾರಾಯಣನಿಂದ ಆದೇಶಿಸಲ್ಪಟ್ಟವನಾಗಿ, ಪೂರ್ಣಪ್ರಜ್ಞಾ ಎಂಬ ಹೆಸರಿನವನಾಗಿ ಈ ಗ್ರಂಥವನ್ನು ರಚಿಸಿದನು.

 

ಯಸ್ತತ್ಪ್ರಸಾದಾದಖಿಲಾಂಶ್ಚ ವೇದಾನ್ ಸಪಞ್ಚರಾತ್ರಾನ್ ಸರಹಸ್ಯಸಙ್ಗ್ರಹಾನ್ ।

ವೇದೇತಿಹಾಸಾಂಶ್ಚ ಪುರಾಣಯುಕ್ತಾನ್ ಯಥಾವದನ್ಯಾ ಅಪಿ ಸರ್ವವಿದ್ಯಾಃ ॥ ೩೨.೧೭೧ ॥

 

ಭಗವಂತನ ಅನುಗ್ರಹದಿಂದ ಈ ಪೂರ್ಣಪ್ರಜ್ಞ ಎಲ್ಲಾ ಪಂಚರಾತ್ರ, ಬ್ರಹ್ಮಸೂತ್ರಾದಿಗಳಿಂದ ಒಡಗೂಡಿರುವ, ಪುರಾಣ, ವೇದ-ಇತಿಹಾಸಗಳಿಂದ ಕೂಡಿರುವ ಎಲ್ಲಾ ವಿದ್ಯೆಗಳನ್ನೂ ಕೂಡಾ ಬಲ್ಲವನಾಗಿದ್ದ.   

 

ಸಮಸ್ತಶಾಸ್ತ್ರಾರ್ತ್ಥವಿನಿರ್ಣ್ಣಯೋSಯಂ ವಿಶೇಷತೋ ಭಾರತವರ್ತ್ಮಚಾರೀ ।

ಗ್ರನ್ಥಃ ಕೃತೋSಯಂ ಜಗತಾಂ ಜನಿತ್ರಂ ಹರಿಂ ಗುರುಂ ಪ್ರೀಣಯತಾSಮುನೈವ ॥ ೩೨.೧೭೨ ॥

 

ಈ ಗ್ರಂಥ ಸಮಸ್ತ ಶಾಸ್ತ್ರದ ಅರ್ಥನಿರ್ಣಯ. ಇದು ವಿಶೇಷವಾಗಿ ಮಹಾಭಾರತದಲ್ಲಿ ಸಂಚರಿಸುತ್ತದೆ. ಜಗತ್ತಿನ ಜನಕನಾಗಿರುವ, ತನ್ನ ಗುರುವಾಗಿರುವ ನಾರಾಯಣನನ್ನು ಸಂತೋಷಗೊಳಿಸುವ ಸಲುವಾಗಿ ಈ ಆನಂದತೀರ್ಥನಿಂದಲೇ ಈ ಗಂಥವು ರಚಿಸಲ್ಪಟ್ಟಿದೆ.

 

ವಿನಿರ್ಣ್ಣಯೋ ನಾಸ್ತ್ಯಮುನಾ ವಿನಾ ಯದ್ ವಿಪ್ರಸ್ಥಿತಾನಾಮಿವ ಸರ್ವವಾಚಾಮ್ ।

ತದ್ ಬ್ರಹ್ಮಸೂತ್ರಾಣಿ ಚಕಾರ ಕೃಷ್ಣೋ ವ್ಯಾಖ್ಯಾSಥ ತೇಷಾಮಯಥಾ ಕೃತಾSನ್ಯೈಃ ॥ ೩೨.೧೭೩ ॥

 

ಈ ಗ್ರಂಥಕ್ಕಿಂತ ಅತಿರಿಕ್ತವಾದ ನಿರ್ಣಯವು ಇಲ್ಲ. ಇತಿಹಾಸ-ಪುರಾಣಗಳ ಪರಸ್ಪರ ವಿರುದ್ಧವಾಗಿರುವ ಎಲ್ಲಾ ಮಾತುಗಳ ನಿರ್ಣಯಕ್ಕಾಗಿ ಬ್ರಹ್ಮಸೂತ್ರಗಳನ್ನು ವೇದವ್ಯಾಸರು ರಚಿಸಿದರು. ಅದರ ವ್ಯಾಖ್ಯಾನವೂ ಕೂಡಾ ಬೇರೆಯವರಿಂದ ಬೇರೇ ರೀತಿಯಾಗಿ ಮಾಡಲ್ಪಟ್ಟಿದೆ.

 

ನಿಗೂಹಿತಂ ಯತ್ ಪುರುಷೋತ್ತಮತ್ವಂ ಸೂತ್ರೋಕ್ತಮಪ್ಯತ್ರ ಮಹಾಸುರೇನ್ದ್ರೈಃ ।

ಜೀವೇಶ್ವರೈಕ್ಯಂ ಪ್ರವದದ್ಭಿರುಗ್ರೈರ್ವ್ಯಾಖ್ಯಾಯ ಸೂತ್ರಾಣಿ ಚಕಾರ ಚಾSವಿಃ ॥ ೩೨.೧೭೪ ॥

 

ಬ್ರಹ್ಮ ಹಾಗೂ ಜೀವರಿಗೆ ಐಕ್ಯವನ್ನು ಹೇಳುವ ದೈತ್ಯರಿಂದ ಮುಚ್ಚಲ್ಪಟ್ಟ, ಸೂತ್ರದಲ್ಲಿ ಹೇಳಿದ ಪುರುಷೋತ್ತಮತ್ವವನ್ನೂ ಈ ಮುಖ್ಯಪ್ರಾಣನು, ಸೂತ್ರಗಳನ್ನು ವ್ಯಾಖ್ಯಾನಮಾಡಿ ಜನರ ಮುಂದಿಟ್ಟ.  

 

ವ್ಯಾಸಾಜ್ಞಯಾ ಭಾಷ್ಯವರಂ ವಿಧಾಯ ಪೃಥಕ್ಪೃಥಕ್ ಚೋಪನಿಷತ್ಸುಭಾಷ್ಯಮ್ ।

ಕೃತ್ವಾSಖಿಲಾನ್ಯಂ ಪುರುಷೋತ್ತಮಂ ಚ ಹರಿಂ ವದನ್ತೀತಿ ಸಮರ್ತ್ಥಯಿತ್ವಾ ॥ ೩೨.೧೭೫ ॥

 

ವೇದವ್ಯಾಸರ ಅಣತಿಯಂತೆ ಶ್ರೇಷ್ಠವಾದ ಭಾಷ್ಯವನ್ನು ರಚಿಸಿ, ಪ್ರತ್ಯೇಕ-ಪ್ರತ್ಯೇಕವಾಗಿ ಉಪನಿಷತ್ತುಗಳ ಭಾಷ್ಯವನ್ನೂ ಕೂಡಾ ಬರೆದು, ಈ ಜೀವ ಹಾಗೂ ಜಡ ಪ್ರಪಂಚಕ್ಕಿಂತ ವಿಲಕ್ಷಣನಾದ, ಅದರಿಂದಲೇ ಪುರುಷೋತ್ತಮ ಎಂಬ ಹೆಸರಿನವನಾದ ನಾರಾಯಣನನ್ನು ಈ ಎಲ್ಲಾ ಶಾಸ್ತ್ರಗಳು ಹೇಳುತ್ತವೆ ಎಂದು ಸಮರ್ಥನೆ ಮಾಡಿದನು.

No comments:

Post a Comment