ಸಂವತ್ಸರಾಣಾಂ ತು
ಸಹಸ್ರಕೇ ಗತೇ ಪ್ರಾಪ್ತೇಷು ಚ ದ್ಯಾಮಖಿಲೇಷು ಸತ್ಸು ।
ದಗ್ಧಾಃ ಪುರಾ ಯೇ
ತ್ರಿಪುರಂ ಘ್ನತೈವ ರುದ್ರೇಣ ಜಾತಾಃ ಪೃಥಿವೀತಳೇ ತೇ ॥ ೩೨.೧೩೯ ॥
ಧರ್ಮರಾಜನಿಂದ ಕ್ಷೇಮಕನವರೆಗಿನ ಪಾಂಡವ ಸಂತತಿಯ ಸಾವಿರ ವರ್ಷಗಳು ದಾಟಿರಲು, ಎಲ್ಲಾ ಸಜ್ಜನರೂ ಸ್ವರ್ಗವನ್ನು ಹೊಂದುತ್ತಿರಲು, ಯಾವ
ತ್ರಿಪುರಾಸುರರನ್ನು ಹಿಂದೆ ರುದ್ರದೇವರು ಮೂರು ಪಟ್ಟಣಗಳಲ್ಲಿ (ಬಂಗಾರ,
ಬೆಳ್ಳಿ ಮತ್ತು ಕಬ್ಬಿಣದ ಮೂರು ಪಟ್ಟಣಗಳಲ್ಲಿ) ಸುಟ್ಟಿದ್ದರೋ, ಅವರು ಭೂಮಿಯಲ್ಲಿ
ಮತ್ತೆ ಹುಟ್ಟಿದರು.
ಅದರ್ಶನಂ
ಸರ್ವಮುನೀನ್ದ್ರವೃನ್ದೈಃ ಸಹೈವ ಸಜ್ಜ್ಞಾನಮಹಾನಿದಾನೇ ।
ವ್ಯಾಸೇ ಪ್ರಯಾತೇSಪಿ ಸುತತ್ವವಿದ್ಯಾ ತತ್ಸಮ್ಪ್ರದಾಯಾದಪಿ
ತೈರವಾಪ್ತಾ ॥ ೩೨.೧೪೦ ॥
ನಿರ್ದುಷ್ಟವಾಗಿರುವ ಜ್ಞಾನಕ್ಕೆ ಕಾರಣರಾಗಿರುವ ವೇದವ್ಯಾಸರು ಎಲ್ಲಾ ಮುನಿ ಸಮೂಹಗಳಿಂದ ಕೂಡಿಕೊಂಡು
ಅದರ್ಶನವನ್ನು ಹೊಂದಿದರೂ (ಕಾಣದಂತಾದರೂ) ಕೂಡಾ, ವೇದವ್ಯಾಸರ ಸಂಪ್ರದಾಯದಿಂದ ಶೋಭನವಾದ ತತ್ವವಿದ್ಯೆಯು ತ್ರಿಪುರಾಸುರರಿಂದಲೂ
ಹೊಂದಲ್ಪಟ್ಟಿತು.
ಉತ್ಸಾದಿತತ್ವಾತ್ತು
ದುರಾಗಮಾನಾಂ ತತ್ಸಂಪ್ರದಾಯಸ್ಯ ಚ ನಾಶಿತತ್ವಾತ್ ।
ಪ್ರಸಾರಿತತ್ವಾಚ್ಚ
ಸದಾಗಮಾನಾಂ ಪಾಪಾ ಅಪಿ ಜ್ಞಾನಮವಾಪುರೇತತ್ ॥ ೩೨.೧೪೧ ॥
ಕೆಟ್ಟ ಶಾಸ್ತ್ರಗಳೆಲ್ಲದರ ನಾಶವಾಗಿರುವುದರಿಂದ,
ಎಲ್ಲಾ ಕೆಟ್ಟ ಸಂಪ್ರದಾಯಗಳೂ ನಾಶವಾಗಿತ್ತು. ಒಳ್ಳೆಯ ಆಗಮಗಳು ಎಲ್ಲೆಡೆ ಪಸರಿಸಿರಿರುವುದರಿಂದ ಪಾಪಿಷ್ಠರೂ
ಕೂಡಾ, ಈ ಒಳ್ಳೆಯ ತತ್ವಶಾಸ್ತ್ರದ ವಿದ್ಯೆಯನ್ನು ಪಡೆದರು.
ಶುನಾ
ಪುರೋಢಾಶಮಿವಾವಲೀಢಂ ವೇದಶ್ರುತಿಂ ವಾSನ್ತ್ಯಜನೈರವಾಪ್ತಾಮ್
।
ಅನನ್ತದುಃಖಾಪ್ತಿಸುಯೋಗ್ಯದೈತ್ಯೈರ್ವಿದ್ಯಾಮವಾಪ್ತಾಂ
ತು ನ ಸೇಹಿರೇ ಸುರಾಃ ॥ ೩೨.೧೪೨ ॥
ನಾಯಿಯಿಂದ ನೆಕ್ಕಲ್ಪಟ್ಟ ಪುರೋಢಾಶ(ಹವಿರ್ಭಾಗ)ವನ್ನೆಂಬಂತೆ,
ದುಷ್ಟರಿಂದ ಹೊಂದಲ್ಪಟ್ಟಿರುವ ವೇದದ ಸಂಪ್ರದಾಯವನ್ನು ಹೇಗೆ ಸಜ್ಜನರು ಸಹಿಸುವುದಿಲ್ಲವೋ, ಹಾಗೇ ಎಣಿಯಿರದ
ದುಃಖವನ್ನು ಮಾತ್ರ ಹೊಂದಲು ಯೋಗ್ಯತೆ ಇರುವ,
ತಾಮಸರಾಗಿರುವ ದೈತ್ಯರಿಂದ ಹೊಂದಲ್ಪಟ್ಟ ಈ ವಿದ್ಯೆಯನ್ನು ಕಂಡು ದೇವತೆಗಳು ಸಹಿಸಲಿಲ್ಲ.
[ತಾತ್ಪರ್ಯ: ವೇದಾದಿ ಶಾಸ್ತ್ರಗಳು
ಯೋಗ್ಯರಿಗೆ ಮಾತ್ರ ಸಿಗಬೇಕೇ ಹೊರತು ಅಯೋಗ್ಯರಿಗೆ ಸಿಗಬಾರದು. ಹಾಗೆ ಸಿಕ್ಕಿದಾಗ ಅದನ್ನು
ದೇವತೆಗಳು ಸಹಿಸಲಿಲ್ಲ]
ನಾವಾಗ್ಗತಿಃ ಕ್ವಾಪಿ
ಸುವೇದಿನಾಂ ಭವೇತ್ ಪ್ರಾಪ್ಯಂ ಸುಖಂ ನಿತ್ಯಮವಶ್ಯಮೇಭಿಃ ।
ಪ್ರಾಪ್ಯಂ ತಮೋSನ್ಧಂ ತ್ವಸುರೈರ್ನ್ನ ಮುಕ್ತಿಃ ಕದಾಚಿದಾಪ್ಯಾ
ತದಚಿನ್ತಯನ್ ಸುರಾಃ ॥ ೩೨.೧೪೩ ॥
ತತ್ವಶಾಸ್ತ್ರವನ್ನು ಚೆನ್ನಾಗಿ ಬಲ್ಲವರಿಗೆ ಎಲ್ಲಿಯೂ ಅಧೋಗತಿಯು ಆಗಬಾರದು.
ಖಂಡಿತವಾಗಿಯೂ ಒಳ್ಳೆಯ ಶಾಸ್ತ್ರವನ್ನು ಬಲ್ಲವರಿಂದ ಸುಖವು ಹೊಂದಲ್ಪಡತಕ್ಕದ್ದಾಗಿದೆ. ಹಾಗೆಯೇ ಅಸುರರಿಂದ
ಅನ್ಧಂತಮಸ್ಸು ಹೊಂದಲ್ಪಡಬೇಕಾಗಿದೆ.
ಅಪ್ಪಿತಪ್ಪಿಯೂ ಅಸುರರಿಗೆ ಮುಕ್ತಿಯು ಹೊಂದಲ್ಪಡತಕ್ಕದ್ದಲ್ಲ. ಆ ಕಾರಣದಿಂದ ದೇವತೆಗಳು
ಚಿಂತಿಸಿದರು.
ಜ್ಞಾನಪ್ರದಾನಾಯ ಸತಾಂ
ತದನ್ಯಜ್ಞಾನಪ್ರಣಾಶಾಯ ಚ ವಿಷ್ಣುನೈತೇ ।
ಕ್ಲ್-ಪ್ತಾಸ್ತತಸ್ತೇ ಸವಿರಿಞ್ಚಶರ್ವಾವಿಜ್ಞಾಪಯಾಮಾಸುರುಪೇತ್ಯ ವಿಷ್ಣುಮ್ ॥ ೩೨.೧೪೪ ॥
ಸಜ್ಜನರಿಗೆ ಅರಿವನ್ನು ಈಯಲೋಸುಗ, ದುರ್ಜನರ ಜ್ಞಾನವನ್ನು ನಾಶಮಾಡಲೆಂದು, ನಾರಾಯಣನಿಂದ ಈ ದೇವತೆಗಳು ನಿಯಮಿತರಾಗಿದ್ದಾರೆ. ಆ ಕಾರಣದಿಂದ ಬ್ರಹ್ಮರುದ್ರಾದಿಗಳಿಂದ
ಕೂಡಿರುವ ದೇವತೆಗಳು ನಾರಾಯಣನನ್ನು ಹೊಂದಿ, ಬೇಡಿಕೊಂಡರು.
ಕ್ಷೀರೋದಧೇರುತ್ತರತೀರವಿಷ್ಠಿತೈರಭಿಷ್ಟುತಃ
ಸುಷ್ಟುತಿಭಿಃ ಪುರುಷ್ಟುತಃ ।
ಪ್ರದಾಯ ತೇಷಾಮಭಯಂ
ರಮಾಪತಿಃ ಕ್ಷಣಾದಭೂಚ್ಚಾರುತಮಾಕೃತಿಃ ಶಿಶುಃ ॥ ೩೨.೧೪೫ ॥
ಕ್ಷೀರಸಮುದ್ರದ ಉತ್ತರ ತೀರದಲ್ಲಿ ನಿಂತ ದೇವತೆಗಳಿಂದ, ಒಳ್ಳೆಯ ಸ್ತೋತ್ರದಿಂದ
ಸ್ತೋತ್ರಮಾಡಲ್ಪಟ್ಟ ಲಕ್ಷ್ಮೀಪತಿ ನಾರಾಯಣನು ಅವರಿಗೆ ಅಭಯವನ್ನಿತ್ತು, ಕೂಡಲೇ ರಮಣೀಯವಾದ ಆಕೃತಿಯುಳ್ಳ ಮಗುವಾದನು.
ಯಸ್ತ್ರೈಪುರಾಣಾಂ
ಪ್ರಥಮೋSತ್ರ ಜಾತಃ
ಶುದ್ಧೋದನೇತ್ಯೇವ ಜಿನೇತಿ ಚೋಕ್ತಃ ।
ಕ್ಷೇತ್ರೇ ಗಯಾಖ್ಯೇSಸ್ಯ ಶಿಶುಂ ಪ್ರಜಾತಂ ಸಮ್ಪ್ರಾಸ್ಯ ದೂರೇSತ್ರ ಬಭೂವ ವಿಷ್ಣುಃ ॥ ೩೨.೧೪೬ ॥
ಯಾರು ತ್ರಿಪುರಾಸುರರಲ್ಲಿ ಮೊದಲಿಗನೋ, ಅವನು ಈ ಭೂಮಿಯಲ್ಲಿ ಶುದ್ಧೋದನ ಎಂಬ ಹೆಸರಿನಿಂದ
ಹುಟ್ಟಿ ‘ಜಿನ’ ಎಂದೂ ಕರೆಯಲ್ಪಟ್ಟನು. ಗಯಾ ಎಂಬ ಕ್ಷೇತ್ರದಲ್ಲಿ, ಅವನಿಗೆ ಹುಟ್ಟಿದ ಮಗುವನ್ನು
ದೂರಕ್ಕೆ ಎಸೆದು, ಆ ಮಗುವಿನ ಜಾಗದಲ್ಲಿ ನಾರಾಯಣನು ಮಗುವಿನ ರೂಪದಲ್ಲಿ ನಿಂತನು.
ಅಜಾನಮಾನಾಃ ಸ್ವಶಿಶುಂ ಗತಂ ತಂ ಶಿಶುಂ ಹರಿಂ ವೀಕ್ಷ್ಯ ನಿಜಂ
ಸ್ಮ ಮೇನಿರೇ ।
ತೇಷಾಂ ತದಾ ವೈದಿಕಕರ್ಮ್ಮ
ವೀಕ್ಷ್ಯ ಸಮ್ಪ್ರಾಹಸತ್ ತದ್ವಪುಷೈವ ಕೇಶವಃ ॥ ೩೨.೧೪೭
॥
ತಮ್ಮ ಮಗು ಎಲ್ಲಿಯೋ ಎಸೆಯಲ್ಪಟ್ಟಿದೆ ಎಂದು ತಿಳಿಯದ ಅವರು, ಮಗುವಿನ ರೂಪದಲ್ಲಿರುವ ಪರಮಾತ್ಮನನ್ನು ಕಂಡು, ಅದನ್ನೇ ತಮ್ಮ
ಮಗು ಎಂದು ತಿಳಿದರು. ಆಗ ನಾರಾಯಣನು ಆ ಮಗುವಿನ ಆಕೃತಿಯಲ್ಲಿಯೇ ಅವರ ವೈದಿಕ ಕರ್ಮವನ್ನು ನೋಡಿ, ಗಟ್ಟಿಯಾಗಿ ನಕ್ಕನು.
No comments:
Post a Comment