ಕ್ಷಣಾದಯಂ
ಕ್ಷಣಿಕಾಸ್ತದ್ವಿಶೇಷಾ ಯತಃ ಪ್ರಯಾನ್ತ್ಯೇವ ನಿಸರ್ಗ್ಗತೋSಖಿಲಾಃ ।
ತತಃ ಸ್ಥಿರತ್ವೇSಪಿ ವಿಶೇಷಸಂಶ್ರಯಾದುಕ್ತಂ ಕ್ಷಣಸ್ಥಾಯಿ ಮಯಾ
ಸಮಸ್ತಮ್ ॥ ೩೨.೧೫೪ ॥
ತದ್ವಾನ್ ವಿಶೇಷಶ್ಚ
ಯತೋ ನ ಭಿನ್ನೌ ಸದಾ ಸ್ವನಿರ್ವಾಹಕಶಕ್ತಿಯುಕ್ತೌ ।
ಅತಃ ಕ್ಷಣಸ್ಥಾಯಿ
ಸಮಸ್ತಮೇತತ್ ಸ್ಥಿರಾತ್ಮಕಂ ಚೇತಿ ಹಿ ನಾಸ್ತಿ ಭೇದಃ
॥ ೩೨.೧೫೫ ॥
‘ಕ್ಷಣ’ದಿಂದ ಈ ಇಡೀ ಪ್ರಪಂಚವಿದೆ. ಕಾಲವೂ
ಕೂಡಾ ‘ಕ್ಷಣ’ ಎಂದೇ ಇರುವುದು. ಅದರ ವಿಶೇಷಗಳೆಲ್ಲವೂ ಕೂಡಾ ಕ್ಷಣಿಕಗಳೇ. ಯಾವ ಕಾರಣದಿಂದ ಎಲ್ಲಾ
ಕ್ಷಣಗಳೂ ಕೂಡಾ ಸ್ವಾಭಾವಿಕವಾಗಿವೆಯೋ, ಆ ಕಾರಣದಿಂದ ಕಾಲ ಒಂದೇ ಆದರೂ ‘ವಿಶೇಷ’ ಎಂದಿರುವುದರಿಂದ ಅದು
ನನ್ನಿಂದ ‘ಎಲ್ಲವೂ ಕೂಡಾ ಕ್ಷಣಿಕವಾದದ್ದು’ ಎಂದು ಹೇಳಲ್ಪಟ್ಟಿತು.
‘ಕ್ಷಣ’ ಈ ಪ್ರಪಂಚವನ್ನು ಒಳಗೊಂಡಿದೆ. ಅನಾದಿ ಕಾಲವೂ ಕೂಡಾ ಕ್ಷಣ ಎಂದು
ಪರಿಗಣಿಸಲ್ಪಡುತ್ತದೆ. ‘ವಿಶೇಷ’ ಎನ್ನುವ ಸಾಮರ್ಥ
ಇರುವುದರಿಂದಲೇ ವಸ್ತುವಿನ ಗುಣ ಹಾಗೂ ವಸ್ತು ಒಂದೇ ಆದರೂ ಭಿನ್ನವಾಗಿ ಹೇಳುವ ಸಾಮರ್ಥ್ಯ
ನಮಗೆಲ್ಲರಿಗೂ ಬಂದಿದೆ.
[ತಾತ್ಪರ್ಯ: ರೂಪ ಬೇರೆ ಅಲ್ಲ, ಮಡಿಕೆ ಬೇರೆ
ಅಲ್ಲ. ಮಡಿಕೆಯೇ ರೂಪ, ರೂಪವೇ ಮಡಿಕೆ. ಬಣ್ಣ ಮತ್ತು ಬಟ್ಟೆ ಎರಡೂ
ಒಂದೇ. ಬಿಳಿ ಬಣ್ಣವೇ ಬಟ್ಟೆ, ಬಟ್ಟೆಯೇ ಬಿಳಿ ಬಣ್ಣ. ಇವೆರಡರ ನಡುವೆ
ಯಾವ ವ್ಯತ್ಯಾಸವೂ ಇಲ್ಲ. ಆದರೂ ಕೂಡಾ ‘ಬಿಳಿಯ ಬಣ್ಣದ ಬಟ್ಟೆ’ ಎಂದು ನಾವು ಹೇಳುತ್ತೇವೆ.
ಏಕೆಂದರೆ ‘ವಿಶೇಷ’ ಎನ್ನುವುದನ್ನು ನಾವು ಒಪ್ಪಬೇಕಾಗುತ್ತದೆ. ವಸ್ತುತಃ
ಭೇದವಿಲ್ಲ, ಆದರೆ ಭೇದದ ವ್ಯವಹಾರವನ್ನು ತಂದುಕೊಡುತ್ತದೆ. ಅದನ್ನೇ
‘ವಿಶೇಷ’ ಎಂದು ಕರೆಯುತ್ತಾರೆ. ಇದೇ ರೀತಿ ಕ್ಷಣವೂ ಕೂಡಾ. ಕಲ್ಪವೂ
ಒಂದು ಕ್ಷಣವೇ. ಒಂದು ಕ್ಷಣಕ್ಕೂ ಒಂದು ಕಲ್ಪಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ನಾವು
ವ್ಯವಹಾರಕ್ಕಾಗಿ ಈ ಕ್ಷಣ ಕಳೆದುಹೋಯಿತು ಎನ್ನುತ್ತೇವೆ. ಅಂದರೆ ಕ್ರಿಯೆಯನ್ನು
ಮಾಧ್ಯಮದಲ್ಲಿಟ್ಟುಕೊಂಡು ಕಾಲವನ್ನು ಅಳೆಯುತ್ತೇವೆ. ಕಾಲಕ್ಕೆ ವಸ್ತುತಃ ಅಳತೆ ಇಲ್ಲ. ಅದು
ಯಾವಾಗಲೂ ಇರುತ್ತದೆ. ಸೂರ್ಯನ ಹುಟ್ಟನ್ನು ನೋಡಿಕೊಂಡು ನಾವು ‘ಬೆಳಗಾಯಿತು’ ಎನ್ನುತ್ತೇವೆ.
ಸೂರ್ಯ ಕಾಣದಾದಾಗ ‘ರಾತ್ರಿಯಾಯಿತು’ ಎನ್ನುತ್ತೇವೆ. ಇರುಳು
ಮತ್ತು ಬೆಳಗುಗಳನ್ನು ನಾವು ಸೂರ್ಯನ ಕ್ರಿಯೆಯಿಂದ ಕಾಣುತ್ತೇವೆ. ಇದು ನಮ್ಮ ಮಾನದಂಡ.
ಅದನ್ನು ‘ವಿಶೇಷ’ ಎಂದು ಕರೆಯುತ್ತೇವೆ. ವಸ್ತುತಃ ಮಹಾಕಾಲಕ್ಕೂ ಕ್ಷಣಕ್ಕೂ ಯಾವುದೇ
ವ್ಯತ್ಯಾಸವಿಲ್ಲ. ಜಗತ್ತಿನಲ್ಲಿ ಬಹಳ ಕಾಲ ಬದುಕಿದವನೂ ಕೂಡಾ ಕ್ಷಣಕಾಲ ಬದುಕಿದವನೇ. ದೇವರ
ಪ್ರಕಾರ ಕಾಲ ಎಂದರೆ ಒಂದು ಕ್ಷಣವೂ ಹೌದು, ಒಂದು ಕಲ್ಪವೂ ಹೌದು.
ಅವನಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಈ ಕಾರಣದಿಂದ ಇದೆಲ್ಲವನ್ನೂ ಬುದ್ಧ ಕ್ಷಣಿಕ ಎಂದು
ಹೇಳಿದ. ಇದನ್ನು ಆ ದೈತ್ಯರು ‘ಕ್ಷಣದಲ್ಲಿ ಮಾತ್ರ ಇರುತ್ತದೆ ಮತ್ತೆ ನಾಶವಾಗುತ್ತದೆ’ ಎಂಬ
ಅರ್ಥದಲ್ಲಿ, ಅಂದರೆ ‘ಮಿಥ್ಯಾ’ ಎಂದುಕೊಂಡರು. ಈ ‘ವಿಶೇಷ’ ಎನ್ನುವುದು ದೊಡ್ಡ
ಪರಿಕಲ್ಪನೆ. ಗುಣ ಹಾಗೂ ಗುಣಿ, ಅವುಗಳ ನಡುವೆ ಯಾವ ಸಂಬಂಧ ಇದೇ ಎಂದು ತಿಳಿಯುವುದೇ ಬಹಳ ಕಷ್ಟ.
ಅದನ್ನು ಬೇರೆಯವರು ಅರ್ಥೈಸಲು ವಿಫಲರಾಗಿದ್ದಾರೆ, ಆದರೆ ಆಚಾರ್ಯ ಮಧ್ವರು ವಸ್ತು ಹಾಗೂ ಗುಣ
ಅವುಗಳ ನಡುವೆ ಸರಿಯಾದ ಸಂಬಂಧ ಏನು ಎನ್ನುವುದನ್ನು ವಿವೇಚನೆ ಮಾಡಿ ಹೇಳಿದ್ದಾರೆ.]
ಜ್ಞೋSಹಂ ಸದೈಕಃ ಪರಮೋ ಮಯೈತತ್ ಸದಾSನನೀಯಂ ಹಿ ಯತೋSಸ್ವತನ್ತ್ರಮ್ ।
ಜ್ಞಾನಾತ್ಮಕಂ
ವಿಶ್ವಮತೋ ಮಯೋಕ್ತಂ ಜಡಸ್ವರೂಪಂ ಚ ಕಿಮು ಸ್ಮ ಚೇತನಮ್ ॥ ೩೨.೧೫೬ ॥
‘ಜ್ಞಾ’ ಎಂದರೆ ಎಲ್ಲವನ್ನೂ ಬಲ್ಲ, ಜ್ಞಾನ ಸ್ವರೂಪನಾಗಿರುವ ನಾನು. ಇಂತಹ ‘ಜ್ಞಾ’
ಎನಿಸಿಕೊಂಡಿರುವ ನನ್ನಿಂದ ಯಾವಾಗಲೂ ಅಸ್ವತಂತ್ರ
ಪ್ರಪಂಚವು ವ್ಯಾಪಾರೀಕರಣಗೊಳ್ಳಬೇಕಷ್ಟೇ? (ಯಾವುದೇ ಕ್ರಿಯೆ ಆಗಬೇಕಿದ್ದರೂ ನನ್ನಿಂದ ಆಗಬೇಕಷ್ಟೆ?) ಅಂದರೆ ‘ಜ್ಞಾ’ ಆದ ನನ್ನಿಂದ ಅದು ಕ್ರಿಯೆಯನ್ನು
ಹೊಂದುತ್ತದೆ. ಇದನ್ನೇ ನಾನು ಜ್ಞಾನಂ-ಜ್ಞಾನಂ
ಎಂದು ಹೇಳಿರುವುದು. (ಇಡೀ ಪ್ರಪಂಚಕ್ಕೆ ಜ್ಞಾನ ಮಾತ್ರ ಎಂದು ಹೇಳಿರುವುದು) ಅದನ್ನು ಅವರು
ತಪ್ಪಾಗಿ ದೃಷ್ಟಿ-ಸೃಷ್ಟಿ, ಭೌತಿಕ ವಸ್ತು ಇಲ್ಲಾ ಎಂದು ಗ್ರಹಿಸಿದರು. ಜಡ ಬೇರೆ, ಚೇತನ ಬೇರೆ. ಆದರೆ ನಾನು ಹೇಳಿದ ‘ಜ್ಞಾನ’ ಎನ್ನುವುದನ್ನು ಅವರು ಈ ಪ್ರಪಂಚ ಎಂದರೆ
ಕೇವಲ ‘ಜ್ಞಾನ’, ಅದನ್ನು ಬಿಟ್ಟು ಇನ್ನೇನೂ ಇಲ್ಲಾ, ಎನ್ನುವ ಅರ್ಥದಲ್ಲಿ ತಪ್ಪಾಗಿ ಗ್ರಹಿಸಿದರು.
ಶಂಶೀಲಕೋSಹಂ ಯತ ಏವ ಚೋಚ್ಚಃ ಶೂನಾಮಕಸ್ತದ್ಧಿ ಮಯಾ
ನಿಧೇಯಮ್ ।
ಶೂನ್ಯಾಭಿದಂ ದೋಷವಿರುದ್ಧರೂಪೋ
ದೋಷೋಜ್ಝಿತೋSನ್ಯಸ್ತ್ವಖಿಲಾದನಾಮಾ
॥ ೩೨.೧೫೭ ॥
ಏನೈವ ಸಾದ್ಯಂ ತ್ವಸದೇವ
ನಾಮತಸ್ತ್ವಭಾವ ಏನೈವ ಭವೇದ್ ಯತಸ್ತತ್ ।
ಇತ್ಯಾದಿ
ಬೋದ್ಧವ್ಯಮಿದಂ ಸಮಸ್ತಂ ಮಯೋದಿತಂ ಕ್ವಾಪಿ ನ ಹೇಯಮಸ್ತಿ ॥ ೩೨.೧೫೮ ॥
‘ಶಂ’ ಎಂದರೆ ಆನಂದಾತ್ಮಕ, ‘ಉ’ ಎಂದರೆ ಉಚ್ಚ ಎಂದರ್ಥ. ಅದರಿಂದಾಗಿ ನನ್ನ ಹೆಸರು ‘ಶೂ’. ಇಂತಹ ನನ್ನಿಂದ ಎಲ್ಲವೂ ನಿಯಂತ್ರಿಸಲ್ಪಡುತ್ತದೆ. ಅದರಿಂದಾಗಿ ‘ಶೂನ್ಯ’ ಎನ್ನುವುದು
ನನ್ನ ಹೆಸರು. (ಶೂ ಅನ್ನುವುದು ನನ್ನ ಹೆಸರು, ನನ್ನಿಂದ ಈ ಪ್ರಪಂಚ
ನಿಯಂತ್ರಿತವಾಗಿದೆ) ಅದರಿಂದಾಗಿ ಶೂನ್ಯಂ-ಶೂನ್ಯಂ ಎಂದು ಹೇಳಿರುವುದು. ಅದನ್ನು ಅವರು ಆಕಾಶ (absolute space) ಎನ್ನುವ ಅರ್ಥದಲ್ಲಿ ಗ್ರಹಿಸಿದರು.
ಅದರಿಂದ ಇಂತಹ ನಿರ್ದುಷ್ಟನಾಗಿರುವ ನಾರಾಯಣನಿಂದ ಕೂಡಿದೆಯಾದ್ದರಿಂದಾಗಿ ‘ಅಸತ್’. (‘ಅ’ ಎಂದರೆ ನಾರಾಯಣ, ಅವನಿಂದಾಗಿ ಈ ಪ್ರಪಂಚ ಅಸ್ತಿತ್ವವನ್ನು
ಪಡೆದಿದೆ. ಹಾಗಾಗಿ ಇದು ಅಸತ್). ಇದೇ ರೀತಿಯಾಗಿ ತಿಳಿಯತಕ್ಕದ್ದು. ಹೀಗಾಗಿ ನಾನು
ಹೇಳಿರುವುದರಲ್ಲಿ ಬಿಡಬೇಕಾಗಿರುವುದು ಯಾವುದೂ ಇಲ್ಲ. ಆದರೆ ಇದೆಲ್ಲವನ್ನೂ ಅವರು ತಪ್ಪಾಗಿ
ತಿಳಿದರು. (ಹೀಗೆ ಬುದ್ಧ ದೇವತೆಗಳಿಗೆ ತನ್ನ
ಶಾಸ್ತ್ರದ ಮೂಲಾರ್ಥವನ್ನು ತಿಳಿಸಿದ).
ಇತ್ಯಾದಿ ದೇವಾನ್
ಪ್ರತಿಬೋಧಯಂಶ್ಚ ದೇವೈಃ ಸಹೋವಾಸ ಸ ಬುದ್ಧದೇವಃ ।
ಗತ್ವಾ
ಸ್ವಧಾಮಾಪ್ಯಪರೇಣ ರೂಪೇಣಾSಸ್ತೇ
ಪೃಥಕ್ ಚೈಕತನುರ್ಯ್ಯಥೇಷ್ಟಮ್ ॥ ೩೨.೧೫೯ ॥
ಇವೇ ಮೊದಲಾಗಿ ದೇವತೆಗಳಿಗೆ ಬೋಧನೆ ಮಾಡುತ್ತಾ, ದೇವತೆಗಳ ಜೊತೆಗೆ ಬುದ್ಧದೇವನು ಆವಾಸಮಾಡಿದನು
ಹಾಗೂ ಬೇರೆ ರೂಪದಿಂದ ಸ್ವಧಾಮಕ್ಕೆ ತೆರಳಿದನು. ಹೀಗೆ ಭಗವಂತ ಬುದ್ಧರೂಪದಲ್ಲಿಯೂ, ಮೂಲರೂಪದಿಂದ ಏಕೀಭೂತನಾಗಿ ತನ್ನ ಇಚ್ಛಾನುಸಾರ
ಇರುತ್ತಾನಷ್ಟೇ?
No comments:
Post a Comment