ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 17, 2023

Mahabharata Tatparya Nirnaya Kannada 32-165-169

 

ತತಃ ಕಲೇರನ್ತಮವಾಪ್ಯ ಧರ್ಮ್ಮಜ್ಞಾನಾದಿಕಲ್ಯಾಣಗುಣಪ್ರಹೀನೇ ।

ಲೋಕೇ ವಿರಿಞ್ಚತ್ರಿಪುರಘ್ನಶಕ್ರಪೂರ್ವಾಃ ಪಯೋಬ್ಧಿಂ ತ್ರಿದಶಾಃ ಪ್ರ ಜಗ್ಮುಃ ॥ ೩೨.೧೬೫ ॥

 

ದುರ್ಗಾವತಾರದ ನಂತರ, ಕಲಿಯುಗದ ಸಮಾಪ್ತಿ ಕಾಲದಲ್ಲಿ, ಭೂಲೋಕವು ಧರ್ಮ, ಜ್ಞಾನ ಮೊದಲಾದ ಕಲ್ಯಾಣಗುಣಗಳಿಂದ ಹೀನವಾಗಲು, ಬ್ರಹ್ಮ, ರುದ್ರ, ಇಂದ್ರ ಮೊದಲಾದವರು ಕ್ಷೀರಸಮುದ್ರವನ್ನು ಹೊಂದಿದರು. 

 

ನಾರಾಯಣಸ್ತೈಃ ಸ್ತುತಿಪೂರ್ವಮರ್ತ್ಥಿತೋ ಭವಾಯ ಲೋಕಸ್ಯ ಸ ಶಮ್ಭಳಾಖ್ಯೇ ।

ಗ್ರಾಮೇ ಮುನೇರ್ವಿಷ್ಣುಯಶೋSಭಿದಸ್ಯ ಗೃಹೇ ಬಭೂವಾSವಿರಚಿನ್ತ್ಯಶಕ್ತಿಃ ॥ ೩೨.೧೬೬ ॥

 

ನಾರಾಯಣನು ಅವರಿಂದ ಸ್ತೋತ್ರಪೂರ್ವಕವಾಗಿ ಪ್ರಾರ್ಥಿತನಾಗಿ, ಸಜ್ಜನರ ಅಸ್ತಿತ್ವಕ್ಕಾಗಿ ಶಮ್ಭಳಾ ಎಂಬ ಗ್ರಾಮದಲ್ಲಿ ವಿಷ್ಣುಯಶಸ್ಸು ಎಂಬ ಹೆಸರಿನ ಮುನಿಯ ಮನೆಯಲ್ಲಿ, ಎಣೆಯಿರದ ಶಕ್ತಿಯವನಾಗಿ ಅವತರಿಸಿದನು.(ಅವತರಿಸುತ್ತಾನೆ)

 

ಕಲೇಸ್ತು ಕಾತ್ಕಾರತ ಏಷ ಕಲ್ಕೀ ಜ್ಞಾನಂ ಕಲಂ ಕಂ ಸುಖಮೇವ ತದ್ವಾನ್ ।

ಕಲ್ಕೀತಿ ವಾ ತೇನ ಸಮಸ್ತದಸ್ಯುವಿನಾಶನಂ ತೇನ ದಿನಾದ್ ವ್ಯಧಾಯಿ ॥ ೩೨.೧೬೭ ॥

 

ಕಲಿಯ ನಿಗ್ರಹದಿಂದ ಇವನು ಕಲ್ಕೀ ಎಂಬ ಹೆಸರಿನವನು. ಕಂ ಎಂದರೆ ಸುಖ, ಕಲ ಎಂದರೆ ಜ್ಞಾನ. ಹೀಗೆ ಜ್ಞಾನಾನಂದ ಸ್ವರೂಪನಾದ ಇವನಿಗೆ ಕಲ್ಕೀ ಎಂದು ಹೆಸರು. ಇಂತಹ ಕಲ್ಕಿಯಿಂದ ಒಂದೇ ದಿನದಲ್ಲಿ ಎಲ್ಲಾ ದಸ್ಯುಗಳ ಕೊಲ್ಲುವಿಕೆಯು ಮಾಡಲ್ಪಟ್ಟಿತು.  

 

ಅಧರ್ಮ್ಮವೃತ್ತಂ ವಿಮುಖಂ ಹರೇಶ್ಚ ನಿಹತ್ಯ ನಿಃಶೇಷಜನಂ ತುರಙ್ಗೀ ।

ಸಂಸ್ಥಾಪಯಾಮಾಸ ಸ ಧರ್ಮ್ಮಸೇತುಂ ಜ್ಞಾನಂ ಸ್ವಭಕ್ತಿಂ ಚ ನಿಜಪ್ರಜಾಸು ॥ ೩೨.೧೬೮ ॥

 

ಕುದುರೆಯನ್ನೇರಿ ಬರುವ ಕಲ್ಕಿಯು ಅಧರ್ಮದಲ್ಲಿರುವ, ಪರಮಾತ್ಮನಿಗೆ ವಿಮುಖರಾಗಿರುವ ಎಲ್ಲಾ ದುರ್ಜನರನ್ನೂ ಕೊಂದು, ಧರ್ಮದ ಮರ್ಯಾದೆಯನ್ನು, ಯೋಗ್ಯರಲ್ಲಿ ಜ್ಞಾನವನ್ನೂ, ತನ್ನ ಭಕ್ತಿಯನ್ನೂ ಮತ್ತೆ ನೆಲೆಗೊಳಿಸಿದನು.

 

ಇತ್ಯಾದ್ಯನನ್ತಾನಿ ಹರೇರುದಾರಕರ್ಮ್ಮಾಣಿ ರೂಪಾಣಿ ಚ ಸದ್ಗುಣಾಶ್ಚ ।

ನಿತ್ಯವ್ಯಪೇತಾಖಿಲದೋಷಕಸ್ಯ ಬ್ರಹ್ಮೇತ್ಯನನ್ತೇತಿ ಚ ನಾಮ ಯೇನ ॥ ೩೨.೧೬೯ ॥

 

ಇವೇ ಮೊದಲಾದ ಕೊನೆಯಿರದ ಶ್ರೇಷ್ಠವಾದ ಕರ್ಮಗಳು ನಾರಾಯಣನದ್ದು. ಆ ಪರಮಾತ್ಮನ ರೂಪಗಳು, ಸದ್ಗುಣಗಳೂ ಅನಂತ. ಸದಾ ದೋಷ ರಹಿತನಾಗಿರುವ ಈ ನಾರಾಯಣನಿಗೆ ‘ಬ್ರಹ್ಮ’ ಎಂದೂ, ‘ಅನಂತ’ ಎಂದೂ ಹೆಸರಿದೆ.

 

No comments:

Post a Comment