ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, December 5, 2023

Mahabharata Tatparya Nirnaya Kannada 32-114-125

 

ಸುಯೋಧನಾದ್ಯಾ ಯದಿಮೇ ಸುಪಾಪಾ ಆರಬ್ಧಕರ್ಮ್ಮಕ್ಷಯಮಾಪ್ಯ ನಿತ್ಯೇ ।

ನಿಃಶೇಷಸೌಖ್ಯೋಜ್ಝಿತನಿತ್ಯದುಃಖೇSವಶಾಃ ಪತಿಷ್ಯನ್ತ್ಯಪುನರ್ನ್ನಿವೃತ್ತಾಃ ॥ ೩೨.೧೧೪ ॥

 

ಯಾವ ಕಾರಣದಿಂದ ದುರ್ಯೋಧನನೇ ಮೊದಲಾದವರು ಅತಿ ಪಾಪಿಷ್ಠರೋ, ಆದುದರಿಂದ ಅವರು ಯಜ್ಞಾದಿಗಳಿಂದ ಮಾಡಿದ ಪುಣ್ಯಕರ್ಮ ನಾಶವಾದಮೇಲೆ, ನಿತ್ಯವಾಗಿರುವ ಯಾವುದೇ ಸುಖದ ಲವಲೇಶವಿಲ್ಲದೆ, ನಿತ್ಯ ದುಃಖವಾಗಿರುವ ಅನ್ಧಂತಮಸ್ಸಿನಲ್ಲಿ ಖಂಡಿತ ಬೀಳುತ್ತಾರೆ.

 

ದೇವಾಂಶಜಾ ಯೇ ತು ಸಮಸ್ತಶಸ್ತೇ ಸ್ವಮೂಲರೂಪಂ ಸಮವಾಪ್ಯ ಕಾಲೇ ।

ಸ್ವತಾರತಮ್ಯಾನುಸೃತಾಂ ವಿಮುಕ್ತಿಂ ಪ್ರಾಪ್ಸ್ಯನ್ತಿ ನಾತ್ರಾಪಿ ವಿಚಾರ್ಯ್ಯಮಸ್ತಿ ॥ ೩೨.೧೧೫ ॥

 

ಯಾರು ದೇವತೆಗಳ ಅಂಶದಿಂದ ಹುಟ್ಟಿದ್ದಾರೋ, ಅವರೆಲ್ಲರೂ ಕೂಡಾ, ಸರಿಯಾದ ಕಾಲದಲ್ಲಿ ತಮ್ಮ ಮೂಲರೂಪವನ್ನು ಹೊಂದಿ,  ತಮ್ಮ ಯೋಗ್ಯತೆಗೆ ಅನುಗುಣವಾದ ವಿಮುಕ್ತಿಯನ್ನು ಹೊಂದುತ್ತಾರೆ. ಈ ವಿಚಾರದಲ್ಲಿಯೂ ಕೂಡಾ ಸಂದೇಹವಿಲ್ಲ.

 

ಇತ್ಯುಕ್ತ ಆಶ್ವೇವ ನಿಮಜ್ಜ್ಯ ಗಙ್ಗಾಂ  ಧರ್ಮ್ಮಾತ್ಮಜಸ್ತಂ ಪ್ರವಿಸೃಜ್ಯ ದೇಹಮ್ ।

ಸದ್ಯೋ ಬಭೌ ದೈವಮವಾಪ್ಯ ಕಾಯಂ ವಿಸೃಷ್ಟರೋಷಾದಿಸಮಸ್ತದೋಷಃ ॥ ೩೨.೧೧೬ ॥

 

ಈರೀತಿಯಾಗಿ ಹೇಳಲ್ಪಟ್ಟ ಯುಧಿಷ್ಠಿರನು ಕೂಡಲೇ ಗಂಗೆಯಲ್ಲಿ ಮುಳುಗಿ, ಭೌತಿಕ ದೇಹವನ್ನು ಬಿಟ್ಟು, ದುರ್ಯೋಧನನ ಮೇಲಿನ ರೋಷ, ಮಾತ್ಸರ್ಯ, ಮೊದಲಾದ ಎಲ್ಲಾ ದೋಷಗಳನ್ನು ಕಳೆದುಕೊಂಡು, ದೈವಿಕವಾಗಿರುವ ಶರೀರವನ್ನು ಹೊಂದಿ ಶೋಭಿಸಿದ.

 

ಸ ತು ಪ್ರಪಶ್ಯನ್ ಸ್ವಜನಂ ಸಮಸ್ತಂ ಸ್ವಮೂಲರೂಪಾತಿಸಮೀಪಸಂಸ್ಥಮ್ ।

ದದರ್ಶ ಭೀಮಂ ಚ ಮರುತ್ಸಮೀಪೇ ಮದ್ಧ್ಯೇ ಜ್ವಲನ್ತಂ ಮರುತಾಂ ಗಣಸ್ಯ ॥ ೩೨.೧೧೭ ॥

 

ಧರ್ಮರಾಜನು ತಮ್ಮ ಮೂಲರೂಪಭೂತರಾಗಿರುವ ದೇವತೆಗಳ ಸಮೀಪದಲ್ಲಿ ನಿಂತಿರುವ ತಮ್ಮವರಾದ ಎಲ್ಲರನ್ನೂ ನೋಡುತ್ತಾ,  ಮರುತ್ ದೇವತೆಗಳ ಸಮೂಹದ ಮಧ್ಯದಲ್ಲಿ, ಮುಖ್ಯಪ್ರಾಣನ ಸಮೀಪದಲ್ಲಿ ಹೊಳೆಯುತ್ತಿರುವ ಭೀಮಸೇನನನ್ನು ಕಂಡ.

 

ದದರ್ಶ ಕೃಷ್ಣಾಮಪಿ ತತ್ಸಮೀಪೇ ಶ್ರಿಯಾ ಜ್ವಲನ್ತೀಂ ಸಮತೀತ್ಯ ಚಾನ್ಯಾಃ ।

ಸ್ಪ್ರಷ್ಟುಂ ಚ ಸಂಸ್ಕಾರವಶಾದಿಯೇಷ ನಿಷಿದ್ಧ್ಯ ತಂ ಪ್ರಾಹ ಸುರಾಧಿರಾಜಃ ॥ ೩೨.೧೧೮ ॥

 

ಅವನ ಸಮೀಪದಲ್ಲಿಯೇ ಕಾಂತಿಯಿಂದ, ಉಳಿದ ಎಲ್ಲಾ ದೇವಿಯರನ್ನು ಮೀರಿ ಹೊಳೆಯುತ್ತಿರುವ ದ್ರೌಪದಿಯನ್ನೂ ಧರ್ಮರಾಜ ಕಂಡ. ಹಾಗೆ ಕಂಡು, ತನ್ನ ಸಂಸ್ಕಾರದ ಬಲದಿಂದ ಅವಳನ್ನು ಮುಟ್ಟಲು ಬಯಸಿದ. ಆಗ ಅವನನ್ನು ತಡೆದು ಇಂದ್ರ  ಹೇಳುತ್ತಾನೆ-

 

ಏಷಾ ಹಿ ಸಾಕ್ಷಾಜ್ಜಗತಾಂ ಪ್ರಿಯಸ್ಯ ಪ್ರಾಣಾತ್ಮನೋ ಜೀವವರೇಶ್ವರಸ್ಯ ।

ಪ್ರಾಣಪ್ರಿಯಾ ಶ್ರೀರಿತಿ ನಾಮ ಯಸ್ಯಾಃ ಶಮಾತ್ಮಕೇSಸ್ಮಿನ್ ರಮತೇ ಯದೇಷಾ ॥ ೩೨.೧೧೯ ॥

 

ಇವಳು ಜಗತ್ತಿಗೇ ಅತ್ಯಂತ ಪ್ರಿಯನಾಗಿರುವ, ಉಸಿರನ್ನಾಡಿಸುವ, ಮುಖ್ಯಪ್ರಾಣ ಎನಿಸಿಕೊಂಡ, ಜೀವೊತ್ತಮನಾಗಿರುವ ಭೀಮಸೇನನ ಪ್ರಾಣಪ್ರಿಯಳಾದ ಭಾರತೀದೇವಿ. ಆನಂದಾತ್ಮಕನಾಗಿರುವ ಈ ಮುಖ್ಯಪ್ರಾಣನಲ್ಲಿ ಯಾವಕಾರಣದಿಂದ ಇವಳು ಅತ್ಯಂತ ಆಸಕ್ತಳಾಗಿರುವಳೋ, ಆ ಕಾರಣದಿಂದ ಅವಳಿಗೆ ‘ಶ್ರೀಃ’ ಎಂದು ಹೆಸರು.

 

ಯುಷ್ಮಚ್ಚತುರ್ದ್ದೇಹಗತಸ್ಯ ವಾಯೋರ್ವಾಯುಪ್ರಿಯಾ ಭೀಮತನೋಸ್ತಥೈವ ।

ಭೋಗಾಯ ಸೃಷ್ಟಾ ಪುರುಷೋತ್ತಮೇನ ಯುಷ್ಮತ್ಪ್ರಿಯಾರ್ತ್ಥಂ ಭವತಾಂ ಚ ದಾರೈಃ ॥ ೩೨.೧೨೦ ॥

 

ಭೀಮಸೇನನನ್ನು ಬಿಟ್ಟು ಉಳಿದ ನಾಲ್ಕು ಜನರ (ಯುಧಿಷ್ಠಿರ, ಅರ್ಜುನ, ನಕುಲ-ಸಹದೇವ)  ದೇಹದ ಒಳಗೆ ಇರುವ ಭೀಮಸೇನಾತ್ಮಕನಾಗಿರುವ ಮುಖ್ಯಪ್ರಾಣನಿಗೆ ಇವಳು ಯಾವಾಗಲೂ ಪ್ರಿಯಳು. ನಾರಾಯಣನಿಂದ ನಿಮ್ಮ ಸುಖಕ್ಕಾಗಿ ನಿಮ್ಮ ಹೆಂಡತಿಯರಿಂದ ಒಡಗೂಡಿ, ನಿಮ್ಮ ಭೋಗಕ್ಕಾಗಿ ಸೃಷ್ಟಿಸಲ್ಪಟ್ಟವಳು ಇವಳು.

 

ಪ್ರೀತಿಸ್ತತೋ ಹ್ಯಭ್ಯಧಿಕಾ ಬಭೂವ ಭೀಮಸ್ಯ ಚಾಸ್ಯಾಸ್ತದನು ಸ್ಮ ಪಾರ್ತ್ಥೇ ।

ತತೋ ಭವತ್ಸ್ವೇವ ಯಥಾಕ್ರಮೇಣ ಗುಣಾನುಸಾರೇಣ ಸಮೀರಣಸ್ಯ ॥ ೩೨.೧೨೧ ॥

 

ಆಕಾರಣದಿಂದ ಭೀಮಸೇನನ ಮೇಲೂ, ಅವನಾದ ನಂತರ ಅರ್ಜುನನಲ್ಲಿಯೂ ಇವಳಿಗೆ ಆತ್ಯಂತಿಕವಾದ ಪ್ರೀತಿಯು ಉಂಟಾಯಿತು. ಹೀಗೆ ಭೀಮಸೇನನ ನಂತರ ಕ್ರಮವಾಗಿ ಗುಣಾನುಸಾರವಾಗಿ ಮುಖ್ಯಪ್ರಾಣನ ಅನುಗ್ರಹದಿಂದ ನಿಮ್ಮಲ್ಲಿ ದ್ರೌಪದೀದೇವಿಗೆ ಪ್ರೀತಿಯು ಉಂಟಾಯಿತು.

 

ಇದಾ ಹಿ ಸಾ ಶುದ್ಧತನುಃ ಪ್ರಜಾತಾ ಶಚ್ಯಾದಿಯೋಗಾಪಗತಾಗ್ರ್ಯದೇಹಾ ।

ಯೂಯಂ ಚ ಸರ್ವೇ ಮರುತೋ ವಿಶೇಷಸಂಯೋಗಹೀನಾಃ ಸ್ವಶರೀರಸಂಸ್ಥಾಃ ॥ ೩೨.೧೨೨ ॥

 

ಈಗ ಇವಳು ಶಚಿಯೇ ಮೊದಲಾದ ದೇವಿಯರ ಸಂಬಂಧವನ್ನು ಹೊಂದಿಲ್ಲದ, ಶ್ರೇಷ್ಠವಾದ ದೇಹದಿಂದ ಇದ್ದಾಳೆ. ನೀವೆಲ್ಲರೂ ಕೂಡಾ ಮುಖ್ಯಪ್ರಾಣನ ವಿಶೇಷ ಸಂಯೋಗದಿಂದ ಹೀನರಾಗಿದ್ದೀರಿ.

 

ಸ್ಪರ್ಶೇsಪಿ ನಾಸ್ಯಾಃ ಪವಮಾನಪತ್ನ್ಯಾಃ ಸುಪೂತತಾSಲಂ ಭವತಾಮಿದಾನೀಮ್ ।

ನಚೋತ್ತರತ್ರಾಪಿ ಭವೇತ್ ಕಥಞ್ಚಿದ್ ದಿವೌಕಸಾಂ ಮಾನುಷದೇಹಿನೋ ಯಥಾ ॥ ೩೨.೧೨೩ ॥

 

ಈ ಭಾರತೀದೇವಿಯ ಮುಟ್ಟುವಿಕೆಯಲ್ಲಿಯೂ ಕೂಡಾ ನಿಮಗೆ ಈಗ ಪಾವಿತ್ರ್ಯ ಇಲ್ಲ. ಮುಂದೆಯೂ ಕೂಡಾ ಬರುವುದಿಲ್ಲ. ಹೇಗೆ ಮನುಷ್ಯದೇಹಿಗಳು ಅಪವಿತ್ರರಾಗಿರುವುದರಿಂದ ದೇವತೆಗಳನ್ನು  ಮುಟ್ಟಲಾಗುವುದಿಲ್ಲವೋ ಹಾಗೇ.   

 

ಇತೀರಿತಂ ತಂ ಪ್ರತಿಸನ್ನಿವೃತ್ತಂ ವಿನಾಶಯನ್ ಮಾನುಷವಾಸನಾಂ ಸ್ವಯಮ್ ।

ಸಮಾಶ್ಲಿಷಚ್ಛುದ್ಧತನುಃ ಸ್ತನೋತ್ಥೋ ಧರ್ಮ್ಮೋ ಹರೇಃ ಸೋSಭವದಾಶು ತತ್ಸಮಃ ॥ ೩೨.೧೨೪ ॥

 

ಈರೀತಿಯಾಗಿ ಇಂದ್ರನಿಂದ ಹೇಳಲ್ಪಟ್ಟ, ದ್ರೌಪದಿಯನ್ನು ಮುಟ್ಟುವ ವಿಷಯದಿಂದ ವಿಮುಖನಾದ ಯುಧಿಷ್ಠಿರನನ್ನು, ಅವನ ಮನುಷ್ಯ ಸಂಸ್ಕಾರವನ್ನು ನಾಶಮಾಡಲು ಬಯಸಿದ, ಪರಮಾತ್ಮನ ಎದೆಯಭಾಗದಿಂದ ಹುಟ್ಟಿದ ಯಮಧರ್ಮರಾಜನು ಆಲಂಗಿಸಿಕೊಂಡ. ಆಗ ಯುಧಿಷ್ಠಿರನು ಶುದ್ಧವಾದ ಶರೀರವುಳ್ಳವನಾಗಿ ಮೂಲರೂಪಕ್ಕೆ ಸಮಾನನಾದ.

 

ತತಸ್ತು ಪಾರ್ತ್ಥಾ ಅಖಿಲಾಃ ಸ್ವಮೂಲರೂಪೈಃ ಸಹೈವಾSವಿವಿಶುರ್ಮ್ಮುದಾSನ್ವಿತಾಃ ।

ಸ್ವೀಯಾನಿ ಧಾಮಾನಿ ತತೋSಪ್ಯನೂನಭೋಗಾಃ ಸದಾ ಸನ್ನ್ಯವಸಂಶ್ಚ ತತ್ರ  ॥ ೩೨.೧೨೫ ॥

 

ತದನಂತರ ಎಲ್ಲಾ ಪಾಂಡವರೂ ತಮ್ಮತಮ್ಮ ಮೂಲರೂಪದಿಂದ ಕೂಡಿಕೊಂಡೇ ಅತ್ಯಂತ ಸಂತಸದಿಂದ ತಮ್ಮತಮ್ಮ ಧಾಮಕ್ಕೆ ತೆರಳಿದರು. ಅಲ್ಲಿಯೂ ಕೂಡಾ ತಮ್ಮ ಮೂಲರೂಪಕ್ಕಿಂತ ಕಡಿಮೆಯಿಲ್ಲದ ಭೋಗವನ್ನು ಅನುಭವಿಸುತ್ತಾ ವಾಸಮಾಡಿದರು.

No comments:

Post a Comment