ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 6, 2023

Mahabharata Tatparya Nirnaya Kannada 32-126-130

 

ತತ್ರಾಪಿ ಕೃಷ್ಣೇನ ಸಮಾಗಮೋSಭೂತ್ ಪುರೇವ ತೇಷಾಮತಿತತ್ಪರಾಣಾಮ್ ।

ಚಿಕ್ರೀಡ ಏಭಿಃ ಸಹಿತಸ್ತಥೈವ ಕೃಷ್ಣೋSಪಿ ತದ್ವತ್ ಸರಥೋSರ್ಜ್ಜುನೇನ ॥ ೩೨.೧೨೬ ॥

 

ಸ್ವರ್ಗದಲ್ಲಿಯೂ ಕೂಡಾ ಪರಮಾತ್ಮನಲ್ಲಿ ಅತ್ಯಂತ ಭಕ್ತರಾದ ಪಾಂಡವರಿಗೆ ಶ್ರೀಕೃಷ್ಣನ ಜೊತೆಗೆ ಸಮಾಗಮವಾಯಿತು. ಅವರಿಂದ ಕೂಡಿದವನಾಗಿ ಶ್ರೀಕೃಷ್ಣನೂ ಕೂಡಾ ಕ್ರೀಡಿಸಿದನು. ಹಾಗೆಯೇ ಅರ್ಜುನನೊಂದಿಗೆ ರಥದಿಂದ ಕೂಡಿಕೊಂಡು ಶ್ರೀಕೃಷ್ಣನು ವಿಹರಿಸಿದನು. 

 

ಅನ್ಯೇ ತು ದೇವಾಂಶಭವಾಃ ಸಮಸ್ತಾಃ ಸ್ವಮೂಲರೂಪೈಕ್ಯಮವಾಪುರಾಶು ।

ಕರ್ಮ್ಮಕ್ಷಯಾದೇವ ಸುರೇತರಾಸ್ತು ಪುಣ್ಯಕ್ಷಯಂ ಪ್ರಾಪ್ಯ ಭುವಿ ಪ್ರಜಾತಾಃ ॥ ೩೨.೧೨೭ ॥

 

ಚತುಃಸಹಸ್ರಂ ತ್ರಿಶತೋತ್ತರಂ ತೇ ಸಂವತ್ಸರಾಣಾಮನುಭೂಯ ದಿವ್ಯಾನ್ ।

ಭೋಗಾನ್ ನರತ್ವೇSಪಿ ಸದೇಶ್ವರೋSಹಮಸಜ್ಜಗಚ್ಚೇತಿ ಧಿಯಾSSಪ್ನುವಂಸ್ತಮಃ ॥ ೩೨.೧೨೮ ॥

 

ದೇವತೆಗಳ ಅಂಶದಿಂದ ಹುಟ್ಟಿರುವ (ದ್ರೋಣ, ಧೃಷ್ಟದ್ಯುಮ್ನ, ಮೊದಲಾಗಿರುವ ಎಲ್ಲರೂ) ಶೀಘ್ರದಲ್ಲಿ ತಮ್ಮ ಮೂಲರೂಪದೊಂದಿಗೆ ಐಕ್ಯವನ್ನು ಹೊಂದಿದರು. ದುರ್ಯೋಧನನೇ ಮೊದಲಾಗಿರುವ ದೈತ್ಯರೆಲ್ಲರೂ ಕೂಡಾ, ತಮ್ಮ ಪುಣ್ಯಕರ್ಮದಿಂದಾಗಿ, ಅಲೌಕಿಕವಾದ ಭೋಗಗಳನ್ನು ಅನುಭವಿಸಿ, ನಾಲ್ಕುಸಾವಿರದ ಮುನ್ನೂರು ವರ್ಷವಾದ ಬಳಿಕ, ಪುಣ್ಯದ ನಾಶವನ್ನು ಹೊಂದಿ, ಭೂಮಿಯಲ್ಲಿ ಹುಟ್ಟಿದರು.  ಮನುಷ್ಯರಾಗಿದ್ದಾಗಲೂ ‘ತಾನೇ ಈಶ್ವರನು, ಈ ಜಗತ್ತು ಮಿಥ್ಯಾ’ ಎನ್ನುವ ಬುದ್ಧಿಯಿಂದ ಅವರೆಲ್ಲರೂ ಅನ್ಧಂತಮಸ್ಸನ್ನು ಹೊಂದುತ್ತಾರೆ(ಹೊಂದಿದರು).

 

ದುಃಖೇSಪಿ ತೇಷಾಮಿಹ ತಾರತಮ್ಯಂ ಕಲೇಃ ಪರಂ ದುಃಖಮಿಹಾಖಿಲಾಚ್ಚ ।

ಯಥಾ ವಿರಿಞ್ಚಸ್ಯ ಸುಖಂ ಪರಂ ಸ್ಯಾನ್ಮುಕ್ತೌ ಹರಿದ್ವೇಷಕೃತೋ ವಿಶೇಷಃ ॥ ೩೨.೧೨೯ ॥

 

ಅನ್ಧಂತಮಸ್ಸಿನಲ್ಲಿಯೂ ಕೂಡಾ ದುಃಖದಲ್ಲಿ ದೈತ್ಯರಿಗೆ ತಾರತಮ್ಯವಿದೆ. ಕಲಿಗೆ ಎಲ್ಲಾ ದೈತ್ಯರಿಗಿಂತ ಅಧಿಕವಾದ ದುಃಖವು. ಯಾವರೀತಿ ಬ್ರಹ್ಮನಿಗೆ ಮುಕ್ತಿಯಲ್ಲಿ ಉತ್ಕೃಷ್ಟವಾದ ಸುಖವಿದೆಯೋ, ಹಾಗೇ ಇಲ್ಲಿ ಕಲಿಗೆ ದುಃಖ ಹೆಚ್ಚು. ಯಾರಿಗೆ ಎಷ್ಟು ಹರಿದ್ವೇಷವಿದೆಯೋ ಅಷ್ಟು ದುಃಖವಾಗುತ್ತದೆ.

 

ಕೇಚಿತ್ ಪಿಶಾಚಾಸುರರಾಕ್ಷಸತ್ವಮವಾಪ್ಯ ವಿಷ್ಣೋರಪಿ ತತ್ಪರಾಣಾಮ್ ।

ದ್ವೇಷಾತ್ ತಮೋSನ್ಧಂ ತ್ವರಯಾ ಸಮಾಪ್ನುಯುರ್ದ್ದೇವಾಃ ಸ್ವಕಾಲೇ ನಿಜಯೋಗ್ಯಮುಕ್ತಿಮ್ ॥೩೨.೧೩೦ ॥

 

ಕೆಲವರು ಪಿಶಾಚ, ಅಸುರ, ರಾಕ್ಷಸರಾಗಿ, ವಿಷ್ಟುವಿಗೂ, ಅವನ ಭಕ್ತರ ದ್ವೇಷದಿಂದ ಶೀಘ್ರದಲ್ಲಿಯೇ ಅನ್ಧಂತಮಸ್ಸನ್ನು ಹೊಂದಿದರು. ದೇವತೆಗಳು ಸ್ವರೂಪಯೋಗ್ಯತಾ ಪೂರ್ತಿಕಾಲದಲ್ಲಿ ತಮಗೆ ಯೋಗ್ಯವಾಗಿರುವ ಮುಕ್ತಿಯನ್ನು ಹೊಂದುವರು.

No comments:

Post a Comment