ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 17, 2023

Mahabharata Tatparya Nirnaya Kannada 32-160-164

 

ತತಸ್ತು ಬುದ್ಧೋದಿತಪಕ್ಷಸಂಸ್ಥೋ ಜಿನೋSಪಿ ಚಕ್ರೇ ಮತಮನ್ಯದೇವ ।

ಬೌದ್ಧೇನ ಜೈನೇನ ಮತೇನ ಚೈವ ದೈತ್ಯಾಂಶಕಾಃ ಪ್ರೀತಿಮಗುಃ ಸಮಸ್ತಾಃ ॥ ೩೨.೧೬೦ ॥

 

ತದನಂತರ ಬುದ್ಧಹೇಳಿದ ಪಕ್ಷದಲ್ಲಿದ್ದು ಜಿನನೂ ಕೂಡಾ ಇನ್ನೊಂದು ಮತವನ್ನು ಆರಂಭಿಸಿದನು. ಹೀಗೆ ದೈತ್ಯರ ಅಂಶಭೂತರಾದ ಎಲ್ಲರೂ ಬೌದ್ಧಾಖ್ಯವಾದ, ಜಿನಾಖ್ಯವಾದ ಮತದಿಂದ ಆನಂದವನ್ನು ಅನುಭವಿಸಿದರು.

 

ಪ್ರಶಾನ್ತವಿದ್ಯೇತ್ಯಭಿಧಂ ತಥಾSನ್ಯದ್ ಬುದ್ಧೋಕ್ತಶಾಸ್ತ್ರಂ ತ್ರಿದಶಾ ಅವಾಪ್ಯ ।

ತೋಷಂ ಯಯುರ್ವೇದಸಮಸ್ತಸಾರಂ ಯಾಮಾಸ್ಥಿತಾನಾಮಚಿರೇಣ ಮುಕ್ತಿಃ ॥ ೩೨.೧೬೧ ॥

 

ಇತ್ತ ದೇವತೆಗಳು ಬುದ್ಧನಿಂದ ಹೇಳಲ್ಪಟ್ಟ, ಸಮಸ್ತ ವೇದದ ಸಾರವಾಗಿರುವ, ಯಾವುದನ್ನು ಹೊಂದಿದವರಿಗೆ ವೇಗದಲ್ಲಿಯೇ ಮುಕ್ತಿಯೋ, ಅಂತಹ ‘ಪ್ರಶಾಂತವಿದ್ಯಾ’ ಎನ್ನುವ ಬುದ್ಧಶಾಸ್ತ್ರವನ್ನು ಹೊಂದಿ, ಸಂತೋಷವನ್ನು ಹೊಂದಿದರು.

 

ಅನ್ಯೇ ಮನುಷ್ಯಾ ಅಪಿ ಭಾರತಾದ್ಯಂ ಸತ್ಸಮ್ಪ್ರದಾಯಂ ಪರಿಗೃಹ್ಯ ವಿಷ್ಣುಮ್ ।

ಯಜನ್ತ ಆಪುಃ ಪರಮಾಂ ಗತಿಂ ತನ್ನ ಸೇಹಿರೇ ಕ್ರೋಧವಶಾದಿದೈತ್ಯಾಃ ॥ ೩೨.೧೬೨ ॥

 

ದೇವತೆಗಳಿಂದ ಇತರರಾದ ಇನ್ನೂ ಕೆಲವು ಮನುಷ್ಯೋತ್ತಮರೂ ಕೂಡಾ, ಮಹಾಭಾರತವೇ ಮೊದಲಾದವುಗಳಿಂದ  ಪ್ರವೃತ್ತವಾದ ಒಳ್ಳೆಯ ಸಂಪ್ರದಾಯವನ್ನು ಹಿಡಿದು, ನಾರಾಯಣನನ್ನು ಪೂಜಿಸುತ್ತಾ, ಉತ್ಕೃಷ್ಟವಾದ ಗತಿಯನ್ನು ಹೊಂದಿದರು. ಇದನ್ನು ಕ್ರೋಧವಶ ದೈತ್ಯರು ಸಹಿಸಲಿಲ್ಲ.

 

ಶೈವಂ ತಪಸ್ತೇ ವಿಪುಲಂ ವಿಧಾಯ ಜಗದ್ವಿಮೋಹೋರ್ಜ್ಜಿತಶಕ್ತಿಮಸ್ಮಾತ್ ।

ಪ್ರಾಪ್ಯ ಪ್ರಜಾತಾ ಭುವಿ  ಮೋಹನಂ ಚ ಚಕ್ರುಃ ಕುತರ್ಕ್ಕೈರಭಿದಾಂ ವದನ್ತಃ ॥ ೩೨.೧೬೩ ॥

 

ಆ ಕ್ರೋಧವಶ ದೈತ್ಯರು ಶಿವ ಸಂಬಂಧಿಯಾದ ಬಹಳವಾದ ತಪಸ್ಸನ್ನು ಮಾಡಿ, ಶಿವನಿಂದ, ಜಗತ್ತನ್ನೇ ಮೋಹದಿಂದ ದಿಕ್ಕುಗೆಡಿಸುವ ಉತ್ಕೃಷ್ಟವಾದ ಶಕ್ತಿಯನ್ನು ಹೊಂದಿ, ಭೂಮಿಯಲ್ಲಿ ಹುಟ್ಟಿದವರಾಗಿ, ಕೆಟ್ಟ ತರ್ಕಗಳಿಂದ ಜೀವ-ಪರಮಾತ್ಮನ ನಡುವೆ ಅಭೇದವನ್ನು ಹೇಳುತ್ತಾ ಮೋಹಗೊಳಿಸಿದರು.  

 

ತೇಷಾಂ ಪ್ರಪಾತಾಯ ಸತಾಂ ಚ ಮಕ್ತ್ಯೈ ಜನ್ಮಾSಸ ಭೀಮಸ್ಯ ಯದುಕ್ತಮತ್ರ ।

ದುರ್ಗ್ಗಾ ಪುನರ್ವಿಪ್ರಕುಲೇSವತೀರ್ಣ್ಣಾಹನಿಷ್ಯತಿ ವ್ರಾತಮಥಾಸುರಾಣಾಮ್ ॥ ೩೨.೧೬೪ ॥

 

ಆ ಕ್ರೋಧವಶ ದೈತ್ಯರನ್ನು ಬೀಳಿಸುವುದಕ್ಕೊಸ್ಕರ,  ಸಜ್ಜನರ ಬಿಡುಗಡೆಗಾಗಿ, ಹಿಂದೆ ಹೇಳಿದ ಭೀಮನ (ಬ್ರಾಹ್ಮಣ ಶರೀರದಲ್ಲಿ) ಅವತಾರವಾಯಿತು. ಆಮೇಲೆ ದುರ್ಗಾದೇವಿಯು (ಕೇರಳದ) ಬ್ರಾಹ್ಮಣ ಕುಟುಂಬದಲ್ಲಿ  ಅವತರಿಸಿ, ಮ್ಲೇಚ್ಚರೂಪವಾದ ಅಸುರರ ಸಮೂಹವನ್ನು ಕೊಲ್ಲುತ್ತಾಳೆ. [ಆಚಾರ್ಯರು ಈ ಗ್ರಂಥ ನೀಡಿದ ಕಾಲದಲ್ಲಿ ಅಲ್ಲಿ ಮ್ಲೇಚ್ಚರಿರಲಿಲ್ಲ, ಈಗಿನ ಪರಿಸ್ಥಿತಿ ನಮಗೆ ತಿಳಿದಿದೆ].

No comments:

Post a Comment