ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, February 4, 2019

Mahabharata Tatparya Nirnaya Kannada 11.218-11.221


ಯೋ ಬಾಣಮಾವಿಶ್ಯ ಮಹಾಸುರೋsಭೂತ್ ಸ್ಥಿತಃ ಸ ನಾಮ್ನಾ ಪ್ರಥಿತೋsಪಿ ಬಾಣಃ ।
ಸ ಕೀಚಕೋ ನಾಮ ಬಭೂವ ರುದ್ರವರಾದವಧ್ಯಃ ಸ ತಮಃ ಪ್ರವೇಶ್ಯಃ ॥೧೧.೨೧೮

ಯಾವ ಮಹಾಸುರನು ಬಲಿಪುತ್ರ ಬಾಣನನ್ನು ಪ್ರವೇಶಮಾಡಿ ಬಾಣ ಎಂಬ ಹೆಸರಿನಿಂದ ಪ್ರಸಿದ್ಧನೋ, ಅವನೇ ಕೀಚಕನೆಂಬ ಹೆಸರಿನಿಂದ ಹುಟ್ಟಿದ್ದಾನೆ. ಅವನು ರುದ್ರದೇವರ ವರದಿಂದ ಅವಧ್ಯನಾಗಿದ್ದಾನೆ. ಅವನೂ ಕೂಡಾ ಅಂಧಂತಮಸ್ಸಿಗೆ ಬೀಳಲು ಅರ್ಹನಾಗಿದ್ದಾನೆ.

ಅತಸ್ತ್ವಯಾ ಭುವ್ಯವತೀರ್ಯ್ಯ ದೇವಕಾರ್ಯ್ಯಾಣಿ ಕಾರ್ಯ್ಯಾಣ್ಯಖಿಲಾನಿ ದೇವ ।
ತ್ವಮೇವ ದೇವೇಶ ಗತಿಃ ಸುರಾಣಾಂ ಬ್ರಹ್ಮೇಶಶಕ್ರೇನ್ದುಯಮಾದಿಕಾನಾಮ್ ॥೧೧.೨೧೯    

ಆ ಕಾರಣದಿಂದ ದೇವನೇ, ನೀನು ಭೂಮಿಯಲ್ಲಿ ಅವತರಿಸಬೇಕಿದೆ. ನಿನ್ನಿಂದ ದೇವಕಾರ್ಯಗಳು ಮಾಡಲ್ಪಡಬೇಕಾಗಿದೆ. ಓ ದೇವತೆಗಳ ಒಡೆಯನೇ,  ಬ್ರಹ್ಮ, ರುದ್ರ, ಇಂದ್ರ, ಚಂದ್ರ, ಯಮ, ಮೊದಲಾದ ಎಲ್ಲಾ  ದೇವತೆಗಳಿಗೂ  ನೀನೇ ಗತಿ.

ತ್ವಮೇವ ನಿತ್ಯೋದಿತಪೂರ್ಣ್ಣಶಕ್ತಿಸ್ತ್ವಮೇವ ನಿತ್ಯೋದಿತಪೂರ್ಣ್ಣಚಿದ್ಘನಃ ।
ತ್ವಮೇವ ನಿತ್ಯೋದಿತಪೂರ್ಣ್ಣಸತ್ಸುಖಸ್ತ್ವದೃಙ್ ನ ಕಶ್ಚಿತ್ ಕುತ ಏವ ತೇsಧಿಕಃ  ॥೧೧.೨೨೦

ನೀನೊಬ್ಬನೇ ನಿತ್ಯದಲ್ಲಿಯೂ ಅಭಿವ್ಯಕ್ತವಾಗಬಲ್ಲ ಪೂರ್ಣಶಕ್ತಿಯುಳ್ಳವನು. ನೀನೊಬ್ಬನೇ ಎಂದೆಂದೂ ಪೂರ್ಣವಾಗಿರುವ ಜ್ಞಾನದಿಂದ ತುಂಬಿದವನು. ನೀನೊಬ್ಬನೇ ಪೂರ್ಣವಾಗಿ ಉದ್ಭವಿಸಿದ ನಿರ್ದುಷ್ಟವಾದ ಆನಂದವುಳ್ಳವನು. ನಿನಗೆ ಸಮನೇ ಇಲ್ಲವೆಂದಮೇಲೆ ನಿನಗೆ ಮಿಗಿಲಾದವನು ಎಲ್ಲಿರಬೇಕು.

ಇತೀರಿತೋ ದೇವವರೈರುದಾರಗುಣಾರ್ಣ್ಣವೋsಕ್ಷೋಭ್ಯತಮಾಮೃತಾಕೃತಿಃ
ಉತ್ಥಾಯ ತಸ್ಮಾತ್ ಪ್ರಯಯಾವನನ್ತಸೋಮಾರ್ಕ್ಕಕಾನ್ತಿದ್ಯುತಿರನ್ವಿತೋsಮರೈಃ ॥೧೧.೨೨೧    


ಈರೀತಿಯಾಗಿ ದೇವತಾಶ್ರೇಷ್ಠರಿಂದ ಸ್ತೋತ್ರಮಾಡಲ್ಪಟ್ಟ, ಉತ್ಕೃಷ್ಟವಾದ ಗುಣಗಳಿಗೆ ಕಡಲಿನಂತೆ ಇರುವ, ಎಂದೂ ನಾಶವಾಗದ ದೇಹವುಳ್ಳ ನಾರಾಯಣನು,  ಶೇಷಶಯ್ಯೆಯಿಂದ ಎದ್ದು, ಎಣೆಯಿಲ್ಲದ ಸೂರ್ಯ ಹಾಗು ಚಂದ್ರರ ಕಾಂತಿಯುಳ್ಳವನಾಗಿ, ದೇವತೆಗಳಿಂದ ಅನುಸರಿಸಲ್ಪಟ್ಟವನಾಗಿ ಹೊರಟನು.

No comments:

Post a Comment