ಯೋ ಮನ್ಯತೇ ವಿಷ್ಣುರೇವಾಹಮಿತ್ಯಸೌ ಪಾಪೋ ವೇನಃ ಪೌಣ್ಡ್ರಕೋ
ವಾಸುದೇವಃ ।
ಜಾತಃ ಪುನಃ ಶೂರಜಾತ್ ಕಾಶಿಜಾಯಾಂ ನಾನ್ಯೋ ಮತ್ತೋ
ವಿಷ್ಣುರಸ್ತೀತಿ ವಾದೀ ॥೧೨.೦೮॥
ಧುನ್ಧುರ್ಹತೋ ಯೋ ಹರಿಣಾ ಮಧೋಃ ಸುತ ಆಸೀತ್ ಸುತಾಯಾಂ ಕರವೀರೇಶ್ವರಸ್ಯ।
ಸೃಗಾಲನಾಮಾ ವಾಸುದೇವೋsಥ ದೇವಕೀಮುದೂಹ್ಯ ಶೌರಿರ್ನ್ನ
ಯಯಾವುಭೇ ತೇ ॥೧೨.೦೯॥
‘ನಾನೇ ವಿಷ್ಣು’ ಎಂದು ಯಾರು ತನ್ನನ್ನು
ತಾನು ತಿಳಿಯುತ್ತಾನೋ, ಅಂತಹ ಪಾಪಿಷ್ಠನಾಗಿರುವ ವೇನನು
ವಸುದೇವನಿಂದ ಕಾಶಿರಾಜನ ಮಗಳಲ್ಲಿ, ‘ನನಗಿಂತ ವಿಲಕ್ಷಣನಾಗಿರುವ ಇನ್ನೊಬ್ಬ ವಾಸುದೇವನೆನ್ನುವವನು ಇಲ್ಲಾ, ನಾನೇ ವಿಷ್ಣು’ ಎಂದು ನಿರಂತರವಾಗಿ
ಹೇಳುತ್ತಿರುವ ‘ಪೌಣ್ಡ್ರಕ ವಾಸುದೇವ’ ನಾಗಿ ಹುಟ್ಟಿದನು.
ಕರವೀರರಾಜನ ಮಗಳಲ್ಲಿ
ಹಿಂದೆ ನಾರಾಯಾಣನಿಂದಲೇ ಕೊಲ್ಲಲ್ಪಟ್ಟ ಮಧುವಿನ
ಮಗನಾದ ‘ಧುನ್ಧು’ ಎನ್ನುವ ರಾಕ್ಷಸನು ‘ಸೃಗಾಲವಾಸುದೇವ’ ಎನ್ನುವ ಹೆಸರಿನವನಾಗಿ
ಹುಟ್ಟಿದನು. ಇವರಿಬ್ಬರು ಹುಟ್ಟಿದ ನಂತರ
ದೇವಕಿಯನ್ನು ಮದುವೆಮಾಡಿಕೊಂಡ ವಸುದೇವ, ಮತ್ತೆ ಅವರಿಬ್ಬರನ್ನು(ಕಾಶಿರಾಜ
ಮತ್ತು ಕರವೀರೇಶ್ವರ ಪುತ್ರಿಯರನ್ನು) ಸಂಪರ್ಕಿಸಲೇ ಇಲ್ಲಾ.
[ನಾವು ‘ಕುವಲಾಶ್ವ ಧುನ್ಧುವನ್ನು
ಕೊಂದು ಧುನ್ಧುಮಾರ ಎನ್ನುವ ಹೆಸರನ್ನು ಪಡೆದ’ ಎಂದು ತಿಳಿದಿದ್ದೇವೆ.
ವಾಯುಪುರಾಣದಲ್ಲಿ(ಉತ್ತರಖಂಡ, ೨೬.೨೮) ಈ ಕುರಿತು ಉಲ್ಲೇಖವಿದೆ: ‘ಬೃಹದಶ್ವಸುತಶ್ಚಾಪಿ ಕುವಲಾಶ್ವ ಇತಿಶ್ರುತಿಃ । ಯಃ ಸ ಧುನ್ಧುವಧಾದ್
ರಾಜ ಧುನ್ಧುಮಾರತ್ವಮಾಗತಃ’. ಆದರೆ ಇಲ್ಲಿ ಆಚಾರ್ಯರು ‘ಧುನ್ಧು ಹರಿಯಿಂದ
ಕೊಲ್ಲಲ್ಪಟ್ಟ’ ಎಂದು ಹೇಳಿರುವುದನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಮಹಾಭಾರತದಲ್ಲಿ ಒಂದು ಕಥೆ
ಬರುತ್ತದೆ. ಉದಂಕನೆಂಬ ಋಷಿ ತಪಸ್ಸುಮಾಡುತ್ತಿದ್ದ
ಪ್ರದೇಶದಲ್ಲಿ ಒಬ್ಬ ರಾಕ್ಷಸನಿಂದ. ಅವನು ಸಮುದ್ರದ ಉಸುಕಿನಲ್ಲಿ ಸೇರಿಕೊಂಡು ಆಕ್ರಮಿಸಿಕೊಂಡು
ಬರುತ್ತಿದ್ದ. ಈರೀತಿ ಮಾಡುತಿದ್ದ ಈತನನ್ನು ‘ಧುನ್ಧು’ ಎಂದು ಕರೆಯುತ್ತಿದ್ದರು.
ನಾರಾಯಣನನ್ನು ಕುರಿತು ತಪಸ್ಸು ಮಾಡಿದ ಉದಂಕ, ಪ್ರತ್ಯಕ್ಷನಾದ
ನಾರಾಯಣನಲ್ಲಿ ಈ ಧುನ್ಧುವನ್ನು ಕೊಲ್ಲಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ನಾರಾಯಣನು ‘ನೀನು ಯಾರಿಗೆ ಅನುಗ್ರಹ
ಮಾಡುತ್ತೀಯೋ, ಅವನಲ್ಲಿ ನನ್ನ ತೇಜಸ್ಸು ಪ್ರವೇಶ ಮಾಡುತ್ತದೆ ಮತ್ತು ಆತ ಧುನ್ಧುವನ್ನು
ಕೊಲ್ಲುತ್ತಾನೆ’ ಎನ್ನುತ್ತಾನೆ. ಇದೇ ಸಮಯದಲ್ಲಿ ರಾಜ್ಯವನ್ನು ಮಗನಿಗೆ ಕೊಟ್ಟು, ವಾನಪ್ರಸ್ಥಾಶ್ರಮ ಸ್ವೀಕಾರಕ್ಕೆಂದು ಬರುತ್ತಿದ್ದ
ಬೃಹದಶ್ವರಾಜನನ್ನು ಉದಂಕ ಎದುರುಗೊಳ್ಳುತ್ತಾನೆ. ಬೃಹದಶ್ವರಾಜನನ್ನು ಕಂಡ ಉದಂಕ ‘ನನ್ನ ಅನುಗ್ರಹದಿಂದ
ನಿನ್ನಲ್ಲಿ ವಿಷ್ಣುವಿನ ತೇಜಸ್ಸು ಪ್ರವೇಶವಾಗುತ್ತದೆ. ಆ ತೇಜಸ್ಸಿನ ಬಲದಿಂದ ಧುನ್ಧುವನ್ನು ನೀನು ಕೊಂದು ಲೋಕದಲ್ಲಿ ಖ್ಯಾತಿಯನ್ನು
ಗಳಿಸಬೇಕು’ ಎಂದು ಹೇಳುತ್ತಾನೆ. ಅದಕ್ಕೆ ಬೃಹದಶ್ವ ‘ನಾನು ಈಗಾಗಲೇ ರಾಜ್ಯವನ್ನು
ತ್ಯಜಿಸಿ ಬಂದವನು. ಹಾಗಾಗಿ ಈ ಕಾರ್ಯವನ್ನು ನನ್ನ ಮಗನಾದ ಕುವಲಾಶ್ವ ಮಾಡಲಿ’ ಎನ್ನುತ್ತಾನೆ. ಆಗ ಉದಂಕ ಕುವಲಾಶ್ವನಲ್ಲಿಗೆ ಹೋಗಿ ಅವನಿಗೆ
ಆಶೀರ್ವದಿಸುತ್ತಾನೆ. ಕುವಲಾಶ್ವ ತನ್ನ ಸಾವಿರಮಂದಿ ಮಕ್ಕಳೊಂದಿಗೆ ಧುನ್ಧುವಿನೊಂದಿಗೆ
ಹೋರಾಡುತ್ತಾನೆ. ಈ ಯುದ್ಧದಲ್ಲಿ ಕುವಲಾಶ್ವನ ಸಾವಿರ ಮಕ್ಕಳಲ್ಲಿ ಎಲ್ಲರೂ ಸತ್ತು ಕೇವಲ ಮೂರೇ
ಮಂದಿ ಬದುಕುಳಿಯುತ್ತಾರೆ. ಕುವಲಾಶ್ವನಲ್ಲಿ ವಿಷ್ಣುವಿನ ತೇಜಸ್ವಿನ ಪ್ರವೇಶದಿಂದಾಗಿ ಅವನಿಗೆ
ಧುನ್ಧುವನ್ನು ಕೊಲ್ಲುವ ಶಕ್ತಿ ಬರುತ್ತದೆ. ಹೀಗೆ ವಿಷ್ಣು ತೇಜಸ್ಸಿನಿಂದ ದುನ್ಧುವನ್ನು ಕೊಂದ
ಕುವಲಾಶ್ವನಿಗೆ ಧುನ್ಧುಮಾರ ಎನ್ನುವ ಹೆಸರು ಬರುತ್ತದೆ. ಈ ಕಥೆಯ ಹಿನ್ನೆಲೆಯಲ್ಲಿ ಇಲ್ಲಿ
ಆಚಾರ್ಯರು ಕುವಲೇಶ್ವನೊಳಗೆ ಪ್ರವೇಶಿಸಿರುವ ವಿಷ್ಣುತೇಜಸ್ಸನ್ನು ಬಿಂಬಿಸಿ ‘ಹರಿಣಾ ಮಧೋಃಸುತಃ’ ಎಂದಿದ್ದಾರೆ.
ಇನ್ನು ದುನ್ಧು ಮಧುವಿನ ಮಗ
ಎಂದು ಯಾವ ಹಿನ್ನೆಲೆಯಲ್ಲಿ ಹೇಳಲಾಗಿದೆ ಎನ್ನುವ ಪ್ರಶ್ನೆ ಬರುತ್ತದೆ. ಮಹಾಭಾರತದ ವನಪರ್ವದಲ್ಲಿ(೨೦೫.೧೭) ಒಂದು ಮಾತು
ಬರುತ್ತದೆ: ಮಧುಕೈಟಭಯೋಃ ಪುತ್ರೋ ಧುನ್ಧುರ್ನಾಮಾ ಮಹಾಸುರಃ’ . ಇಲ್ಲಿ ಮಧು-ಕೈಟಭ ಇಬ್ಬರ
ಹೆಸರೂ ಬಂದಿದೆ(ಉಪಕ್ರಮ). ಆದರೆ ದುನ್ಧು ಮಧುವಿನ
ಮಗ ಎನ್ನುವುದಕ್ಕೆ ನಿರ್ಣಯ ಯಾವುದು? ಹರಿವಂಶಪರ್ವದಲ್ಲಿ (೧೧.೩೩) ರಾಕ್ಷಸಾಸ್ಯ
ಮಧೋಃ ಪುತ್ರೋ ಧನ್ಧುರ್ನಾಮಮಹಾಸುರಃ. ಎಂದಿದ್ದಾರೆ. ಇಲ್ಲಿ ಉಪಸಂಹಾರ ಪ್ರಾಭಲ್ಯವಿರುವುದರಿಂದ ದುನ್ಧು ಮಧುವಿನ
ಪುತ್ರ ಎನ್ನುವುದನ್ನು ನಾವು ತಿಳಿಯಬಹುದು. ಇದಲ್ಲದೇ ಬ್ರಾಹ್ಮಪುರಾಣದಲ್ಲೂ(೫.೬೩)ಕೂಡಾ ‘ರಾಕ್ಷಸಸ್ಯ ಮಧೋಃ ಪುತ್ರೋ
ಧುನ್ಧುರ್ನಾಮಮಹಾಸುರಃ’ ಎಂದು ಹೇಳಿರುವುದರಿಂದ ಕೈಟಭನಿಗೆ
ಔಪಚಾರಿಕಪುತ್ರತ್ವ, ಮಧುವಿಗೆ ಔರಸಪುತ್ರತ್ವ ಎಂದು ನಿರ್ಣಯಮಾಡಿ ಆಚಾರ್ಯರು ‘ಮಧೋಃಸುತಃ’ ಎಂದಿದ್ದಾರೆ ಎಂದು ತಿಳಿಯಬಹುದು]
ತತಸ್ತು ತೌ ವೃಷ್ಣಿಶತ್ರೂ ಬಭೂವತುರ್ಜ್ಜ್ಯೇಷ್ಠೌ ಸುತೌ
ಶೂರಸುತಸ್ಯ ನಿತ್ಯಮ್ ।
ಅನ್ಯಾಸು ಚ
ಪ್ರಾಪ ಸುತಾನುದಾರಾನ್ ದೇವಾವತಾರಾನ್ ವಸುದೇವೋsಖಿಲಜ್ಞಃ ॥೧೨.೧೦॥
ದೇವಕಿಯನ್ನು ಮದುವೆಯಾದ
ವಸುದೇವನು ತಮ್ಮ ತಾಯಂದಿರನ್ನು ಪರಿತ್ಯಾಗ ಮಾಡಿದ್ದರಿಂದ, ಪೌಣ್ಡ್ರಕ ವಾಸುದೇವ
ಮತ್ತುಸೃಗಾಲವಾಸುದೇವ ಇವರಿಬ್ಬರು ತಮಗೆ ಅಪ್ಪನ ಪ್ರೀತಿ ಸಿಗಲಿಲ್ಲಾ ಎಂದು ಯಾದವರ ದೊಡ್ಡ
ಶತ್ರುಗಳಾದರು. ಎಲ್ಲವನ್ನು ಬಲ್ಲ(ಜ್ಞಾನಿಯಾದ) ವಸುದೇವನು ತನ್ನ ಇತರ ಪತ್ನಿಯರಲ್ಲಿ ಶ್ರೇಷ್ಠರಾಗಿರುವ, ದೇವತೆಗಳ ಅವತಾರವಾಗಿರುವ
ಮಕ್ಕಳನ್ನು ಪಡೆದನು.
No comments:
Post a Comment