ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, February 20, 2019

Mahabharata Tatparya Nirnaya Kannada 12.01-12.03


೧೨. ಪಾಣ್ಡವೋತ್ಪತ್ತಿಃ


 ಓಂ ॥
ಬಭೂವ ಗನ್ಧರ್ವಮುನಿಸ್ತು ದೇವಕಃ ಸ ಆಸ ಸೇವಾರ್ತ್ಥಮಥಾsಹುಕಾದ್ಧರೇಃ ।
ಸ ಉಗ್ರಸೇನಾವರಜಸ್ತಥೈವ ನಾಮಾಸ್ಯ ತಸ್ಮಾದಜನಿ ಸ್ಮ ದೇವಕೀ ॥೧೨.೦೧॥

ಗಂಧರ್ವರಲ್ಲಿ ಮುನಿಯಾಗಿ ಒಬ್ಬ ದೇವಕನೆಂಬ ಹೆಸರಿನವನಿದ್ದ. ಆ ದೇವಕನು ನಾರಾಯಣನ ಸೇವೆಗಾಗಿ ಆಹುಕನಾಮಕನಾದ ಯಾದವನಿಂದ ಭೂಮಿಯಲ್ಲಿ ಉಗ್ರಸೇನನ ತಮ್ಮನಾಗಿ ಅದೇ ಹೆಸರಿನಿಂದ (ದೇವಕ ಎಂಬ ಹೆಸರಿನಿಂದ) ಹುಟ್ಟಿದ. ಆ ದೇವಕನಿಂದ ದೇವಕಿಯು ಹುಟ್ಟಿದಳು.

ಅನ್ಯಾಶ್ಚ ಯಾಃ ಕಾಶ್ಯಪಸ್ಯೈವ ಭಾರ್ಯ್ಯಾ ಜ್ಯೇಷ್ಠಾಂ ತು ತಾಮಾಹುಕ ಆತ್ಮಪುತ್ರೀಮ್ ।
ಚಕಾರ ತಸ್ಮಾದ್ಧಿ ಪಿತೃಷ್ವಸಾ ಸಾ ಸ್ವಸಾ ಚ ಕಂಸಸ್ಯ ಬಭೂವ ದೇವಕೀ ॥೧೨.೦೨॥

ಯಾರುಯಾರು ಕಾಶ್ಯಪ ಮುನಿಯ ಹೆಂಡಿರೋ ಅವರೆಲ್ಲರೂ ಕೂಡಾ ದೇವಕಿಯ ತಂಗಿಯರಾಗಿ ಹುಟ್ಟಿದರು. ದೇವಕಿಯನ್ನು ಆಹುಕನು ತನ್ನ ಮಗಳನ್ನಾಗಿ ಮಾಡಿಕೊಂಡ(ದತ್ತು ತೆಗೆದುಕೊಂಡ). ಆ ಕಾರಣದಿಂದ ದೇವಕಿಯು ಕಂಸನಿಗೆ ಅತ್ತೆಯೂ, ತಂಗಿಯೂ ಆದಳು.
[ಈ ಮೇಲಿನ ಆಚಾರ್ಯರ ವಿವರಣೆ ತಿಳಿಯದಿದ್ದರೆ ಪುರಾಣದಲ್ಲಿ ನಮಗೆ  ವಿರೋಧ ಕಂಡುಬರುತ್ತದೆ. ತತ್ರೈಷ ದೇವಕೀ ಯಾ ತೇ ಮಧುರಾಯಾಂ ಪಿತೃಷ್ವಸಾ ಅಸ್ಯಾ ಗರ್ಭೋsಷ್ಟಮಃ ಕಂಸ ಸ ತೇ ಮೃತ್ಯುರ್ಭವಿಷ್ಯತಿ’ (ವಿಷ್ಣುಪರ್ವ ೧.೧೬)  ನಿನ್ನ(ಕಂಸನ) ಆತ್ತೆಯಾದ ದೇವಕಿಯ ಎಂಟನೆಯ ಮಗು ನಿನಗೆ(ಕಂಸನಿಗೆ) ಮರಣವನ್ನು ತಂದುಕೊಡುತ್ತದೆ ಎಂದು ಹರಿವಂಶದಲ್ಲಿ ಹೇಳಿದ್ದಾರೆ. ‘ಪಿತೃಷ್ವಸಃ ಕೃತೋ ಯತ್ನಸ್ತವ ಗರ್ಭಾ ಹತಾ ಮಯಾ’(೪.೫೦). ಅತ್ತೆಯೇ, ನಿನ್ನ ಎಲ್ಲಾ ಗರ್ಭಗಳನ್ನೂ ನಾನು ನಾಶಮಾಡಿದೆ. ಅದರಿಂದಾಗಿ ದಯವಿಟ್ಟು ಕ್ಷಮಿಸು ಎಂದು ಕಂಸ ಹೇಳುವ ಒಂದು ಮಾತು  ಇದಾಗಿದೆ. ಆದರೆ ಭಾಗವತಾದಿಗಳಲ್ಲಿ ದೇವಕಿಯನ್ನು ಕಂಸನ ತಂಗಿ ಎಂದು ವಿವರಿಸಿದ್ದಾರೆ. ತಾತ್ಪರ್ಯ ಇಷ್ಟು: ದೇವಕಿಯ ತಂದೆ ದೇವಕ ಆಹುಕನ ಮಗ. ಹಾಗಾಗಿ ದೇವಕಿ ಆಹುಕನ ಮೊಮ್ಮಗಳು. ಆದರೆ ದೇವಕಿಯನ್ನು  ಆಹುಕ ದತ್ತಕ್ಕೆ ಪಡೆದು ತನ್ನ ಮಗಳನ್ನಾಗಿ ಮಾಡಿಕೊಂಡ. ಆದ್ದರಿಂದ ಆಕೆ ತನ್ನ ತಂದೆಗೇ ತಂಗಿಯಾದಳು. ಇದರಿಂದ ಕಂಸನಿಗೆ ಆಕೆ ಅತ್ತೆಯಾಗುತ್ತಾಳೆ. ಆದರೆ ಆಕೆ ಕಂಸನ ಚಿಕ್ಕಪ್ಪನ ಮಗಳಾಗಿರುವುದರಿಂದ ಕಂಸನಿಗೆ ತಂಗಿ ಕೂಡಾ ಹೌದು.
(ಇಂದು ಲಭ್ಯವಿರುವ ಕೆಲವು ಮಹಾಭಾರತ ಪಾಠದಲ್ಲಿ   ‘ಮೃತ್ಯೋಃ ಸ್ವಸಃ  ಕೃತೋ ಯತ್ನಃ’ ಎಂದು ಹೇಳಿದ್ದಾರೆ. ಇದು ‘ಪಿತೃಷ್ವಸಃ’ ಎಂಬ ಮಾತಿನ ಹಿಂದಿನ  ಪ್ರಮೇಯ ವಿಷಯ ತಿಳಿಯದ ಅರ್ವಾಚೀನರಿಂದಾದ ಅಪಾರ್ಥ)]    

ಸೈವಾದಿತಿರ್ವಸುದೇವಸ್ಯ ದತ್ತಾ ತಸ್ಯಾ ರಥಂ ಮಙ್ಗಲಂ ಕಂಸ ಏವ ।
ಸ̐ಯ್ಯಾಪಯಾಮಾಸ ತದಾ ಹಿ ವಾಯುರ್ಜ್ಜಗಾದ ವಾಕ್ಯಂ ಗಗನಸ್ಥಿತೋsಮುಮ್ ॥೧೨.೦೩॥ 

ಹೀಗೆ ದೇವಕಿಯಾಗಿ ಹುಟ್ಟಿದ ಅದಿತಿ ವಸುದೇವನಿಗೆ ಕೊಡಲ್ಪಟ್ಟಳು. ಅವಳ ವಿವಾಹೋಯೋಪಿಯಾದ ಮೆರವಣಿಗೆ ಮಾಡಿಸುವ ರಥವನ್ನು ಕಂಸನೇ ನಡೆಸಿದನು. ಆಗ ಮುಖ್ಯಪ್ರಾಣನು ಆಕಾಶದಲ್ಲಿ ನಿಂತು ಕಂಸನನ್ನು ಕುರಿತು ಮಾತನಾಡಿದನು(ಅಶರೀರವಾಣಿಯಾಯಿತು).

No comments:

Post a Comment