ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, February 2, 2019

Mahabharata Tatparya Nirnaya Kannada 11.211-11.217


ಹತೌ ಚ ಯೌ ರಾವಣಕುಮ್ಭಕರ್ಣ್ಣೌ ತ್ವಯಾ ತ್ವದೀಯೌ ಪ್ರತಿಹಾರಪಾಲೌ ।
ಮಹಾಸುರಾವೇಶಯುತೌ ಹಿ ಶಾಪಾತ್ ತ್ವಯೈವ ತಾವದ್ಯ ವಿಮೋಚನೀಯೌ ॥೧೧.೨೧೧

ಯೌ ತೌ ತವಾರೀ ಹ ತಯೋಃ ಪ್ರವಿಷ್ಟೌ ದೈತ್ಯೌ ತು ತಾವನ್ಧತಮಃ ಪ್ರವೇಶ್ಯೌ ।
ಯೌ ತೌ ತ್ವದೀಯೌ ಭವದೀಯವೇಶ್ಮ ತ್ವಯಾ ಪುನಃ ಪ್ರಾಪಣೀಯೌ ಪರೇಶ ॥೧೧.೨೧೨

ಕೇವಲ ದುಷ್ಟ ನಿಗ್ರಹವಷ್ಟೇ ಅಲ್ಲಾ, ಹಲವಾರು ಶಿಷ್ಟ ಜನರನ್ನು ರಕ್ಷಿಸಲು ನೀನು ಅವತರಿಸಬೇಕಾಗಿದೆ ಎಂದು ದೇವತೆಗಳು ಇಲ್ಲಿ ಭಗವಂತನನ್ನು ಪ್ರಾರ್ಥಿಸುತ್ತಿದ್ದಾರೆ. ಹಿಂದೆ ರಾವಣ-ಕುಂಭಕರ್ಣರಾಗಿದ್ದಾಗ ನಿನ್ನಿಂದ ಹತರಾಗಿ  ಮತ್ತೆ ಇದೀಗ ಶಿಶುಪಾಲ-ದಂತವಕ್ರ ಎಂಬ ಹೆಸರಿನಿಂದ,  ನಿನ್ನ ದ್ವಾರಪಾಲಕರಾದ ಜಯ-ವಿಜಯರಲ್ಲಿ ಪ್ರವಿಷ್ಟರಾದ, ನಿನ್ನ ಶತ್ರುಗಳಾಗಿರುವ ದೈತ್ಯರು, ಅಂಧಂತಮಸ್ಸನ್ನು ಪ್ರವೇಶಮಾಡಲು ಅರ್ಹರಾಗಿದ್ದಾರೆ. ನಿನ್ನಿಂದ ಶಾಪವನ್ನು ಪಡೆದು  ಅಸುರರ ಆವೇಶವುಳ್ಳವರಾಗಿರುವ ಜಯ-ವಿಜಯರು  ಈಗ ಬಿಡುಗಡೆ ಮಾಡಲು ಅರ್ಹರಾಗಿರುತ್ತಾರೆ. ಅವರನ್ನು ನೀನೇ ಬಿಡುಗಡೆ ಮಾಡಬೇಕು.
[ಈ ವಿವರವನ್ನು ನಾವು ಮಹಾಭಾರತದ ಆದಿಪರ್ವದಲ್ಲಿ(೬೮.೫) ಕಾಣಬಹುದು:  ‘ದಿತೇಃ ಪುತ್ರಸ್ತು ಯೋ ರಾಜನ್ ಹಿರಣ್ಯಕಶಿಪುಃ ಸ್ಮೃತಃ। ಸ ಜಜ್ಞೇ ಮಾನುಷೇ ಲೋಕೇ ಶಿಶುಪಾಲೋ ನರರ್ಷಭಃ’].

ಆವಿಶ್ಯಯೋ ಬಲಿಮಞ್ಜಶ್ಚಕಾರ ಪ್ರತೀಪಮಸ್ಮಾಸು ತಥಾ ತ್ವಯೀಶ ।
ಸ ಚಾಸುರೋ ಬಲಿನಾಮೈವ ಭೂಮೌ ಸಾಲ್ವೋ ನಾಮ್ನಾ ಬ್ರಹ್ಮದತ್ತಸ್ಯ ಜಾತಃ ॥೧೧.೨೧೩      

ಯಾರು ಬಲಿಚಕ್ರವರ್ತಿ ಯನ್ನು ಪ್ರವೇಶಮಾಡಿ, ನಮ್ಮಲ್ಲಿ  ಮತ್ತು ನಿನ್ನಲ್ಲೂ ಕೂಡಾ ವಿರೋಧವನ್ನು ಮಾಡಿದನೋ, ಆ ಅಸುರನು ಬಲಿಯೆಂಬ ಹೆಸರಿನವನೇ ಆಗಿದ್ದಾನೆ. (ಸಜ್ಜೀವನಾದ ಬಲಿಚಕ್ರವರ್ತಿ ಬಲಿ ಎಂಬ ಅಸುರನ ಆವೇಶದಿಂದ  ದೇವತೆಗಳನ್ನು ವಿರೋಧ ಮಾಡುತ್ತಿದ್ದ. ವಾಮನನಿಗೆ ಆತ್ಮನಿವೇದನೆ ಮಾಡಿಕೊಂಡು, ಮುಂದಿನ ಮನ್ವಂತರದಲ್ಲಿ ಇಂದ್ರನಾಗಲಿರುವ ಬಲಿಚಕ್ರವರ್ತಿ, ಈ ಅಸುರನ ಆವೇಶದಿಂದಾಗಿ ದೇವತೆಗಳನ್ನು  ವಿರೋಧ ಮಾಡುವಂತಾಯಿತು). ಈ ಬಲಿನಾಮಕ ದೈತ್ಯ ಇದೀಗ ಭೂಮಿಯಲ್ಲಿ ಸಾಲ್ವ ಎಂಬ ಹೆಸರಿನಿಂದ ಬ್ರಹ್ಮದತ್ತನ ಮಗನಾಗಿ ಹುಟ್ಟಿದ್ದಾನೆ.

ಮಾಯಾಮಯಂ ತೇನ ವಿಮಾನಮಗ್ರ್ಯಮಭೇದ್ಯಮಾಪ್ತಂ ಸಕಲೈರ್ಗ್ಗಿರೀಶಾತ್ ।
ವಿದ್ರಾವಿತೋ ಯೋ ಬಹುಶಸ್ತ್ವಯೈವ ರಾಮಸ್ವರೂಪೇಣ ಭೃಗೂದ್ವಹೇನ ॥೧೧.೨೧೪

ಯಾವ ಸಾಲ್ವನು ಪರಶುರಾಮರೂಪಿಯಾದ ನಿನ್ನಿಂದ ಅನೇಕಬಾರಿ ಓಡಿಸಲ್ಪಟ್ಟಿದ್ದನೋ, ಅವನಿಂದ, ಯಾರಿಂದಲೂ ಭೇದಿಸಲು ಅಸಾಧ್ಯವಾದ, ವಿಚಿತ್ರವಾದ ಶಕ್ತಿಯನ್ನುಳ್ಳ , ಶ್ರೇಷ್ಠವಾದ ವಿಮಾನವು  ರುದ್ರದೇವರ ತಪಸ್ಸಿನಿಂದ ಹೊಂದಲ್ಪಟ್ಟಿತು. (ಅನೇಕಬಾರಿ ಪರಶುರಾಮನಿಂದ ಓಡಿಸಲ್ಪಟ್ಟಿದ್ದ ಸಾಲ್ವ, ತಪಸ್ಸಿನಿಂದ ರುದ್ರದೇವರನ್ನು ಒಲಿಸಿಕೊಂಡು ಸೌಭಾಖ್ಯಾ ಎಂಬ ವಿಶಿಷ್ಟವಾದ ವಿಮಾನವನ್ನು ಹೊಂದಿದ್ದ).

ನಾಸೌ ಹತಃ ಶಕ್ತಿಮತಾsಪಿ ತತ್ರ ಕೃಷ್ಣಾವತಾರೇ ಸ ಮಯೈವ ವಧ್ಯಃ ।
ಇತ್ಯಾತ್ಮಸಙ್ಕಲ್ಪಮೃತಂ ವಿಧಾತುಂ ಸ ಚಾತ್ರ ವಧ್ಯೋ ಭವತಾsತಿಪಾಪೀ ॥೧೧.೨೧೫

 ‘ಕೃಷ್ಣಾವತಾರದಲ್ಲಿ ಈತ ನನ್ನಿಂದಲೇ ಕೊಲ್ಲಲ್ಪಡಬೇಕಾದವನು’ ಎಂಬ ನಿನ್ನದೇ ಆದ ಸಂಕಲ್ಪದಿಂದಾಗಿ, ಶಕ್ತಿಯುಳ್ಳವನಾದರೂ ಕೂಡಾ, ಪರಶುರಾಮ ರೂಪಿಯಾದ ನಿನ್ನಿಂದ ಸಾಲ್ವನು ಕೊಲ್ಲಲ್ಪಡಲಿಲ್ಲ. ನಿನ್ನ ಈ ಮಾತನ್ನು  ಸತ್ಯವನ್ನಾಗಿ ಮಾಡಲು ನೀನು ಅವತರಿಸಬೇಕಿದೆ. ಕೃಷ್ಣಾವತಾರದಲ್ಲಿ ಅತ್ಯಂತ ಪಾಪಿಯಾದ ಈ ಸಾಲ್ವನು ನಿನ್ನಿಂದ ಸಂಹರಿಸಲು ಯೋಗ್ಯನಾಗಿದ್ದಾನೆ.

(ಇಂತಹ ಸಾಲ್ವನಿರುವಾಗ ಹೇಗೆ ಆತನ ತಂದೆಯಾದ ಬ್ರಹ್ಮದತ್ತ ಭೀಷ್ಮಾಚಾರ್ಯರಿಂದ ಸೋಲಿಸಲ್ಪಟ್ಟ ಎನ್ನುವುದನ್ನು ಆಚಾರ್ಯರು ಮುಂದಿನಶ್ಲೋಕದಲ್ಲಿ ವಿವರಿಸಿದ್ದಾರೆ:)

ಯದೀಯಮಾರುಹ್ಯ ವಿಮಾನಮಸ್ಯ ಪಿತಾsಭವತ್ ಸೌಭಪತಿಶ್ಚ ನಾಮ್ನಾ ।
ಯದಾ ಸ ಭೀಷ್ಮೇಣ ಜಿತಃ ಪಿತಾsಸ್ಯ ತದಾ ಸ ಸಾಲ್ವಸ್ತಪಸಿ ಸ್ಥಿತೋsಭೂತ್೧೧.೨೧೬    

ಯಾರ ವಿಮಾನವನ್ನೇರಿ ಸಾಲ್ವನ ತಂದೆಯಾದ ಬ್ರಹ್ಮದತ್ತನು ‘ಸೌಭಪತಿ’  ಎಂಬ ಹೆಸರಿನಿಂದ ಕರೆಸಿಕೊಳ್ಳಲ್ಪಟ್ಟನೋ,  ಅವನು ಭೀಷ್ಮಾಚಾರ್ಯರಿಂದ  ಸೋಲಿಸಲ್ಪಟ್ಟ ಕಾಲದಲ್ಲಿ^ ಸಾಲ್ವ ತಪಸ್ಸನ್ನಾಚರಿಸುತ್ತಿದ್ದ. (^ಬ್ರಹ್ಮದತ್ತನೇ ಮೊದಲಾದ ಎಲ್ಲರನ್ನು ಸೋಲಿಸಿ ಭೀಷ್ಮಾಚಾರ್ಯರು ಅಂಬೆಯನ್ನು  ಸ್ವಯಂವರ ಕಾಲದಲ್ಲಿಅಪಹರಣ ಮಾಡಿದ್ದರು )

ಸ ಚಾದ್ಯ ತಸ್ಮಾತ್ ತಪಸೋ ನಿವೃತ್ತೋ ಜರಾಸುತಸ್ಯಾನುಮತೇ ಸ್ಥಿತೋ ಹಿ ।
ಅನನ್ಯವಧ್ಯೋ ಭವತಾsದ್ಯ ವಧ್ಯಃ ಸ ಪ್ರಾಪಣೀಯಶ್ಚ ತಮಸ್ಯಥೋಗ್ರೇ ॥೧೧.೨೧೭       

ತಪಸ್ಸಿನಿಂದ ಮರಳಿಬಂದ ಸಾಲ್ವ  ಜರಾಸಂಧನ ಜೊತೆಯಲ್ಲೇ ಇದ್ದಾನೆ. ಬೇರೆ ಯಾರಿಂದಲೂ ಕೊಲ್ಲಲಿಕ್ಕಾಗದ ಅವನು, ನಿನ್ನಿಂದ (ಕೃಷ್ಣಾವತಾರದಲ್ಲಿ) ಕೊಲ್ಲಲ್ಪಟ್ಟು, ಉಗ್ರವಾದ ತಮಸ್ಸಿನಲ್ಲಿ ಹಾಕಲು ಯೋಗ್ಯನಾಗಿದ್ದಾನೆ.

No comments:

Post a Comment