ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, February 5, 2019

Mahabharata Tatparya Nirnaya Kannada 11.222-11.225


ಸ ಮೇರುಮಾಪ್ಯಾsಹ ಚತುರ್ಮ್ಮುಖಂ ಪ್ರಭುರ್ಯ್ಯತ್ರ ತ್ವಯೋಕ್ತೋsಸ್ಮಿ ಹಿ ತತ್ರ ಸರ್ವಥಾ ।      
ಪ್ರಾದುರ್ಭವಿಷ್ಯೇ ಭವತೋ ಹಿ ಭಕ್ತ್ಯಾ ವಶಸ್ತ್ವಿವಾಹಂ ಸ್ವವಶೋsಪಿ ಚೇಚ್ಛಯಾ ॥೧೧.೨೨೨     

ದೇವತೆಗಳೊಂದಿಗೆ ಮೇರುಪರ್ವತಕ್ಕೆ ತೆರಳಿದ ಭಗವಂತ ಚತುರ್ಮುಖನನ್ನು ಕುರಿತು ಹೇಳುತ್ತಾನೆ: ‘ನಿನ್ನ ಭಕ್ತಿಯಿಂದಾಗಿ, ನನ್ನ ಇಚ್ಛೆಯಿಂದಲೇ, ನಾನು ನಿನ್ನ ವಶನಂತೆ ಇರುವೆನು. ಅದರಿಂದ, ನೀನು ಎಲ್ಲಿ ಅವತರಿಸಬೇಕು ಎಂದು ಹೇಳುತ್ತೀಯೋ ಅಲ್ಲೇ ನಾನು ಅವತರಿಸುತ್ತೇನೆ’ ಎಂದು.

ಬ್ರಹ್ಮಾ ಪ್ರಣಮ್ಯಾsಹ ತಮಾತ್ಮಕಾರಣಂ ಪ್ರಾದಾಂ ಪುರಾsಹಂ ವರುಣಾಯ ಗಾಃ ಶುಭಾಃ ।  
ಜಹಾರ ತಾಸ್ತಸ್ಯ ಪಿತಾsಮೃತಸ್ರವಾಃ ಸ ಕಶ್ಯಪೋ ದ್ರಾಕ್ ಸಹಸಾsತಿಗರ್ವಿತಃ ॥೧೧.೨೨೩     

ಮಾತ್ರಾ ತ್ವದಿತ್ಯಾ ಚ ತಥಾ ಸುರಭ್ಯಾ ಪ್ರಚೋದಿತೇನೈವ ಹೃತಾಸು ತಾಸು ।
ಶ್ರುತ್ವಾ ಜಲೇಶಾತ್ ಸ ಮಯಾ ತು ಶಪ್ತಃ ಕ್ಷತ್ರೇಷು ಗೋಜೀವನಕೋ ಭವೇತಿ ೧೧.೨೨೪

ಬ್ರಹ್ಮನು ತನ್ನ ತಂದೆಯಾದ ನಾರಾಯಣನಿಗೆ ನಮಸ್ಕರಿಸಿ, ಹಿಂದೆ ನಡೆದ ಒಂದು ಘಟನೆಯನ್ನು ಭಗವಂತನಿಗೆ ವಿವರಿಸುತ್ತಾನೆ:  ನಾನು ಹಿಂದೆ ಒಳ್ಳೆಯ ಗೋವುಗಳನ್ನು ವರುಣನಿಗೆ ಕೊಟ್ಟಿದ್ದೆ. ಅಮೃತವನ್ನೇ ಸುರಿಸುವ ಆ ಹಸುಗಳು  ಅತ್ಯಂತ ಗರ್ವಿತನಾದಣನ ತಂದೆಯಾಗಿರುವ  ಕಾಶ್ಯಪನಿಂದ ಅಪಹರಿಸಲ್ಪಟ್ಟವು.
ವರುಣನ ತಾಯಿಯಾಗಿರುವ ಅದಿತಿಯಿಂದ ಹಾಗು ತಾಯಿ ಸುರಭಿಯಿಂದಲೂ ಕೂಡಾ ಪ್ರಚೋದಿತನಾದ ಕಾಶ್ಯಪನಿಂದ ಆ ಗೋವುಗಳು ಅಪಹರಿಸಲ್ಪಡುತ್ತಿರಲು, ವರುಣನಿಂದ  ಈ ವಿಷಯವನ್ನು ಕೇಳಿ ತಿಳಿದ  ನನ್ನಿಂದ ‘ಕ್ಷತ್ರಿಯರಲ್ಲಿ ಗೋವುಗಳಿಂದ ಜೀವನಮಾಡುವವನಾಗಿ ಹುಟ್ಟು’ ಎಂಬ ಶಾಪವನ್ನು ಕಾಶ್ಯಪ ಹೊಂದಿದನು.

ಶೂರಾತ್ ಸ ಜಾತೋ ಬಹುಗೋಧನಾಢ್ಯೋ ಭೂಮೌ ಯಮಾಹುರ್ವಸುದೇವ ಇತ್ಯಪಿ ।     
ತಸ್ಯೈವ ಭಾರ್ಯ್ಯಾ ತ್ವದಿತಿಶ್ಚ ದೇವಕೀ ಬಭೂವ ಚಾನ್ಯಾ ಸುರಭಿಶ್ಚ ರೋಹಿಣೀ ॥೧೧.೨೨೫      

ಶಾಪಗ್ರಸ್ಥನಾದ ಕಾಶ್ಯಪನು ಶೂರಸೇನನ ಮಗನಾಗಿ ಭೂಮಿಯಲ್ಲಿ ಹುಟ್ಟಿ, ಗೋವೆಂಬ ಧನವನ್ನು ಹೊಂದಿದ್ದಾನೆ. ಭೂಮಿಯಲ್ಲಿ ಇವನನ್ನು (ಕಾಶ್ಯಪನನ್ನು) ವಸುದೇವ ಎಂದು ಕರೆಯುತ್ತಾರೆ. [ಆತ ಕ್ಷತ್ರಿಯನಾದರೂ ಕೂಡಾ, ಗೋವುಗಳನ್ನೆಲ್ಲವನ್ನು ಇಟ್ಟುಕೊಂಡು ವೈಶ್ಯನಂತಿದ್ದಾನೆ].  ಅದಿತಿಯು  ಅವನ ಹೆಂಡತಿಯಾಗಿ ದೇವಕಿಯಾದಳು. ಸುರಭಿಯು ಇನ್ನೊಬ್ಬ ಹೆಂಡತಿಯಾದಳು. ಅವಳೇ ರೋಹಿಣಿ.

ಹರಿವಂಶದಲ್ಲಿ ಈ ಕುರಿತಾದ ಸ್ಪಷ್ಟ ವಿವರಣೆ ಕಾಣಸಿಗುತ್ತದೆ.  ಪುರಾ ಹಿ ಕಾಶ್ಯಪೋ ವಿಷ್ಣೋ ವರುಣಸ್ಯ ಮಹಾತ್ಮನಃ ಜಹಾರ ಯಜ್ಞೀಯ ಗಾ ವೈ ಪಯೋದಾಸ್ತು ಮಹಾಮಖೇ ಅದಿತಿಃ ಸುರಭಿಶ್ಚ್ಯತೇ ದ್ವೇ ಭಾರ್ಯೇ ಕಾಶ್ಯಪಸ್ಯ ತು ಪ್ರದೀಯಮಾನಾ ಗಾಸ್ತಾಸ್ತು  ನೈಚ್ಛತಾಂ ವರುಣಸ್ಯ ವೈ ತತೋ ಮಾಂ ವರುಣೋsಭ್ಯೇತ್ಯ ಪ್ರಣಮ್ಯ ಶಿರಸಾ ತತಃ ಉವಾಚ ಭಗವನ್  ಗಾವೋ ಗುರುಣಾ ಮೇ ಹೃತಾ ಇತಿ’(ಹರಿವಂಶಪರ್ವಣಿ ೧.೫೫.೨೧.೩), ಇತ್ಯಮ್ಬುಪತಿನಾ ಪ್ರೋಕ್ತೋ ವರುಣೇನಾಹಮಚ್ಯುತ ಗವಾಂ ಕಾರಣತತ್ತ್ವಜ್ಞಃ ಕಾಶ್ಯಪೇ ಶಾಪಮುತ್ಸ್ರುಜಮ್ ಏನಾಂಶೇನ ಹ್ರುತಾ ಗಾವಃ ಕಾಶ್ಯಪೇನ ಮಹರ್ಷಿಣಾ ಸ ತೇನಾಂಶೇನ ಜಗತಿ  ಗತ್ವಾ ಗೋಪತ್ವಮೇಷ್ಯತಿ  ಯಾ ಚ ಸಾ ಸುರಭಿರ್ನಾಮ ಅದಿತಿಶ್ಚ ಸುರಾರಣಿಃ ತೇsಪ್ಯುಭೇ ತಸ್ಯ ಭಾರ್ಯೇ ವೈ ತೇನೈವ ಸಹ ಯಾಸ್ಯತಃ’ (೧.೫೫.೩೨-೩೪), ‘ಸ ತಸ್ಯ ಕಾಶ್ಯಪಸ್ಯಾಂಶಸ್ತೇಜಸ ಕಾಶ್ಯಪೋಪಮಃ ವಸುದೇವ ಇತಿ ಖ್ಯಾತೋ ಗೋಷು ತಿಷ್ಠತಿ ಭೂತಳೇ’(೧.೫೫.೩೬), ತಸ್ಯ ಭಾರ್ಯಾದ್ವಯಂ  ಜಾತಮದಿತಿಃ ಸುರಭಿಶ್ಚ ತೇ ಸುರಭಿ ರೋಹಿಣಿ ದೇವಿ ಚಾದಿತಿರ್ದೇವಕೀ ತ್ವಭೂತ್’(೧.೫೫.೩೮)
ಪಾದ್ಮಪುರಾಣದಲ್ಲೂ(ಸೃಷ್ಟಿಖಂಡ ೧೩.೧೪೬) ಈ ಕುರಿತಾದ ವಿವರ ಕಾಣಸಿಗುತ್ತದೆ: ‘ಕ ಏಷ ವಸುದೇವಸ್ತು ದೇವಕಿ ಕಾ ಯಶಸ್ವಿನೀ ಪುರುಷಃ  ಕಾಶ್ಯಪಶ್ಚಾಸಾವದಿತಿಸ್ತತ್ಪ್ರಿಯಾ ಸ್ಮೃತಾ’ ಎಂದು ಸ್ಪಷ್ಟವಾಗಿ  ಹೇಳಿರುವುದನ್ನು ನಾವಿಲ್ಲಿ ಕಾಣಬಹುದು.

No comments:

Post a Comment