ಅಥಾವತೀರ್ಣ್ಣಾಃ ಸಕಲಾಶ್ಚ ದೇವತಾ ಯಥಾಯಥೈವಾsಹ ಹರಿಸ್ತಥಾತಥಾ ।
ವಿತ್ತೇಶ್ವರಃ ಪೂರ್ವಮಭೂದ್ಧಿ ಭೌಮಾದ್ಧರೇಃ ಸುತತ್ವೇsಪಿ ತದಿಚ್ಛಯಾsಸುರಾತ್ ॥೧೧.೨೩೦॥
ತದನಂತರ ಎಲ್ಲಾ ದೇವತೆಗಳು
ನಾರಾಯಣನು ಹೇಗೆ-ಹೇಗೆ ಹೇಳಿದನೋ ಹಾಗೆಯೇ ಭೂಮಿಯಲ್ಲಿ ಅವತಾರ ಮಾಡಿದರು. ಆದರೆ ಇದಕ್ಕೂ ಮೊದಲೇ ಕುಬೇರನು, ಪರಮಾತ್ಮನ ಮಗನಾಗಿದ್ದರೂ
ಕೂಡಾ ಅಸುರನಾದ ನರಕಾಸುರನ ಮಗನಾಗಬೇಕೆಂದು ಬಯಸಿ (ನರಕಾಸುರನ ಮಗನಾಗಬೇಕು ಎನ್ನುವ ಇಚ್ಛೆಯಿಂದಲೇ) ಅವತಾರ ಮಾಡಿದ್ದನು.
[ಈ ರೀತಿ ಕುಬೇರ ನರಕಾಸುರನ
ಮಗನಾಗಿ ಹುಟ್ಟಲಿಚ್ಛಿಸಲು ಕಾರಣವೇನು ಎನ್ನುವುದನ್ನು
ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ]
ಪಾಪೇನ ತೇನಾಪಹೃತೋ ಹಿ ಹಸ್ತೀ ಶಿವಪ್ರದತ್ತಃ
ಸುಪ್ರತೀಕಾಭಿಧಾನಃ ।
ತದರ್ತ್ಥಮೇವಾಸ್ಯ ಸುತೋsಭಿಜಾತೋ ಧನೇಶ್ವರೋ
ಭಗದತ್ತಾಭಿಧಾನಃ ॥೧೧.೨೩೧ ॥
ಪಾಪಿಷ್ಠನಾದ
ನರಕಾಸುರನಿಂದ, ಕುಬೇರನಿಗೆ ಶಿವನೇ ಕೊಟ್ಟಿರುವ ‘ಸುಪ್ರತೀಕ’ ಎನ್ನುವ ಹೆಸರಿನ
ಉತ್ಕೃಷ್ಟವಾದ ಆನೆಯು ಅಪಹರಿಸಲ್ಪಟ್ಟಿತ್ತು. ಆ ಆನೆಯನ್ನು ಮತ್ತೆ ಪಡೆಯುವುದಕ್ಕಾಗಿ ಕುಬೇರನು ‘ಭಗದತ್ತ’
ಎಂಬ ಹೆಸರುಳ್ಳವನಾಗಿ, ನರಕಾಸುರನ ಮಗನಾಗಿ ಹುಟ್ಟಿದ್ದನು.
ಮಹಾಸುರಸ್ಯಾಂಶಯುತಃ ಸ ಏವ ರುದ್ರಾವೇಶಾದ್ ಬಲವಾನಸ್ತ್ರವಾಂಶ್ಚ
।
ಶಿಷ್ಯೋ ಮಹೇನ್ದ್ರಸ್ಯ ಹತೇ ಬಭೂವ ತಾತೇ ಸ್ವಧರ್ಮ್ಮಾಭಿರತಶ್ಚ
ನಿತ್ಯಮ್ ॥೧೧.೨೩೨ ॥
ಭಗದತ್ತನು ಮಹಾಸುರನ
ಅಂಶದಿಂದಲೂ ಕೂಡಿದ್ದ ಮತ್ತು ರುದ್ರನ ಆವೇಶದಿಂದ
ಬಲಿಷ್ಠನಾಗಿಯೂ, ಅಸ್ತ್ರವುಳ್ಳವನಾಗಿಯೂ ಇದ್ದ. ಈತ ಇಂದ್ರದೇವರ ಶಿಷ್ಯನೂ ಆಗಿದ್ದ. (ತನ್ನ ಅಪ್ಪನ
ಪ್ರಬಲ ವೈರಿಯ ಶಿಷ್ಯನಾಗಿದ್ದ!). ಈತ ತನ್ನ ಅಪ್ಪನಾದ ನರಕಾಸುರ ಸತ್ತ
ಮೇಲೆಯೇ ಸ್ವಧರ್ಮದಲ್ಲಿ ರಥನಾದ (ಅಸುರಾವೇಶ ನಷ್ಟವಾಗಿ, ದೇವತೆಗಳ ಅವತಾರಕ್ಕೆ ಯೋಗ್ಯವಾದ ಧರ್ಮನುಷ್ಟಾನದಲ್ಲಿ
ತೊಡಗಿದ).
[ಮಹಾಭಾರತದ ಆದಿಪರ್ವದಲ್ಲಿ(೬೮.೯) ಒಂದು ಮಾತಿದೆ: ‘ಬಾಷ್ಕಲೋ ನಾಮ
ಯಸ್ತೇಷಾಮಾಸೀದಸುರಸತ್ತಮಃ। ಭಗದತ್ತ ಇತಿ ಖ್ಯಾತಃ ಸ ಜಜ್ಞೇ ಪುರುಷರ್ಷಭಃ’ . ಇಲ್ಲಿ ‘ಬಾಷ್ಕಲ’
ಎಂಬ ದೈತ್ಯ ಭಗದತ್ತನಾಗಿ ಹುಟ್ಟಿದ ಎಂದು ಹೇಳಿದ್ದಾರೆ. ಆದರೆ ಇತರ ಪುರಾಣಗಳಲ್ಲಿ ಕುಬೇರನೇ ಭಗದತ್ತನಾಗಿ
ಹುಟ್ಟಿದ ಎನ್ನುವ ವಿವರ ಕಾಣಸಿಗುತ್ತದೆ. ಈ ವಿರೋಧಕ್ಕೆ
ಇಲ್ಲಿ ಆಚಾರ್ಯರು ನಿರ್ಣಯ ನೀಡುತ್ತಾ ‘ಮಹಾಸುರಸ್ಯಾಂಶಯುತಃ’ ಎಂದಿದ್ದಾರೆ. ಕುಬೇರನೇ ಭಗದತ್ತನಾಗಿ ಹುಟ್ಟಿರುವುದು ಆದರೆ
ಆತನಲ್ಲಿ ಬಾಷ್ಕಲನೆಂಬ ದೈತ್ಯನ ಆವೇಶವಿತ್ತು]
No comments:
Post a Comment