ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, February 22, 2019

Mahabharata Tatparya Nirnaya Kannada 12.04-12.07


ವಿನಾsಪರಾಧಂ ನ ತತೋ ಗರೀಯಸೋ ನ ಮಾತುಲೋ ವಧ್ಯತಾಮೇತಿ ವಿಷ್ಣೋಃ ।
ಲೋಕಸ್ಯ ಧರ್ಮ್ಮಾನನುವರ್ತ್ತತೋsತಃ ಪಿತ್ರೋರ್ವಿರೋಧಾರ್ತ್ಥಮುವಾಚ ವಾಯುಃ ॥೧೧.೦೪   

ಮೃತ್ಯುಸ್ತವಾಸ್ಯಾ ಭವಿತಾsಷ್ಟಮಃ ಸುತೋ ಮೂಢೇತಿ ಚೋಕ್ತೋ ಜಗೃಹೇ ಕೃಪಾಣಮ್ । 
ಪುತ್ರಾನ್ ಸಮರ್ಪ್ಯಾಸ್ಯ ಚ ಶೂರಸೂನುರ್ವಿಮೋಚ್ಯ ತಾಂ ತತ್ಸಹಿತೋ ಗೃಹಂ ಯಯೌ॥೧೨.೫    

ಲೋಕಧರ್ಮದಂತೆ ಅಪರಾಧ ಇಲ್ಲದೇ ಅಥವಾ ಅದಕ್ಕಿಂತಲೂ ಮುಖ್ಯವಾಗಿ ತನಗಿಂತಲೂ ಉತ್ತಮರಾದವರೊಂದಿಗೆ ಅಪರಾಧ ಮಾಡದೇ ಹೋದರೆ, ಸೋದರಮಾವನು ವಧಾರ್ಹನು ಆಗುವುದಿಲ್ಲ. ಹೀಗಾಗಿ ಕಂಸ ಇಂತಹ ಅಪರಾಧ ಮಾಡದೇ ಹೋದಲ್ಲಿ  ಲೋಕದ ಧರ್ಮವನ್ನು ಅನುಸರಿಸುವ ಕೃಷ್ಣನಿಂದ ಕೊಲ್ಲುವಿಕೆಯನ್ನು ಹೊಂದುವುದಿಲ್ಲ. ಆ ಕಾರಣದಿಂದ ಶ್ರೀಕೃಷ್ಣನ ತಂದೆ-ತಾಯಿಯಾಗಲಿರುವ ವಸುದೇವ-ದೇವಕಿಯನ್ನು  ಕಂಸ ವಿರೋಧಿಸಲಿ ಎಂದು ಮುಖ್ಯಪ್ರಾಣನು ಹೇಳುತ್ತಾನೆ:   ‘ಎಲೋ ಮೂಢನೇ, ದೇವಕಿಯ  ಎಂಟನೆಯ ಮಗನು ನಿನಗೆ ಮೃತ್ಯುವಾಗಲಿದ್ದಾನೆ’ ಎಂದು. ಹೀಗೆ ಹೇಳಲ್ಪಟ್ಟವನಾದ ಕಂಸನು ಕತ್ತಿಯನ್ನು ತೆಗೆದುಕೊಂಡ. ವಸುದೇವನಾದರೋ, ಕಂಸನಿಗೆ ತನ್ನ ಮಕ್ಕಳನ್ನು ಒಪ್ಪಿಸಿ, (ಮುಂದೆ ದೇವಕಿಯಲ್ಲಿ ಹುಟ್ಟಲಿರುವ ಎಲ್ಲಾ ಮಕ್ಕಳನ್ನು ನಿನಗೆ ಕೊಡುವೆನೆಂದು ಹೇಳಿ)  ದೇವಕಿಯನ್ನು (ಮೃತ್ಯುವಿನಿಂದ)  ಬಿಡುಗಡೆಮಾಡಿ, ಅವಳಿಂದ ಕೂಡಿಕೊಂಡು ತನ್ನ ಮನೆಗೆ ತೆರಳಿದನು. 

ಷಟ್ ಕನ್ಯಕಾಶ್ಚಾವರಜಾ ಗೃಹೀತಾಸ್ತೇನೈವ ತಾಭಿಶ್ಚ ಮುಮೋದ ಶೂರಜಃ ।
ಬಾಹ್ಲೀಕಪುತ್ರೀ ಚ ಪುರಾ ಗೃಹೀತಾ ಪುರಾsಸ್ಯ ಭಾರ್ಯ್ಯಾ ಸುರಭಿಸ್ತು ರೋಹಿಣೀ ॥೧೧.೦೬॥       

ದೇವಕಿಯ ಆರುಜನ ತಂಗಿಯಂದಿರು ವಸುದೇವನಿಂದಲೇ ಪರಿಗ್ರಹಿಸಲ್ಪಟ್ಟಿದ್ದರು. ಅವರಿಂದಲೂ ಕೂಡಾ ವಸುದೇವನು ಕ್ರೀಡಿಸಿದನು. ಯಾರು ಹಿಂದೆ ಗೋಮಾತೆ ಸುರಭಿಯಾಗಿದ್ದಳೋ ಅವಳೇ ಬಾಹ್ಲೀಕರಾಜನ ಮಗಳಾಗಿ ಹುಟ್ಟಿದ್ದಳು. ಅಂತಹ ರೋಹಿಣಿಯನ್ನು ವಸುದೇವ ದೇವಕಿಯ ಆರು ಮಂದಿ ತಂಗಿಯರನ್ನು  ಮದುವೆಯಾಗುವುದಕ್ಕೂ ಮೊದಲೇ ಮದುವೆ ಮಾಡಿಕೊಂಡಿದ್ದ.

[ಷಟ್ ಕನ್ಯಕಾಶ್ಚಾವರಜಾ ಎನ್ನುವುದಕ್ಕೆ ಸಂವಾದವನ್ನು ಅನೇಕ ಕಡೆ ಕಾಣುತ್ತೇವೆ. ಭಾಗವತದಲ್ಲಿ(೯.೧೯.೨೩-೨೪) ಹೇಳುವಂತೆ: ತೇಷಾಂ ಸ್ವಸಾರಃ ಸಪ್ತಾsಸನ್ ಧೃತದೇವಾದಯೋ ನೃಪ ಶಾನ್ತಿದೇವೋಪದೇವಾ ಚ ಶ್ರೀದೇವಾ ದೇವರಕ್ಷಿತಾ ಸಹದೇವಾ ದೇವಕೀ ಚ ವಸುದೇವ ಉವಾಹ ತಾಃ’. ಮೇಲಿನ ಶ್ಲೋಕದಲ್ಲಿ ಆಚಾರ್ಯರು ದೇವಕಿ ಮತ್ತು ಅವಳ ಆರು ಜನ ತಂಗಿಯಂದಿರು ಎಂದು ಹೇಳಿದ್ದಾರೆ. ಜ್ಯೇಷ್ಠತೆಯಿಂದ ಗಣನೆ ಮಾಡುವಾಗ ದೇವಕೀಯಿಂದ ಆರಂಭಿಸಿ ಗಣನೆ ಮಾಡಬೇಕು ಎನ್ನುವುದನ್ನು ಆಚಾರ್ಯರು ಇಲ್ಲಿ ‘ಅವರಜಾ’ (ಆದಮೇಲೆ ಹುಟ್ಟಿದವರು)ಎಂದು ವಿವರಿಸಿದ್ದಾರೆ. (ಜ್ಯೇಷ್ಠತೆಯಿಂದ ಗಣನೆ ಮಾಡುವಾಗ ದೇವಕೀ, ಸಹದೇವಾ, ದೇವರಕ್ಷಿತಾ, ಶ್ರೀದೇವಾ, ಉಪದೇವಾ, ಶಾನ್ತಿದೇವಾ ಮತ್ತು  ದೃತದೇವಾ, ಈ ರೀತಿಯಾಗಿ ನೋಡಬೇಕು). ಇದಕ್ಕೆ ಪೂರಕವಾಗಿ ಹರಿವಂಶಪರ್ವದಲ್ಲಿ(೩೭.೨೯) ಈ ರೀತಿ ಹೇಳಿದ್ದಾರೆ: ದೇವಕೀ ಶಾನ್ತದೇವಾ ಚ  ಸುದೇವಾ ದೇವರಕ್ಷಿತಾ ವೃಕದೇವ್ಯುಪದೇವಿ ಚ ಸುನಾಮ್ನೀ ಚೈವ ಸಪ್ತಮೀ’. ಬ್ರಾಹ್ಮಪುರಾಣದಲ್ಲೂ(೧೨.೩೭)  ದೇವಕಿಯ ಆರುಜನ ತಂಗಿಯಂದಿರ ಕುರಿತು ಹೇಳಿರುವುದನ್ನು ಕಾಣಬಹುದು ‘ಸಹದೇವಾ ಶಾನ್ತಿದೇವಾ ಶ್ರೀದೇವೀ ದೇವರಕ್ಷಿತಾ ವೃಕದೇವ್ಯುಪದೇವೀ  ಚ ದೇವಕೀ ಚೈವ ಸಪ್ತಮೀ’].   

ರಾಜ್ಞಶ್ಚ ಕಾಶಿಪ್ರಭವಸ್ಯ ಕನ್ಯಾಂ ಸ ಪುತ್ರಿಕಾಪುತ್ರಕಧರ್ಮ್ಮತೋsವಹತ್ ।
ಕನ್ಯಾಂ ತಥಾ ಕರವೀರೇಶ್ವರಸ್ಯ ಧರ್ಮ್ಮೇಣ ತೇನೈವ ದಿತಿಂ ಧನುಂ ಪುರಾ ॥೧೧.೦೭॥

ಮೊದಲು ಪುತ್ರಿಕಾಪುತ್ರಕಧರ್ಮ್ಮದಂತೆ ದಿತಿಯ ಅವತಾರವಾಗಿರುವ  ಕಾಶಿದೇಶದ ರಾಜನ ಮಗಳನ್ನು ಹಾಗು ಧನುವಿನ ಅವತಾರವಾಗಿರುವ  ಕರವೀರರಾಜನ[1] ಮಗಳನ್ನು ವಸುದೇವ ಮದುವೆಯಾಗಿದ್ದ.




[1] ಈಗಿನ ಗೋವಾದ ಹತ್ತಿರವಿರುವ ಕೊಲ್ಲ್ಹಾಪುರ 

No comments:

Post a Comment