ತತ್ ತ್ವಂ ಭವಸ್ವಾsಶು ಚ ದೇವಕೀಸುತಸ್ತಥೈವ ಯೋ ದ್ರೋಣನಾಮಾ ವಸುಃ ಸಃ ।
ಸ್ವಭಾರ್ಯ್ಯಯಾ ಧರಯಾ ತ್ವತ್ಪಿತೃತ್ವಂ ಪ್ರಾಪ್ತುಂ ತಪಸ್ತೇಪ
ಉದಾರಮಾನಸಃ ॥೧೧.೨೨೬॥
ಕಾಶ್ಯಪನ ಕುರಿತು ವಿವರಿಸಿದ ಚತುರ್ಮುಖ ಭಗವಂತನಲ್ಲಿ ‘ನೀನು ಕೂಡಲೇ ದೇವಕಿಯ ಮಗನಾಗಿ ಆವಿರ್ಭವಿಸು’ ಎಂದು
ಪ್ರಾರ್ಥಿಸುತ್ತಾನೆ.
[ಭಗವಂತ ವಸುದೇವ-ದೇವಕಿಯ
ಮಗನಾಗಿ ಹುಟ್ಟಿದರೂ ಕೂಡಾ, ಬೆಳೆಯಬೇಕಾಗಿರುವುದು
ಬೇರೆಡೆ. ಏಕೆ ಹೀಗೆ? ಇದರ ಹಿನ್ನೆಲೆಯ ಕಥೆಯನ್ನೂ ಇಲ್ಲಿ ಚತುರ್ಮುಖ ನಾರಾಯಣನಿಗೆ
ವಿವರಿಸುತ್ತಾನೆ:]
ದ್ರೋಣ ಎಂಬ ಹೆಸರುಳ್ಳ
ವಸುವು ತನ್ನ ಹೆಂಡತಿಯಾದ ಧರೆಯೊಂದಿಗೆ ಕೂಡಿಕೊಂಡು ನಿನ್ನ ಅಪ್ಪನಾಗಬೇಕೆಂದು ಉತ್ಕೃಷ್ಟನಾದ
ಮನಸ್ಸುಳ್ಳವನಾಗಿ ತಪಸ್ಸನ್ನು ಮಾಡಿರುವನು.
[ಈ ಕುರಿತಾದ ವಿವರವನ್ನು ಪಾದ್ಮಪುರಾಣದ
ಸೃಷ್ಟಿಖಂಡದಲ್ಲಿ(೧೩.೧೪೭) ಕಾಣುತ್ತೇವೆ: ‘ನಂದೋ ದ್ರೋಣಃ ಸಮಾಖ್ಯಾತೋ ಯಶೋದಾsಥ ಧರಾsಭವತ್’ ಬ್ರಹ್ಮಾಂಡಪುರಾಣದಲ್ಲೂ (ಉಪೋದ್ಘಾತಪಾದೇ-೨೩೮-೨೩೯)
ಈ ವಿವರ ಕಾಣಸಿಗುತ್ತದೆ: ‘ಪುರುಷಃ ಕಾಶ್ಯಪಸ್ತವಾಸಿದದಿತಿಸ್ತತ್ಪ್ರಿಯಾ ತಥಾ । ಕಾಶ್ಯಪೋ ಬ್ರಹ್ಮಣೋಂsಶಾಶ್ಚ ಪೃಥಿವ್ಯಾ ಅದಿತಿಸ್ತಥಾ । ನಂದೋ ದ್ರೋಣಃ ಸಮಾಖ್ಯಾತೋ
ಯಶೋದಾ ಚ ಧರಾsಭವತ್’]
ತಸ್ಮೈ ವರಃ ಸ ಮಯಾ ಸನ್ನಿಸೃಷ್ಟಃ ಸ ಚಾsಸ ನನ್ದಾಖ್ಯ ಉತಾಸ್ಯ ಭಾರ್ಯ್ಯಾ ।
ನಾಮ್ನಾ ಯಶೋದಾ ಸ ಚ ಶೂರತಾತಸುತಸ್ಯ ವೈಶ್ಯಾಪ್ರಭವೋsಥ ಗೋಪಃ ॥೧೧.೨೨೭ ॥
ಈರೀತಿ ತಪಸ್ಸನ್ನಾಚರಿಸಿದ ದ್ರೋಣನಿಗೆ
(ವಸುದಂಪತಿಗಳಿಗೆ) ನನ್ನಿಂದ ವರವು ಕೊಡಲ್ಪಟ್ಟಿದೆ. ಅವನಾದರೋ, ರಾಜಾಧಿದೇವನ^ ವೈಶ್ಯಪತ್ನಿಯಲ್ಲಿ ಹುಟ್ಟಿ ನಂದನೆಂಬ ಹೆಸರಿನ ಗೋಪನಾಗಿ ಭೂಮಿಯಲ್ಲಿದ್ದಾನೆ. ಅವನ
ಹೆಂಡತಿ ‘ಧರೆ’ ಯಶೋದೆ ಎಂಬ ಹೆಸರಿನಿಂದ ಭೂಮಿಯಲ್ಲಿ ಹುಟ್ಟಿದ್ದಾಳೆ.
[^ಇಲ್ಲಿ ಆಚಾರ್ಯರು ‘ಶೂರತಾತಸುತಸ್ಯ’
ಎನ್ನುವ ಪ್ರಯೋಗ ಮಾಡಿರುವುದನ್ನು ಕಾಣುತ್ತೇವೆ. ಶೂರಸೇನನ ತಂದೆಯ ಇಬ್ಬರು ಗಂಡುಮಕ್ಕಳಲ್ಲಿ,
ಶೂರನ ತಮ್ಮನಾದ ರಾಜಾಧಿದೇವನ ಮಗನೇ ನಂದ’. ಇದು ಈ ಮಾತಿನ ಅರ್ಥವಿರಬಹುದು. ಬ್ರಹ್ಮಾಂಡಪುರಾಣದಲ್ಲಿ(ಉಪೋದ್ಘಾತಪಾದೇ ೭೧.೧೩೭) ಈ
ಕುರಿತು ಒಂದು ಸುಳಿವು ಸಿಗುತ್ತದೆ. ಅಲ್ಲಿ ‘ರಾಜಾಧಿದೇವಃ ಶೂರಶ್ಚ
ವಿಡೂರಥಸುತೋsಭವತ್’ ಎಂದು ಹೇಳಿದ್ದಾರೆ. ರಾಜಾಧಿದೇವ ಮತ್ತು ಶೂರಸೇನ ವಿಡೂರಥನ
ಮಕ್ಕಳಾಗಿದ್ದಾರೆ ಎಂದು ಅಲ್ಲಿ ಹೇಳಿರುವುದರಿಂದ, ಶೂರನ ತಂದೆ ವಿಡೂರಥ, ಅವನ ಮಗ
ಎಂದರೆ-ರಾಜಾಧಿದೇವ, ಈ ರಾಜಾಧಿದೇವನ ವೈಶ್ಯಪತ್ನಿಯಲ್ಲಿ ಹುಟ್ಟಿದವನೇ ನಂದ ಎಂದು ನಾವು ತಿಳಿಯಬಹುದು.
ಆದ್ದರಿಂದ ವಸುದೇವ ಮತ್ತು ನಂದಗೋಪ ಸೋದರಸಂಬಂಧಿ (cousins) ]
ತೌ ದೇವಕೀವಸುದೇವೌ ಚ ತೇಪತುಸ್ತಪಸ್ತ್ವದೀಯಂ ಸುತಮಿಚ್ಛಮಾನೌ ।
ತ್ವಾಮೇವ ತಸ್ಮಾತ್ ಪ್ರಥಮಂ ಪ್ರದರ್ಶ್ಯ ತತ್ರ ಸ್ವರೂಪಂ ಹಿ ತತೋ
ವ್ರಜಂ ವ್ರಜ ॥೧೧.೨೨೮॥
ಆ ದೇವಕಿ ಮತ್ತು ವಸುದೇವರು
ನಿನ್ನನ್ನೇ ಮಗನಾಗಿ ಪಡೆಯಲು ಬಯಸಿ, ನಿನ್ನ ಸಂಬಂಧಿಯಾದ
ತಪಸ್ಸನ್ನು ಮಾಡಿರುವರು. ಆ ಕಾರಣದಿಂದ ಮೊದಲು ನೀನು
ದೇವಕೀ-ವಸುದೇವರಲ್ಲಿ ಪ್ರಾದುರ್ಭಾವಗೊಂಡು ನಂತರ
ವ್ರಜಕ್ಕೆ(ನಂದಗೋಪನ ಮನೆಗೆ) ತೆರಳು.
ಇತೀರಿತೇ ಸೋsಬ್ಜಭವೇನ ಕೇಶವಸ್ತಥೇತಿ
ಚೋಕ್ತ್ವಾ ಪುನರಾಹ ದೇವತಾಃ ।
ಸರ್ವೇ ಭವನ್ತೋ ಭವತಾsಶು ಮಾನುಷೇ ಕಾರ್ಯ್ಯಾನುಸಾರೇಣ
ಯಥಾನುರೂಪತಃ ॥೧೧.೨೨೯॥
ಈರೀತಿಯಾಗಿ ಬ್ರಹ್ಮನಿಂದ
ಹೇಳಲ್ಪಡುತ್ತಿರಲು, ಆ ಕೇಶವನು ‘ಹಾಗೇ ಆಗಲಿ’ ಎಂದು ಹೇಳಿ, ಮತ್ತೆ ದೇವತೆಗಳನ್ನು ಕುರಿತು ‘ನೀವೆಲ್ಲರೂ
ಕೂಡಾ ನಿಮಗೆ ವಹಿಸಿರುವ ಕಾರ್ಯಕ್ಕೆ ಅನುಗುಣವಾಗಿ ಮತ್ತು ಅದಕ್ಕನುರೂಪವಾಗಿ ಮನುಷ್ಯರಾಗಿ ಹುಟ್ಟಿ’
ಎಂದು ಹೇಳಿದನು.
No comments:
Post a Comment