ಬೃಹಸ್ಪತಿಃ ಪೂರ್ವಮಭೂದ್ಧರೇಃ ಪದಂ ಸಂಸೇವಿತುಂ ಪವನಾವೇಶಯುಕ್ತಃ ।
ಸ ಉದ್ಧವೋ ನಾಮ ಯದುಪ್ರವೀರಾಜ್ಜಾತೋ ವಿದ್ವಾನುಪಗವನಾಮಧೇಯಾತ್
॥೧೨.೧೦೦॥
ಇವರೆಲ್ಲರು(ಧರ್ಮರಾಯ,
ಭೀಮ, ಬಲರಾಮ, ಕೃಷ್ಣ, ಅರ್ಜುನ ಇವರೆಲ್ಲರೂ) ಹುಟ್ಟುವುದಕ್ಕೂ ಮೊದಲೇ, ನಾರಾಯಣನ ಪಾದವನ್ನು ಸೇವಿಸಲು
ಬೃಹಸ್ಪತ್ಯಾಚಾರ್ಯರು ದ್ರೋಣನಾಮಕರಾಗಿ ಹುಟ್ಟಿದ್ದರು. ಅವರೇ ಮತ್ತೆ ಮುಖ್ಯಪ್ರಾಣನ ಆವೇಶದಿಂದೊಡಗೂಡಿ ‘ಉದ್ಧವ’
ಎನ್ನುವ ಹೆಸರಿನಿಂದ ‘ಉಪಗವ’ ಎನ್ನುವ ಹೆಸರುಳ್ಳ ಯದುಶ್ರೇಷ್ಠನಿಂದ ಹುಟ್ಟಿದರು.
ದ್ರೋಣಾತ್ಮಕಂ ನಾತಿತರಾಂ ಸ್ವಸೇವಕಂ ಕುರ್ಯಾದ್ಧರಿರ್ಮ್ಮಾಮಿತಿ
ಭೂಯ ಏವ ।
ಸ ಉದ್ಧವಾತ್ಮಾsವತತಾರ ಯಾದವೇಷ್ವಾಸೇವನಾರ್ತ್ಥಂ
ಪುರುಷೋತ್ತಮಸ್ಯ ॥೧೨.೧೦೧॥
‘ದ್ರೋಣನಾಗಿರುವ ನನ್ನಿಂದ ಶ್ರೀಕೃಷ್ಣನು
ಆತ್ಯಂತಿಕವಾಗಿ ತನ್ನ ಸೇವೆಯನ್ನು ಮಾಡಿಸಿಕೊಳ್ಳುವುದಿಲ್ಲ’ ಎಂದು ಯೋಚಿಸಿದ
ಬೃಹಸ್ಪತ್ಯಾಚಾರ್ಯರು, ಹೀಗೆ ಉದ್ಧವ ಎನ್ನುವ ಹೆಸರಿನವನಾಗಿ, ಪುರುಷೋತ್ತಮನಾದ ನಾರಾಯಣನ
ಸೇವೆಗಾಗಿ ಯಾದವರಲ್ಲಿ ಅವತರಿಸಿ ಬಂದರು.
ಬೃಹಸ್ಪತೇರೇವ ಸ ಸರ್ವವಿದ್ಯಾ ಅವಾಪ ಮನ್ತ್ರೀ ನಿಪುಣಃ
ಸರ್ವೇವೇತ್ತಾ ।
ವರ್ಷತ್ರಯೇ ತತ್ಪರತಃ ಸ ಸಾತ್ಯಕಿರ್ಜ್ಜಜ್ಞೇ ದಿನೇ ಚೇಕಿತಾನಶ್ಚ
ತಸ್ಮಿನ್ ॥೧೨.೧೦೨॥
ಉದ್ಧವನು ಬೃಹಸ್ಪತಿಯಿಂದಲೇ
ಎಲ್ಲಾ ವಿದ್ಯೆಗಳನ್ನೂ ಹೊಂದಿದನು. ಮಂತ್ರಾಲೋಚನೆ ಮಾಡುವುದರಲ್ಲಿ ಆತ ನಿಪುಣನಾಗಿದ್ದು, ಎಲ್ಲವನ್ನೂ ಬಲ್ಲವನಾಗಿದ್ದನು.
ಉದ್ಧವ ಹುಟ್ಟಿ ಮೂರು ವರ್ಷಗಳ ನಂತರ ಸಾತ್ಯಕಿಯ ಜನನವಾಯಿತು. ಅದೇ ದಿನ ಚೇಕಿತಾನನೂ
ಕೂಡಾ ಹುಟ್ಟಿದನು.
ಮರುತ್ಸು ನಾಮ ಪ್ರತಿಭೋ ಯದುಷ್ವಭೂತ್ ಸ ಚೇಕಿತಾನೋ ಹರಿಸೇವನಾರ್ತ್ಥಮ್
।
ತದೈವ ಜಾತೋ ಹೃದಿಕಾತ್ಮಜೋsಪಿ ವರ್ಷತ್ರಯೇ ತತ್ಪರತೋ
ಯುಧಿಷ್ಠಿರಃ ॥೧೨.೧೦೩॥
ಮರುದ್ದೇವತೆಗಳಲ್ಲಿ ‘ಪ್ರತಿಭಾ’
ಎನ್ನುವ ಮರುತ್ತು ಯದುಗಳಲ್ಲಿ ಹುಟ್ಟಿದ. ಅವನೇ ಚೇಕಿತಾನ. ಆಗಲೇ ಪರಮಾತ್ಮನ ಸೇವೆಗಾಗಿ ಕೃತವರ್ಮ
ಹುಟ್ಟಿದ. (ಹೃತಿಕನ ಮಗ ಹಾರ್ದಿಕ್ಯ. ಅವನನ್ನು ಕೃತವರ್ಮ ಎಂದು ಕರೆಯುತ್ತಾರೆ). ನಂತರ ಮೂರು
ವರ್ಷಗಳಾದ ಮೇಲೆ ಯುಧಿಷ್ಠಿರನ ಜನನವಾಯಿತು.
ತತೋsಬ್ದತೋ ಭೂಭರಸಂಹೃತೌ ಹರೇರಙ್ಗತ್ವಮಾಪ್ತುಂ ಗಿರಿಶೋsಜನಿಷ್ಟ ।
ಅಶ್ವತ್ಥಾಮಾ ನಾಮತೋsಶ್ವಧ್ವನಿಂ ಸ
ಯಸ್ಮಾಚ್ಚಕ್ರೇ ಜಾಯಮಾನೋ ಮಹಾತ್ಮಾ ॥೧೨.೧೦೪॥
ತದನಂತರ, ಒಂದು ವರ್ಷವಾದ ಮೇಲೆ, ಹರಿಯ ಭೂಭಾರ ಹರಣದಲ್ಲಿ
ಅಂಗಭೂತನಾಗಿ ತಾನೂ ಸೇವೆ ಮಾಡಬೇಕು ಎಂದು ಗಿರೀಶನಾದ ಶಿವನು ಭೂಮಿಯಲ್ಲಿ ಅವತರಿಸಿದ.
ಯಾವ ಕಾರಣದಿಂದ ಹುಟ್ಟುತ್ತಲೇ, ಆ ಮಹಾತ್ಮನು ಕುದುರೆಯಂತೆ ಕೆನೆದನೋ, ಆ ಕಾರಣದಿಂದ ಹೆಸರಿನಿಂದ ಆತ
ಅಶ್ವತ್ಥಾಮನಾದ.
[ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ(೧೬.೨೧) ಶಿವನೇ ಅಶ್ವತ್ಥಾಮ ಎನ್ನುವುದರ ಕುರಿತಾದ
ವಿವರವಿದೆ: ‘ಗಾಙ್ಗೇಯೋ ವಸುಮುಖ್ಯಶ್ಚ
ದ್ರೋಣೋ ದೇವಮುನಿಃ ಪ್ರಭುಃ । ಅಶ್ವತ್ಥಾಮಾ ಹರಃ ಸಾಕ್ಷಾದ್ ಹರಿರ್ನಂದಕುಲೋದ್ಭವಃ’ (ಗಾಙ್ಗೇಯ ಇನ್ನ್ಯಾರೂ ಅಲ್ಲ. ಅವನೇ ವಸುಮುಖ್ಯಸ್ಥ.
ದ್ರೋಣಾಚಾರ್ಯರು ಸಾಕ್ಷಾತ್ ದೇವಮುನಿ ಬೃಹಸ್ಪತಿ.
ಅಶ್ವತ್ಥಾಮ ಹರನಾದರೆ ಹರಿಯೇ ಶ್ರೀಕೃಷ್ಣ).
ಇನ್ನು ಮಹಾಭಾರತದ
ಆದಿಪರ್ವದಲ್ಲಿ ಅಶ್ವತ್ಥಾಮ ಎನ್ನುವ ಹೆಸರಿನ
ಕುರಿತಾದ ವಿವರವನ್ನು ಹೀಗೆ ಹೇಳಿದ್ದಾರೆ: ‘ಅಲಭದ್
ಗೌತಮೀ ಪುತ್ರಮಶ್ವತ್ಥಾಮಾನಮೇವ ಚ । ಸ ಜಾತಮಾತ್ರೋ ವ್ಯನದದ್
ಯಥೈವೋಚ್ಚೈಃಶ್ರವಾ ಹಯಃ । ತಚ್ಛ್ರುತ್ವಾsನ್ತರ್ಹಿತಂ ಭೂತಮಂತರಿಕ್ಷಸ್ಥಮಬ್ರವೀತ್ । (ಗೌತಮಿಯಲ್ಲಿ ಹುಟ್ಟಿದ ಮಗು ಉಚ್ಚೈಃಶ್ರವಾ ಕುದುರೆಯಂತೆ
ಕೆನೆಯಿತು. ಅದನ್ನು ಕೇಳಿ ಯಾರಿಗೂ ಕಾಣದ ಭೂತ(ವಾಯುದೇವರು) ಹೀಗೆ ಹೇಳುತ್ತಾರೆ: ) ಅಶ್ವಸ್ಯೇವಾಸ್ಯ
ಯತ್ ಸ್ಥಾಮ ನದತಃ ಪ್ರದಿಶೋ ಗತಮ್ । ಅಶ್ವತ್ಥಾಮೈವ ಬಾಲೋsಯಂ ತಸ್ಮಾನ್ನಾಮ್ನಾ ಭವಿಷ್ಯತಿ’ (‘ಭವಿಷ್ಯದಲ್ಲಿ ಈತ ಅಶ್ವತ್ಥಾಮ ಎನ್ನುವ ಹೆಸರಿನಿಂದ ಪ್ರಸಿದ್ಧನಾಗುತ್ತಾನೆ’
ಎಂದು) ]
No comments:
Post a Comment