ವಿವರ್ದ್ಧಮಾನೇ ಲೋಕದೃಷ್ಟ್ಯೈವ ಕೃಷ್ಣೇ ಪಾಣ್ಡುಃ ಪುನಃ ಪ್ರಾಹ
ಪೃಥಾಮಿದಂ ವಚಃ ।
ಧರ್ಮ್ಮಿಷ್ಠೋ ನೌ ಸೂನುರಗ್ರೇ ಬಭೂವ ಬಲದ್ವಯಜ್ಯೇಷ್ಠ
ಉತಾಪರಶ್ಚ ॥೧೨.೯೪॥
ಇತ್ತ, ಈರೀತಿಯಾಗಿ ಜನರ ಕಣ್ಣಿಗೆ ಗೋಪಾಲಕರ ನಡುವೆ
ಕೃಷ್ಣ ಬೆಳೆಯುತ್ತಿರುವಂತೆ ಕಾಣಿಸಿಕೊಳ್ಳುತ್ತಿರಲು, ಅತ್ತ ಪಾಂಡುವು ಮತ್ತೆ ಕುಂತಿಯನ್ನು ಕುರಿತು ಹೀಗೆ
ಹೇಳುತ್ತಾನೆ: ‘ನಮಗಿಬ್ಬರಿಗೂ ಮೊದಲು ಧರ್ಮದ ಪ್ರತಿನಿಧಿಯಾದ ಮಗನು ಹುಟ್ಟಿದನು. ಆನಂತರ ಜ್ಞಾನ
ಹಾಗು ಬುದ್ಧಿಬಲದಲ್ಲಿ ಹಿರಿಯನಾದ ಎರಡನೇ ಮಗನು ಹುಟ್ಟಿದನು.’
ಯದೈಕ ಏವಾತಿಬಲೋಪಪನ್ನೋ ಭವೇತ್ ತದಾ ತೇನ ಪರಾವಮರ್ದ್ದೇ ।
ಪ್ರವರ್ತ್ತ್ಯಮಾನೇ ಸ್ವಪುರಂ ಹರೇಯುಶ್ಚೌರ್ಯ್ಯಾತ್ ಪರೇ ತದ್
ದ್ವಯಮತ್ರ ಯೋಗ್ಯಮ್ ॥೧೨.೯೫॥
‘ಯಾವಾಗ ಅತ್ಯಂತ
ಬಲಿಷ್ಠನಾದ ಒಬ್ಬನೇ ಇರುತ್ತಾನೋ ಆಗ, ಅವನು
ಬೇರೊಬ್ಬರೊಂದಿಗೆ ಯುದ್ಧದಲ್ಲಿ ಭಾಗವಹಿಸುತ್ತಿರಲು, ಇನ್ನು ಕೆಲವು ಶತ್ರುಗಳು ಕಳ್ಳತನದಿಂದ ಅವನ
ಪಟ್ಟಣವನ್ನು ಅಪಹಾರ ಮಾಡಬಹುದು. ಆ ಕಾರಣದಿಂದ, ಪುರರಕ್ಷಣೆಯ ವಿಚಾರದಲ್ಲಿ ಇಬ್ಬರು
ಪುತ್ರರಿರುವುದು ಯೋಗ್ಯವಲ್ಲವೇ?’
ಶಸ್ತ್ರಾಸ್ತ್ರವಿದ್ ವೀರ್ಯ್ಯವಾನ್ ನೌ ಸುತೋsನ್ಯೋ ಭವೇದ್ ದೇವಂ
ತಾದೃಶಮಾಹ್ವಯಾತಃ ।
ಶೇಷಸ್ತವ ಭ್ರಾತೃಸುತೋsಭಿಜಾತಸ್ತಸ್ಮಾನ್ನಾಸೌ
ಸುತದಾನಾಯ ಯೋಗ್ಯಃ ॥೧೨.೯೬॥
‘ಶಸ್ತ್ರಾಸ್ತ್ರಗಳನ್ನು
ಬಲ್ಲ, ವೀರ್ಯವಂತನಾದ ಇನ್ನೊಬ್ಬ ಸುತನು ನಮಗೆ ಆಗಬೇಕು. ಅಂತಹ ಮಗನನ್ನು ಕೊಡಬಲ್ಲ ದೇವನನ್ನು
ಆಹ್ವಾನಿಸು’ ಎನ್ನುತ್ತಾನೆ ಪಾಂಡು.
ಮುಂದುವರಿದು ಪಾಂಡು
ಹೇಳುತ್ತಾನೆ: ‘ಶೇಷನು ನಿನ್ನ ಅಣ್ಣನ ಮಗನಾಗಿ ಹುಟ್ಟಿದ್ದಾನೆ. ಆ ಕಾರಣದಿಂದ ಅವನು ನಮಗೆ ಮಗನನ್ನು ಕೊಡಲು ಯೋಗ್ಯನಲ್ಲ’.
ನವೈ ಸುಪರ್ಣ್ಣಃ ಸುತದೋ ನರೇಷು ಪ್ರಜಾಯತೇ ವಾsಸ್ಯ ಯತಸ್ತಥ್ssಜ್ಞಾ ।
ಕೃತಾ ಪುರಾ ಹರಿಣಾ ಶಙ್ಕರಸ್ತು ಕ್ರೋಧಾತ್ಮಕಃ ಪಾಲನೇ ನೈವ
ಯೋಗ್ಯಃ ॥೧೨.೯೭ ॥
‘ಶೇಷನ ಸಮಾನ ಕಕ್ಷೆಯಲ್ಲಿರುವವನು
ಗರುಡ. ಆದರೆ ಅವನನ್ನು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅವನಿಗೆ ‘ಅವತಾರ ಮಾಡಬಾರದು’ ಎಂಬುದಾಗಿ
ಭಗವಂತನ ಆಜ್ಞೆಯಿದೆ. ಹೀಗಾಗಿ ಗರುಡನು ಮಗನನ್ನು ಹುಟ್ಟಿಸುವವನಾಗಿ ಮನುಷ್ಯರಲ್ಲಿ
ಹುಟ್ಟುವುದಿಲ್ಲ.
ಅದೇ ಕಕ್ಷೆಯಲ್ಲಿ ಬರುವ
ಸದಾಶಿವನು ಬ್ರಹ್ಮನ ಕೋಪದಿಂದ ಹುಟ್ಟಿದವನು. ಹಾಗಾಗಿ ಅವನು ಬೇರೊಬ್ಬರನ್ನು ಪಾಲನೆ
ಮಾಡುವುದರಲ್ಲಿ ಯೋಗ್ಯನಲ್ಲ.
ಅತೋ ಮಹೇನ್ದ್ರೋ ಬಲವಾನನನ್ತರಃ ತೇಷಾಂ ಸಮಾಹ್ವಾನಮಿಹಾರ್ಹತಿ
ಸ್ವರಾಟ್ ।
ಇತೀರಿತಾ ಸಾssಹ್ವಯದಾಶು ವಾಸವಂ ತತಃ
ಪ್ರಜಜ್ಞೇ ಸ್ವಯಮೇವ ಶಕ್ರಃ ॥೧೨.೯೮॥
‘ಆ ಕಾರಣದಿಂದ
ಗರುಡ-ಶೇಷ-ರುದ್ರರ ನಂತರ ಬಲಿಷ್ಠನಾಗಿರುವ ಇಂದ್ರನು ಆಹ್ವಾನವನ್ನು ಹೊಂದಲು ಯೋಗ್ಯನಾಗಿದ್ದಾನೆ.’
ಈರೀತಿಯಾಗಿ ಪಾಂಡುವಿನಿಂದ ಹೇಳಲ್ಪಟ್ಟ ಕುಂತಿಯು
ಇಂದ್ರನನ್ನು ಕರೆಯುತ್ತಾಳೆ. ತದನಂತರ ಕುಂತಿಯ ಕರೆಯಂತೆ ಇಂದ್ರನು ತಾನೇ ಹುಟ್ಟಿ ಬರುತ್ತಾನೆ.
ಸ ಚಾರ್ಜ್ಜುನೋ ನಾಮ ನರಾಂಶಯುಕ್ತೋ ವಿಷ್ಣ್ವಾವೇಶೀ
ಬಲವಾನಸ್ತ್ರವೇತ್ತಾ ।
ರೂಪ್ಯನ್ಯಃ ಸ್ಯಾತ್ ಸುನುರಿತ್ಯುಚ್ಯಮಾನಾ ಭರ್ತ್ತ್ರಾ ಕುನ್ತೀ
ನೇತಿ ತಂ ಪ್ರಾಹ ಧರ್ಮ್ಮಾತ್ ॥೧೨.೯೯ ॥
ಇಂದ್ರನು ಅರ್ಜುನನೆಂಬ
ಹೆಸರಿನಿಂದ ನರಾಂಶದಿಂದ ಕೂಡಿ, ವಿಷ್ಣುವಿನ ಆವೇಶದಿಂದಲೂ ಒಡಗೂಡಿ, ಬಲಿಷ್ಠನಾಗಿಯೂ,
ಅಸ್ತ್ರವನ್ನು ಬಲ್ಲವನಾಗಿಯೂ ಹುಟ್ಟುತ್ತಾನೆ.
‘ನಾಲ್ಕನೆಯವನಾಗಿ ಚೆಂದದ
ರೂಪವುಳ್ಳ ಇನ್ನೊಬ್ಬ ಮಗನು ಆಗಲೀ’ ಎಂದು ಗಂಡನಿಂದ ಹೇಳಿಸಿಕೊಳ್ಳಲ್ಪಟ್ಟ ಕುಂತಿಯು, ಧರ್ಮದ
ದೃಷ್ಟಿಯಿಂದ ‘ಅದು ಯೋಗ್ಯವಲ್ಲ’ ಎಂದು ಹೇಳುತ್ತಾಳೆ.
[ಮಹಾಭಾರತದ ಆದಿಪರ್ವದಲ್ಲಿ
(೧೩೨.೬೩.೪) ಈ ಕುರಿತಾದ ವಿವರಣೆ ಬರುತ್ತದೆ: ‘ಪಾಣ್ಡುಸ್ತು
ಪುನರೇವೈನಾಂ ಪುತ್ರಲೋಭಾನ್ಮಹಾಯಶಾಃ । ಪ್ರಾದಿಶದ್ ದರ್ಶನೀಯಾರ್ಥಿ ಕುಂತೀ ತ್ವೆನಮಥಾಬ್ರವೀತ್ ।ನಾತಶ್ಚತುರ್ಥಂ ಪ್ರಸವಮಾಪತ್ತ್ಸ್ವಪಿ ವದನ್ತ್ಯುತ । ಅತಃ ಪರಂ ಸ್ವೈರಿಣೀ ಸ್ಯಾದ್ ಬಂಧಕೀ
ಪಞ್ಚಮೇ ಭವೇತ್’ ಪಾಂಡುವು ಮತ್ತೆ ಪುತ್ರ ಲೋಭದಿಂದ
ದರ್ಶನೀಯನಾಗಿರುವ ಮಗನನ್ನು ಬೇಡುವವನಾದಾಗ ಕುಂತಿ ಹೇಳುತ್ತಾಳೆ: ನಾಲ್ಕನೆಯ ಮಗನನ್ನು
ಆಪತ್ಕಾಲದಲ್ಲಿಯೂ ಕೂಡಾ ಧರ್ಮಜ್ಞರು ಹೇಳುವುದಿಲ್ಲ. (ಯಾವುದೇ ಆಪತ್ತಿದ್ದರೂ ಕೂಡಾ, ನಿಯೋಗ
ಪದ್ದತಿಯಿಂದ ಮೂರಕ್ಕಿಂತ ಹೆಚ್ಚಿನ ಮಕ್ಕಳನ್ನು ಪಡೆಯಲು ಅವಕಾಶವಿಲ್ಲ). ಒಂದುವೇಳೆ ನಿಯೋಗ
ಪದ್ದತಿಗೆ ತೊಡಗಿಕೊಂಡವಳು ಪುತ್ರಲೋಭದಿಂದ ನಾಲ್ಕನೆಯ ಮಗನನ್ನು ಪಡೆದರೆ ಅವಳು
ಸ್ವೈರಿಣೀ(ಇಷ್ಟಬಂದ ಗಂಡನ್ನು ಕೂಡುವವಳು) ಎನಿಸಿಕೊಳ್ಳುತ್ತಾಳೆ. ಐದನೇ ಮಗುವನ್ನು ಪಡೆದರೆ
ಬಂಧಕಿಯೇ(ವೇಶ್ಯೆ/ಸೂಳೆ)ಆಗುತ್ತಾಳೆ. ಅದರಿಂದಾಗಿ ಅತ್ಯಂತ ಆಪತ್ತಿನಲ್ಲಿಯೂ ಕೂಡಾ, ನಿಯೋಗ
ಪದ್ದತಿಯಿಂದ ಮೂರು ಜನ ಮಕ್ಕಳನ್ನು ಪಡೆಯಲು ಮಾತ್ರ ಅವಕಾಶ]
No comments:
Post a Comment