ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, May 11, 2019

Mahabharata Tatparya Nirnaya Kannada 12.105-12.109


ಸ ಸರ್ವವಿದ್ ಬಲವಾನಸ್ತ್ರವೇತ್ತಾ  ಕೃಪಸ್ವಸಾಯಾಂ ದ್ರೋಣವೀರ್ಯ್ಯೋದ್ಭವೋsಭೂತ್ 
ದುರ್ಯ್ಯೋಧನಸ್ತಚ್ಚತುರ್ತ್ಥೇsಹ್ನಿ ಜಾತಸ್ತಸ್ಯಾಪರೇದ್ಯುರ್ಭೀಮಸೇನಃ ಸುಧೀರಃ ॥೧೨.೧೦೫॥       

ಎಲ್ಲವನ್ನೂ ಬಲ್ಲವನಾದ ಆ ಅಶ್ವತ್ಥಾಮನು ಬಲಿಷ್ಠನೂ, ಅಸ್ತ್ರವನ್ನು ಬಲ್ಲವನೂ ಆಗಿದ್ದು, ಕೃಪನ ತಂಗಿಯಾದ ಕೃಪಿಯಲ್ಲಿ ದ್ರೋಣಾಚಾರ್ಯರ ವೀರ್ಯದಿಂದ ಹುಟ್ಟಿದನು. ದುರ್ಯೋಧನನು ಅಶ್ವತ್ಥಾಮ ಹುಟ್ಟಿ ನಾಲ್ಕು ದಿನಗಳ ನಂತರ ಹುಟ್ಟಿದರೆ, ದುರ್ಯೋಧನ ಹುಟ್ಟಿದ ಮಾರನೆಯ ದಿನ ಬುದ್ಧಿವಂತನಾದ ಭೀಮಸೇನನ ಜನನವಾಯಿತು. 

[ಮಹಾಭಾರತದ ಆದಿಪರ್ವದಲ್ಲಿ(೧೨೯.೬೮)  ಮೇಲಿನ ಮಾತಿಗೆ ಸಂವಾದಿಯಾದ ವಿವರವನ್ನು ಕಾಣಬಹುದು: ‘ಯಸ್ಮಿನ್ನಹನಿ ಭೀಮಸ್ತು ಜಜ್ಞೇ ಭೀಮ ಪರಾಕ್ರಮಃ  ತಾಮೇವ ರಾತ್ರಿಂ ಪೂರ್ವಾಂ ತು ಜಜ್ಞೇ ದುರ್ಯೋಧನೋ ನೃಪಃ’] 

ಯದಾ ಸ ಮಾಸದ್ವಿತಯೀ ಬಭೂವ ತದಾ ರೋಹಿಣ್ಯಾಂ ಬಲದೇವೋsಭಿಜಾತಃ ।      
ಬಲೀ ಗುಣಾಢ್ಯಃ ಸರ್ವವೇದೀ ಯ ಏವ ಸೇವಾಖಿನ್ನೋ ಲಕ್ಷ್ಮಣೋsಗ್ರೇ ಹರೇರ್ಭೂತ್೧೨.೧೦೬

ಯಾರು ಬಲಿಷ್ಠನಾಗಿದ್ದನೋ, ಗುಣಗಳಿಂದ ತುಂಬಿದ್ದನೋ, ಎಲ್ಲವನ್ನೂ ಬಲ್ಲವನಾಗಿದ್ದನೋ, ಅಂತಹ ಬಲರಾಮನು, ಭೀಮಸೇನ ಎರಡು ತಿಂಗಳಿನ ಮಗುವಾಗಿದ್ದಾಗ ರೋಹಿಣಿಯಲ್ಲಿ ಹುಟ್ಟಿದನು.  ತ್ರೇತಾಯುಗದಲ್ಲಿ ಶ್ರೀರಾಮನ ತಮ್ಮನಾಗಿ  ಸೇವೆ ಮಾಡಿ ಪರಿಶ್ರಾಂತನಾದ ಲಕ್ಷ್ಮಣನೇ ಈಗ  ಪರಮಾತ್ಮನಿಗಿಂತ ಮೊದಲೇ ಬಲರಾಮನಾಗಿ  ಜನಿಸಿದನು.

ಯದಾ ಹಿ ಪುತ್ರಾನ್ ವಿನಿಹನ್ತುಮೇತೌ ಸಹೈವ ಬದ್ಧೌ ಗತಿಶೃಙ್ಖಲಾಯಾಮ್ ।
ಕಂಸೇನಾಪಾಪೌ ದೇವಕೀಶೂರಪುತ್ರೌ ವಿಯೋಜಿತಾಃ ಶೌರಿಭಾರ್ಯ್ಯಾಃ ಪರಾಶ್ಚ ॥೧೨.೧೦೭॥ 

ಯಾವಾಗ ಕಂಸನು ದೇವಕೀಪುತ್ರರನ್ನು ಕೊಲ್ಲುವುದಕ್ಕಾಗಿ, ಯಾವುದೇ ಪಾಪಮಾಡದ(ದ್ರೋಹರಹಿತರಾದ) ವಸುದೇವ-ದೇವಕಿಯರನ್ನು ಜೊತೆಯಾಗಿ, ಓಡಾಡಬಲ್ಲ ಸರಪಳಿಯಿಂದ ಕಟ್ಟಿದ್ದನೋ, ಆಗ,  ವಸುದೇವನ ಇತರ ಪತ್ನಿಯರು ವಸುದೇವನಿಂದ ಬೇರ್ಪಡಿಸಲ್ಪಟ್ಟಿದ್ದರು(ಸ್ತಾನಾಂತರ ಮಾಡಲ್ಪಟ್ಟಿದ್ದರು).  

ವಿನಿಶ್ಚಯಾರ್ತ್ಥಂ ದೇವಕೀಗರ್ಭಜಾನಾಮನ್ಯಾ ಭಾರ್ಯ್ಯಾ ಧೃತಗರ್ಭಾಃ ಸ ಕಂಸಃ
ಸ್ಥಾನಾನ್ತರೇ ಪ್ರಸವೋ ಯಾವದಾಸಾಂ ಸಂಸ್ಥಾಪಯಾಮಾಸ ಸುಪಾಪಬುದ್ಧಿಃ೧೨.೧೦೮

ಅತ್ಯಂತ ಪಾಪಬುದ್ಧಿಯುಳ್ಳ ಕಂಸನು, ದೇವಕಿಯ ಗರ್ಭದಲ್ಲಿ ಹುಟ್ಟುವ ಮಕ್ಕಳ ವಿಶೇಷ ನಿಶ್ಚಯಕ್ಕಾಗಿ, ವಸುದೇವನ ಇತರ ಎಲ್ಲಾ ಹೆಂಡಿರನ್ನು, ಅವರು ಗರ್ಭ ಧರಿಸಿದ ತಕ್ಷಣ , ಅವರ ಪ್ರಸವವಾಗುವ ತನಕ ಸ್ತಾನಾಂತರಮಾಡಿ ಬೇರೆ ಕಡೆ ಕಳುಹಿಸುತ್ತಿದ್ದ.
[ಒಂದು ವೇಳೆ ವಸುದೇವನ ಇತರ ಪತ್ನಿಯರು ಅಲ್ಲೇ ಇದ್ದು, ಅಲ್ಲೇ  ಅವರಿಗೆ ಹೆರಿಗೆಯಾದರೆ, ಆಗ ಮಗುವನ್ನು ವ್ಯತ್ಯಾಸ(ಅದಲುಬದಲು)ಪಡಿಸುವ ಸಾಧ್ಯತೆ ಇರುವುದರಿಂದ, ಗರ್ಭವತಿಯಾದ ವಸುದೇವನ ಇತರ ಪತ್ನಿಯರಿಗೆ ಆತನ ಜೊತೆಗೆ ಅಲ್ಲಿರಲು ಕಂಸ ಅವಕಾಶಕೊಡದೇ ಸ್ತಾನಾಂತರಮಾಡುತ್ತಿದ್ದ.]  

ಹೇತೋರೇತಸ್ಮಾದ್ ರೋಹಿಣೀ ನನ್ದಗೇಹೇ ಪ್ರಸೂತ್ಯರ್ತ್ಥಂ ಸ್ಥಾಪಿತಾ ತೇನ ದೇವೀ
ಲೇಭೇ ಪುತ್ರಂ ಗೋಕುಲೇ ಪೂರ್ಣ್ಣಚನ್ದ್ರಕಾನ್ತಾನನಂ ಬಲಭದ್ರಂ ಸುಶುಭ್ರಮ್ ॥೧೨.೧೦೯॥

ಇದೇ ಕಾರಣಕ್ಕಾಗಿ ಗರ್ಭಿಣಿಯಾದ  ರೋಹಿಣಿಯು ಹೆರಿಗೆಗಾಗಿ ನಂದನ ಮನೆಯಲ್ಲಿ(ಗೋಕುಲದಲ್ಲಿ) ಕಂಸನಿಂದ ಇಡಲ್ಪಟ್ಟಿದ್ದಳು.  ಹೀಗೆ ಅವಳು  ಗೋಕುಲದಲ್ಲಿ, ಪೂರ್ಣಚಂದಿರನಂತೆ ಮನೋಹರವಾದ ಮುಖವುಳ್ಳ, ಪವಿತ್ರನಾದ ಬಲಭದ್ರನನ್ನು ಮಗನನ್ನಾಗಿ ಪಡೆದಳು.


No comments:

Post a Comment