ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, May 15, 2019

Mahabharata Tatparya Nirnaya Kannada 12.126-12.136


ಪುನರ್ಮ್ಮನೋಃ ಫಲವತ್ತ್ವಾಯ ಮಾದ್ರೀ ಸಮ್ಪ್ರಾರ್ತ್ಥಯಾಮಾಸ ಪತಿಂ ತದುಕ್ತಾ ।
ಪೃಥಾsವಾದೀತ್ ಕುಟಿಲೈಷಾ ಮದಾಜ್ಞಾಮೃತೇ ದೇವಾವಾಹ್ವಯಾಮಾಸ ದಸ್ರೌ ॥೧೨.೧೨೬

ಅತೋ ವಿರೋಧಂ ಚ ಮದಾತ್ಮಜಾನಾಂ ಕುರ್ಯ್ಯಾದೇಷೇತ್ಯೇವ ಭೀತಾಂ ನ ಮಾಂ ತ್ವಮ್ । 
ನಿಯೋಕ್ತುಮರ್ಹಃ ಪುನರೇವ ರಾಜನ್ನಿತೀರಿತೋsಸೌ ವಿರರಾಮ ಕ್ಷಿತೀಶಃ ॥೧೨.೧೨೭ 

ಎರಡು ಮಕ್ಕಳನ್ನು ಪಡೆದ ನಂತರ ಪುನಃ ಮಂತ್ರದ ಫಲವತ್ತತೆಗಾಗಿ ಮಾದ್ರಿಯು ಪಾಂಡುವನ್ನು ಬೇಡಿಕೊಳ್ಳುತ್ತಾಳೆ! ಆದರೆ ಪಾಂಡುವಿನಿಂದ ಮತ್ತೆ ಮಂತ್ರ ನೀಡುವಂತೆ ಹೇಳಲ್ಪಟ್ಟಾಗ  ಕುಂತಿಯು ಹೇಳುತ್ತಾಳೆ: ‘ಇವಳು ಕುಟಿಲಬುದ್ಧಿಯುಳ್ಳವಳು. ನಮ್ಮ ಆಜ್ಞೆ ಇಲ್ಲದೇ ಅಶ್ವಿನೀದೇವತೆಗಳನ್ನು ಈಕೆ ಆಹ್ವಾನಮಾಡಿದಳು.’ (ಮಾದ್ರಿ ಮಂತ್ರಪ್ರಯೋಗ ಮಾಡುವ ಮುನ್ನ  ಪಾಂಡುವಿನೊಂದಿಗಾಗಲೀ, ಕುಂತಿಯೊಂದಿಗಾಗಲೀ ಮಂತ್ರಾಲೋಚನೆ ಮಾಡಲೇ ಇಲ್ಲಾ. ತಾನೇ ಸ್ವತಂತ್ರವಾಗಿ ನಿರ್ಧರಿಸಿ ಆಹ್ವಾನ ಮಾಡಿದಳು. ಆದ್ದರಿಂದ ಅವಳನ್ನು ಕುಂತಿ ಇಲ್ಲಿ ಕುಟಿಲಬುದ್ಧಿಯುಳ್ಳವಳು ಎಂದು ಕರೆದಿದ್ದಾಳೆ)
‘ಆದಕಾರಣ ಈಕೆ  ನನ್ನ ಮಕ್ಕಳಿಗೆ ನಿಶ್ಚಯವಾಗಿ ವಿರೋಧ ಮಾಡುವವಳೇ ಆಗಿದ್ದಾಳೆ. ಈರೀತಿಯಾಗಿ ಭಯಗೊಂಡ ನನ್ನನ್ನು ನೀನು ಮತ್ತೆ ಮಂತ್ರನೀಡುವಂತೆ  ಪ್ರಚೋದನೆ ಮಾಡಬೇಡ’ ಎಂದು ಕುಂತಿಯಿಂದ ಹೇಳಲ್ಪಟ್ಟಾಗ ಪಾಂಡುವು ಸುಮ್ಮನಾಗುತ್ತಾನೆ.

ಮಾದ್ರಿ ಅಶ್ವಿನೀ ದೇವತೆಗಳನ್ನು ಆಹ್ವಾನಿಸಿ ಅವಳಿ ಮಕ್ಕಳನ್ನು ಪಡೆದ ಘಟನೆಯ ಹಿಂದಿನ ತಾಂತ್ರಿಕ ರಹಸ್ಯವನ್ನು ಆಚಾರ್ಯರು ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾರೆ:

ವಿಶೇಷನಾಮ್ನೈವ ಸಮಾಹುತಾಃ ಸುತಾನ್ ದಧ್ಯುಃ ಸುರಾ ಇತ್ಯವಿಶೇಷಿತಂ ಯಯೋಃ। 
ವಿಶೇಷನಾಮಾಪಿ ಸಮಾಹ್ವಯತ್ ತೌ ಮನ್ತ್ರಾವೃತ್ತಿರ್ನ್ನಾಮಭೇದೇsಸ್ಯ ಚೋಕ್ತಾ ॥೧೨.೧೨೮॥      

ದೇವತೆಗಳನ್ನು ಅವರ ವಿಶೇಷವಾದ ಹೆಸರಿನಿಂದ ಕರೆದಲ್ಲಿ ಮಾತ್ರ ಮಕ್ಕಳನ್ನು ಕೊಡುತ್ತಾರೆ. ಕರೆಯಲ್ಪಡುವ ದೇವತೆಗಳಿಗೆ ನಾಮಭೇದವಿದ್ದರೆ ಮಾತ್ರ ಮಂತ್ರಕ್ಕೆ ಪುನರುಚ್ಛಾರ ಹೇಳಲ್ಪಟ್ಟಿದೆ.

[ಮಂತ್ರ ಒಂದೇ. ಆದರೆ ಪ್ರತಿಯೊಂದು ದೇವತೆಯ ವಿಶೇಷ ನಾಮದೊಂದಿಗೆ ಅದನ್ನು ಪುನರುಚ್ಛಾರ ಮಾಡಿದಾಗ ಅದು ಆ ವಿಶೇಷ ನಾಮವುಳ್ಳ ನಿರ್ದಿಷ್ಟ ದೇವತೆಯನ್ನು ತಲುಪುತ್ತದೆ. ಅಂದರೆ ಒಬ್ಬ ದೇವತೆಯನ್ನು ಕರೆಯಲು ಆ ದೇವತೆಯ ವಿಶೇಷ ನಾಮದೊಂದಿಗೆ ಮಂತ್ರೋಚ್ಛಾರ ಮಾಡಬೇಕು. ಹಾಗಾಗಿ ಒಂದಕ್ಕಿಂತ ಹೆಚ್ಚು ದೇವತೆಯನ್ನು ಕರೆಯಬೇಕಾದರೆ ಮಂತ್ರವನ್ನು ಪುನರುಚ್ಛಾರ ಮಾಡಲೇಬೇಕಾಗುತ್ತದೆ. ಇಲ್ಲಿ ಅಶ್ವಿನಿದೇವತೆಗಳು ಮಾತ್ರ ವಿಶೇಷ. ಅವರು ನಮ್ಮ ಮೂಗಿನ ಎರಡು ಹೊರಳೆಗಳಂತೆ.  ಬೇರ್ಪಡದ ಅವಳಿಗಳು.  ಅಂದರೆ ಅವರಲ್ಲಿ ಯಾರನ್ನು ಒಮ್ಮೆ ಕರೆದರೂ ಕೂಡಾ, ಇಬ್ಬರೂ(ನಾಸತ್ಯ ಮತ್ತು ದಸ್ರ) ಒಟ್ಟಿಗೇ ಬರುತ್ತಾರೆ. ಇದನ್ನು ತಿಳಿದೇ  ಮಾದ್ರಿಯು ಒಂದಾವರ್ತಿ ಮಂತ್ರವನ್ನು ಬಳಸಿ ಇಬ್ಬರು ಮಕ್ಕಳನ್ನು ಪಡೆಯುತ್ತಾಳೆ. ನಾಸತ್ಯನು ನಕುಲನಾಗಿ ಹುಟ್ಟಿದರೆ, ದಸ್ರನು ಸಹದೇವನಾಗಿ ಜನ್ಮತಾಳಿದನು.]

ಯುಧಿಷ್ಠಿರಾದ್ಯೇಷು ಚತುರ್ಷು ವಾಯುಃ ಸಮಾವಿಷ್ಟಃ ಫಲ್ಗುನೇsಥೋ ವಿಶೇಷಾತ್       
ಯುಧಿಷ್ಠಿರೇ ಸೌಮ್ಯರೂಪೇಣ ವಿಷ್ಟೋ ವೀರೇಣ ರೂಪೇಣ ಧನಞ್ಜಯೇsಸೌ ॥೧೨.೧೨೯  

ಯುಧಿಷ್ಠಿರ ಮೊದಲಾದ ನಾಲ್ಕು ಜನರಲ್ಲೂ ಕೂಡಾ ಮುಖ್ಯಪ್ರಾಣನು ಸಮಾವಿಷ್ಟನಾಗಿದ್ದಾನೆ. ಯುಧಿಷ್ಠಿರ, ನಕುಲ-ಸಹದೇವರಿಗಿಂತ ಅರ್ಜುನನಲ್ಲಿ ವಾಯುದೇವರು  ವಿಶೇಷವಾಗಿ ಆವಿಷ್ಟರಾಗಿದ್ದಾರೆ.
ಯುಧಿಷ್ಠಿರನಲ್ಲಿ ಶಾಂತವಾದ ರೂಪದಿಂದಿರುವ ಪ್ರವಿಷ್ಟರಾಗಿರುವ  ಮುಖ್ಯಪ್ರಾಣ, ವೀರರೂಪದಿಂದ ಅರ್ಜುನನಲ್ಲಿ ಆವಿಷ್ಟರಾಗಿದ್ದಾರೆ.

ಶೃಙ್ಗಾರರೂಪಂ ಕೇವಲಂ ದರ್ಶಯಾನೋ ವಿವೇಶ ವಾಯುರ್ಯ್ಯಮಜೌ ಪ್ರಧಾನಃ ।  
ಶೃಙ್ಗಾರಕೈವಲ್ಯಮಭೀಪ್ಸಮಾನಃ ಪಾಣ್ಡುರ್ಹಿ ಪುತ್ರಂ ಚಕಮೇ ಚತುರ್ತ್ಥಮ್ ೧೨.೧೩೦ 

ಕೇವಲ ಶೃಂಗಾರರೂಪವನ್ನು ತೋರಿಸುವವರಾಗಿ ಮುಖ್ಯಪ್ರಾಣ ದೇವರು ಅವಳಿಗಳನ್ನು(ನಕುಲ-ಸಹದೇವರನ್ನು)  ಪ್ರವೇಶಿಸಿದರು. ಪಾಂಡುವು ಶೃಂಗಾರ ರೂಪವನ್ನು ಹೊಂದಿದ ನಾಲ್ಕನೆಯ ಮಗ ಬೇಕು ಎಂದು ಬಯಸಿದ್ದನಷ್ಟೇ.

ಶೃಙ್ಗಾರರೂಪೋ ನಕುಲೋ ವಿಶೇಷಾತ್ ಸುನೀತಿರೂಪಃ ಸಹದೇವಂ ವಿವೇಶ ।
ಗುಣೈಃ ಸಮಸ್ತೈಃ ಸ್ವಯಮೇವ ವಾಯುರ್ಬಭೂವ ಭೀಮೋ ಜಗದನ್ತರಾತ್ಮಾ ॥೧೨.೧೩೧   

ವಿಶೇಷವಾದ ಶೃಂಗಾರ ರೂಪನಾಗಿ ನಕುಲನನ್ನು ಪ್ರವೇಶಿಸಿದ ವಾಯುದೇವರು, ಸುನೀತಿ ರೂಪನಾಗಿ ಸಹದೇವನನ್ನು ಪ್ರವೇಶಿಸಿದರು. ಜಗತ್ತಿನ ಅಂತರ್ನಿಯಾಮಕನಾದ, ಸಮಸ್ತಗುಣಗಳಿಂದ ತುಂಬಿದ ವಾಯುದೇವರು ಸ್ವಯಂ ಭೀಮಸೇನ ರೂಪದಲ್ಲಿ ನಿಂತರು. 
[ಭೀಮಾರ್ಜುನರು ಹುಟ್ಟಿದ ನಂತರ ಪಾಂಡು ಸುಂದರನಾದ ಮಗ ಬೇಕು ಎಂದು ಅಪೇಕ್ಷೆ ಪಟ್ಟ ಎಂದರೆ ಭೀಮಾರ್ಜುನರರು ಸುಂದರರಾಗಿಲ್ಲ ಎಂದು ಅರ್ಥವಾಗುತ್ತದೆ. ಆದರೆ ಆದಿಪರ್ವದ ಹಿಡಿಂಬಾ ಪ್ರಣಯ ಪ್ರಸಂಗದಲ್ಲಿ ಭೀಮಸೇನ ರೂಪಶಾಲಿ ಎಂದು ವಿವರಿಸಲಾಗಿದೆ. ಹಾಗಿದ್ದರೆ ಪಾಂಡು ಬಯಸಿದ ಶೃಂಗಾರ ರೂಪ ಯಾವುದು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ  ಆಚಾರ್ಯರು ಸ್ಪಷ್ಟಪಡಿಸಿದ್ದಾರೆ:]

ಸುಪಲ್ಲವಾಕಾರತನುರ್ಹಿ ಕೋಮಳಃ ಪ್ರಾಯೋ ಜನೈಃ ಪ್ರೋಚ್ಯತೇ ರೂಪಶಾಲೀ ।
ತತಃ ಸುಜಾತಂ ವರವಜ್ರಕಾಯೌ ಭೀಮಾರ್ಜ್ಜುನಾವಪ್ಯೃತೇ ಪಾಣ್ಡುರೈಚ್ಛತ್ ॥೧೨.೧೩೨॥  

ಮೃದುವಾಗಿರುವ, ಕೋಮಲವಾಗಿರುವ ದೇಹವುಳ್ಳವನು ಪ್ರಾಯಃ ಹೆಚ್ಚಿನಪಕ್ಷದಲ್ಲಿ ಜನರಿಂದ ರೂಪಶಾಲೀ ಎಂದು ಹೇಳಲ್ಪಡುತ್ತಾನೆ. ಆಕಾರಣದಿಂದ, ಉತ್ಕೃಷ್ಟವಾಗಿರುವ ವಜ್ರದಂತೆ ಶರೀರವುಳ್ಳ ಭೀಮ ಹಾಗು ಅರ್ಜುನರನ್ನು ಬಿಟ್ಟು, ಪಾಂಡುವು ಕೋಮಲ ಶರೀರವುಳ್ಳ ಸುಂದರನಾಗಿರುವ ಮಗನೊಬ್ಬ ಬೇಕು ಎಂದು ಬಯಸಿದ.

ಅಪ್ರಾಕೃತಾನಾಂ ತು ಮನೋಹರಂ ಯದ್ ರೂಪಂ ದ್ವಾತ್ರಿಂಶಲ್ಲಕ್ಷಣೋಪೇತಮಗ್ರ್ಯಮ್
ತನ್ಮಾರುತೋ ನಕುಲೇ ಕೋಮಳಾಭ ಏವಂ ವಾಯುಃ ಪಞ್ಚರೂಪೋsತ್ರ ಚಾsಸೀತ್ ॥೧೨.೧೩೩

ಅಪ್ರಾಕೃತವಾದ,  ೩೨  ಲಕ್ಷಣಗಳಿಂದ ಕೂಡಿರುವ, ಉತ್ಕೃಷ್ಟವಾದ ಮನೋಹರವಾದ ರೂಪವನ್ನು ಸ್ವಯಂ ಭೀಮಸೇನ ಧರಿಸಿದ್ದ. (ಅರ್ಜುನನಿಗೆ ಭೀಮಸೇನನಿಗಿಂತ ಸ್ವಲ್ಪ ಕಡಿಮೆ ಲಕ್ಷಣವಿತ್ತು). ಆ ಕಾರಣದಿಂದ ಭೀಮಸೇನ ಪಾಂಡುವಿನ ಇಚ್ಛೆಗೆ ಅನುಗುಣವಾಗಿ ನಕುಲನಲ್ಲಿ ಕೋಮಲನಂತೆ ಕಾಣುತ್ತಿದ್ದ. ಹೀಗೆ ಮುಖ್ಯಪ್ರಾಣನು ನಾಲ್ಕು ಜನ ಪಾಂಡವರಲ್ಲಿ ಚತುಃಸ್ವರೂಪದಿಂದ ಆವಿಷ್ಟರಾಗಿದ್ದು, ಪಂಚಪಾಂಡವರಲ್ಲಿ ಪಂಚ  ರೂಪವುಳ್ಳವರಾಗಿದ್ದರು.


ಅತೀತೇನ್ದ್ರಾ ಏವ ತೇ ವಿಷ್ಣುಷಷ್ಠಾಃ ಪೂರ್ವೇನ್ದ್ರೋsಸೌ ಯಜ್ಞನಾಮಾ ರಮೇಶಃ
ಸ ವೈ ಕೃಷ್ಣೋ ವಾಯುರಥ ದ್ವಿತೀಯಃ ಸ ಭೀಮಸೇನೋ ಧರ್ಮ್ಮ ಆಸೀತ್ ತೃತೀಯಃ ॥೧೨.೧೩೪॥
                                                                                            
ಯಧಿಷ್ಠಿರೋsಸಾವಥ ನಾಸತ್ಯದಸ್ರೌ ಕ್ರಮಾತ್ ತಾವೇತೌ ಮಾದ್ರವತೀಸುತೌ ಚ ।
ಪುರನ್ದರಃ ಷಷ್ಠ ಉತಾತ್ರ ಸಪ್ತಮಃ ಸ ಏವೈಕಃ ಫಲ್ಗುನೋ ಹ್ಯೇತ ಇನ್ದ್ರಾಃ ॥೧೨.೧೩೫

ವಿಷ್ಣುವನ್ನೇ ಆರನೆಯವನನ್ನಾಗಿ ಹೊಂದಿರುವ ಪಾಂಡವರು, ಆಗಿಹೋದ ಇಂದ್ರರೇ ಆಗಿದ್ದಾರೆ. (ಪರಮಾತ್ಮನೂ ಸೇರಿದಂತೆ ಆರುಜನ ಇಂದ್ರರ ಕಥೆ ಈ ಮಹಾಭಾರತ. ಅದನ್ನೇ ಸಂಸ್ಕೃತದಲ್ಲಿ ವಿಷ್ಣುಷಷ್ಠಃ ಎಂದಿದ್ದಾರೆ.)
ಸ್ವಾಯಮ್ಭುವ ಮನ್ವಂತರದಲ್ಲಿ ಇಂದ್ರನಾಮಕನಾಗಿ ಸ್ವಯಂ ಭಗವಂತನಿದ್ದ. ಋಷಿಪ್ರಜಾಪತಿ ಮತ್ತು ಆಕೂತಿಯರ ದಾಂಪತ್ಯದಲ್ಲಿ ‘ಯಜ್ಞಾ’ ಎನ್ನುವ ಹೆಸರಿನಿಂದ ಹುಟ್ಟಿದ ನಾರಾಯಣ ಇಂದ್ರ ಪದವಿಯನ್ನು ನಿರ್ವಹಿಸಿದ. ಅವನೇ ಈ ಮಹಾಭಾರತದ ಶ್ರೀಕೃಷ್ಣ.
ತದನಂತರ, ಸ್ವಾರೋಚಿಷ ಮನ್ವಂತರದಲ್ಲಿ  ಮುಖ್ಯಪ್ರಾಣನು ಎರಡನೇ ಇಂದ್ರನಾದ (ಭಾಗವತದ ೮ನೇ ಸ್ಕಂಧದಲ್ಲಿ  ‘ರೋಚನ’ ಎನ್ನುವ ರೂಪದಿಂದ ಮುಖ್ಯಪ್ರಾಣ ಇಂದ್ರಪದವಿಯನ್ನು ಅಲಂಕರಿಸಿದ ಎನ್ನುವುದನ್ನುವಿವರಿಸಿದ್ದಾರೆ).  ಅವನೇ ಮಹಾಭಾರತದ ಭೀಮಸೇನ.
ಮೂರನೆಯ ಮನ್ವಂತರದಲ್ಲಿ(ಉತ್ತಮ ಮನ್ವಂತರದಲ್ಲಿ) ಮೂರನೆಯ ಇಂದ್ರ ಸಾಕ್ಷಾತ್ ಯಮ. ಅವನ ಹೆಸರು ವಿಭುಃ. ಈತನೇ ಮಹಾಭಾರತದ ಯಧಿಷ್ಠಿರ.
ತಾಪಸ ಮನ್ವಂತರದಲ್ಲಿ ‘ಸತ್ಯಜಿತ್’ ಎನ್ನುವ ಇಂದ್ರನಿದ್ದಾನೆ. ಅವನಿಲ್ಲಿ ನಕುಲನಾಗಿದ್ದಾನೆ. ರೈವತಮನ್ವಂತರದಲ್ಲಿ  ‘ತ್ರಿಶಿಖ’ ಎನ್ನುವ ಇಂದ್ರ. ಅವನಿಲ್ಲಿ ಸಹದೇವನಾಗಿದ್ದಾನೆ.
ಚಾಕ್ಷುಶ ಮನ್ವಂತರದಲ್ಲಿ ಮಂದ್ರದ್ಯುಮ್ನ ಎನ್ನುವ ಹೆಸರಿನಿಂದಿರುವ ಇಂದ್ರ, ಪರಮಾತ್ಮನ ವಿಶೇಷ ಅನುಗ್ರಹದಿಂದ ಏಳನೇ ಮನ್ವನ್ತರದಲ್ಲೂ(ವೈವಸ್ವತ ಮನ್ವನ್ತರದಲ್ಲೂ) ಕೂಡಾ ಇಂದ್ರಪದವಿಯನ್ನು ಪಡೆದ. ಈತನೇ  ಪುರಂದರ. ಅವನೇ ಮಹಾಭಾರತದ ಅರ್ಜುನ.
[ಇದನ್ನೇ  ಪಾದ್ಮಪುರಾಣದ ಸೃಷ್ಟಿಖಂಡದಲ್ಲಿ (೭೬.೨೨) ‘ಪಞ್ಚೇದ್ರಾಃ ಪಾಣ್ಡವಾ ಜಾತಾ ವಿದುರೋ ಧರ್ಮ ಏವ ಚ’ - ಐದು ಜನ ಇಂದ್ರರೇ ಪಾಂಡವರಾಗಿ ಹುಟ್ಟಿದ್ದಾರೆ ಎಂದು ಹೇಳಲಾಗಿದೆ. ತಥಾಚ, ಈ ಏಳು ಜನ ಇಂದ್ರರ ಕಥೆಯೇ ಮಹಾಭಾರತ. ವೇದದಲ್ಲಿ ಏಳು ಮಂಡಲದಲ್ಲಿ ಇರತಕ್ಕಂತಹ ಕಥೆಯಲ್ಲಿ ಮಹಾಭಾರತದ ವಿಸ್ತಾರವನ್ನು ನಾವು ಕಾಣಬಹುದು.  ]

ಕ್ರಮಾತ್ ಸಂಸ್ಕಾರಾನ್ ಕ್ಷತ್ರಿಯಾಣಾಮವಾಪ್ಯ ತೇsವರ್ದ್ಧನ್ತ ಸ್ವತವಸೋ ಮಹಿತ್ವನಾ ।
ಸರ್ವೇ ಸರ್ವಜ್ಞಾಃ ಸರ್ವಧರ್ಮ್ಮೋಪಪನ್ನಾಃ ಸರ್ವೇ ಭಕ್ತಾಃ ಕೇಶವೇsತ್ಯನ್ತಯುಕ್ತಾಃ ॥೧೨.೧೩೬॥

ಕ್ರಮವಾಗಿ ಕ್ಷತ್ರಿಯರ ಸಂಸ್ಕಾರವನ್ನು ಹೊಂದಿದ ಈ ಪಾಂಡವರು,  ತಮ್ಮ ಮಹಿಮೆಯಿಂದ ಸ್ವರೂಪಭೂತವಾದ ಸಾಮರ್ಥ್ಯವುಳ್ಳವರಾಗಿ ಬೆಳೆದರು. ಇವರೆಲ್ಲರೂ ಯೋಗ್ಯತೆಗನುಗುಣವಾಗಿ ಎಲ್ಲವನ್ನೂ ಬಲ್ಲವರಾಗಿದ್ದರು.  ಧರ್ಮದಿಂದ ಯುಕ್ತರಾಗಿದ್ದ ಅವರು ನಾರಾಯಣನಲ್ಲಿ ಆತ್ಯಂತಿಕವಾಗಿ ಭಕ್ತಿ ಮಾಡುತ್ತಿದ್ದರು.
[ಋಗ್ವೇದ ಸಂಹಿತದಲ್ಲಿ (೧.೮೫.೫) ಹೇಳುವಂತೆ: ತೇsವರ್ದ್ಧನ್ತ ಸ್ವತವಸೋ ಮಹಿತ್ವನಾ  ನಾಕಂ ತಸ್ಥುರುರು ಚಕ್ರಿರೇ ಸದಃ   ವಿಷ್ಣುರ್ಯದ್ಧಾವದ್ ವೃಷಣಂ  ಮದಚ್ಯುತಂ ವಯೋ ನ ಸೀದನ್ನಧಿ ಬರ್ಹಿಷಿ ಪ್ರಿಯೇ’
ಈ ಮಂತ್ರ ಮರುದ್ಧೇವತೆಗಳನ್ನು ಹೇಳಲು ಹೊರಟಿದೆ. ಮರುದ್ಧೇವತೆಗಳಲ್ಲಿ ಪ್ರಧಾನ ಮುಖ್ಯಪ್ರಾಣ. ಮುಖ್ಯಪ್ರಾಣನ ಸನ್ನಿಧಾನ ಎನ್ನುವುದು ಉಳಿದ ನಾಲ್ವರಲ್ಲಿದೆ ಎನ್ನುವುದಕ್ಕೆ ವೇದದ ಒಂದು ಸಂವಾದವೂ ಇದೆ ಎಂದು ತೋರಿಸುವುದಕ್ಕಾಗಿ,  ಮರುದ್ಧೇವತಾಕವಾದ ಸೂತ್ರದ ಖಂಡವನ್ನು ಆಚಾರ್ಯರು ಇಲ್ಲಿ ಜೋಡಿಸಿ ಹೇಳಿದ್ದಾರೆ. ಇದರಿಂದ- ‘ವೇದದಲ್ಲಿ ಮರುದ್ಧೇವತಾಕವಾದ ಸೂತ್ರವೇನಿದೆ, ಅದರಲ್ಲಿ ಪಾಂಡವರ ಕಥೆಯನ್ನು ಅನುಸಂಧಾನ ಮಾಡಿ’ ಎನ್ನುವ  ಸಂದೇಶ ನೀಡಿದಂತಾಯಿತು. ಹೀಗೆ ವೇದದೊಂದಿಗೆ ಹೇಗೆ ಮಹಾಭಾರತವನ್ನು ಜೋಡಿಸಬೇಕು ಎನ್ನುವ ದಾರಿಯನ್ನು ಆಚಾರ್ಯರು ಇಲ್ಲಿ ತೋರಿಸಿಕೊಟ್ಟಿದ್ದಾರೆ.  

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವೋತ್ಪತ್ತಿರ್ನ್ನಾಮ ದ್ವಾದಶೋsಧ್ಯಾಯಃ ॥


No comments:

Post a Comment