ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 13, 2019

Mahabharata Tatparya Nirnaya Kannada 12.116-12.119


ಕದಾಚಿತ್ ತಂ ಲಾಳಯನ್ತೀ ಯಶೋದಾ ವೋಢುಂ ನಾಶಕ್ನೋದ್ ಭೂರಿಭಾರಾಧಿಕಾರ್ತ್ತಾ ।
ನಿಧಾಯ ತಂ ಭೂಮಿತಳೇ ಸ್ವಕರ್ಮ್ಮ ಯದಾ ಚಕ್ರೇ ದೈತ್ಯ ಆಗಾತ್ ಸುಘೋರಃ ೧೨.೧೧೬

ಒಮ್ಮೆ ಯಶೋದೆಯು ಶ್ರೀಕೃಷ್ಣನನ್ನು ಮುದ್ದಿಸುತ್ತಿರುವಾಗ, ಇದ್ದಕ್ಕಿದ್ದಂತೆ ಆತ ಬಹಳ ಭಾರವುಳ್ಳವನಾದ. ಇದರಿಂದ ಸಂಕಟಗೊಂಡವಳಾದ ಯಶೋದೆ, ಕೃಷ್ಣನನ್ನು ಹೊರಲು ಶಕ್ತಳಾಗದೇ ಆತನನ್ನು ನೆಲದ ಮೇಲೆ  ಇಟ್ಟು, ತನ್ನ ಕೆಲಸಗಳನ್ನು ಮಾಡುತ್ತಿದ್ದಳು. ಆಗಲೇ ಅತ್ಯಂತ ಘೋರರೂಪನಾದ ದೈತ್ಯನೊಬ್ಬನ ಆಗಮನವಾಗುತ್ತದೆ.

ತೃಣಾವರ್ತ್ತೋ ನಾಮತಃ ಕಂಸಭೃತ್ಯಃ ಸೃಷ್ಟ್ವಾsತ್ಯುಗ್ರಂ ಚಕ್ರವಾತಂ ಶಿಶುಂ ತಮ್ ।
ಆದಾಯಾsಯಾದನ್ತರಿಕ್ಷಂ ಸ ತೇನ ಶಸ್ತಃ ಕಣ್ಠಗ್ರಾಹಸಂರುದ್ಧವಾಯುಃ ೧೨.೧೧೭

ಹೆಸರಿನಿಂದ ತೃಣಾವರ್ತನಾಗಿರುವ ಆ ದೈತ್ಯ ಕಂಸನ ಭೃತ್ಯನಾಗಿದ್ದ. ಅವನು ಅತ್ಯಂತ ಭಯಂಕರವಾದ ಸುಂಟರಗಾಳಿಯನ್ನು ಸೃಷ್ಟಿಸಿ, ನೆಲದಮೇಲಿದ್ದ ಮಗುವನ್ನು (ಶ್ರೀಕೃಷ್ಣನನ್ನು) ಆಕಾಶಕ್ಕೆ ಕೊಂಡೊಯ್ದ. ಆದರೆ ಅಂತಹ ತೃಣಾವರ್ತನು ‘ಕೃಷ್ಣನು ಕತ್ತನ್ನು ಒತ್ತಿ ಹಿಡಿದಿದ್ದರಿಂದ’ ಉಸಿರುಗಟ್ಟಿ ನಿಗ್ರಹಿಸಲ್ಪಟ್ಟ.

ಪಪಾತ ಕೃಷ್ಣೇನ ಹತಃ ಶಿಲಾತಳೇ ತೃಣಾವರ್ತ್ತಃ ಪರ್ವತೋದಗ್ರದೇಹಃ ।
ಸುವಿಸ್ಮಯಂ ಚಾsಪುರಥೋ ಜನಾಸ್ತೇ ತೃಣಾವರ್ತ್ತಂ ವೀಕ್ಷ್ಯ ಸಞ್ಚೂರ್ಣ್ಣಿತಾಙ್ಗಮ್  ॥೧೨.೧೧೮

ಕೃಷ್ಣನಿಂದ ಕೊಲ್ಲಲ್ಪಟ್ಟ,  ಪರ್ವತದಂತೆ ದೊಡ್ಡ ದೇಹವುಳ್ಳ ತೃಣಾವರ್ತನು ಬಂಡೆಯಮೇಲೆ ಬಿದ್ದ. ಆಗ ಅಲ್ಲಿದ್ದ  ಜನರೆಲ್ಲರು ಪುಡಿಪುಡಿಯಾದ ಅವಯವಗಳುಳ್ಳ ತೃಣಾವರ್ತನನ್ನು ಕಂಡು ಅಚ್ಚರಿಪಟ್ಟರು.

ಅಕ್ರುದ್ಧ್ಯತಾಂ ಕೇಶವೋsನುಗ್ರಹಾಯ ಶುಭಂ ಸ್ವಯೋಗ್ಯಾದಧಿಕಂ ನಿಹನ್ತುಮ್ ।
ಸ ಕ್ರುದ್ಧ್ಯತಾಂ ನವನೀತಾದಿ ಮುಷ್ಣಂಶ್ಚಚಾರ ದೇವೋ ನಿಜಸತ್ಸುಖಾಮ್ಬುಧಿಃ ॥೧೨.೧೧೯

ಶ್ರೀಕೃಷ್ಣನು ಕೋಪಗೊಳ್ಳದ ಜನರ ಅನುಗ್ರಹಕ್ಕಾಗಿ ಮತ್ತು ಕೋಪಗೊಳ್ಳುವವರಿಗೆ ಅವರ ಯೋಗ್ಯತೆಗಿಂತ ಅಧಿಕವಾದ ಪುಣ್ಯವನ್ನು ನಾಶಮಾಡಲು,  ಬೆಣ್ಣೆ ಮೊದಲಾದವುಗಳನ್ನು ಕದ್ದುಕೊಳ್ಳುವವನಾಗಿ ಸಂಚರಿಸಿದ. (ಕೃಷ್ಣನ ಮೇಲೆ ಕೊಪಗೊಂಡವರಿಗೆ ಅಧಿಕ ಪುಣ್ಯವಿದ್ದಿದ್ದು ನಾಶವಾದರೆ, ಕೊಪಗೊಳ್ಳದವರ ಪುಣ್ಯ ವೃದ್ಧಿಯಾಯಿತು. ಇದು ಕೃಷ್ಣನ ಬೆಣ್ಣೆ ಕದಿಯುವುದರ ಹಿಂದಿನ ಔಚಿತ್ಯವಾಗಿತ್ತು.)

No comments:

Post a Comment