ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, May 19, 2019

Mahabharata Tatparya Nirnaya Kannada 13_01-13_03


೧೩. ಕಂಸವಧಃ


ಓಂ ॥
ಗರ್ಗ್ಗಃ ಶೂರಸುತೋಕ್ತ್ಯಾ ವ್ರಜಮಾಯಾತ್ ಸಾತ್ವತಾಂ ಪುರೋಧಾಃ ಸಃ ।
ಚಕ್ರೇ ಕ್ಷತ್ರಿಯಯೋಗ್ಯಾನ್ ಸಂಸ್ಕಾರಾನ್ ಕೃಷ್ಣರೋಹಿಣೀಸೂನ್ವೋಃ ॥೧೩.೦೧

ಯಾದವರ ಪುರೋಹಿತರಾಗಿರುವ ಗರ್ಗ ಎಂಬ ಋಷಿಯು ವಸುದೇವನ ಮಾತಿನಂತೆ ವ್ರಜಕ್ಕೆ ಬಂದು, ಕೃಷ್ಣ ಹಾಗು ಬಲರಾಮರಿಗೆ ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರಗಳನ್ನು(ಜಾತಕರ್ಮಾದಿ ಸಂಸ್ಕಾರಗಳನ್ನು) ಮಾಡಿದರು.
[ಪಾದ್ಮಪುರಾಣದಲ್ಲಿ ಈ ಮಾತಿನ ಉಲ್ಲೇಖವಿದೆ: ತತೋ ಗರ್ಗಃ ಶುಭದಿನೇ ವಸುದೇವೇನ ನೋದಿತಃ’ (ಉತ್ತರಖಂಡ ೧೪೫.೬೭)   ನಾಮ ಚಾತ್ರಾಕರೋದ್ ದಿವ್ಯಂ ಪುತ್ರಯೋರ್ವಾಸುದೇವಯೋಃ’ (೬೮).  ಭಾಗವತದಲ್ಲಿ(೧೦.೧.೧೧) ಹೇಳುವಂತೆ: ಚಕಾರ ನಾಮಕರಣಂ ಗೂಢೋ ರಹಸಿ ಬಾಲಯೋಃ’.  ಬ್ರಾಹ್ಮಪುರಾಣದಲ್ಲಿ(೭೬.೧-೨)) ಹೀಗಿದೆ: ‘ಗರ್ಗಶ್ಚ ಗೋಕುಲೇ ತತ್ರ ವಸುದೇವಪ್ರಚೋದಿತಃ । ಪ್ರಚ್ಛನ್ನ ಏವ ಗೋಪಾನಾಂ  ಸಂಸ್ಕಾರಮಕರೋತ್ ತಯೋಃ ॥  ಜೇಷ್ಠಂ ಚ ರಾಮಮಿತ್ಯಾಹ ಕೃಷ್ಣಂ ಚೈವ ತಥಾsಪರಮ್’. ಕಂಸನಿಗೆ ಸುದ್ದಿಮುಟ್ಟುವ ಸಾಧ್ಯತೆ ಇರುವುದರಿಂದ, ಶ್ರೀಕೃಷ್ಣನಿಗೆ ಗೋಪ್ಯವಾಗಿ ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರ ನಡೆಯಿತು. ಕೃಷ್ಣ ಬೆಳೆದದ್ದು ವೈಶ್ಯ ಕುಟುಂಬದಲ್ಲಾದರೂ ಕೂಡಾ, ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರಗಳನ್ನು ಹೊಂದಿ ಕ್ಷತ್ರೀಯನೇ ಆಗಿದ್ದ. (ಇದೇ ಪರಿಸ್ಥಿತಿ ಕರ್ಣನಿಗೂ ಇತ್ತು. ಆದರೆ ಅವನಿಗೆ ಈರೀತಿಯ ಸಂಸ್ಕಾರ ಆಗಿರಲಿಲ್ಲ. ಆದ್ದರಿಂದ ಅವನನ್ನು ಸಮಾಜ ‘ಸೂತ’ ಎಂದೇ ಪರಿಗಣಿಸಿತು.  ಗರ್ಗಾಚಾರ್ಯರಿಂದ ಸಂಸ್ಕಾರಗೊಂಡ ಶ್ರೀಕೃಷ್ಣನನ್ನು ಸಮಾಜ ಕ್ಷತ್ರಿಯನನ್ನಾಗಿ ಕಂಡಿತು)].

ಊಚೇ ನನ್ದ ಸುತೋsಯಂ ತವ ವಿಷ್ಣೋರ್ನ್ನಾವಮೋ ಗುಣೈಃ ಸರ್ವೈಃ ।
ಸರ್ವೇ ಚೈತತ್ರಾತಾಃ ಸುಖಮಾಪ್ಸ್ಯನ್ತ್ಯುನ್ನತಂ ಭವತ್ಪೂರ್ವಾಃ ॥೧೩.೦೨

ಸಮಸ್ತ ಸಂಸ್ಕಾರಗಳನ್ನು ಪೂರೈಸಿದ ಗರ್ಗಾಚಾರ್ಯರು ಹೇಳುತ್ತಾರೆ: ‘ಎಲೋ ನಂದಗೋಪನೇ, ಈ ನಿನ್ನ ಸುತನು ನಾರಾಯಣನಿಗೆ ಎಲ್ಲಾ ಗುಣಗಳಿಂದಲೂ ಕಡಿಮೆ ಇಲ್ಲದವನು (ನಾರಾಯಣನಿಗೆ ಸಮನಾದವನು. ಅಂದರೆ ಸ್ವಯಂ ನಾರಾಯಣ ಒಬ್ಬನೇ). ನೀನೇ ಮೊದಲಾಗಿರುವ ಎಲ್ಲರೂ ಕೂಡಾ ಇವನಿಂದ ರಕ್ಷಿಸಲ್ಪಟ್ಟವರಾಗಿ ಉತ್ಕೃಷ್ಟವಾದ ಸುಖವನ್ನು ಹೊಂದುತ್ತೀರಿ’.

ಇತ್ಯುಕ್ತಃ ಸ ಮುಮೋದ ಪ್ರಯಯೌ ಗರ್ಗ್ಗೋsಪಿ ಕೇಶವೋsಥಾsಧ್ಯಃ ।
ಸ್ವಪದೈರಗ್ರಜಯುಕ್ತಶ್ಚಕ್ರೇ ಪುಣ್ಯಂ ವ್ರಜನ್ ವ್ರಜೋದ್ದೇಶಮ್ ॥೧೩.೦೩॥

ಈರೀತಿಯಾಗಿ ಗರ್ಗಾಚಾರ್ಯರಿಂದ ಹೇಳಲ್ಪಟ್ಟಾಗ ನಂದನು ಸಂತಸವನ್ನು ಹೊಂದಿದನು. ಗರ್ಗಾಚಾರ್ಯರೂ  ಕೂಡಾ ಅವನ ಅನುಜ್ಞೆಯನ್ನು ಪಡೆದು ಅಲ್ಲಿಂದ ತೆರಳಿದರು. ತದನಂತರ ಎಲ್ಲರಿಗೂ ಮೊದಲೆನಿಸಿರುವ(ಆದಿಪುರುಷನಾದ) ಕೇಶವನು ಅಣ್ಣನಿಂದ ಕೂಡಿಕೊಂಡು, ಆ ಪ್ರಾಂತ್ಯದಲ್ಲಿ ಸಂಚರಿಸುತ್ತಾ ತನ್ನ ಪಾದಗಳಿಂದ ಆ ಗ್ರಾಮವನ್ನು ಪವಿತ್ರವನ್ನಾಗಿ ಮಾಡಿದನು. 

No comments:

Post a Comment