ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 13, 2019

Mahabharata Tatparya Nirnaya Kannada 12.110-12.115


ಯದಾ ತ್ರಿಮಾಸಃ ಸ ಬಭೂವ ದೇವಸ್ತದಾssವಿರಾಸೀತ್ ಪುರುಷೋತ್ತಮೋsಜಃ ।
ಕೃಷ್ಣಶೇಷಾವಾಪ್ತುಕಾಮೌ ಸುತೌ ಹಿ ತಪಶ್ಚಕ್ರಾತೇ ದೇವಕೀಶೂರಪುತ್ರೌ ॥೧೨.೧೧೦

ಯಾವಾಗ ಬಲರಾಮನಿಗೆ ಮೂರು ತಿಂಗಳು ಕಳೆಯಿತೋ, ಆಗ ಎಂದೂ ಹುಟ್ಟದ ಪುರುಷೋತ್ತಮನಾದ ನಾರಾಯಣನು ಆವಿರ್ಭವಿಸಿದ.
ಹಿಂದೆ ದೇವಕೀ ಹಾಗು ವಸುದೇವರು ಕೃಷ್ಣ ಹಾಗು ಶೇಷರನ್ನು ಮಕ್ಕಳನ್ನಾಗಿ ಪಡೆಯಲು ತಪಸ್ಸು ಮಾಡಿದ್ದರಿಂದ ಅವರಲ್ಲಿ  ಭಗವಂತ ಆವಿರ್ಭವಿಸಿದ. 

ವಿಷ್ಣ್ವಾವೇಶೀ ಬಲವಾನ್ ಯೋ ಗುಣಾಧಿಕಃ ಸ ಮೇ ಸುತಃ ಸ್ಯಾದಿತಿ ರೋಹಿಣೀ ಚ ।
ತೇಪೇ ತಪೋsತೋ ಹರಿಶುಕ್ಲಕೇಶಯುತಃ ಶೇಷೋ ದೇವಕೀರೋಹಿಣೀಜಃ ೧೨.೧೧೧

‘ಯಾರು ವಿಷ್ಣುವಿನ ಆವೇಶ ಉಳ್ಳವನೋ, ಬಲಿಷ್ಠನೋ, ಗುಣಗಳಿಂದ ಶ್ರೇಷ್ಠನೋ, ಅಂಥವನು ನನ್ನ ಮಗನಾಗಬೇಕು’ ಎಂದು ರೋಹಿಣಿಯೂ ಕೂಡಾ ತಪಸ್ಸು ಮಾಡಿದ್ದಳು. ಆ ಕಾರಣದಿಂದ ಶೇಷನು ಪರಮಾತ್ಮನ ಶುಕ್ಲಕೇಶದಿಂದ ಕೂಡಿದವನಾಗಿ (ಸಂಕರ್ಷಣನ ಆವೇಶದಿಂದ ಕೂಡಿದವನಾಗಿ) ದೇವಕಿ ಹಾಗು ರೋಹಿಣಿಯರಿಬ್ಬರಲ್ಲೂ ಹುಟ್ಟಿದ.
[ಮೊದಲು ಶೇಷ ದೇವಕಿಯ ಗರ್ಭವನ್ನು ಪ್ರವೇಶಿಸಿದ. ನಂತರ ಭಗವಂತನ ಆಜ್ಞೆಯಂತೆ ದುರ್ಗೆ ದೇವಕಿಯ ಮೂರು ತಿಂಗಳ ಗರ್ಭವನ್ನು ರೋಹಿಣಿಯ ಉದರಕ್ಕೆ ವರ್ಗಾವಣೆ  ಮಾಡಿದ್ದಳು. ಆಗ ಕಂಸ ಹಾಗು ಜನರೆಲ್ಲರೂ ದೇವಕಿಗೆ ಗರ್ಭಸ್ತ್ರಾವವಾಯಿತು ಎಂದುಕೊಂಡರು.  ಹೀಗೆ ವರ್ಗಾವಣೆಗೊಂಡ ಗರ್ಭ  ರೋಹಿಣಿಯ ಉದರದಲ್ಲಿ  ಬೆಳೆಯಿತು. ಹೀಗೆ ಬಲಭದ್ರ ದೇವಕಿ ಹಾಗು ರೋಹಿಣಿಯರ ತಪಸ್ಸಿನ ಫಲದಿಂದ ಇಬ್ಬರಿಂದಲೂ ಹುಟ್ಟಿದ]

ಅವರ್ದ್ಧತಾಸೌ ಹರಿಶುಕ್ಲಕೇಶಸಮಾವೇಶೀ ಗೋಕುಲೇ ರೌಹಿಣೇಯಃ ।
ಕೃಷ್ಣೋsಪಿ ಲೀಲಾ ಲಳಿತಾಃ ಪ್ರದರ್ಶಯನ್ ಬಲದ್ವಿತೀಯೋ ರಮಯಾಮಾಸ ಗೋಷ್ಠಮ್ ॥೧೨.೧೧೨

ಹೀಗೆ ಸಂಕರ್ಷಣರೂಪಿ ಭಗವಂತನ ಆವೇಶವನ್ನು ಹೊಂದಿದ ರೋಹಿಣಿ ಪುತ್ರ ಬಲರಾಮನು ಗೊಕುಲದಲ್ಲಿಯೇ ಬೆಳೆದ. ಕೃಷ್ಣನೂ ಕೂಡಾ ಮನೋಹರವಾದ ಆಟಗಳನ್ನು ತೋರಿಸುತ್ತಾ, ಬಲರಾಮನೊಡಗೂಡಿ ಗೋಕುಲಕ್ಕೆ ಸಂತಸವನ್ನು ನೀಡಿದ.

ಸ ಪ್ರಾಕೃತಂ ಶಿಶುಮಾತ್ಮಾನಮುಚ್ಚೈರ್ವಿಜಾನನ್ತ್ಯಾ ಮಾತುರಾದರ್ಶನಾಯ
ವಿಜೃಮ್ಭಮಾಣೋsಖಿಲಮಾತ್ಮಸಂಸ್ಥಂ ಪ್ರದರ್ಶಯಾಮಾಸ ಕದಾಚಿದೀಶಃ ॥೧೨.೧೧೩

ಒಮ್ಮೆ ಆ ಕೃಷ್ಣನು ತನ್ನನ್ನು ಪ್ರಾಕೃತಶಿಶು(ಸಾಮಾನ್ಯ ಮಗು) ಎಂದು ತಿಳಿದಿರುವ ತಾಯಿಯ ಸಮ್ಯಜ್ಞಾನಕ್ಕಾಗಿ, ಆಕಳಿಸುತ್ತಾ, ತನ್ನಲ್ಲಿರುವ ಬ್ರಹ್ಮಾಂಡ ಮೊದಲಾದವುಗಳನ್ನು ತಾಯಿಗೆ ಬಾಯಲ್ಲಿ ತೋರಿದ.

ಸಾsಣ್ಡಂ ಮಹಾಭೂತಮನೋsಭಿಮಾನಮಹತ್ಪ್ರಕೃತ್ಯಾವೃತಮಬ್ಜಜಾದಿಭಿಃ ।
ಸುರೈಃ ಶಿವೇತೈರ್ನ್ನರದೈತ್ಯಸಙ್ಘೈರ್ಯ್ಯುತಂ ದದರ್ಶಾಸ್ಯ ತನೌ ಯಶೋದಾ ॥೧೨.೧೧೪

ಆ ಯಶೋದೆಯು ಪಂಚಭೂತಗಳು, ಮನೋಭಿಮಾನ, ಮಹತತ್ತ್ವ, ಪ್ರಕೃತಿ ಇವುಗಳಿಂದ ಕೂಡಿದ, ಬ್ರಹ್ಮನೇ ಮೊದಲಾಗಿರುವ, ರುದ್ರನನ್ನೂ ಒಳಗೊಂಡಿರುವ, ದೇವತೆಗಳಿಂದಲೂ, ಮನುಷ್ಯರೂ, ದೈತ್ಯರೂ ಮೊದಲಾದವರಿಂದಲೂ ಕೂಡಿರುವ ಬ್ರಹ್ಮಾಂಡವನ್ನು  ಶ್ರೀಕೃಷ್ಣನ ಬಾಯಿಯಲ್ಲಿ ಕಂಡಳು. 

ನ್ಯಮೀಲಯಚ್ಚಾಕ್ಷಿಣೀ ಭೀತಭೀತಾ ಜುಗೂಹ ಚಾsತ್ಮಾನಮಥೋ ರಮೇಶಃ ।
ವಪುಃ ಸ್ವಕೀಯಂ ಸುಖಚಿತ್ಸ್ವರೂಪಂ ಪೂರ್ಣ್ಣಂ ಸತ್ಸು ಜ್ಞಾಪಯಂಸ್ತದ್ಧ್ಯದರ್ಶಯತ್ ೧೨.೧೧೫

ಶ್ರೀಕೃಷ್ಣನ ಬಾಯಲ್ಲಿ ಬ್ರಹ್ಮಾಂಡವನ್ನು ಕಂಡು ಅತ್ಯಂತ  ಭಯಭೀತಳಾದ ಯಶೋದೆ ತನ್ನ ಕಣ್ಣುಗಳನ್ನು ಮುಚ್ಚಿಕೊಂಡಳು. ಆಗ ಶ್ರೀಕೃಷ್ಣನು ತಾಯಿಗೆ ತೋರಿದ ತನ್ನ ಸ್ವರೂಪವನ್ನು ಮುಚ್ಚಿಕೊಂಡನು.
ಸುಖ-ಜ್ಞಾನಗಳೇ ಮೈದಾಳಿರುವ ತನ್ನ ದೇಹವು ಸದಾ ಪೂರ್ಣವೇ ಎಂದು ಸಜ್ಜನರಿಗೆ ತಿಳಿಸಿಕೊಡುವವನಾಗಿ ಶ್ರೀಕೃಷ್ಣ ತಾಯಿಗೆ ತನ್ನ ವ್ಯಾಪ್ತರೂಪವನ್ನು ಈರೀತಿ ತೋರಿದ.

No comments:

Post a Comment