ನಿತ್ಯೈವ ಯಾ ಪ್ರಕೃತಿಃ
ಸ್ವೇಚ್ಛಯೈವ ಜಗಚ್ಛಿಕ್ಷಾರ್ತ್ಥಂ ದ್ವಾದಶೀಂ ಭೀಮಸಞ್ಜ್ಞಾಮ್ ।
ಉಪೋಷ್ಯ ಬಭ್ರೇ
ಕೋಟಿಧಾರಾಜಲಸ್ಯ ವಿಷ್ಣೋಃ ಪ್ರೀತ್ಯರ್ತ್ಥಂ ಸೈವ ಹಿ ಸತ್ಯಭಾಮಾ ॥೨೦.೮೮॥
ಯಾವ ಸತ್ಯಭಾಮೆಯು ನಿತ್ಯಳಾಗಿರುವ ಪ್ರಕೃತಿಮಾನಿನಿಯೋ, ಅವಳು ತನ್ನ
ಇಚ್ಛೆಯಿಂದಲೇ, ಜಗತ್ತಿಗೆ ಶಿಕ್ಷಣ ಕೊಡುವುದಕ್ಕಾಗಿ, ವಿಷ್ಣುಪ್ರೀತ್ಯರ್ಥವಾಗಿ, ಭೀಮ ಎಂಬ ಹೆಸರಿನ ದ್ವಾದಶಿಯನ್ನು ಉಪವಾಸಮಾಡಿ(ದ್ವಾದಶಿಯಲ್ಲಿನ ವ್ರತದ
ಅಂಗವಾಗಿ ಏಕಾದಶಿ ಉಪವಾಸಮಾಡಿ), ಕೋಟಿಧಾರಾ ಜಲವ್ರತವನ್ನು ಕೈಗೊಂಡಳು.
[ಯಾವುದು ಈ ಭೀಮ-ಏಕಾದಶಿ? ಬೇರೆಬೇರೆ ಪುರಾಣಗಳಲ್ಲಿ ಈ ವ್ರತದ
ಕುರಿತು ಮತ್ತು ಅದರ ವಿಧಾನವನ್ನು ಕುರಿತು ಹೇಳಿರುವುದನ್ನು ನಾವು ಕಾಣುತ್ತೇವೆ. ಅಗ್ನಿಪುರಾಣದಲ್ಲಿ
ಹೇಳುವಂತೆ : ಮಾಘಶುಕ್ಲೇ ತು ದ್ವಾದಶ್ಯಾಂ
ಭೀಮದ್ವಾದಶಿಕವ್ರತಿ । ನಮೋ ನಾರಾಯಣಾಯೇತಿ ವ್ರಜೇದ್
ವಿಷ್ಣುಂ ಸ ಸರ್ವಭಾಕ್’ (ಅ.ಪು. ೧೮೮.೩)
ಮಾಘಶುಕ್ಲ ದ್ವಾದಶಿಯನ್ನು ಭೀಮ ದ್ವಾದಶಿ ಎಂದು ಕರೆಯುತ್ತಾರೆ. ಪಾದ್ಮಪುರಾಣದಲ್ಲಿ- ‘ಭವಿತಾ ಸ ತದಾ ಬ್ರಹ್ಮನ್ ಕರ್ತಾ ಚೈವ
ವೃಕೋದರಃ । ಪ್ರವರ್ತಕೋsಸ್ಯ ಧರ್ಮಸ್ಯ ಪಾಣ್ಡುಸೂನುರ್ಮಹಾಬಲಃ’ (ಸೃಷ್ಟಿಖಂಡ ೨೩.೧೪), ಇದನ್ನು ಹೀಗೆ ಪ್ರವೃತ್ತಿ ಮಾಡಿದ್ದು (ಹೀಗೆ ಮಾಡಬೇಕು
ಎಂದು ನಿಯಮ ರೂಪಿಸಿದ್ದು) ಭೀಮಸೇನ. ಅದರಿಂದಾಗಿ ಅದಕ್ಕೆ ಭೀಮ-ಏಕಾದಶಿ ಎನ್ನುತ್ತಾರೆ, ತಸ್ಮಾತ್
ತ್ವಂ ಸತ್ವಮಾಲಮ್ಬ್ಯ ಭೀಮಸೇನ ವಿಮತ್ಸರಃ । ಕುರು ವ್ರತಮಿದಂ ಸಮ್ಯಕ್ ಸ್ನೇಹಾದ್ ಗುಹ್ಯಂ ಮಯೋದಿತಮ್ । ತ್ವಯಾ ಕೃತಮಿದಂ ವೀರ ತ್ವನ್ನಾಮ್ನಾ ಚ
ಭವಿಷ್ಯತಿ । ಸಾ ಭೀಮದ್ವಾದಶೀ ಹ್ಯೇಷಾ ಸರ್ವಪಾಪಹರಾ ಶುಭಾ । ಯಾ ತು ಕಲ್ಯಾಣಿನೀ ನಾಮ ಪೂರ್ವಕಲ್ಪೇಷು ಪಠ್ಯತೇ’ (ಸೃಷ್ಟಿಖಂಡ ೨೩.೬೨-೬೪)
ಭೀಮನಿಗೆ ಇದನ್ನು ಅವನ ಹಿರಿಯರು ಉಪದೇಶ ಮಾಡಿದ್ದು,
ಭೀಮ ಅದರಂತೆ ನಡೆದುಕೊಂಡನಂತೆ. ಇದೇ ವಿವರಣೆಯನ್ನು ನಾವು ಮತ್ಸ್ಯಪುರಾಣದಲ್ಲೂ(೬೯.೧೩;
೫೬-೫೭) ಕಾಣಬಹುದು. ಪಾದ್ಮಪುರಾಣದಲ್ಲಿ(೨೩.೩೯-೪೦) ಮತ್ತು ಮತ್ಸ್ಯಪುರಾಣದಲ್ಲಿ(೬೯.೩೭-೩೮) ಈ ವ್ರತದ
ಕ್ರಮವನ್ನು ಹೇಳಿದ್ದಾರೆ: ‘ಮಧ್ಯೇ ಚ ಕಲಶಂ ತತ್ರ ಮಾಷಮಾತ್ರೇಣ ಸಂಯುತಮ್ । ಛಿದ್ರೇಣ ಜಲಸಮ್ಪೂರ್ಣಾಮಧಃಕೃಷ್ಣಾಜಿನೇ ಸ್ಥಿತಃ । ತಸ್ಯ ಧಾರಾಂ ಚ ಶಿರಸಾ ಧಾರಾಯೇತ್ ಸಕಲಾಂ ನಿಶಾಮ್ । ಧಾರಾಭಿರ್ಭೂರಿಭಿರ್ಭೂರಿ ಫಲಂ
ವೇದವಿದೋ ವಿದುಃ’ ಒಂದು ದೊಡ್ಡ ಕಲಶ, ಅದರಲ್ಲಿ ಒಂದು ಉದ್ದಿನ ಕಾಳಿನಷ್ಟು ತೂತುಮಾಡಿ ಅದರ ತುಂಬಾ
ನೀರು ತುಂಬಿ, ಅದರ ಕೆಳಗೆ ನಿಂತು ನೆನೆಯುತ್ತಾ ದೇವರನ್ನು ಸ್ಮರಣೆಮಾಡುವುದು. ತದನಂತರ
ಬ್ರಾಹ್ಮಣರಿಗೆ ದಾನ. ಇದನ್ನು ಕೋಟಿಧಾರಾ ವ್ರತ
ಎಂದು ಕರೆಯುತ್ತಾರೆ. ಹರಿವಂಶದಲ್ಲಿ ಹೀಗೆ ಹೇಳಿದ್ದಾರೆ: ‘ಸ್ನಾತ್ವಾ ಸ್ತ್ರೀ ಪ್ರಾತರುತ್ಥಾಯ
ಪತಿಂ ವಿಜ್ಞಾಪಯೇತ್ ಸತೀ । ಉಪವಾಸಾರ್ಥಮಥ ವಾ ವ್ರತಕಾರ್ಯಂ ಧೃತವ್ರತೇ । ಶ್ವಶುರಾಭ್ಯಾಂ ಚ ಚರಣೌ
ಸತತಂ ಸತ್ತಮಸ್ಯ ಚ । ಗೃಹೀತ್ವೌದುಮ್ಬರಂ ಪಾತ್ರಂ ಸಕುಶಂ ಸಾಕ್ಷತಂ ತಥಾ । ಗೋಶೃಙ್ಗಂ ದಕ್ಷಿಣಂ
ಸಿಚ್ಯ ಪ್ರತಿಗೃಹ್ಣೀತ ತಜ್ಜಲಮ್ । ತತೋ ಭರ್ತುಃ ಸತೀ ದದ್ಯಾತ್ ಸ್ನಾತಸ್ಯ ಪ್ರಯತಸ್ಯ ಚ । ಆತ್ಮನೋsಪಿ
ನಿಷೇಕ್ತವ್ಯಂ ತತಃ ಶಿರಸಿ ತಜ್ಜಲಮ್ । ತ್ರೈಲೋಕ್ಯೇ
ಸರ್ವತೀರ್ಥೇಷು ಸ್ನಾನಮೇತದುದಾಹೃತಮ್’ (ವಿಷ್ಣುಪರ್ವಣಿ
೭೮.೧೯-೨೨) ಬೆಳಿಗ್ಗೆ ಎದ್ದು, ಸ್ನಾನಮಾಡಿ, ಗಂಡನಿಂದ ಮತ್ತು ಎಲ್ಲಾ
ಹಿರಿಯರಿಂದ ಅನುಜ್ಞೆಯನ್ನು ಪಡೆದುಕೊಳ್ಳುವುದು. ‘ನಾನು ಉಪವಾಸ ಮಾಡಬೇಕೆಂದಿದ್ದೇನೆ, ಅದಕ್ಕೆ
ತಾವೆಲ್ಲರೂ ಅನುಜ್ಞೆ ಕೊಡಿ ಎಂದು. ಅನುಜ್ಞೆ ಪಡೆದಮೇಲೆ, ತನ್ನ ಗಂಡನ
ಜೊತೆಗೆ ಈ ಹಿಂದೆ ಹೇಳಿದ ರೀತಿಯಲ್ಲಿ ಸ್ನಾನವನ್ನು ಮಾಡುವುದು. ಆಮೇಲೆ ಮರುದಿನ ವಿಶೇಷವಾಗಿ
ಬ್ರಾಹ್ಮಣರಿಗೆ ದಾನ ಮಾಡುವುದು. ಇದು ಪದ್ಧತಿ. ಇದನ್ನು ಸತ್ಯಭಾಮೆ ಮಾಡಿದಳು. ಈ ವ್ರತದಿಂದ ಏನು ಪ್ರಯೋಜನ ಎನ್ನುವ ವಿವರಣೆ
ಹರಿವಂಶದಲ್ಲಿ ಹೀಗಿದೆ: ಸಪತ್ನೀನಾಮಧಿ ನಿತ್ಯಂ ಭವೇಯಂ ಸಪುತ್ರಾ ಸ್ಯಾಂ ಸುಭಗಾ ಚಾರುರೂಪಾ ।
ಸಮ್ಪನ್ನಹಸ್ತಾ ಗುಣವಾದಿನೀ ಚ ಸರ್ವಾತ್ಮನಾ
ಸ್ಯಾಂ ಮಾ ದರಿದ್ರಾ ಭವೇಯಮ್’ (ವಿಷ್ಣುಪರ್ವಣಿ ೭೯.೧೨) ಎಲ್ಲಾ ಸವತಿಯರ ಮೇಲ್ಗಡೆ
ನಾನು ಇರುವಂತವಳಾಗಬೇಕು. ಒಳ್ಳೆಯ ಮಗ ನನಗೆ ಸಿಗಬೇಕು. ಯಾವಾಗಲೂ ಸಂಪತ್ತಿನಿಂದ ಇರಬೇಕು.
ಗುಣವನ್ನು ಗ್ರಹಿಸುವಂತೆ ಆಗಬೇಕು. ನಾನು ಖಂಡಿತಾ ದರಿದ್ರಳಾಗಬಾರದು. ಇದು ದರ್ಶನ ಭಾಷೆ. ಇದಕ್ಕೆ
ಆಚಾರ್ಯರು ನಿರ್ಣಯ ನೀಡುತ್ತಾ, ‘ಜಗತ್ತಿಗೆ ಶಿಕ್ಷಣ ಕೊಡುವುದಕ್ಕಾಗಿ ಸತ್ಯಭಾಮೆಯು, ವಿಷ್ಣುವಿನ ಪ್ರೀತಿಗಾಗಿ,
ಭೀಮ ಎಂಬ ಹೆಸರಿನ ದ್ವಾದಶಿಯನ್ನು ಉಪವಾಸಮಾಡಿ, ಕೋಟಿಧಾರಾ
ಜಲವ್ರತವನ್ನು ಕೈಗೊಂಡಳು’ ಎಂದು ಹೇಳಿದ್ದಾರೆ].
ತಯಾ ಯುಕ್ತೋ
ಗರುಡಸ್ಕನ್ಧಸಂಸ್ಥೋ ದೂರಾನುಯಾತೋ ವಜ್ರಭೃತಾsಪ್ಯನುಜ್ಞಾಮ್ ।
ದತ್ವಾsಮುಷ್ಮೈ ಪ್ರಯಯೌ
ವಾಯುಜುಷ್ಟಾಮಾಶಾಂ ಕೃಷ್ಣೋ ಭೌಮವಧೇ ಧೃತಾತ್ಮಾ ॥೨೦.೮೯॥
ಸತ್ಯಭಾಮೆಯ ಸಹಿತನಾದ ಶ್ರೀಕೃಷ್ಣನು ಗರುಡನ ಹೆಗಲೇರಿ, ವಜ್ರಧಾರಿ ಇಂದ್ರನಿಂದ ಬಹಳ ದೂರದ ತನಕ ಅನುಸರಿಸಲ್ಪಟ್ಟವನಾಗಿ, ತದನಂತರ ಇಂದ್ರನಿಗೆ ಅವನ
ಲೋಕಕ್ಕೆ ಹೋಗಲು ಅನುಜ್ಞೆಯನ್ನು ನೀಡಿ, ನರಕಾಸುರನನ್ನು ಕೊಲ್ಲಲೆಂದು
ವಾಯುವ್ಯದಿಕ್ಕಿಗೆ ತೆರಳಿದನು.
ಭೌಮೋ ಹ್ಯಾಸೀದ್
ಬ್ರಹ್ಮವರಾದವದ್ಧ್ಯೋ ನ ಶಸ್ತ್ರಭೃಜ್ಜೀಯಸ ಇತ್ಯಮುಷ್ಮೈ ।
ದತ್ತೋ ವರೋ ಬ್ರಹ್ಮಣಾ
ತದ್ವದೇವ ತಸ್ಯಾಮಾತ್ಯಾನಾಂ ತದ್ವದವದ್ಧ್ಯತಾ ಚ ॥೨೦.೯೦॥
ನರಕಾಸುರನು ಬ್ರಹ್ಮವರದಿಂದ ಅವಧ್ಯನಾಗಿದ್ದನು. ಶಸ್ತ್ರಧಾರಿಯಾದ
ನೀನು ಎಂದೂ ಸೋಲುವುದಿಲ್ಲ ಎಂದು ಅವನಿಗಾಗಿ ಬ್ರಹ್ಮನಿಂದ ವರವು ಕೊಡಲ್ಪಟ್ಟಿತ್ತು. ಅಂತೆಯೇ ಅವನ
ಅಮಾತ್ಯರಿಗೂ ಕೂಡಾ ಅವಧ್ಯತ್ವದ ವರವಿತ್ತು.
[ಅವನ ಅಮಾತ್ಯರು ಯಾರು ಎನ್ನುವುದನ್ನು ಹರಿವಂಶದಿಂದ
ತಿಳಿಯಬಹುದು. ‘ಹಯಗ್ರೀವೋ ನಿಸುಮ್ಭಶ್ಚ ಪೀಠಃ ಪಞ್ಚಜನಸ್ತಥಾ । ಮುರಃ ಪುತ್ರಸಹಸ್ರೈಶ್ಚ ವರಮತ್ತೋsಸುರೋ ಮಹಾನ್’ (ವಿಷ್ಣುಪರ್ವಣಿ
೬೩.೧೮) ಈ ಎಲ್ಲರೂ ಬ್ರಹ್ಮನ ವರಮತ್ತರಾಗಿದ್ದರು ಎಂದಿದೆ ಹರಿವಂಶ. ಇಲ್ಲಿ ಮುರನಿಗೆ ಸಾವಿರ
ಮಕ್ಕಳಿದ್ದರು ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಾಗವತದಲ್ಲಿ ‘ಧ್ರುವಶ್ಚರಿಷ್ಣುಃ ಶ್ರವಣೋ
ವಿಭಾವಸುರ್ನಭೋ ವಸುಶ್ಚಾನರಣಶ್ಚ ಸಪ್ತಮಃ’(೧೦.೬೩.೧೬) ಎಂದು ಏಳು ಮಕ್ಕಳು ಎಂದಿದ್ದಾರೆ.
ಆದ್ದರಿಂದ ಮೇಲೆ ಹೇಳಿದ ‘ಸಹಸ್ರ’ ಎಂದರೆ ಸಹ-ಸರಂತಿ. ಯಾವಾಗಲೂ ಅಪ್ಪನ ಜೊತೆಜೊತೆಗೇ ಇರುವವರು
ಎಂದರ್ಥ. ಸಹಸಾ-ರಾಂತಿ ಗಚ್ಛಂತಿ – ಏಳೂ ಜನರೂ ಜೊತೆಜೊತೆಗೇ
ಯುದ್ಧಕ್ಕೆ ಹೋಗುತ್ತಾರೆ ಎನ್ನುವ ಅರ್ಥದಲ್ಲಿ ಸಹಸ್ರ ಎಂದು ಹೇಳಿದ್ದಾರೆ. ವಸ್ತುತಃ ಅವರು ಏಳು ಮಂದಿ.]
(ಸಮಾನಬಲವುಳ್ಳವರು ಯಾವತ್ತೂ ಪರಸ್ಪರ ಸ್ನೇಹದಿಂದ ಇರುವುದು
ಸಾತ್ವಿಕರಲ್ಲೇ ಇರುವುದು ಕಷ್ಟ. ಹೀಗಿರುವಾಗ ತಾಮಸಾಗ್ರಗಣ್ಯರಾದ, ಅವಧ್ಯತ್ವದ ವರವನ್ನು
ಹೊಂದಿದ್ದ ಈ ಅಮಾತ್ಯರೆಲ್ಲರೂ ಒಟ್ಟಿಗೇ ನರಕಾಸುರನ ಅಧೀನದಲ್ಲಿ ಹೇಗಿದ್ದರು ಎಂದರೆ:)
ಭೌಮೇನ ಜಯ್ಯತ್ವಮಪಿ
ಹ್ಯಮೀಷಾಂ ದತ್ತಂ ಭೌಮಾಯ ಬ್ರಹ್ಮಣಾ ಕ್ರೋಡರೂಪಾತ್ ।
ವಿಷ್ಣೋರ್ಜ್ಜಾತಾಯಾಸ್ಯ
ದುರ್ಗ್ಗಂ ಚ ದತ್ತಂ ಪ್ರಾಗ್ಜ್ಯೋತಿಷಂ ನಾಮ ಪುರಂ ಸಮಸ್ತೈಃ ॥೨೦.೯೧ ॥
ಅಮಾತ್ಯರಿಗೆ ನರಕಾಸುರನಿಂದ ಸೋಲಿಸುವಿಕೆಯ ವರವು
ಬ್ರಹ್ಮದೇವರಿಂದ ಕೊಡಲ್ಪಟ್ಟಿತ್ತು. (ಬೇರೆಯವರಿಂದ ಅವರು ಅವಧ್ಯರಾದರೂ ಕೂಡಾ, ನರಕಾಸುರ ಅವರನ್ನು
ಗೆಲ್ಲಬಹುದಾಗಿತ್ತು. ಹಾಗಾಗಿ ಅವರು ನರಕಾಸುರನ ದಾಸರಾಗಿದ್ದರು). ವರಾಹರೂಪಿಯಾದ ವಿಷ್ಣುವಿನಿಂದ
ಹುಟ್ಟಿರುವ ಈ ನರಕನಿಗೆ ಯಾರಿಂದಲೂ ಹೋಗಲು ಅಸಾಧ್ಯವಾಗಿರುವ
ಪ್ರಾಗ್ಜ್ಯೋತಿಷ(ಅಸಾಮ್ ಪ್ರಾಂತ್ಯ) ಎನ್ನುವ ಪಟ್ಟಣವು ಕೊಡಲ್ಪಟ್ಟಿತ್ತು.
ಆಸೀದ್ ಬಾಹ್ಯೇ ಗಿರಿದುರ್ಗ್ಗಂ ತದನ್ತಃ ಪಾನೀಯದುರ್ಗ್ಗಂ ಮೌರವಂ ಪಾಶದುರ್ಗ್ಗಮ್ ।
ತಸ್ಯಾಪ್ಯನ್ತಃ ಕ್ಷುರಧಾರೋಪಮಂ ತತ್ಪಾಶಾಶ್ಚ ತೇ ಷಟ್ಸಹಸ್ರಾಶ್ಚ ಘೋರಾಃ ॥೨೦.೯೨॥
ಪಟ್ಟಣದ ಹೊರಭಾಗದಲ್ಲಿ ಭೇದಿಸಲು ಅಸಾಧ್ಯವಾದ ಬೆಟ್ಟವಿತ್ತು(ಗಿರಿದುರ್ಗ). ಅದರ ಒಳಭಾಗದಲ್ಲಿ
ಜಲದುರ್ಗ(ನೀರು) ಇತ್ತು. ನಂತರ ಮುರನಿಂದ ನಿರ್ಮಿಸಲ್ಪಟ್ಟ ಭಯಂಕರವಾದ, ಖಡ್ಗದ ಅಲುಗಿನಿಂತೆ ಹರಿತವಾದ
ಆರುಸಾವಿರ ಪಾಶಗಳಿದ್ದವು.
[ಈ ಕುರಿತು ಮಹಾಭಾರತದ ಸಭಾಪರ್ವದಲ್ಲಿ(೫೫.೨೮) ಹೀಗೆ ಹೇಳಿದ್ದಾರೆ: ‘ಕ್ಷುರಾನ್ತಾನ್ ಮೌರವಾನ್ ಪಾಶಾನ್ ಷಟ್ಸಹಸ್ರಂ ದದರ್ಶ
ಸಃ’]
ಅಭೇದ್ಯತ್ವಮರಿಭಿರತಾರ್ಯ್ಯತಾ
ಚ ದತ್ತಾ ದುರ್ಗ್ಗಾಣಾಂ ಬ್ರಹ್ಮಣಾssರಾಧಿತೇನ ।
ತಸ್ಯಾಮಾತ್ಯಾಃ
ಪೀಠಮುರೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ಶೂರಾಃ ॥೨೦.೯೩॥
ಬ್ರಹ್ಮನನ್ನು ಆರಾಧನೆ ಮಾಡಿದ್ದರಿಂದ ನರಕನಿಗೆ ಈ ದುರ್ಗಗಳನ್ನು ಶತ್ರುಗಳು ದಾಟದಂತೆ ಅಭೇದಿತ್ಯದ ವರವಿತ್ತು. ಅವನ ಮಂತ್ರಿಗಳು ಪೀಠ, ಮುರ, ನಿಸುಮ್ಭ, ಹಯಗ್ರೀವ ಮತ್ತು ಪಞ್ಚಜನ ಎನ್ನುವ ಐವರು ಶೂರರಿದ್ದರು.
ಸಙ್ಕಲ್ಪ್ಯ ತಾನ್ ಲೋಕಪಾಲಾನಹಂ ಚ ಬ್ರಹ್ಮೇತ್ಯದ್ಧಾ ಭಾಷಮಾಣಃ ಸ ಆಸ್ತೇ ।
ಹನ್ತುಂ ಕೃಷ್ಣೋ ನರಕಂ ತತ್ರ ಗತ್ವಾ ಗಿರಿದುರ್ಗ್ಗಂ ಗದಯಾ ನಿರ್ಬಿಭೇದ ॥೨೦.೯೪॥
ಆ ಐವರನ್ನು ನರಕಾಸುರನು ಲೋಕಪಾಲಕರನ್ನಾಗಿ ಸಂಕಲ್ಪಿಸಿ, ತಾನು ‘ಬ್ರಹ್ಮ’
ಎಂದು ದರ್ಪದಿಂದ ನಿರಂತರವಾಗಿ ಹೇಳಿಕೊಳ್ಳುತ್ತಿದ್ದ. ಇಂತಹ ನರಕನನ್ನು ಕೊಲ್ಲಲು ಕೃಷ್ಣನು
ಅಲ್ಲಿಗೆ ತೆರಳಿ ಗದೆಯಿಂದ ಗಿರಿದುರ್ಗವನ್ನು ಒಡೆದುಹಾಕಿದನು.
ವಾಯವ್ಯಾಸ್ತ್ರೇಣೋದಕಂ
ಶೋಷಯಿತ್ವಾ ಚಕರ್ತ್ತ ಖಡ್ಗೇನ ಮುರಸ್ಯ ಪಾಶಾನ್ ।
ಅಥಾಭಿಪೇತುರ್ಮ್ಮುರಪೀಠೌ
ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ದೈತ್ಯಾಃ ॥೨೦.೯೫ ॥
ವಾಯುವ್ಯಾಸ್ತ್ರದಿಂದ ನೀರನ್ನು ಒಣಗಿಸಿ, ಖಡ್ಗದಿಂದ ಮುರನ ಕತ್ತಿಯ ಅಲುಗಿನಂತೆ ಇರುವ
ಪಾಶಗಳನ್ನು ಶ್ರೀಕೃಷ್ಣ ಕತ್ತರಿಸಿದ. ತದನಂತರ ಮುರ, ಪೀಠ, ನಿಸುಮ್ಭ, ಹಯಗ್ರೀವ ಮತ್ತು ಪಞ್ಚಜನ ಎನ್ನುವ ಆ ಐದುಜನ ದೈತ್ಯರು ಕಾದಲೆಂದು ಕೃಷ್ಣನನ್ನು ಎದುರುಗೊಂಡರು.
ತಾಞ್ಛೈಲಶಸ್ತ್ರಾಸ್ತ್ರಶಿಲಾಭಿವರ್ಷಿಣಶ್ಚಕ್ರೇ
ವ್ಯಸೂಂಶ್ಚಕ್ರನಿಕೃತ್ತಕನ್ಧರಾನ್ ।
ತೇಷಾಂ ಸುತಾಃ ಸಪ್ತಸಪ್ತೋರುವೀರ್ಯ್ಯಾ ವರಾದವದ್ಧ್ಯಾ ಗಿರಿಶಸ್ಯಾಭಿಪೇತುಃ ॥೨೦.೯೬ ॥
ಪರ್ವತಗಳು, ಶಸ್ತ್ರಗಳು, ಅಸ್ತ್ರಗಳು ಮತ್ತು ಬಂಡೆಕಲ್ಲುಗಳನ್ನು ತೂರುತ್ತಾ ಬರುತ್ತಿರುವ ಅವರನ್ನು ಶ್ರೀಕೃಷ್ಣ ಚಕ್ರದಿಂದ
ಕತ್ತು ಕತ್ತರಿಸಿ, ಪ್ರಾಣಹೀನರನ್ನಾಗಿಮಾಡಿದ. ಆಗ ಅವರೆಲ್ಲರ ಮಕ್ಕಳು
ಏಳೇಳುಜನ ಸದಾಶಿವನ ವರದಿಂದ ಅವಧ್ಯರಾದವರು ಯುದ್ಧಕ್ಕಾಗಿ ಬಂದರು.
[ಮಹಾಭಾರತದ ಸಭಾಪರ್ವದಲ್ಲಿ ಈ ಕುರಿತು ಹೇಳಿದ್ದಾರೆ: ಸಞ್ಛಿದ್ಯ ಪಾಶಾಞ್ಛರೇಣ ಮುರಂ ಹತ್ವಾ ಸಹಾನ್ವಯಮ್ । ಶೈಲಸಙ್ಘಾನತಿಕ್ರಮ್ಯ ನಿಸುಮ್ಭಂ ಚ
ವ್ಯಪೋಥಯತ್ । ಯಃ ಸಹಸ್ರಸಹಸ್ತ್ವೇಕಃ ಸರ್ವಾನ್ ದೇವಾನಪೋಥಯತ್ । ತಂ ಜಘಾನ ಮಹಾವೀರ್ಯಂ ಹಯಗ್ರೀವಂ
ಮಹಾಬಲಮ್ । ಅಪಾರತೇಜಾ ದುರ್ಧರ್ಷಃ ಸರ್ವಯಾದವನನ್ದನಃ । ಮಧ್ಯೇ ಲೋಹಿತಗಙ್ಗಾಯಾಂ ಭಗವಾನ್ ದೇವಕೀಸುತಃ । ಔದಕಾಯಾಂ
ವಿರೂಪಾಕ್ಷಂ ಜಘಾನ ಮಧುಸೂದನಃ’ (೫೫.೨೯-೩೨). ಇಲ್ಲಿ
‘ವಿರೂಪಾಕ್ಷ’ ಎಂದರೆ ‘ಪಞ್ಚಜನ’ (ನಾಮಾಂತರ). ]
ತಾನಸ್ತ್ರಶಸ್ತ್ರಾಭಿಮುಚಃ
ಶರೋತ್ತಮೈಃ ಸಮರ್ಪ್ಪಯಾಮಾಸ ಸ ಮೃತ್ಯವೇsಚ್ಯುತಃ ।
ಹತ್ವಾ ಪಞ್ಚತ್ರಿಂಶತೋ
ಮನ್ತ್ರಿಪುತ್ರಾನ್ ಜಗಾಮ ಭೌಮಸ್ಯ ಸಕಾಶಮಾಶು ॥೨೦.೯೭॥
ಅಸ್ತ್ರ-ಶಸ್ತ್ರಗಳನ್ನು ಬಿಡತಕ್ಕ ಆ ಮೂವತ್ತೈದು
ಅಮಾತ್ಯಪುತ್ರರನ್ನು ತನ್ನ ಶ್ರೇಷ್ಠವಾದ ಬಾಣಗಳಿಂದ ಕೊಂದ ಶ್ರೀಕೃಷ್ಣ, ನರಕಾಸುರನ ಸಮೀಪಕ್ಕೆ ವೇಗವಾಗಿ ತೆರಳಿದನು.