ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 13, 2020

Mahabharata Tatparya Nirnaya Kannada 2067_2071

ಕೂರ್ಮ್ಮೋ ದೃಷ್ಟೋ ವಿಷ್ಣುಪದ್ಯಾಂ ಮಯೋಕ್ತಸ್ತ್ವಮುತ್ತಮೋ ನಾಸ್ತಿ ಸಮಸ್ತವೇತಿ ।

ಊಚೇ ಗಙ್ಗಾಮುತ್ತಮಾಂ ಸಾ ಜಲೇಶಮುಮಾಮೂಚೇ ಪೃಥಿವೀನಾಮಿಕಾಂ ಸಃ ॥೨೦.೬೭॥

 

ಯಾ ಮಾದೃಶಾ ದೇವತಾಃ ಸರ್ವಶಸ್ತಾ ಧೃತಾಸ್ತಯಾ ಪ್ರಥಿತತ್ವಾತ್ ಪೃಥಿವ್ಯಾ ।

ಶಿವಂ ಶೇಷಂ ಗರುಡಂ ಚಾsಹ ಸಾsಪಿ ಪರವಾನಾತ್ ಪರ್ವತನಾಮಧೇಯಾನ್ ॥೨೦.೬೮॥

  

ತೈರೇವಾಹಂ ಮತ್ಸಮಾಶ್ಚೈವ ದೇವ್ಯೋ ಧ್ರಿಯನ್ತ ಇತ್ಯೇವ ತ ಊಚಿರೇsಥ ।

ಬ್ರಹ್ಮಾಣಮೇವೋತ್ತಮಮಾಹ ಸೋsಪಿ ವೇದಾತ್ಮಿಕಾಂ ಪ್ರಕೃತಿಂ ವಿಷ್ಣುಪತ್ನೀಮ್ ॥೨೦.೬೯॥

 

ಸೈಕಾ ದೇವೀ ಬಹುರೂಪಾ ಬಭಾಷೇ ಯುಕ್ತಾ ಯದಾsಹಂ ಜ್ಞೇನ ನಾರಾಯಣೇನ ।

ಯಜ್ಞಕ್ರಿಯಾಮಾನಿನೀ ಯಜ್ಞನಾಮ್ನೀ ತದೋತ್ತಮಾ ತತ್ಪ್ರವೇಶಾತ್ ತದಾಖ್ಯಾ ॥೨೦.೭೦॥

 

ನಾರದರು ಆ ಎಲ್ಲಾ ಅರಸರನ್ನು ಕುರಿತು ಹೇಳುತ್ತಾರೆ: “ನನ್ನಿಂದ ಗಂಗೆಯಲ್ಲಿ ದೊಡ್ಡ ಕೂರ್ಮವೊಂದು ಕಾಣಲ್ಪಟ್ಟಿತು. (ನಾನು ಒಂದು ದೊಡ್ಡ ಕೂರ್ಮವನ್ನು ಗಂಗೆಯಲ್ಲಿ ಕಂಡೆ). ನಾನು ಕೂರ್ಮನನ್ನು ಕುರಿತು ‘ನೀನು ಉತ್ಕೃಷ್ಟನಾಗಿದ್ದೀಯ. ನಿನಗೆ ಸಮರಿಲ್ಲ’ ಎಂದೆ. ಆಗ ಆ ಕೂರ್ಮವು ‘ಗಂಗೆಯನ್ನು ಉತ್ತಮ’ ಎಂದ. ಗಂಗೆಯು ಸಮುದ್ರ (ವರುಣ) ದೊಡ್ಡವನೆಂದರೆ, ವರುಣನು ಪೃಥಿವೀ ನಾಮಕ ಉಮಾ ಉತ್ತಮಳೆಂದ. ‘ನನ್ನಂತೆ ಇರುವ ದೇವತೆಗಳು ಎಲ್ಲಾ ರೀತಿಯಿಂದ ಅವಳಿಂದ ಧರಿಸಲ್ಪಟ್ಟಿದ್ದಾರೆ. ಎಲ್ಲೆಡೆ ವ್ಯಾಪ್ತವಾಗಿರುವುದರಿಂದ ‘ಪೃಥಿವೀ’ ಎನ್ನುವ ಹೆಸರು ಅವಳಿಗೆ’ ಎಂದ ವರುಣ. ಪೃಥಿವೀ(ಉಮಾದೇವಿ)  ತನಗಿಂತ ಉತ್ತಮರಾದವರು ಶಿವ, ಶೇಷ, ಗರುಡ ಇದ್ದಾರೆ ಎಂದಳು. ಅತ್ಯುತ್ಕೃಷ್ಟ ಜ್ಞಾನ ಇರುವುದರಿಂದ ಅವಳು 'ಪರ್ವತ' ಎನ್ನುವ ಹೆಸರಿನ ಶಿವ-ಶೇಷ-ಗರುಡನನ್ನು ಕುರಿತು: ‘ಅವರಿಂದ ನಾನು ಮತ್ತು ನನ್ನ ಸಮನಾಗಿರುವ ವಾರುಣೀ ಹಾಗೂ ಸುಪರ್ಣಿಯರು ಧರಿಸಲ್ಪಡುತ್ತಾರೆ’ ಎಂದಳು. ಆಗ ಗರುಡ-ಶೇಷ-ರುದ್ರರು ಹೇಳಿದರು: ‘ಬ್ರಹ್ಮನೇ ಉತ್ತಮ’ ಎಂದು. ಬ್ರಹ್ಮನಾದರೋ, ವೇದದ ಅಭಿಮಾನಿನಿಯಾಗಿರುವ ವಿಷ್ಣುಪತ್ನಿ ಪ್ರಕೃತಿಯನ್ನು ಶ್ರೇಷ್ಠ ಎಂದು ಹೇಳಿದ.

ಅವಳು ಒಬ್ಬಳೇ ಆದರೂ, ಬಹಳರೂಪವುಳ್ಳವಳಾಗಿ ಹೇಳಿದಳು: ‘ಯಾವಾಗ ನಾನು ಸರ್ವಜ್ಞನಾದ ನಾರಾಯಣನಿಂದ ಕೂಡಿಕೊಂಡು ಯಜ್ಞಕ್ರಿಯೆಗೆ ಅಭಿಮಾನಿನಿಯೋ,  ಆಗ ಆ ಪರಮಾತ್ಮನ ಪ್ರವೇಶದಿಂದ ಯಜ್ಞಾ ಎನ್ನುವ ಹೆಸರುಳ್ಳವಳಾಗಿ ಉತ್ಕೃಷ್ಟಳಾಗಿದ್ದೇನೆ. ಹೀಗಾಗಿ ಅವನು ನನಗಿಂತ ಉತ್ತಮ’ ಎಂದು.

  

[ಹರಿವಂಶದಲ್ಲಿ ಈ ಕಥೆಯನ್ನು ಹೇಳಿದ್ದು, ಮೇಲ್ನೋಟಕ್ಕೆ ಅದು ನಮಗೆ ಅರ್ಥವೇ ಆಗುವುದಿಲ್ಲ, ಗೊಂದಲವೆನಿಸುತ್ತದೆ. ನಾರದರು ಒಂದು ಕೂರ್ಮವನ್ನು ಏಕೆ ಉತ್ಕೃಷ್ಟ ಎಂದು ಹೇಳಬೇಕು? ಮಧ್ವಾಚಾರ್ಯರು ಕೇವಲ ‘ಕೂರ್ಮ’ ಎಂದಷ್ಟೇ ಹೇಳಿದ್ದಾರೆ. ಅದಕ್ಕೆ ವೇದಾಂಗತೀರ್ಥರು ‘ಕೂರ್ಮ ಎಂದರೆ ‘ಕರ್ಮಾಭಿಮಾನಿ ದೇವತೆ’ ಎನ್ನುವ ವಿವರಣೆ ನೀಡಿದರು. ‘ಕೂರ್ಮ ಇತಿ ಪುಷ್ಕರ ಉಚ್ಯತ ಇತಿ ಪ್ರಾಚೀನಟೀಕಾ’ ಕೂರ್ಮ ಎಂದರೆ ಪುಷ್ಕರ ಎಂದು ಹೇಳುತ್ತಾರೆ.  ‘ಕೂರ್ಮ ಇತಿ ಬುಧಃ । ಮಾತೃಶಾಪಾತ್ ಕೂರ್ಮೋ  ಜಾತಃ’ ಕೂರ್ಮ ಎಂದರೆ ಬುಧ. ಅವನು ತಾಯಿಯ ಶಾಪದಿಂದ ಕೂರ್ಮನಾಗಿ ಹುಟ್ಟಿದ ಎನ್ನುತ್ತಾರೆ. ಪ್ರಾಚೀನ ಸಮ್ಮತವಾದುದು  ಪುಷ್ಕರ’ ಎನ್ನುವ ಎಲ್ಲಾ ಜೀವರ ‘ಕರ್ಮಾಭಿಮಾನಿ’. ಹೀಗಾಗಿ ಕೂರ್ಮನೇ ಶ್ರೇಷ್ಠವಲ್ಲವೇ. ಅದಕ್ಕಾಗಿ ನಾರದರು ಕೂರ್ಮನನ್ನು ಕುರಿತು ನೀನು ಶ್ರೇಷ್ಠನಲ್ಲವೇ?  ಎಂದು ಕೇಳಿರುತ್ತಾರೆ.

ಇನ್ನು ಗಂಗೆ ನನ್ನಿಂದ ಸಮುದ್ರ ಶ್ರೇಷ್ಠ ಎಂದು ಹೇಳಿರುವುದು. ಇಲ್ಲಿ ಸಮುದ್ರ ಎಂದರೆ ಸಮುದ್ರಕ್ಕೆ ಅಭಿಮಾನಿಯಾಗಿರುವ ವರುಣ ಎಂದರ್ಥ.

ಇನ್ನು ವರುಣ ಪೃಥಿವೀ ಶ್ರೇಷ್ಠ ಎಂದ, ಪೃಥಿವೀ ಎಂದರೆ ಉಮೇ ಎಂದು ಆಚಾರ್ಯರು ಸ್ಪಷ್ಟಪಡಿಸಿದ್ದಾರೆ. ಪಾರ್ವತಿಗೆ ಗುಣವಾಚಕವಾದ ಅನೇಕ ಹೆಸರುಗಳಿವೆ: ಇನ್ದ್ರಾನ್ತಾನ್ ಸರ್ವಾನ್ ದೇವಾನ್ ದಧತೀ ಪ್ರಥತ ಇತಿ ಉಮಾ ಪೃಥಿವೀ । ನ ಕೇವಲಂ ಪೃಥಿವೀ ।  ಯಾನಿ ಪೃಥಿವೀನಾಮಾನಿ ತಾನಿ ಸರ್ವಣ್ಯಪ್ಯುಮಾನಾಮಾನಿ । ಧಾರಣಾದ್ ಧರಾ ಚ ಧರಿತ್ರೀ ಚ ಧರಣೀ ಚ ಧರಿಣೀ । ಭಕ್ತಾಪರಾಧಂ ಕ್ಷಮತ ಇತಿ ಕ್ಷಮಾ ಚ । ಭೂತಿಮತೀತಿ ಭೂಃ । ಜಗದಾಶ್ರಯತ್ವಾತ್  ಕ್ಷಿತಿಃ. ಈ ಹಿನ್ನೆಲೆಯಲ್ಲಿ ಹರಿವಂಶದ ವಿವರಣೆಯನ್ನು ನಾವು ಕಾಣಬೇಕಾಗುತ್ತದೆ:  ಸೋsಹಂ ಸಾಗರವಾಕ್ಯೇನ ಕ್ಷಿತಿಂ ಕ್ಷಿತಿತಳೇ ಸ್ಥಿತಃ ಕೌತೂಹಲಸಮಾವಿಷ್ಟೋ ಹ್ಯಬ್ರುವಂ ಜಗತೋ ಗತಿಮ್ । ಧರಿತ್ರೀ ದೇಹಿನಾಂ ಯೋನೇ ಧನ್ಯಾ ಖಲ್ವಸಿ ಶೋಭನೇ । ಆಶ್ಚರ್ಯಂ ಚಾಪಿ ಭೂತೇಷು ಮಹತ್ಯಾ ಕ್ಷಮಯಾ ಯುತೇ ।  ತೇನ ಖಲ್ವಸಿ ಭೂತಾನಾಂ ಧರಣೀ ಮನುಜಾರಣಿಃ । ಕ್ಷಮಾ ತ್ವತ್ತಃ ಪ್ರಭೂತಂ ಹಿ ಕರ್ಮ ಚಾಮ್ಬರಚಾರಿಣಾಮ್ । ತತೋ ಭೂಃ ಸ್ತುತಿವಾಕ್ಯೇನ ಸಾ ಮಯೋಕ್ತೇನ ತೇಜಿತಾ । ವಿಹಾಯ ಸಹಜಂ ಧೈರ್ಯಂ ಪ್ರತ್ಯಕ್ಷಾ ಮಾಮಭಾಷತ (೪೯-೫೩) ಇಲ್ಲಿ ನಾರದರು ಹೇಳುತ್ತಾರೆ: ‘ಅಂತಹ ನಾನು ಸಮುದ್ರದ ಮಾತಿನಿಂದ ಕ್ಷಿತಿತಳದಲ್ಲಿ ನಿಂತು ಧರಿತ್ರಿಯನ್ನು ಕುರಿತು ಮಾತನಾಡಿದೆ. ‘ಎಲ್ಲವನ್ನೂ ಹೊತ್ತ ಓ ದೇವಿಯೇ, ಮನುಜರೆಂಬ ಬೆಂಕಿಗಳು ಮೂಡಲಿಕ್ಕೆ ಮೂಲಭೂತವಾದ ಕಲ್ಲಿನಂತೆ ಇರುವವಳು ನೀನು(ಕಲ್ಲನ್ನು ತಿಕ್ಕಿ ಬೆಂಕಿಯನ್ನು ಬರಿಸುತ್ತಾರೆ. ಹಾಗೇ ಮನುಜರೆಂಬ ಬೆಂಕಿ ಬರಲು ನೀನು ಕಾರಣ ಎಂಬ ಆಲಂಕಾರಿಕ ಮಾತು) ನೀನೇ ಧನ್ಯಾ, ನೀನೇ ಆಶ್ಚರ್ಯಾ’ ಎಂದು ಸ್ತೋತ್ರ ಮಾಡಿದೆ. ಆಗ ಅವಳು ನನ್ನೆದುರು ಪ್ರತ್ಯಕ್ಷವಾಗಿ ‘ನನಗಿಂತ ಪರ್ವತ ಶ್ರೇಷ್ಠ’ ಎಂದಳು. ‘ಸೋsಹಂ ಧರಣಿವಾಕ್ಯೇನ ಪರ್ವತಾನ್ ಸಮುಪಸ್ಥಿತಃ । ಧನ್ಯಾ ಭವನ್ತೋ ದೃಷ್ಯನ್ತೇ ಬಹ್ವಾಶ್ಚರ್ಯಾಶ್ಚ ಭೂಧರಾಃ । ಕಾಞ್ಚನಸ್ಯಾಗ್ರರತ್ನಸ್ಯ ಧಾತೂನಾಂ ಚ ವಿಶೇಷತಃ’ (೫೫-೫೭) ಅಂತಹ ನಾನು, ಧರಣಿಯ ಮಾತಿನಿಂದ ಪರ್ವತವನ್ನು ಕುರಿತು ತೆರಳಿದೆ.  (ಇಲ್ಲಿ ಪೃಥಿವಿ ಎಂದರೆ ಉಮೇ, ಪರ್ವತ ಎಂದರೆ ಶಿವ-ಶೇಷ ಮತ್ತು ಗರುಡ). ಪರ್ವತಗಳು ‘ಬ್ರಹ್ಮ ಶ್ರೇಷ್ಠ’ ಎಂದವು. ಬ್ರಹ್ಮ ‘ವೇದವೇ ಶ್ರೇಷ್ಠ’ ಎಂದ. (ಇಲ್ಲಿ ವೇದ ಎಂದರೆ- ವೇದಗಳ ಅಭಿಮಾನಿನಿಯಾದ ಲಕ್ಷ್ಮೀದೇವಿ). ಅನೇಕ ರೂಪವನ್ನು ಹೊಂದಿದ  ವೇದ ಯಜ್ಞ ಶ್ರೇಷ್ಠ ಎಂದಿತು. ಇಲ್ಲಿ ಯಜ್ಞ ಎಂದರೆ ಯಜ್ಞಕ್ರಿಯಾಮಾನಿನಿಯಾಗಿರುವ ಲಕ್ಷ್ಮೀದೇವಿ (ಲಕ್ಷ್ಮಿಯ ಇನ್ನೊಂದು ರೂಪ). ಯಜ್ಞ ನನಗಿಂತ ನಾರಾಯಣ ಶ್ರೇಷ್ಠ ಎಂದಿತು. ಹಾಗಾಗಿ ನಾರಾಯಣನ ಬಳಿ ನಾನು ಬಂದೆ”  (ಕೃಷ್ಣನ ಬಳಿ ನಾರದರು ಬಂದರು  ಏಕೆಂದರೆ ನಾರಾಯಣನ ಮೂಲರೂಪ ಮತ್ತು ಅವತಾರ ರೂಪಗಳಲ್ಲಿ ಭೇದವಿಲ್ಲ).  ಆಶ್ಚರ್ಯಶಬ್ದೋ ನಾಸ್ಮಾಸು ಧನ್ಯಶಬ್ದೋsಪಿ ವಾ ಮುನೇ । ಆಶ್ಚರ್ಯಂ ಪರಮಂ ವಿಷ್ಣುಃ ಸ ಹ್ಯಸ್ಮಾಕಂ ಪರಾ ಗತಿಃ(೭೯)  ‘ಆಶ್ಚರ್ಯ’ ಶಬ್ದ ನಮ್ಮಲ್ಲಿ ಅಸಾಧಾರಣವಾಗಿ ಪ್ರವೃತ್ತವಾಗುವುದಿಲ್ಲ. ಪರಮಾಶ್ಚರ್ಯ ಆ ನಾರಾಯಣನೇ ಆಗಿದ್ದಾನೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಈ ಕಥೆ ಅರ್ಥವಾಗಬೇಕಾದರೆ ನಾವು ಇಲ್ಲಿ ಹೇಳಿರುವ ಕೇವಲ ಜಡಪದಾರ್ಥವನ್ನು ತೆಗೆದುಕೊಳ್ಳದೇ, ಅದರೊಳಗೆ ಇರುವ ದೇವತೆಗಳ, ಆ ದೇವತೆಗಳ ಒಳಗಿರುವ ಪರಮಾತ್ಮನ  ಚಿಂತನೆ ಮಾಡಬೇಕು. ಇದು ವೇದದ ಆಯಾಮದಲ್ಲಿ ಹೇಳುವ ಕ್ರಮ. ಕಠೋಪನಿಷತ್ತಿನಲ್ಲಿ(೧.೩.೧೦-೧೧) ಹೇಳುವಂತೆ[1]: ‘ಇಂದ್ರಿಯೇಭ್ಯಃ ಪರಾ ಹ್ಯರ್ತ್ಥಾ ಅರ್ತ್ಥೇಭ್ಯಶ್ಚ ಪರಂ ಮನಃ । ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ ಪರಃ ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ । ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ’

ಈ ಎಲ್ಲಾ ವಿಷಯವನ್ನು ಕಥೆಯರೂಪದಲ್ಲಿ ಭಗವಂತ ತೋರಿಸಿದ್ದಾನೆ. ಹೀಗೆ ಎಲ್ಲಾ ವೇದಾರ್ಥವೂ ಕೂಡಾ ದೃಷ್ಟಾಂತಪೂರ್ವಕವಾಗಿ ಮಹಾಭಾರತದಲ್ಲಿ ಹೇಳಲ್ಪಟ್ಟಿರುವುದು ವಿಶೇಷ].    

 

ವಿಷ್ಣ್ವಾವಿಷ್ಟಾ ಯಜ್ಞನಾಮ್ನೀ ತದಙ್ಕಸ್ಥಿತಾ ಸೋಚೇ ಕೇಶವೋ ಹ್ಯುತ್ತಮೋsಲಮ್ ।

ನ ತತ್ಸಮಶ್ಚಾಧಿಕೋsತಃ ಕುತಃ ಸ್ಯಾದೃಷೇ ಸತ್ಯಂ ನಾನ್ಯಥೇತಿ ಸ್ಮ ಭೂಯಃ ॥೨೦.೭೧॥

 

ವಿಷ್ಣುವಿನ ಆವೇಶವುಳ್ಳ, ಯಜ್ಞ ಎಂಬ ಹೆಸರಿನ, ಅವನ ತೊಡೆಯಮೇಲೆ ಕುಳಿತ ಅವಳು ‘ಕೇಶವನೇ ಎಲ್ಲರಿಗಿಂತ ಮಿಗಿಲಲ್ಲವೇ. ಅವನಿಗೆ ಸಮನಾದವನು ಇಲ್ಲ. ಇನ್ನು ಅವನಿಗಿಂತ ಮಿಗಿಲು ಯಾರಿದ್ದಾನೆ? ಋಷಿಯೇ, ಇದೇ ಸತ್ಯಾ, ಬೇರೆ ಅಲ್ಲ’ ಎಂದು ಮತ್ತೆ ಹೇಳಿದಳು.



[1] ಕಠೋಪನಿಷತ್ತಿನ ವಿವರಣೆಯನ್ನು ಓದುಗರು ಇಲ್ಲಿ ಕಾಣಬಹುದು: https://kathopanishat.blogspot.com 

No comments:

Post a Comment