ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 10, 2020

Mahabharata Tatparya Nirnaya Kannada 2057_2062

 

ಕೃಷ್ಣಸ್ತತಶ್ಚಾಪಮಧಿಜ್ಯಮಾಶು ಕೃತ್ವಾsಚಿನ್ತ್ಯಶ್ಛಿನ್ನಬಾಣೇನ ಲಕ್ಷಮ್ ।

ಅಪಾತಯದ್ ದುನ್ದುಭಯಶ್ಚ ದಿವ್ಯಾ ನೇದುಃ ಪ್ರಸೂನಂ ವವೃಷುಃ ಸುರಾಶ್ಚ ॥೨೦.೫೭॥

 

ತದನಂತರ ಅಚಿನ್ತ್ಯಮೂರ್ತಿಯಾದ ಶ್ರೀಕೃಷ್ಣನು ಬಿಲ್ಲನ್ನು ನೇಣಿನಿಂದ ಬಿಗಿದು, ಮುರಿದ ಬಾಣದಿಂದ ಗುರಿಯನ್ನು ಬೀಳಿಸಿದ. ಆಗ ಅಲೌಕಿಕವಾದ ದುನ್ದುಭಿಗಳು ಶಬ್ದ ಮಾಡಿದವು. ದೇವತೆಗಳು ಹೂಮಳೆಗೈದರು. 

[ ‘ಭಗವಾನ್ ಧನುರಾದಾಯ ಸಜ್ಯಂ ಕೃತ್ವಾsಥ ಲೀಲಯಾ । ತಸ್ಮಿನ್ ಸನ್ಧಾಯ ವಿಶಿಖಂ ಮತ್ಸ್ಯಂ  ವೀಕ್ಷ್ಯ ಸಕೃಜ್ಜಲೇ । ಛಿನ್ನೇಷುಣಾsಪಾತಯತ್ ತಂ ಸೂರ್ಯೇ ಚಾಭಿಜಿತಿ ಸ್ಥಿತೇ । ದಿವಿ ದುನ್ದುಭಯೋ ನೇದುರ್ಜಯಶಬ್ದೋsಪತದ್ ಭುವಿ । ದೇವಾಶ್ಚ ಕುಸುಮಾಸಾರಾನ್  ಮುಮುಚುರ್ಹರ್ಷವಿಹ್ವಲಾಃ (ಭಾಗವತ ೧೦.೭೧. ೨೫-೨೭) ಮುರಿದ ಬಾಣದಿಂದ ಲಕ್ಷವನ್ನು ಭೇದಿಸಿದ. ಆಗ ಅಲ್ಲಿ ದುನ್ದುಬಿಗಳು ಶಬ್ದಮಾಡಿದವು. ಜಯ ಶಬ್ದವು ಎಲ್ಲೆಡೆ ಹರಡಿತು. ದೇವತೆಗಳು ಹೂಮಳೆಗರೆದರು].

 

ಕೃಷ್ಣೇ ಬ್ರಹ್ಮಾದ್ಯೈಃ ಸ್ತೂಯಮಾನೇ ನರೇನ್ದ್ರಕನ್ಯಾ ಮಾಲಾಂ ಕೇಶವಾಂಸೇ ನಿಧಾಯ ।

ತಸ್ಥಾವುಪಾಸ್ಯಾಥ ಸರ್ವೇ ನರೇನ್ದ್ರಾ ಯುದ್ಧಾಯಾಗುಃ ಕೇಶವಂ ಸ್ವಾತ್ತಶಸ್ತ್ರಾಃ ॥೨೦.೫೮॥

 

ಶ್ರೀಕೃಷ್ಣನು ಬ್ರಹ್ಮದೇವರೇ ಮೊದಲಾದವರಿಂದ ಸ್ತುತಿಸಿಕೊಳ್ಳಲ್ಪಡುತ್ತಿರಲು, ಲಕ್ಷಣೆಯು ಅವನ ಕೊರಳಲ್ಲಿ ಮಾಲೆಯನ್ನಿರಿಸಿ, ಪರಮಾತ್ಮನ ಬಳಿಯಲ್ಲಿ ನಿಂತಳು. ಆಗ ಎಲ್ಲಾ ಅರಸರು ಶಸ್ತ್ರವನ್ನು ಸ್ವೀಕರಿಸಿ, ಯುದ್ಧಕ್ಕೆಂದು ಬಂದರು.   

 

ವಿದ್ರಾಪ್ಯ ತಾನ್ ಮಾಗಧಾದೀನ್ ಸ ಕೃಷ್ಣೋ ಭೀಮಾರ್ಜ್ಜುನಾಭ್ಯಾಂ ಸಹಿತಃ ಪುರೀಂ ಸ್ವಾಮ್ ।

ಯಯಾವೇತಾ ಅಷ್ಟ ಮಹಾಮಹಿಷ್ಯಃ ಕೃಷ್ಣಸ್ಯ ದಿವ್ಯಾ ಲೋಕಸುನ್ದರ್ಯ್ಯ ಇಷ್ಟಾಃ ॥೨೦.೫೯॥

 

ಜರಾಸಂಧನೇ ಮೊದಲಾದವರನ್ನು ಓಡಿಸಿದ ಶ್ರೀಕೃಷ್ಣನು, ಭೀಮಾರ್ಜುನರಿಂದ ಕೂಡಿ ತನ್ನ ಪಟ್ಟಣಕ್ಕೆ ತೆರಳಿದನು. ಹೀಗೆ ಅಲೌಕಿಕವಾದ ಸೌಂದರ್ಯದಿಂದ ಕೂಡಿದ, ಕೃಷ್ಣನಿಗೆ ಅತಿಪ್ರಿಯರೆಂದು ಹೇಳಲ್ಪಡುವ , ಅಷ್ಟಮಹಿಷಿಯರು ಕೃಷ್ಣನಿಗೆ ಹೆಂಡತಿಯರಾಗಿ ಬಂದರು.

[ ಮಹಾಭಾರತದ ಸಭಾಪರ್ವದಲ್ಲಿ ಹೀಗೆ ಹೇಳಿದ್ದಾರೆ: ‘ರುಗ್ಮಿಣೀ ಚ ಪತಿವ್ರತಾ । ಸತ್ಯಾ ಜಾಂಬವತೀ ಚೋಭೇ ಗಾನ್ಧಾರೀ ಶಿಶುಮಾsಪಿ ಚ ವಿಶೋಕಾ ಲಕ್ಷಣಾ ಚಾಪಿ ಸುಮಿತ್ರಾ ಕೇತುಮಾ ತಥಾ’ (ಸಭಾಪರ್ವ ೫೯. ೨) . ರುಗ್ಮಿಣೀ, ಸತ್ಯಭಾಮ, ಜಾಮ್ಬವತೀ, ಗಾನ್ಧಾರಿ(ನೀಲಾದೇವಿ, ಪರಮಾತ್ಮ ಶಿಶುವಾಗಿದ್ದಾಗಲೇ ಮದುವೆಯಾದ ಇವಳನ್ನು ‘ಶಿಶುಮಾ’ ಎಂದೂ ಕರೆಯುತ್ತಾರೆ. ಇವಳೇ ರಾಧೆ). ವಿಶೋಕಾ(ಭದ್ರೆ), ಲಕ್ಷಣಾ,  ಸುಮಿತ್ರಾ(ಮಿತ್ರವಿನ್ದೆ) ಮತ್ತು ಜ್ಞಾನವನ್ನು ಕೊಡುವ ಕೇತುಮಾ(ಕಾಳಿನ್ದೀ). ಇವರೇ ಆ ಅಷ್ಟ ಮಹಾಮಹಿಷಿಯರು. ಮೇಲ್ನೋಟಕ್ಕೆ ನಾಮಾಂತರ ಅನಿಸಿದರೂ, ಈ ಹೆಸರುಗಳು ಅವರ ಗುಣನಿರೂಪಣೆ ಮಾಡುವ ಹೆಸರುಗಳಾಗಿವೆ].

 

ಭೈಷ್ಮೀ ಸತ್ಯಾ ಚೈಕತನುರ್ದ್ದ್ವಿಧೈವ ಜಾತಾ ಭೂಮೌ ಪ್ರಕೃತಿರ್ಮ್ಮೂಲಭೂತಾ ।

ತಯೈವಾನ್ಯಾಃ ಸರ್ವದಾsನುಪ್ರವಿಷ್ಟಾಸ್ತಾಸಾಂ ಮದ್ಧ್ಯೇ ಜಾಮ್ಬವತೀ ಪ್ರಧಾನಾ  ॥೨೦.೬೦॥

 

ಆ ಎಂಟು ಮಹಿಷಿಯರಲ್ಲಿ  ಭೈಷ್ಮೀ(ರುಗ್ಮಿಣಿ) ಮತ್ತು ಸತ್ಯಭಾಮ ಒಬ್ಬಳೇ, ಎರಡಾಗಿ ಅವತರಿಸಿರುವ ಮೂಲಪ್ರಕೃತಿ  ಅವಳಾಗಿದ್ದಳು. ಅವಳಿಂದಲೇ ಉಳಿದವರು ಪ್ರವಿಷ್ಟರಾಗಿದ್ದರು(ಅಂದರೆ ಅವಳ ಪ್ರವೇಶ ಎಲ್ಲಾಕಡೆ ಇತ್ತು). ಷಣ್ಮಹಿಷಿಯರಲ್ಲಿ(ಜಾಂಬವತೀ , ನೀಲಾ, ಭದ್ರಾ, ಮಿತ್ರವಿಂದಾ, ಲಕ್ಷಣಾ ಮತ್ತು  ಕಾಳಿಂದೀ ಇವರಲ್ಲಿ) ಜಾಮ್ಬವತೀ ಮುಖ್ಯಳಾಗಿದ್ದಾಳೆ.

 

ರಾಮೇಣ ತುಲ್ಯಾ ಜಾಮ್ಬವತೀ ಪ್ರಿಯತ್ವೇ ಕೃಷ್ಣಸ್ಯಾನ್ಯಾಃ ಕಿಞ್ಚಿದೂನಾಶ್ಚ ತಸ್ಯಾಃ ।

ಯದಾssವೇಶೋ ಬಹುಲಃ ಸ್ಯಾದ್ ರಮಾಯಾಸ್ತದಾ ತಾಸು ಪ್ರೀಯತೇ ಕೇಶವೋsಲಮ್ ॥೨೦.೬೧॥

 

ಜಾಮ್ಬವತಿಯು ಕೃಷ್ಣನ ಪ್ರೀತಿಯ ವಿಚಾರದಲ್ಲಿ ಬಲರಾಮನಿಗೆ ಸಮಾನಳು. ಉಳಿದ ಐವರು ಅವಳಿಗಿಂತ ಕಿಂಚಿತ್ ಕಡಿಮೆಯವರು. ಯಾವಾಗ ಲಕ್ಷ್ಮೀದೇವಿಯ ಆವೇಶವು ಅವರಲ್ಲಿ ಬಹಳ ಆಗುತ್ತದೋ, ಆಗ ಕೃಷ್ಣನು ಅವರನ್ನು ಹೆಚ್ಚು ಪ್ರೀತಿಸುತ್ತಾನೆ.

 

ಯದಾssವೇಶೋ ಹ್ರಾಸಮುಪೈತಿ ತತ್ರ ಪ್ರದ್ಯುಮ್ನತೋ ವಿಂಶಗುಣಾಧಿಕಾಃ ಸ್ಯುಃ ।

ಅನಾದಿತಸ್ತಾಃ ಕೇಶವಾನ್ನಾನ್ಯಸಂಸ್ಥಾ ರೇಮೇ ತಾಭಿಃ ಕೇಶವೋ ದ್ವಾರವತ್ಯಾಮ್ ॥೨೦.೬೨॥

 

ಯಾವಾಗ ಅವರಲ್ಲಿ ಲಕ್ಷ್ಮೀದೇವಿಯ ಆವೇಶವು ಕಡಿಮೆಯಾಗುತ್ತದೋ, ಆಗ ಅಲ್ಲಿ ಪ್ರದ್ಯುಮ್ನನಿಗಿಂತ ಇಪ್ಪತ್ತುಪಟ್ಟುಮಾತ್ರ ಅಧಿಕರು ಇವರಾಗುತ್ತಾರೆ. ಅವರು ಅನಾದಿಕಾಲದಿಂದ ಕೇಶವನಿಂದ ಹೊರತುಪಡಿಸಿ ಬೇರೆ ಯಾರಲ್ಲೂ ಇರುವುದಿಲ್ಲ. ಅಂತಹ ಅವರಿಂದ ಕೂಡಿಕೊಂಡು ಶ್ರೀಕೃಷ್ಣ ದ್ವಾರಕೆಯಲ್ಲಿ ಕ್ರೀಡಿಸಿದನು.

No comments:

Post a Comment