ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 6, 2020

Mahabharata Tatparya Nirnaya Kannada 2037_2043

 [ಯಾರು ಈ ಸುಭದ್ರೆ? ಆ ಕುರಿತು ವಿವರಿಸುತ್ತಾರೆ: ]


ಜಾತಾ ದೇವಕ್ಯಾಂ ಸಾ ಸುಭದ್ರೇತಿ ನಾಮ್ನಾ ಭದ್ರಾ ರೂಪೇಣಾನಕದುನ್ದುಭೇಸ್ತಾಮ್ ।

ಕೃತ್ವಾ ಪುತ್ರೀಂ ರೋಹಿಣೀ ಸ್ವಾಮರಕ್ಷತ್ ಪೂರ್ವಂ ತು ಯಾsಸೀತ್ ತ್ರಿಜಟೈವ ನಾಮ್ನಾ ॥೨೦.೩೭॥

 

ಹಿತವಾದ ರೂಪವುಳ್ಳ ಸುಭದ್ರೆ ಆನಕದುನ್ದುಭಿ[1]-ದೇವಕಿಯಲ್ಲಿ ಹುಟ್ಟಿದ್ದಳು. ಅವಳನ್ನು ವಸುದೇವನ ಮತ್ತೊಂದು ಹೆಂಡತಿಯಾದ ರೋಹಿಣಿಯು ತನ್ನ ಮಗಳನ್ನಾಗಿ ಮಾಡಿಕೊಂಡು ರಕ್ಷಣೆ ಮಾಡಿದಳು. (ಸುಭದ್ರೆ ಹುಟ್ಟಿದ್ದು ವಸುದೇವ-ದೇವಕಿಯಲ್ಲಿ, ಬೆಳೆದದ್ದು ರೋಹಿಣಿಯಲ್ಲಿ).  ಹಿಂದೆ(ರಾಮಾಯಣದಲ್ಲಿ) ಯಾರು ಹೆಸರಿನಿಂದ ‘ತ್ರಿಜಟೆ’ ಎನ್ನುವವಳಿದ್ದಳೋ, ಅವಳೇ ಇವಳು.  

 

ಸೀತಾಯಾಃ ಪ್ರಾಙ್ ನಿತ್ಯಶುಶ್ರೂಷಣಾತ್ ಸಾ ಬಭೂವ ವಿಷ್ಣೋರ್ಭಗಿನೀ ಪ್ರಿಯಾ ಚ ।

ಉಮಾವೇಶಾದ್ ರೂಪಗುಣೋಪಪನ್ನಾ ಪದ್ಮೇಕ್ಷಣಾ ಚಮ್ಪಕದಾಮಗೌರೀ ॥೨೦.೩೮॥


ಸೀತೆಯ ನಿತ್ಯಸೇವೆ ಮಾಡಿದ್ದರಿಂದಾಗಿ ಅವಳು ನಾರಾಯಣನ ಪ್ರೀತಿಪಾತ್ರ ತಂಗಿಯಾದಳು. ಪಾರ್ವತಿಯ ಆವೇಶದಿಂದ ರೂಪ ಹಾಗು ಗುಣದಿಂದ ಕೂಡಿದವಳೂ, ತಾವರೆ ಎಸಳಿನಂತಹ ಕಣ್ಗಳುಳ್ಳವಳೂ, ಸಂಪಿಗೆಯಂತೆ ಹೊಂಬಣ್ಣದವಳೂ ಆಗಿದ್ದಳು. 

 

ಏತತ್ ಕೃತ್ವಾ ಧೃತರಾಷ್ಟ್ರಾತ್ಮಜಃ ಸ ಯಯೌ ಕುರೂನ್ ನಿವಸತ್ಯತ್ರ ರಾಮೇ ।

ಕೃಷ್ಣೋsಕ್ರೂರಂ ವಿವಸನ್ತಂ ಭಯೇನ ಸಹಾರ್ದ್ದಿಕ್ಯಂ ಚಾsನಯಿತ್ವಾ ಜಗಾದ ॥೨೦.೩೯॥

 

ಹೀಗೆ, ಇಷ್ಟು ಮಾಡಿ(ಬಲರಾಮನಿಂದ ಗದಾ ಶಿಕ್ಷಣ ಮತ್ತು ಸುಭದ್ರೆಯನ್ನು ತನಗೆ ಕೊಡುವುದಾಗಿ ಮಾತು ಪಡೆದು), ದುರ್ಯೋಧನ ತನ್ನ ರಾಜ್ಯಕ್ಕೆ ಹಿಂತಿರುಗಿದ. ಇತ್ತ ಶ್ರೀಕೃಷ್ಣನು ಕೃತವರ್ಮನಿಂದ ಕೂಡಿಕೊಂಡು ಎಲ್ಲೋ ಇರುವ ಅಕ್ರೂರನನ್ನು ಕರೆಸಿದ. (ಶ್ರೀಕೃಷ್ಣ-ಬಲರಾಮರು ಶತಧನ್ವನನ್ನು ಹಿಂಬಾಲಿಸಿ ಹೊರಟ ತಕ್ಷಣ ಕೃತವರ್ಮನಿಂದ ಕೂಡಿದ ಅಕ್ರೂರ ದೇಶಾಂತರ ಹೋಗಿದ್ದ. ಐದು ವರ್ಷಗಳ ಕಾಲ ಕಾದ ಶ್ರೀಕೃಷ್ಣ ಇದೀಗ ಅವರನ್ನು ಕರೆಸಿದ). 

 

ಆನೀಯ ರಾಮಂ ಚ ಸಮಸ್ತಸಾತ್ತ್ವತಾಂ ಯದಾsವಾದೀತ್ ಕೇಶವಃ ಸನ್ನಿಧಾನೇ ।

ಮಣಿಸ್ತ್ವಯ್ಯಾಸ್ತೇ ದರ್ಶಯೇತ್ಯೇವ ಭೀತಸ್ತದಾsಕ್ರೂರೋsದರ್ಶಯದ್ ರತ್ನಮಸ್ಮೈ ॥೨೦.೪೦॥

 

ಬಲರಾಮನನ್ನೂ ವಿದೇಹಪಟ್ಟಣದಿಂದ ಕರೆಸಿದ ಕೇಶವ, ಎಲ್ಲರೂ ನೋಡುತ್ತಿರುವಾಗಲೇ, ‘ಎಲೋ ಅಕ್ರೂರ, ನಿನ್ನಲ್ಲಿ ಮಣಿ ಇದೇ, ಅದನ್ನು ತೋರಿಸು’ ಎಂದು ಹೇಳಿದ. ಪರಮಾತ್ಮನ  ಮಾತಿನಿಂದ ಹೆದರಿದ ಅಕ್ರೂರನು ರತ್ನವನ್ನು ತೋರಿಸಿದ.

[‘ನನು ದಾನಪತೇ ನ್ಯಸ್ತಸ್ತ್ವಯ್ಯಸೌ ಶತಧನ್ವನಾ  । ಸ್ಯಮಂತಕಮಣಿಃ ಶ್ರೀಮಾನ್ ವಿದಿತಃ ಪೂರ್ವಮೇವ ನಃ’  ಎಂದು ಭಾಗವತದಲ್ಲಿ(೧೦.೬೧.೪೩) ಈಕುರಿತು ವಿವರ ಕಾಣಸಿಗುತ್ತದೆ.  ].

  

ಅವ್ಯಾಜತಾಮಾತ್ಮನೋ ದರ್ಶಯಿತ್ವಾ ಹಲಾಯುಧೇ ಕೇಶವಸ್ತಸ್ಯ ಜಾನನ್ ।

ರತ್ನಾಕಾಙ್ಕ್ಷಾಮುಗ್ರಸೇನಸ್ಯ ಚೈವ ಮಾತುಶ್ಚ ಸಾಮ್ಬಸ್ಯ ಪುನರ್ಬಭಾಷೇ ॥೨೦.೪೧॥

 

ಹೀಗೆ ಶ್ರೀಕೃಷ್ಣನು ತಾನು ಕಪಟಿ ಅಲ್ಲಾ  ಎನ್ನುವುದನ್ನು ಹಲಾಯುಧನಲ್ಲಿ ತೋರಿಸಿ,  ಬಲರಾಮನ ಜೊತೆಗೆ ಉಗ್ರಸೇನನ ಹಾಗೂ ಸಾಂಬನ ತಾಯಿಯಾಗಿರುವ ಜಾಮ್ಬವತಿಗೂ ಮಣಿಯ ಬಯಕೆಯಿರುವುದನ್ನು ತಿಳಿದು, ಮತ್ತೆ ಹೀಗೆ ಹೇಳಿದ:

 

ಆಸ್ತಾಮಕ್ರೂರೇ ಮಣಿರನ್ಯೈರಧಾರ್ಯ್ಯಃ  ಸದಾ ಯಜ್ಞಾದ್ ದಾನಪತೇಃ ಸ ಧಾರ್ಯ್ಯಃ ।

ನ ಸತ್ಯಾ ಕೃಷ್ಣಾವಾಞ್ಛಿತಂ ಕಿಞ್ಚಿದಿಚ್ಛೇತ್ ತಥಾsಪಿ ತಸ್ಯಾ ಯೋಗ್ಯ ಇತ್ಯಾಹ ಕೃಷ್ಣಃ ॥೨೦.೪೨॥

 

‘ಬೇರೊಬ್ಬರಿಂದ ಧರಿಸಲಾಗದ ಈ ಸ್ಯಮಂತಕ ಮಣಿಯು ಅಕ್ರೂರನಲ್ಲಿಯೇ ಇರಲಿ. ಅಕ್ರೂರನು ಯಾವಾಗಲೂ ಯಜ್ಞ ಮಾಡುವುದರಿಂದ ಅವನಿಗೆ ಇದು ಉಪಯೋಗವಾಗುತ್ತದೆ. ಸತ್ಯಭಾಮೆಯು ಕೃಷ್ಣ ಬಯಸದ್ದನ್ನು ಬಯಸುವುದೇ ಇಲ್ಲಾ. ಆದರೂ ಈ ಮಣಿ ಅವಳಿಗೆ ಯೋಗ್ಯ’

 

[ವಿಷ್ಣುಪುರಾಣದಲ್ಲಿ(೪.೧೩.೬೮-೭೦) ಹೀಗಿದೆ: ಏತಚ್ಚ ಸರ್ವಕಾಲಂ ಶುಚಿನಾ ಬ್ರಹ್ಮಚರ್ಯಗುಣವತಾ ಧ್ರಿಯಮಾಣಮಶೇಷರಾಷ್ಟ್ರಸ್ಯೋಪಕಾರಕಮ್ । ಅಶುಚಿನಾ ಧ್ರಿಯಮಾಣಮಾಧಾರಮೇವ ಹನ್ತಿ । ಅತೋsಹಮಸ್ಯ ಷೋಡಶಸ್ತ್ರೀಸಹಸ್ರಪರಿಗ್ರಹಾದಸಮರ್ಥೋ ಧಾರಣೇ । ಕಥಂ ಚೈತತ್ ಸತ್ಯಭಾಮಾ ಸ್ವೀಕರೋತು? ಆರ್ಯೇಣ ಬಲಭದ್ರೇಣಾಪಿ ಮದಿರಾಪಾನಾದ್ಯಶೇಷಭೋಗಪರಿತ್ಯಾಗಃ ಕಥಂ ಕಾರ್ಯಃ । ತದಯಂ ಯದುಲೋಕೋsಯಂ ಬಲಭದ್ರೋsಹಂ ಸತ್ಯಾ ಚ ತ್ವಾಂ ದಾನಪತೇ, ಪಾರ್ಥಯಾಮಃ । ಏತದ್ ಭವಾನೇವ ಧಾರಯಿತುಂ ಸಮರ್ಥಃ’  ಎಲ್ಲಾ ಕಾಲದಲ್ಲಿಯೂ ಶುಚಿಯಾಗಿ ಬ್ರಹ್ಮಚರ್ಯವನ್ನು ಇಟ್ಟುಕೊಂಡಿರುವ ವ್ಯಕ್ತಿಯಿಂದ ಈ ಮಣಿ ಧರಿಸಲ್ಪಪಟ್ಟಿದ್ದರೆ ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ.  ಒಬ್ಬ ಅಶುಚಿಯಾಗಿ ಧರಿಸಿದರೆ ರಾಷ್ಟ್ರ ನಾಶವಾಗಿ ಹೋಗುತ್ತದೆ. ನಾನಿದನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ೧೬,೧೦೦ ಮಂದಿಯನ್ನು ನಾನು ಮದುವೆಯಾಗುವುದಿದೆ. ನಾನು ಪಡೆಯದ್ದನ್ನು ಸತ್ಯಭಾಮೆ ಹೇಗೆ ಪಡೆಯುತ್ತಾಳೆ? ಅಣ್ಣ ಬಲರಾಮ ಮದಿರಾಪಾನಿಯಾಗಿರುವುದರಿಂದ ಅವನೂ ಮಣಿಯನ್ನು ಧರಿಸಲು ಸಾಧ್ಯವಿಲ್ಲ. ಅದರಿಂದಾಗಿ ಸಮಸ್ತ ಯದುಗಳು, ಸತ್ಯಭಾಮೆ, ನಾನು ಮತ್ತು ಅಣ್ಣ ಬಲಭದ್ರ, ನಾವೆಲ್ಲರೂ ಸೇರಿ ನಿನ್ನನ್ನು ಪ್ರಾರ್ಥನೆ ಮಾಡುತ್ತಿದ್ದೇವೆ- ‘ಅಕ್ರೂರ, ನೀನೇ ಇದನ್ನು ಧಾರಣೆ ಮಾಡುವುದು ಒಳ್ಳೆಯದು.

ಇನ್ನು ಭಾಗವತದಲ್ಲಿ(೧೦.೬೧.೪೮-೫೧) ಹೀಗಿದೆ: ‘ದೃಷ್ಟ್ವಾ ಮಣಿಂ ಹಲಧರಸ್ತದರ್ಥಂ ಪ್ರೋಷ್ಯ ಚಾsಗತಃ। ಯೋಗ್ಯೋsಹಮಿತಿ ಮನ್ವಾನಶ್ಚಕಮೇ ಕುರುಪುಙ್ಗವ । ಸತ್ಯಭಾಮಾ ಪಿತೃಧನಂ ಮನ್ವಾನಾ ಸ್ವಾತ್ಮನೋಚಿತಮ್ । ಗ್ರಹೀತುಮೈಚ್ಛದ್ ವಿಸ್ರಬ್ಧಾ ಹರೇಶ್ಚಿತ್ತಮಜಾನತೀ । ಜಾಮ್ಬವತ್ಯಪಿ ಶುಲ್ಕಾರ್ಥಂ ಪಿತ್ರಾ ದತ್ತೋ ಮಮೇತಿ ಹ । ಸ್ಪೃಹಾಂ ಚಕ್ರೇ ಮಣೌ ತಸ್ಮಿನ್ ಸರ್ವಂ ವಿಜ್ಞಾಯ ಮಾಧವಃ ।  ಅಕ್ರೂರಸ್ಯ ಕರೇ ಭೂಯೋ ಮಣಿಂ ಪ್ರತ್ಯರ್ಪಯದ್ ವಿಭುಃ’ ಮಣಿ ಸಿಕ್ಕಿದೆ ಎಂದು ಗೊತ್ತಾದಾಗ ಬಲರಾಮ ಬಂದ. ’ನಾನು ಆ ಮಣಿಯನ್ನು ಧರಿಸಲು ಯೋಗ್ಯ ಎಂದು ಅವನ ಮನಸ್ಸಿನಲ್ಲಿತ್ತು. ಈ ಮಣಿ ಸತ್ಯಭಾಮೆಯ ಅಪ್ಪನ ಸ್ವತ್ತು. ಹಾಗಾಗಿ, ಪರಮಾತ್ಮನ ಚಿತ್ತವನ್ನು  ತಿಳಿಯದಿರುವವರಿಗೆ ಅದು ಸತ್ಯಭಾಮೆಯಲ್ಲಿರಬೇಕು ಎನಿಸಿತು. ಇನ್ನು ಜಾಂಬವತಿಗೆ ‘ಇದು ನನ್ನ ಅಪ್ಪ ಕೃಷ್ಣನಿಗೆ ಕೊಟ್ಟಿರುವುದರಿಂದ ಅದು ನನ್ನಲ್ಲಿರಬೇಕು’  ಎನಿಸಿತು. ಇದೆಲ್ಲವನ್ನೂ ಕೂಡಾ ಕಂಡ ಶ್ರೀಕೃಷ್ಣ ಅಕ್ರೂರನನಲ್ಲಿ ಮಣಿಯನ್ನಿರಿಸಿದ].

 

ಲಬ್ಧ್ವಾ ರತ್ನಂ ದಾನಪತಿಃ ಸದೈವ ಸನ್ದೀಕ್ಷಿತೋsಭೂದ್ ಯಜ್ಞಕರ್ಮ್ಮಣ್ಯತನ್ದ್ರಃ ।

ಪ್ರದರ್ಶ್ಯ ಕೃಷ್ಣೋ ಹಲಿನೇ ರತ್ನಮೇತಚ್ಛಕ್ರಪ್ರಸ್ಥಂ ಪಾಣ್ಡವಸ್ನೇಹತೋsಗಾತ್ ॥೨೦.೪೩॥

 

ದಾನಪತಿ ಅಕ್ರೂರನು ಸ್ಯಮಂತಕ ಮಣಿಯನ್ನು ಹೊಂದಿ, ಯಾವಾಗಲೂ ಯಜ್ಞ ಕರ್ಮದಲ್ಲಿ ಯಾವುದೇ ಉದಾಸೀನ ಇಲ್ಲದೇ, ಆತ್ಯಂತಿಕವಾಗಿ ತನ್ನನ್ನು ತೊಡಗಿಸಿಕೊಂಡ. ಹೀಗೆ ಶ್ರೀಕೃಷ್ಣನು ಬಲರಾಮನಿಗೆ ರತ್ನವನ್ನು ತೋರಿಸಿ, (ತನ್ನ ಮೇಲೆ ಬಂದ ಅಪವಾದವನ್ನು ತೊಡೆದುಕೊಂಡು), ಪಾಂಡವರಮೇಲಿನ ಪ್ರೀತಿಯಿಂದ ಇಂದ್ರಪ್ರಸ್ಥಕ್ಕೆ ತೆರಳಿದ.



[1] ವಸುದೇವನ ಇನ್ನೊಂದು ಹೆಸರು

No comments:

Post a Comment