ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 5, 2020

Mahabharata Tatparya Nirnaya Kannada 2033_2036

 

ಅವಿಶ್ವಾಸಾತ್ ಸ ತು ಸಕ್ರೋಧ ಏವ ಯಯೌ ವಿದೇಹಾನವಸತ್ ಪಞ್ಚ ಚಾಬ್ದಾನ್ ।

ಜಾನನ್ ಪಾರ್ತ್ಥೇಭ್ಯೋsಹಾರ್ಯ್ಯತಾಂ ಕೇಶವಸ್ಯ ವಶೀಕರ್ತ್ತುಂ ಧಾರ್ತ್ತರಾಷ್ಟ್ರೋ ಬಲಂ ಗಾತ್ ॥೨೦.೩೩॥

 

ಮಣಿ ಇಲ್ಲವೆಂದ ಶ್ರೀಕೃಷ್ಣನಲ್ಲಿ ವಿಶ್ವಾಸವಿಡದೇ ಬಲರಾಮನು, ಮುನಿಸಿಕೊಂಡು ವಿದೇಹಕ್ಕೆ(ಇಂದಿನ ನೇಪಾಳಕ್ಕೆ) ತೆರಳಿದನು. ಅಲ್ಲಿ ಅವನು ಐದು ವರ್ಷಗಳ ಪರ್ಯಂತ ವಾಸಮಾಡಿದನು. ಆಗ, ಪಾಂಡವರ ಕಡೆಯಿರುವ  ಶ್ರೀಕೃಷ್ಣನನ್ನು ತನ್ನೆಡೆಗೆ ಸೆಳೆಯಲು ಸಾಧ್ಯವಿಲ್ಲಾ ಎಂದು ತಿಳಿದ  ದುರ್ಯೋಧನ, ಬಲರಾಮನನ್ನು ವಶೀಕರಿಸಲೆಂದು ವಿದೇಹಕ್ಕೆ ತೆರಳಿದನು.    

[ಹರಿವಂಶದಲ್ಲಿ ಬಲರಾಮನ ಕೋಪದ ಕುರಿತಾದ ವಿವರ ಕಾಣಸಿಗುತ್ತದೆ:  ಪದ್ಭ್ಯಾಮೇವ ತತೋ  ಗತ್ವಾ ಶತಧನ್ವಾನಮಚ್ಯುತಃ । ಮಿಥಿಲಾಮಭಿತೋ ರಾಜನ್ ಜಘಾನ ಪರಮಾಸ್ತ್ರವಿತ್ । ಸ್ಯಮಂತಕಂ ಚ  ನಾಪಶ್ಯದ್ಧತ್ವಾ ಭೋಜಂ ಮಹಾಬಲಮ್  । ನಿವೃತ್ತಂ ಚಾಬ್ರವೀತ್  ಕೃಷ್ಣಂ ರತ್ನಂ ದೇಹೀತಿ ಲಾಙ್ಗಲೀ । (ಕೃಷ್ಣ ಮರಳಿ ಬಂದಾಗ ಬಲರಾಮ ಮಣಿಯನ್ನು ಕೇಳಿದ) ನಾಸ್ತೀತಿ ಕೃಷ್ಣಶ್ಚೋವಾಚ ತತೋ ರಾಮೋ ರುಷಾsನ್ವಿತಃ । ಧಿಕ್ ಶಬ್ದಮಸಕೃತ್ ಕೃತ್ವಾ ಪ್ರತ್ಯುವಾಚ ಜನಾರ್ದನಮ್ । ಭ್ರಾತೃತ್ವಾನ್ಮರ್ಷಯಾಮ್ಯೇಷ ಸ್ವಸ್ತಿ ತೇsಸ್ತು ವ್ರಜಾಮ್ಯಹಮ್ ।  ಕೃತ್ಯಂ ನ ಮೇ ದ್ವಾರಕಯಾ ನ ತ್ವಯಾ ನಚ ವೃಷ್ಣಿಭಿಃ । ಪ್ರವಿವೇಶ ತತೋ ರಾಮೋ ಮಿಥಿಲಾಮರಿಮರ್ದನಃ’ (ಹರಿವಂಶಪರ್ವ ೩೯.೨೩) ‘ಅಥ ದುರ್ಯೋಧನೋ ರಾಜಾ ಗತ್ವಾ ತು ಮಿಥಿಲಾಂ  ಪ್ರಭುಃ । ಗದಾಶಿಕ್ಷಾಂ ತತೋ ದಿವ್ಯಾಂ ಬಲಭದ್ರಾದವಾಪ್ತವಾನ್’ (೩೯.೨೮). (ಶ್ರೀಕೃಷ್ಣ ಇಲ್ಲವೆಂದಾಗ  ಅಸಮಾದಾನದಿಂದ ಬಲರಾಮ ಧಿಕ್..ಧಿಕ್..ಧಿಕ್ .. ಎಂದು ಹಲವಾರು ಬಾರಿ ಹೇಳಿ ‘ಕೃಷ್ಣಾ, ನೀನು ನನ್ನ ತಮ್ಮಾ ಎಂದು ಬಿಟ್ಟಿದ್ದೇನೆ, ಬೇರೆ ಯಾರಾದರೂ ಆಗಿದ್ದರೆ ಇಲ್ಲೇ ಕೊಂದು ಬಿಡುತ್ತಿದ್ದೆ. ನಿನ್ನಿಂದ, ನೀನು ಕಟ್ಟಿದ ದ್ವಾರಕೆಯಿಂದ ಮತ್ತು  ಯಾದವರಿಂದ ನನಗೇನೂ ಆಗಬೇಕಿಲ್ಲ’ ಎಂದು ಉಗ್ರವಾಗಿ ಹೇಳಿ ಬಲರಾಮ ಹೊರಟು ಹೋದ. ಬಳಿಕ ದುರ್ಯೋಧನ ಬಲರಾಮನಲ್ಲಿ ಬಂದು ಅವನಿಂದ ಗದಾವಿದ್ಯೆಯನ್ನು ಕಲಿತ)   

 

ಬಭೂವ ಶಿಷ್ಯೋsಸ್ಯ ತಥಾ ಗದಾಯಾಮಸನ್ನಿಧಾನಂ ಕೇಶವಸ್ಯ ಪ್ರತೀಕ್ಷನ್ ।

ತದಾ ಯಯಾಚೇ ಭಗಿನೀಂ  ಚ ತಸ್ಯ ಸ ಚ ಪ್ರತಿಜ್ಞಾಮಕರೋತ್ ಪ್ರದಾನೇ ೨೦.೩೪॥

 

ದುರ್ಯೋಧನನು ಕೇಶವನ ಇಲ್ಲದಿರುವಿಕೆಯನ್ನು ಕಾದು, ಗದಾಭ್ಯಾಸದಲ್ಲಿ ಪರಿಣಿತನಾಗಲು ಇಲ್ಲಿ ಬಲರಾಮನ ಶಿಷ್ಯನಾದನು. ಆಗಲೇ ಬಲರಾಮನ ತಂಗಿಯನ್ನು ದುರ್ಯೋಧನ ಬೇಡಿದ ಕೂಡಾ. ಅವನಾದರೋ, ತಂಗಿಯನ್ನು ದುರ್ಯೋಧನನಿಗೆ ಕೊಡುವುದಾಗಿ ಪ್ರತಿಜ್ಞೆಮಾಡಿದನು.

[ ವಿಷ್ಣುಪುರಾಣದಲ್ಲಿ ಈ ವಿವರ ಕಾಣಸಿಗುತ್ತದೆ:  ‘ಯಾವಚ್ಚ ಜನಕರಾಜಗೃಹೇ ಬಲಭದ್ರೋsವತಸ್ಥೇ ತಾವದ್ ಧಾರ್ತರಾಷ್ಟ್ರೋ ದುರ್ಯೋಧನಸ್ತತ್ಸಕಾಶಾದ್ ಗದಾಶಿಕ್ಷಾಮಶಿಕ್ಷತ’ (೧೩.೪೭), ಭಾಗವತದಲ್ಲಿ: ‘ಉವಾಸ ತಸ್ಯಾಂ ಕತಿಚಿನ್ಮಿಥಿಲಾಯಾಂ  ಸಮಾ ವಿಭುಃ । ತತೋsಶಿಕ್ಷದ್  ಗದಾಂ ಕಾಲೇ ಧಾರ್ತರಾಷ್ಟ್ರಃ ಸುಯೋಧನಃ’ (೧೦.೬೧.೩೨). ಎಂದು  ಶುಕೋಕ್ತಿಃ ।  ]

 

ಜ್ಯೇಷ್ಠಂ ಹ್ಯೇನಂ ಕೇಶವೋ ನಾತಿವರ್ತ್ತೇದಿತ್ಯೇವ ಮೇನೇ ಧಾರ್ತ್ತರಾಷ್ಟ್ರಃ ಸ ತಸ್ಮಾತ್ ।

ಜಗ್ರಾಹ ಹಸ್ತಂ ದಕ್ಷಿಣಂ ಸತ್ಯಹೇತೋರ್ದ್ದದೌ ಚ ರಾಮಃ ಕರಮಸ್ಮೈ ಹಲಾಙ್ಕಮ್ ॥೨೦.೩೫॥

 

ಕೃಷ್ಣನು ದೊಡ್ಡಣ್ಣನಾದ ಬಲರಾಮನನ್ನು ಮೀರಲಾರ ಎಂದು ತಿಳಿದು ದುರ್ಯೋಧನನು, ಆಣೆಗಾಗಿ (ಸತ್ಯಪ್ರತಿಜ್ಞೆ/ಭಾಷೆಗಾಗಿ) ಬಲರಾಮನ ಬಲಗೈಯನ್ನು ಹಿಡಿದುಕೊಂಡು ‘ನಿನ್ನ ತಂಗಿ ಸುಭದ್ರೆಯನ್ನು ನನಗೆ ಕೊಡು ಎಂದು ಕೇಳಿದ. ರಾಮನು ನೇಗಿಲಿನ ಚಿನ್ನೆಯುಳ್ಳ ತನ್ನ ಕೈಯನ್ನು ಕೊಟ್ಟ.(ಅಂದರೆ ತನ್ನ ಆಯುಧವಾದ ಮಸಲವನ್ನು ಹಿಡಿಯುವ ಕೈಯಿಂದ ‘ಸುಭದ್ರೆಯನ್ನು ಖಂಡಿತಾ ನಿನಗೇ ಕೊಡುತ್ತೇನೆ’ ಎಂದು ದುರ್ಯೋಧನನಿಗೆ ಬಲರಾಮ ಮಾತುಕೊಟ್ಟ) 

 

ರೂಪೇಣ ತಸ್ಯಾ ಮೋಹಿತೋ ಧಾರ್ತ್ತರಾಷ್ಟ್ರೋ ವಿಶೇಷತಃ ಕೃಷ್ಣರಾಮೌ ಭಗಿನ್ಯಾಃ ।

ಸ್ನೇಹಾದ್ ವಶಂ ಯಾಸ್ಯತ ಇತ್ಯಗೃಹ್ಣಾದ್ದಸ್ತಂ ಹಲಾಙ್ಕಂ ಹಲಿನೋ ರಿಪುಘ್ನಮ್ ॥೨೦.೩೬॥

 

ಸುಭದ್ರೆಯ ರೂಪಕ್ಕೆ ದುರ್ಯೋಧನ ಮೋಹಿತನಾಗಿದ್ದ. ಅಷ್ಟೇ ಅಲ್ಲಾ, ‘ವಿಶೇಷವಾಗಿ ಬಲರಾಮ ಕೃಷ್ಣರು ತಂಗಿಯ ಪ್ರೀತಿಯಿಂದ ತನ್ನ ವಶರಾಗುತ್ತಾರೆ’ ಎಂದು ಶತ್ರುಗಳನ್ನು ಸಂಹರಿಸುವ ನೇಗಿಲಿನ ಗುರುತುಳ್ಳ ಬಲರಾಮನ ಕೈಯನ್ನು ಹಿಡಿದುಕೊಂಡ.

No comments:

Post a Comment