ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 6, 2020

Mahabharata Tatparya Nirnaya Kannada 2044_2047

 ವಸನ್ನಜಸ್ತತ್ರ ಬಹೂಂಶ್ಚ ಮಾಸಾನ್ ಸಫಲ್ಗುನೋsಯಾನ್ಮೃಗಯಾಂ ಕದಾಚಿತ್ ।

ಹತ್ವಾ ಮೃಗಾನ್ ಯಮುನಾತೀರಸಂಸ್ಥಃ ಸೋsನ್ಯಾಂ ಕಾಳಿನ್ದೀಂ ದದೃಶೇ ತತ್ಸ್ವಸಾರಮ್॥೨೦.೪೪॥

 

ಇಂದ್ರಪ್ರಸ್ಥದಲ್ಲಿ ಶ್ರೀಕೃಷ್ಣನು ಬಹಳ ತಿಂಗಳುಗಳ ಕಾಲ ವಾಸಮಾಡಿದವನಾಗಿ ಒಮ್ಮೆ ಅರ್ಜುನನಿಂದ ಕೂಡಿಕೊಂಡು ಬೇಟೆಗಾಗಿ ತೆರಳಿದ. ಕೆಲವು ಮೃಗಗಳನ್ನು ಕೊಂದು, ಯಮುನಾ ನದಿಯ ತೀರಕ್ಕೆ ಬಂದು, ಅಲ್ಲಿ ಇನ್ನೊಬ್ಬಳು ಕಾಳಿನ್ದೀಯನ್ನು ಕಂಡನು.

 

ಸಾ ಸೂರ್ಯ್ಯಪುತ್ರೀ ಯಮುನಾsನುಜಾತಾ ತಪಶ್ಚರನ್ತೀ ಕೃಷ್ಣಪತ್ನೀತ್ವಕಾಮಾ ।

ಪೃಷ್ಟಾsರ್ಜ್ಜುನೇನಾsಹ ಸಮಸ್ತಮೇತತ್ ಪತ್ನೀಂ ಚ ತಾಂ ಜಗೃಹೇ ವಾಸುದೇವಃ ॥೨೦.೪೫॥

 

ಅವಳು ಸೂರ್ಯನ ಮಗಳು. ಯಮುನೆಯ ತಂಗಿ. ಕೃಷ್ಣನ ಹೆಂಡತಿಯಾಗಬೇಕು ಎಂದು ಬಯಸಿ, ತಪಸ್ಸನ್ನು ಮಾಡುತ್ತಿರುವ ಅವಳು ಅರ್ಜುನನಿಂದ ಪ್ರಶ್ನೆಮಾಡಲ್ಪಟ್ಟವಳಾಗಿ, ತನ್ನ ತಪಸ್ಸಿನ ಕಾರಣವೆಲ್ಲವನ್ನೂ ಕೂಡಾ ಹೇಳಿದಳು. ನಂತರ ವಾಸುದೇವನು ಅವಳನ್ನು ಹೆಂಡತಿಯಾಗಿ ಸ್ವೀಕರಿಸಿದನು.

 

[ಭಾಗವತದಲ್ಲಿ ಹೀಗೆ ಹೇಳಿದ್ದಾರೆ: ‘ಅಹಂ ದೇವಸ್ಯ ಸವಿತುರ್ದುಹಿತಾ ಪತಿಮಿಚ್ಛತೀ । ವಿಷ್ಣುಂ ವರೇಣ್ಯಂ ವರದಂ ತಪಃ ಪರಮಮಾಸ್ಥಿತಾ(೧೦.೬೨.೨೫).  ಕಾಳಿನ್ದೀತಿ ಸಮಾಖ್ಯಾತಾ ವಸಾಮಿ ಯಮುನಾಜಲೇ । ನಿರ್ಮಿತೇ ಭವನೇ ಪಿತ್ರಾ ಯಾವದಚ್ಯುತದರ್ಶನಮ್’(೨೭).

ಪುರಾಣದಲ್ಲಿ ಯಮುನಾ ನದಿಯ ಅಭಿಮಾನಿನಿಯೇ ಶ್ರೀಕೃಷ್ಣನನ್ನು ಮದುವೆಯಾದಳು ಎಂದು ಹೇಳಿದಂತೆ ಕಾಣುತ್ತದೆ. ಅದಕ್ಕಾಗಿ ಈ ವಿಷಯವನ್ನು ಸ್ಪಷ್ಟಪಡಿಸುತ್ತಾ  ಆಚಾರ್ಯರು ಇಲ್ಲಿ ‘ಅನ್ಯಾಂ ಕಾಳಿನ್ದೀಂ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ,ತತ್ ಸ್ವಸಾರಮ್’, ‘ಯಮುನಾನುಜಾತಾ’ ಎನ್ನುವ ವಿಶೇಷಣವನ್ನು ಕೊಡುತ್ತಾ, ಇವಳು ಬೇರೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ ಕೂಡಾ]

 

ತತೋ ಗತ್ವಾ ನಗ್ನಜಿತೋ ಗೃಹಂ ಚ ಸ್ವಯಮ್ಬರೇ ಸಪ್ತ ವೃಷಾನಗೃಹ್ಣಾತ್ ।

ಸರ್ವೈರಗ್ರಾಹ್ಯಾನಸುರಾನ್ ವರೇಣ ಶಿವಸ್ಯ ಯೈರ್ನ್ನಿರ್ಜ್ಜಿತಾ ಭೂಮಿಪಾಲಾಃ ॥೨೦.೪೬॥

 

ತದನಂತರ ನಗ್ನಜಿತ್ ಎಂಬ ರಾಜನ ಮನೆಯನ್ನು ಕುರಿತು ತೆರಳಿದ ಶ್ರೀಕೃಷ್ಣ, ಅಲ್ಲಿ ನಡೆಯುತ್ತಿದ್ದ  ಸ್ವಯಮ್ಬರದಲ್ಲಿ, ಯಾವ ಗೂಳಿಗಳ ರೂಪದಲ್ಲಿರುವ ಅಸುರರಿಂದ ಎಲ್ಲಾ ರಾಜರೂ ಕೂಡಾ ಸೋತಿದ್ದರೋ, ಅಂತಹ ಶಿವನ ವರದಿಂದ ಯಾರಿಂದಲೂ ನಿಗ್ರಹಿಸಲಾಗದ ಏಳು ಗೂಳಿಗಳ ರೂಪದಲ್ಲಿರುವ ಅಸುರರನ್ನು ನಿಗ್ರಹಿಸಿದ.  

 

ತತೋ ನೀಲಾಂ ತಸ್ಯ ಸುತಾಂ ಚ ಲೇಭೇ ಪೂರ್ವಂ ನೀಲಾ ಗೋಪಕನ್ಯಾsಪಿ ಯಾssಸೀತ್ ।

ಸಾ ದೇಹೇsಸ್ಯಾಃ ಪ್ರಾವಿಶತ್ ಪೂರ್ವಮೇಷಾ ಯಸ್ಮಾದೇಕಾ ದ್ವಿವಿಧಾ ಸಮ್ಪ್ರಜಾತಾ ॥೨೦.೪೭॥

 

ತದನಂತರ ಅವನ ಮಗಳಾದ ನೀಲಾದೇವಿಯನ್ನು ಪಡೆದನು. ನೀಲೆಯು ಮೊದಲಿಗೆ ಗೋಪಕನ್ಯೆಯೂ ಆಗಿದ್ದಳು. ಅವಳು ಈ ನೀಲೆಯ ದೇಹದಲ್ಲಿ ಪ್ರವೇಶಮಾಡಿದಳು. ಮೊದಲಿಗೇನೇ ಇವಳು ಎರಡು ರೂಪದಿಂದ ಹುಟ್ಟಿದ್ದಳು. ಈಗ ಒಂದೇ ಆದಳು.

[ಯಶೋದೆಯ ಅಣ್ಣ ಕುಂಭಕ, ಕುಂಭಕನ ಮಗಳು ನೀಲೆ. ಅವಳೇ ಇವಳು. ಇದನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಬ್ರಹ್ಮವೈವರ್ತಪುರಾಣದಲ್ಲಿ ರಾಧೆಯ ಕುರಿತಾಗಿ ಬಹಳವಾಗಿ ಹೇಳಿದ್ದಾರೆ. ಆ ರಾಧೆ ಯಾರು ಎಂದರೆ ಈ ನೀಲಾದೇವಿ. ಪರಮಾತ್ಮನನ್ನು ವ್ರಜದಲ್ಲಿದ್ದಾಗ ಮದುವೆಯಾದವಳು ಇದೇ ನೀಲೆ. ಅವಳು ‘ಎಲ್ಲರಿಗಿಂತ ಮೊದಲು ನನ್ನನ್ನು ಮದುವೆಯಾಗಬೇಕು ಎಂದು ವರ ಕೇಳಿದ್ದಳು. ಅಷ್ಟೇ ಅಲ್ಲ, ಮುಂಜಿಗಿಂತ ಮೊದಲು ನನ್ನನ್ನು ಮದುವೆಯಾಗಬೇಕು ಎಂದು ಕೇಳಿಕೊಂಡಿದ್ದಳು ಕೂಡಾ. ಹಾಗಾಗಿ ಗೋಪಕನ್ಯೆಯರು ಶ್ರೀಕೃಷ್ಣನೊಂದಿಗೆ ಕ್ರೀಡಿಸುವುದಕ್ಕೂ ಮುನ್ನ, ಅಲ್ಲಿಯೂ ಕೂಡಾ ಏಳು ಗೂಳಿಗಳನ್ನು ನಿಗ್ರಹಿಸಿ ಕೃಷ್ಣ ಅವಳನ್ನು ಮದುವೆಯಾಗಿದ್ದ [ಉಲ್ಲೇಖ: ಮಹಾಭಾರತ ತಾತ್ಪರ್ಯ ನಿರ್ಣಯ ೧೩.೪೮-೪೯]. ಅವಳನ್ನೇ ರಾಧೇ ಎಂದು ಉಪಾಸನೆ ಮಾಡುತ್ತಾರೆ. ನಂತರ ಆ ನೀಲೆಯೇ ಈ ನೀಲೆಯಲ್ಲಿ ಪ್ರವೇಶಮಾಡಿದಳು. ಒಬ್ಬಳೇ ಎರಡುರೂಪದಲ್ಲಿ ಹುಟ್ಟಿದ್ದು, ನಂತರ ಒಂದಾಗಿರುವುದು. ಆತ್ಮಭೇದವಿರಲಿಲ್ಲ, ದೇಹಭೇದವಿತ್ತು. ಆಮೇಲೆ ದೇಹಭೇದವೂ ಹೋಗಿ ಒಂದಾಯಿತು

ನಗ್ನಜಿನ್ನಾಮ ಕೌಸಲ್ಯ ಆಸೀದ್ ರಾಜಾsತಿಧಾರ್ಮಿಕಃ । ತಸ್ಯ ಸತ್ಯಾsಭವತ್ ಕನ್ಯಾ ರಾಜನ್ ನೀಲೇತಿಚಾಹ್ವಯಾ’ (ಭಾಗವತ ೧೦.೬೩.೩೬), ನಗ್ನಜಿತ್ ಎನ್ನುವ ಕೋಸಲದೇಶದ ರಾಜ ಇದ್ದ. ಅವನಿಗೆ ಸತ್ಯಾ ಎನ್ನುವ ಮಗಳಿದ್ದಳು, ಅವಳ ಹೆಸರು ನೀಲೇ ಆಗಿತ್ತು ಎನ್ನುತ್ತದೆ ಭಾಗವತ. ಇನ್ನು ಹರಿವಂಶದಲ್ಲಿ (ವಿಷ್ಣುಪರ್ವಣಿ ೬೦.೪೧) ‘ಸತ್ಯಾಂ ನಾಗ್ನಜಿತೀಮಪಿ’ ಎಂದಿದೆ. ಹೀಗಾಗಿ ಇಲ್ಲಿ ವಿರೋಧವಿಲ್ಲ].          

No comments:

Post a Comment