ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, December 18, 2020

Mahabharata Tatparya Nirnaya Kannada 2083_2087

 

ಸಾಕ್ಷಾತ್ ಸತ್ಯಾ ರುಗ್ಮಿಣೀತ್ಯೇಕಸಂವಿದ್ ದ್ವಿಧಾಭೂತಾ ನಾತ್ರ ಭೇದೋsಸ್ತಿ ಕಶ್ಚಿತ್ ।

ತಥಾsಪಿ ಸಾ ಪ್ರಮದಾನಾಂ ಸ್ವಭಾವಪ್ರಕಾಶನಾರ್ತ್ಥಂ ಕುಪಿತೇವಾsಸ ಸತ್ಯಾ॥೨೦.೮೩॥

 

ಸತ್ಯಭಾಮೆಯು ಸಾಕ್ಷಾತ್ ರುಗ್ಮಿಣಿಯೇ ಆಗಿದ್ದು ಅವರಿಬ್ಬರೂ ಒಂದೇ ಅಭಿಪ್ರಾಯವನ್ನು ಹೊಂದಿರುವವರು. ಅವರಿಬ್ಬರಲ್ಲಿ ಯಾವುದೇ ಅಭಿಪ್ರಾಯ ಭೇದವಿಲ್ಲ. ಒಬ್ಬಳೇ ಲಕ್ಷ್ಮೀ ಎರಡು ರೂಪಗಳಲ್ಲಿ ಅವತರಿಸಿರುವುದು. ಹಾಗಿದ್ದರೂ  ಕೂಡಾ  ಸತ್ಯಭಾಮೆಯು ಹೆಣ್ಣುಮಕ್ಕಳ ಸ್ವಭಾವವನ್ನು ಪ್ರಪಂಚಕ್ಕೆ ತೋರುವುದಕ್ಕಾಗಿ ಮುನಿದವಳಂತೆ ತೋರಿಕೊಂಡಳು.

[ಹರಿವಂಶದಲ್ಲಿ ಹೀಗೆ ಹೇಳಿದ್ದಾರೆ:  ಮಮೃಷೇ ನ ಸಪತ್ನ್ಯಾಸ್ತು ತತ್ ಸೌಭಾಗ್ಯಗುಣೋದಯಮ್ । ಸತ್ಯಭಾಮಾ ಪ್ರಿಯಾ ನಿತ್ಯಂ ವಿಷ್ಣೋರತುಲತೇಜಸಃ’ (ವಿಷ್ಣುಪರ್ವಣಿ ೬೫.೪೯)]

 

ಸಾಕಂ ರುಗ್ಮಿಣ್ಯಾ ರಾಜಮದ್ಧ್ಯೇ ಪ್ರವೇಶಾತ್ ಸ್ತವಾದೃಷೇಃ ಪುಷ್ಪದಾನಾಚ್ಚ ದೇವೀಮ್ ।

ಕೋಪಾನನಂ ದರ್ಶಯನ್ತೀಮುವಾಚ ವಿಡಮ್ಬಾರ್ತ್ಥಂ ಕಾಮಿಜನಸ್ಯ ಕೃಷ್ಣಃ ॥೨೦.೮೪॥

 

ದಾತಾಸ್ಮ್ಯಹಂ ಪಾರಿಜಾತಂ ತರುಂ ತ ಇತ್ಯೇವ ತತ್ರಾಥಾsಗಮದ್ ವಾಸವೋsಪಿ ।

ಸರ್ವೈರ್ದ್ದೇವೈರ್ಭೌಮಜಿತೋsಪ್ಯದಿತ್ಯಾಸ್ತೇನೈವಾಥೋ ಕುಣ್ಡಲಾಭ್ಯಾಂ ಹೃತಾಭ್ಯಾಮ್ ॥೨೦.೮೫॥

 

ರುಗ್ಮಿಣಿಯಿಂದ ಕೂಡಿಕೊಂಡು ಶ್ರೀಕೃಷ್ಣ ಆ ಎಲ್ಲಾ ಅರಸರ ಮಧ್ಯದಲ್ಲಿ ಪ್ರವೇಶಮಾಡಿದ್ದರಿಂದಲೂ, ನಾರದರು ರುಗ್ಮಿಣಿಯನ್ನು  ಸ್ತೋತ್ರಮಾಡಿದ್ದರಿಂದಲೂ, ಪಾರಿಜಾತ ಕುಸುಮವನ್ನು ಕೊಟ್ಟಿದ್ದರಿಂದಲೂ, ಮುನಿದ ಮೋರೆಯನ್ನು ತೋರಿಸುವ ಸತ್ಯಭಾಮೆಯನ್ನು ಕುರಿತು, ಕಾಮುಕ ಜನರ ಅನುಕರಣೆಗಾಗಿ ಶ್ರೀಕೃಷ್ಣನು ‘ನಾನು ನಿನಗೆ ಪಾರಿಜಾತ ಮರವನ್ನು ಕೊಡುತ್ತಿದ್ದೇನೆ’ ಎಂದು ಹೇಳಿದನು. [‘ಪರಿ ಜಾತೋ  ವಿಷ್ಣುಪದ್ಯಾಃ ಪಾರಿಜಾತೇತಿ ಶಬ್ದಿತಃ’(ವಿಷ್ಣುಪರ್ವಣಿ ೬೭.೭೦) ಆಕಾಶಗಂಗೆಯ ಪರಿಸರದಲ್ಲಿ ಮೊದಲು ಬೆಳೆದದ್ದರಿಂದ ಅದನ್ನು ಪಾರಿಜಾತ ಎಂದು ಕರೆದರು] ಕೆಲವು ಕಾಲ ಕಳೆದಮೇಲೆ ನರಕಾಸುರನಿಂದ ಪರಾಜಿತನಾದ ಇಂದ್ರನು ಸಮಸ್ತ ದೇವತೆಗಳಿಂದ ಕೂಡಿಕೊಂಡು, ಆ  ನರಕಾಸುರನಿಂದಲೇ  ಅದಿತಿಯ ಕುಂಡಲಗಳು ಬಲಾತ್ಕಾರವಾಗಿ ಕಸಿದುಕೊಂಡಿರುತ್ತಿರಲು ಆತ ಶ್ರೀಕೃಷ್ಣನ ಬಳಿ ಬಂದ.  

 

ತದೈವಾsಗುರ್ಮ್ಮುನಯಸ್ತೇನ ತುನ್ನಾ ಬದರ್ಯಾಸ್ತೇ ಸರ್ವ ಏವಾsಶು ಕೃಷ್ಣಮ್ ।

ಯಯಾಚಿರೇ ಭೌಮವಧಾಯ ನತ್ವಾ ಸ್ತುತ್ವಾ ಸ್ತೋತ್ರೈರ್ವೈದಿಕೈಸ್ತಾನ್ತ್ರಿಕೈಶ್ಚ ॥೨೦.೮೬॥

 

ಆಗಲೇ ಮುನಿಗಳೂ ಕೂಡಾ ಇಂದ್ರನಿಂದ ಪ್ರಚೋದಿತರಾಗಿ ಬದರಿಯಿಂದ ಶ್ರೀಕೃಷ್ಣನ ಬಳಿ ಬಂದರು. ಅವರೆಲ್ಲರೂ ಶ್ರೀಕೃಷ್ಣನಿಗೆ ನಮಸ್ಕರಿಸಿ, ವೈದಿಕವಾದ ತಂತ್ರಾದಿಗಳಿಂದ ಸ್ತೋತ್ರಮಾಡಿ, ನರಕಾಸುರನ ಸಾವಿಗಾಗಿ ಬೇಡಿದರು.   

 

ಇನ್ದ್ರೇಣ ದೇವೈಃ ಸಹಿತೇನ ಯಾಚಿತೋ ವಿಪ್ರೈಶ್ಚ ಸಸ್ಮಾರ ವಿಹಙ್ಗರಾಜಮ್ ।

ಆಗಮ್ಯ ನತ್ವಾ ಪುರತಃ ಸ್ಥಿತಂ ತಮಾರುಹ್ಯ ಸತ್ಯಾಸಹಿತೋ ಯಯೌ ಹರಿಃ ॥೨೦.೮೭॥

 

ಹೀಗೆ ದೇವತೆಗಳಿಂದ ಕೂಡಿದ ಇಂದ್ರನಿಂದಲೂ, ಬ್ರಾಹ್ಮಣರಿಂದಲೂ ಬೇಡಲ್ಪಟ್ಟವನಾದ ಶ್ರೀಕೃಷ್ಣ ಗರುಡನನ್ನು ಸ್ಮರಿಸಿದ. ಬಂದು ನಮಸ್ಕರಿಸಿ ತನ್ನ ಮುಂದೆ ನಿಂತ ಗರುಡನನ್ನು ಏರಿದ ಶ್ರೀಕೃಷ್ಣ, ಸತ್ಯಭಾಮೆಯಿಂದ ಕೂಡಿಕೊಂಡು ಅಲ್ಲಿಂದ ತೆರಳಿದನು.


No comments:

Post a Comment