ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 9, 2020

Mahabharata Tatparya Nirnaya Kannada 2052_2056

 

ಲಕ್ಷಂ ಚ ತತ್ ಸರ್ವತಶ್ಛನ್ನಮೇವ ದ್ವಾರಂ ಶರಸ್ಯಾಪ್ಯುಪರಿ ಸ್ಮ ಲಕ್ಷಾತ್ ।

ಛಿನ್ನೇಷುಣಾ ಪಾತನೀಯಂ ಚ ತದ್ಧಿ ದ್ರೌಪದ್ಯರ್ತ್ಥಾತ್ ತದಶಕ್ಯಂ ತತೋsಲಮ್ ॥೨೦.೫೨॥

 

ಆ ಗುರಿ(ಲಕ್ಷ) ಎಲ್ಲೆಡೆಯಿಂದ ಮುಚ್ಚಲ್ಪಟ್ಟಿತ್ತು. ಬಾಣಕ್ಕೆ ದ್ವಾರ ಯಾವುದಕ್ಕೆ ಗುರಿ ಇಡಬೇಕೋ ಅದರ ಮೇಲ್ಗಡೆಯಿಂದಿತ್ತು. ಆ ಗುರಿ ಮುರಿದ ಬಾಣದಿಂದ ಬೀಳಿಸಬೇಕಾದದ್ದಾಗಿತ್ತು. ಅದರಿಂದ ದ್ರೌಪದಿಯನ್ನು ಉದ್ದೇಶಿಸಿ ಯಾವ ಸ್ವಯಮ್ಬರ ಇತ್ತೋ, ಅದಕ್ಕಿಂತ ಇದು ಇನ್ನೂ  ಕ್ಲಿಷ್ಟವಾದುದಾಗಿತ್ತು.   

[ಭಾಗವತದಲ್ಲೂ ಈ ಕುರಿತ ವಿವರ ಕಾಣಸಿಗುತ್ತದೆ. ಒಮ್ಮೆ ಕೃಷ್ಣನ ಪತ್ನಿಯರು ಮತ್ತು ದ್ರೌಪದಿ ಮಾತನಾಡುತ್ತಿರುವಾಗ, ದ್ರೌಪದಿ ‘ನೀವು ಶ್ರೀಕೃಷ್ಣನಿಗೆ ಹೇಗೆ ಹೆಂಡಿರಾದಿರಿ? ಆ ಕುರಿತು ಹೇಳಿ’ ಎಂದು ಕೇಳಿಕೊಳ್ಳುತ್ತಾಳೆ: ಆಗ ಅಲ್ಲಿ ಲಕ್ಷಣೆ ಹೇಳಿದ ಮಾತು ಹೀಗಿದೆ: ‘ಯಥಾ  ಮಮ ಮತಂ ಸಾಧ್ವಿ ಪಿತಾ ದುಹಿತೃವತ್ಸಲಃ । ಬೃಹತ್ಸೇನ ಇತಿ ಖ್ಯಾತಸ್ತತ್ರೋಪಾಯಮಚೀಕರತ್ । ಯಥಾ ಸ್ವಯಮ್ಬರೇ ರಾಜ್ಞಿ ಮತ್ಸ್ಯಃ ಪಾರ್ಥೇಚ್ಛಯಾ ಕೃತಃ । ಅಯಂ ತು ಬಹಿರಾಚ್ಛನ್ನೋ ದೃಶ್ಯತೇ ಸ ಜಲೇ ಪರಮ್’  (ಭಾಗವತ ೧೦.೭೧.೧೮-೧೯) ,  ನಾನೇ ಈ ವಿಧಾನವನ್ನು ರೂಪಿಸಿದೆ. ಅದರಂತೆ ಬೃಹತ್ಸೇನ ಎನ್ನುವ ನನ್ನ ತಂದೆ ಈ ಉಪಾಯವನ್ನು ಮಾಡಿದ. ಪಾರ್ಥ ಹೇಗೆ ಲಕ್ಷವೇದವನ್ನು ಮಾಡಿದನೋ, ಅವನ ತರಹದ ಬಯಕೆಯಲ್ಲಿ ಬೃಹತ್ಸೇನ ಇದನ್ನು ಮಾಡಿದ್ದ]. 

 

ತತ್ರಾsಜಗ್ಮುರ್ಮ್ಮಾಗಧಾದ್ಯಾಶ್ಚ ಸರ್ವೇ ಪಾರ್ತ್ಥಾ ಅಪಿ ದ್ರಷ್ಟುಮಿಹಾಭ್ಯುಪಾಯಯುಃ ।

ದುರ್ಯ್ಯೋಧನಾದ್ಯಾಶ್ಚ ಸಸೂತಪುತ್ರಾ ಸಜ್ಯೀಕರ್ತ್ತುಂ ಧನುರಪ್ಯುತ್ಸಹನ್ತೇ ॥೨೦.೫೩॥

 

ಅಲ್ಲಿ ಜರಾಸಂಧನೇ ಮೊದಲಾದ ಎಲ್ಲಾ ರಾಜರೂ ಬಂದರು. ಪಾಂಡವರೂ ಕೂಡಾ ಈ ಸ್ವಯಮ್ಬರವನ್ನು ನೋಡಲೆಂದು ಬಂದರು. ದುರ್ಯೋಧನನೇ ಮೊದಲಾದ, ಕರ್ಣನಿಂದ ಒಡಗೂಡಿದ ಕೌರವರೂ ಧನುಸ್ಸನ್ನು ಕೊನೇ ಪಕ್ಷ ನೇಣು ಬಿಗಿಯಬೇಕೆಂದು ಎಲ್ಲರೂ ಉತ್ಸಾಹಪಡುತ್ತಿದ್ದರು.  

 

ಕೇಚಿನ್ನಿಪೇತುರ್ದ್ಧನುಷೈವ ತಾಡಿತಾ ನ ವೈ ಕೇಚಿಚ್ಚಾಲಯಿತುಂ ಚ ಶೇಕುಃ ।

ದುರ್ಯ್ಯೋಧನೋ ಮಾಗಧಃ ಸೂತಪುತ್ರಃ ಸಜ್ಯಂ ಕೃತ್ವಾ ಲಕ್ಷವೀಕ್ಷಾಂ ನ ಶೇಕುಃ ॥೨೦.೫೪॥

 

ಕೆಲವರು ಬಿಲ್ಲಿನಿಂದ ಹೊಡೆಯಲ್ಪಟ್ಟವರಾಗಿ ಬಿದ್ದರು. ಕೆಲವರು ಅಲುಗಾಡಿಸಲೂ ಕೂಡಾ ಶಕ್ತರಾಗಲಿಲ್ಲ. ದುರ್ಯೋಧನ, ಜರಾಸಂಧಾ, ಕರ್ಣಾ, ಮೊದಲಾದವರು ಹೆದೆಯೇರಿಸಿದರು. ಬಿಲ್ಲನ್ನು ಬಗ್ಗಿಸಿ ದಾರವನ್ನೂ ಕಟ್ಟಿದರು. ಆದರೂ ಅವರಿಂದ ಗುರಿಯನ್ನು ನೋಡಲಿಕ್ಕಾಗಲಿಲ್ಲ.

[ಆದಾಯ  ವ್ಯಸೃಜನ್ ಕೇಚಿತ್ ಸಜ್ಯೀಕರ್ತುಮನೀಶ್ವರಾಃ । ಆ ಕೋಟ್ಯಾ ಜ್ಯಾಮ್ ಸಮಾಕೃಷ್ಯ ಪೇತುರೇಕೇsಮುನಾ ಹತಾಃ (ಭಾಗವತ ೧೦.೭೧.೨೨) ]

 

ಧನಞ್ಜಯಃ ಸ್ವಾತ್ಮಬಲಂ ಪ್ರಕಾಶಯನ್ ಸಜ್ಯಂ ಕೃತ್ವಾ ಧನುರೈಕ್ಷಚ್ಚ ಲಕ್ಷಮ್ ।

ನೈವಾsದದೇ ಬಾಣಮನಿಚ್ಛಯೈವ ತತ್ ಪ್ರಾಪ್ಯಾಂ ಜಾನನ್ ಕೇಶವೇನೈವ ತಾಂ ಚ ॥೨೦.೫೫॥

 

ಅರ್ಜುನನು ತನ್ನ ಬಲವನ್ನು ತೋರಿಸಲು ಬಯಸಿ, ಧನುಸ್ಸನ್ನು ನೇಣಿನಿಂದ ಬಿಗಿದು, ಗುರಿಯನ್ನೂ ಕಂಡ. ಆದರೆ ಅದನ್ನು ಹೊಡೆಯಲು ಮನಸಾಗದೇ ಬಾಣವನ್ನು ಸ್ವೀಕರಿಸಲೇ ಇಲ್ಲ. ಏಕೆಂದರೆ ನಾರಾಯಣನೇ ಇದನ್ನು ಹೊಂದಬೇಕು ಎಂದು ತಿಳಿದು ಅವನು ಬಾಣವನ್ನು ಕೈಗೆತ್ತಿಕೊಳ್ಳಲಿಲ್ಲ.

[ಭಾಗವತ ಹೀಗೆ ಹೇಳುತ್ತದೆ: ‘ಮತ್ಸ್ಯಾಭಾಸಂ ಜಲೇ ದೃಷ್ವಾ ಜ್ಞಾತ್ವಾ ಚ  ತದವಸ್ಥಿತಿಮ್    ಪಾರ್ಥೋ ಯತ್ತೋsಸೃಜದ್ ಬಾಣಾನ್ ನಾಚ್ಛಿನತ್ ಪಸ್ಪೃಶೇ ಪರಮ್ (೧೦. ೭೧.೨೪) ಮತ್ಸ್ಯದ ಆಭಾಸವನ್ನು ನೀರಿನಲ್ಲಿ ಕಂಡ. ಅದು ಎಲ್ಲಿದೇ ಎಂದೂ ತಿಳಿಯಿತು. ಗುರಿ ಎಲ್ಲಿದೆ ಎಂದು ಗೊತ್ತಾದ ಮೇಲೂ ಬಾಣಬಿಟ್ಟ ಆದರೆ ಅದು ಗುರಿಯನ್ನು ತಲುಪಲಿಲ್ಲಾ ಎಂದು ಭಾಗವತದಲ್ಲಿ ಹೇಳಲಾಗಿದೆ.  ಆದರೆ ಆಚಾರ್ಯರು ಈ ಮಾತಿನ ತಾತ್ಪರ್ಯವನ್ನು ಸ್ಪಷ್ಟಪಡಿಸುತ್ತಾ ಕೇವಲ ಗುರಿ ಕಂಡ ಆದರೆ ಬಾಣ ಬಿಡಲಿಲ್ಲಾ ಎಂದು ನಿರ್ಣಯ ನೀಡಿದ್ದಾರೆ]

 

ಭೀಮಶ್ಚಾಪಂ ಲಕ್ಷಮಪ್ಯೇತದತ್ರ ದ್ರಷ್ಟುಂ ಚ ನೈವೈಚ್ಛದರೀನ್ದ್ರಧಾರಿಣಃ ।

ಯೋಗ್ಯೇ ಕರ್ಮ್ಮಣ್ಯಾಯತಂಶ್ಚಾಪರಾಧೀ ಸ್ಯಾದಿತ್ಯಞ್ಜಃ ಪಶ್ಯಮಾನೋ ಮಹಾತ್ಮಾ ॥೨೦.೫೬॥

 

ಭೀಮಸೇನನು ಬಿಲ್ಲನ್ನೂ ಮುಟ್ಟಲಿಲ್ಲ, ಗುರಿಯನ್ನೂ ಕೂಡಾ  ನೋಡ ಬಯಸಲಿಲ್ಲ. ಚಕ್ರಧಾರಿಯಾಗಿರುವ ಪರಮಾತ್ಮನಿಗೆ ಮಾತ್ರ ಉಚಿತವಾಗಿರುವ ಕರ್ಮದಲ್ಲಿ ಪ್ರಯತ್ನಪಟ್ಟರೂ ಅಪರಾಧಿಯಾಗುತ್ತಾನೆ ಎಂದು ಅವನು ಚೆನ್ನಾಗಿ ತಿಳಿದಿದ್ದ.

[ಭೀಮೋ ದುರ್ಯೋಧನಃ ಕರ್ಣೋ ನಾವಿನ್ದಂಸ್ತದವಸ್ಥಿತಿಮ್(೧೦. ೭೧.೨೩), ಇಲ್ಲಿ ಭೀಮ, ದುರ್ಯೋಧನ, ಕರ್ಣ ಇವರ್ಯಾರಿಗೂ ಲಕ್ಷ್ಯದ ಇರುವಿಕೆಯ ತಿಳಿವು ಬರಲಿಲ್ಲ ಎಂದಿದ್ದಾರೆ. ಇದರ ತಾತ್ಪರ್ಯವನ್ನು  ಸ್ಪಷ್ಟಪಡಿಸುತ್ತಾ ಆಚಾರ್ಯರು ‘ಭೀಮ ಬಿಲ್ಲಿನ ಹತ್ತಿರಕ್ಕೇ ಹೋಗಿರಲಿಲ್ಲಾ ಎಂದು ನಿರ್ಣಯ ನೀಡಿದ್ದಾರೆ.]

No comments:

Post a Comment