ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 20, 2020

Mahabharata Tatparya Nirnaya Kannada 2088_2097

 

ನಿತ್ಯೈವ ಯಾ ಪ್ರಕೃತಿಃ ಸ್ವೇಚ್ಛಯೈವ ಜಗಚ್ಛಿಕ್ಷಾರ್ತ್ಥಂ ದ್ವಾದಶೀಂ ಭೀಮಸಞ್ಜ್ಞಾಮ್ ।

ಉಪೋಷ್ಯ ಬಭ್ರೇ ಕೋಟಿಧಾರಾಜಲಸ್ಯ ವಿಷ್ಣೋಃ ಪ್ರೀತ್ಯರ್ತ್ಥಂ ಸೈವ ಹಿ ಸತ್ಯಭಾಮಾ ॥೨೦.೮೮॥

 

ಯಾವ ಸತ್ಯಭಾಮೆಯು ನಿತ್ಯಳಾಗಿರುವ ಪ್ರಕೃತಿಮಾನಿನಿಯೋ, ಅವಳು ತನ್ನ ಇಚ್ಛೆಯಿಂದಲೇ, ಜಗತ್ತಿಗೆ ಶಿಕ್ಷಣ ಕೊಡುವುದಕ್ಕಾಗಿ, ವಿಷ್ಣುಪ್ರೀತ್ಯರ್ಥವಾಗಿ, ಭೀಮ ಎಂಬ ಹೆಸರಿನ ದ್ವಾದಶಿಯನ್ನು ಉಪವಾಸಮಾಡಿ(ದ್ವಾದಶಿಯಲ್ಲಿನ ವ್ರತದ ಅಂಗವಾಗಿ ಏಕಾದಶಿ ಉಪವಾಸಮಾಡಿ), ಕೋಟಿಧಾರಾ ಜಲವ್ರತವನ್ನು ಕೈಗೊಂಡಳು.

[ಯಾವುದು ಈ ಭೀಮ-ಏಕಾದಶಿ? ಬೇರೆಬೇರೆ ಪುರಾಣಗಳಲ್ಲಿ ಈ ವ್ರತದ ಕುರಿತು ಮತ್ತು ಅದರ ವಿಧಾನವನ್ನು ಕುರಿತು ಹೇಳಿರುವುದನ್ನು ನಾವು ಕಾಣುತ್ತೇವೆ. ಅಗ್ನಿಪುರಾಣದಲ್ಲಿ ಹೇಳುವಂತೆ :  ಮಾಘಶುಕ್ಲೇ ತು ದ್ವಾದಶ್ಯಾಂ ಭೀಮದ್ವಾದಶಿಕವ್ರತಿ । ನಮೋ ನಾರಾಯಣಾಯೇತಿ ವ್ರಜೇದ್  ವಿಷ್ಣುಂ ಸ ಸರ್ವಭಾಕ್’ (ಅ.ಪು. ೧೮೮.೩)  ಮಾಘಶುಕ್ಲ ದ್ವಾದಶಿಯನ್ನು ಭೀಮ ದ್ವಾದಶಿ ಎಂದು ಕರೆಯುತ್ತಾರೆ.  ಪಾದ್ಮಪುರಾಣದಲ್ಲಿ- ‘ಭವಿತಾ ಸ ತದಾ ಬ್ರಹ್ಮನ್  ಕರ್ತಾ ಚೈವ  ವೃಕೋದರಃ । ಪ್ರವರ್ತಕೋsಸ್ಯ ಧರ್ಮಸ್ಯ ಪಾಣ್ಡುಸೂನುರ್ಮಹಾಬಲಃ’ (ಸೃಷ್ಟಿಖಂಡ ೨೩.೧೪),  ಇದನ್ನು ಹೀಗೆ ಪ್ರವೃತ್ತಿ ಮಾಡಿದ್ದು (ಹೀಗೆ ಮಾಡಬೇಕು ಎಂದು ನಿಯಮ ರೂಪಿಸಿದ್ದು) ಭೀಮಸೇನ. ಅದರಿಂದಾಗಿ ಅದಕ್ಕೆ ಭೀಮ-ಏಕಾದಶಿ ಎನ್ನುತ್ತಾರೆ, ತಸ್ಮಾತ್ ತ್ವಂ ಸತ್ವಮಾಲಮ್ಬ್ಯ ಭೀಮಸೇನ ವಿಮತ್ಸರಃ । ಕುರು ವ್ರತಮಿದಂ ಸಮ್ಯಕ್  ಸ್ನೇಹಾದ್ ಗುಹ್ಯಂ ಮಯೋದಿತಮ್ । ತ್ವಯಾ ಕೃತಮಿದಂ  ವೀರ ತ್ವನ್ನಾಮ್ನಾ    ಭವಿಷ್ಯತಿ । ಸಾ ಭೀಮದ್ವಾದಶೀ ಹ್ಯೇಷಾ ಸರ್ವಪಾಪಹರಾ  ಶುಭಾ । ಯಾ ತು ಕಲ್ಯಾಣಿನೀ  ನಾಮ ಪೂರ್ವಕಲ್ಪೇಷು ಪಠ್ಯತೇ’ (ಸೃಷ್ಟಿಖಂಡ ೨೩.೬೨-೬೪) ಭೀಮನಿಗೆ ಇದನ್ನು ಅವನ  ಹಿರಿಯರು ಉಪದೇಶ ಮಾಡಿದ್ದು, ಭೀಮ ಅದರಂತೆ ನಡೆದುಕೊಂಡನಂತೆ. ಇದೇ ವಿವರಣೆಯನ್ನು ನಾವು ಮತ್ಸ್ಯಪುರಾಣದಲ್ಲೂ(೬೯.೧೩; ೫೬-೫೭) ಕಾಣಬಹುದು. ಪಾದ್ಮಪುರಾಣದಲ್ಲಿ(೨೩.೩೯-೪೦)  ಮತ್ತು ಮತ್ಸ್ಯಪುರಾಣದಲ್ಲಿ(೬೯.೩೭-೩೮) ಈ ವ್ರತದ ಕ್ರಮವನ್ನು ಹೇಳಿದ್ದಾರೆ: ‘ಮಧ್ಯೇ ಚ ಕಲಶಂ ತತ್ರ ಮಾಷಮಾತ್ರೇಣ ಸಂಯುತಮ್ । ಛಿದ್ರೇಣ ಜಲಸಮ್ಪೂರ್ಣಾಮಧಃಕೃಷ್ಣಾಜಿನೇ ಸ್ಥಿತಃ । ತಸ್ಯ ಧಾರಾಂ ಚ ಶಿರಸಾ ಧಾರಾಯೇತ್ ಸಕಲಾಂ ನಿಶಾಮ್ । ಧಾರಾಭಿರ್ಭೂರಿಭಿರ್ಭೂರಿ ಫಲಂ ವೇದವಿದೋ ವಿದುಃ’ ಒಂದು ದೊಡ್ಡ ಕಲಶ, ಅದರಲ್ಲಿ ಒಂದು ಉದ್ದಿನ ಕಾಳಿನಷ್ಟು ತೂತುಮಾಡಿ ಅದರ ತುಂಬಾ ನೀರು ತುಂಬಿ, ಅದರ ಕೆಳಗೆ ನಿಂತು ನೆನೆಯುತ್ತಾ ದೇವರನ್ನು ಸ್ಮರಣೆಮಾಡುವುದು. ತದನಂತರ ಬ್ರಾಹ್ಮಣರಿಗೆ ದಾನ. ಇದನ್ನು  ಕೋಟಿಧಾರಾ ವ್ರತ ಎಂದು ಕರೆಯುತ್ತಾರೆ. ಹರಿವಂಶದಲ್ಲಿ ಹೀಗೆ ಹೇಳಿದ್ದಾರೆ: ‘ಸ್ನಾತ್ವಾ ಸ್ತ್ರೀ ಪ್ರಾತರುತ್ಥಾಯ ಪತಿಂ ವಿಜ್ಞಾಪಯೇತ್ ಸತೀ । ಉಪವಾಸಾರ್ಥಮಥ ವಾ ವ್ರತಕಾರ್ಯಂ ಧೃತವ್ರತೇ । ಶ್ವಶುರಾಭ್ಯಾಂ ಚ ಚರಣೌ ಸತತಂ ಸತ್ತಮಸ್ಯ ಚ । ಗೃಹೀತ್ವೌದುಮ್ಬರಂ ಪಾತ್ರಂ ಸಕುಶಂ ಸಾಕ್ಷತಂ ತಥಾ । ಗೋಶೃಙ್ಗಂ ದಕ್ಷಿಣಂ ಸಿಚ್ಯ ಪ್ರತಿಗೃಹ್ಣೀತ ತಜ್ಜಲಮ್ । ತತೋ ಭರ್ತುಃ ಸತೀ ದದ್ಯಾತ್  ಸ್ನಾತಸ್ಯ ಪ್ರಯತಸ್ಯ ಚ   ಆತ್ಮನೋsಪಿ ನಿಷೇಕ್ತವ್ಯಂ ತತಃ ಶಿರಸಿ ತಜ್ಜಲಮ್ ।  ತ್ರೈಲೋಕ್ಯೇ ಸರ್ವತೀರ್ಥೇಷು ಸ್ನಾನಮೇತದುದಾಹೃತಮ್’ (ವಿಷ್ಣುಪರ್ವಣಿ ೭೮.೧೯-೨೨) ಬೆಳಿಗ್ಗೆ ಎದ್ದು, ಸ್ನಾನಮಾಡಿ, ಗಂಡನಿಂದ ಮತ್ತು ಎಲ್ಲಾ ಹಿರಿಯರಿಂದ ಅನುಜ್ಞೆಯನ್ನು ಪಡೆದುಕೊಳ್ಳುವುದು. ‘ನಾನು ಉಪವಾಸ ಮಾಡಬೇಕೆಂದಿದ್ದೇನೆ, ಅದಕ್ಕೆ ತಾವೆಲ್ಲರೂ ಅನುಜ್ಞೆ ಕೊಡಿ ಎಂದು. ಅನುಜ್ಞೆ ಪಡೆದಮೇಲೆ, ತನ್ನ ಗಂಡನ ಜೊತೆಗೆ ಈ ಹಿಂದೆ ಹೇಳಿದ ರೀತಿಯಲ್ಲಿ ಸ್ನಾನವನ್ನು ಮಾಡುವುದು. ಆಮೇಲೆ ಮರುದಿನ ವಿಶೇಷವಾಗಿ ಬ್ರಾಹ್ಮಣರಿಗೆ ದಾನ ಮಾಡುವುದು. ಇದು ಪದ್ಧತಿ. ಇದನ್ನು ಸತ್ಯಭಾಮೆ ಮಾಡಿದಳು.  ಈ ವ್ರತದಿಂದ ಏನು ಪ್ರಯೋಜನ ಎನ್ನುವ ವಿವರಣೆ ಹರಿವಂಶದಲ್ಲಿ ಹೀಗಿದೆ: ಸಪತ್ನೀನಾಮಧಿ ನಿತ್ಯಂ ಭವೇಯಂ ಸಪುತ್ರಾ ಸ್ಯಾಂ ಸುಭಗಾ ಚಾರುರೂಪಾ । ಸಮ್ಪನ್ನಹಸ್ತಾ ಗುಣವಾದಿನೀ ಚ ಸರ್ವಾತ್ಮನಾ  ಸ್ಯಾಂ ಮಾ ದರಿದ್ರಾ ಭವೇಯಮ್’ (ವಿಷ್ಣುಪರ್ವಣಿ ೭೯.೧೨) ಎಲ್ಲಾ ಸವತಿಯರ ಮೇಲ್ಗಡೆ ನಾನು ಇರುವಂತವಳಾಗಬೇಕು. ಒಳ್ಳೆಯ ಮಗ ನನಗೆ ಸಿಗಬೇಕು. ಯಾವಾಗಲೂ ಸಂಪತ್ತಿನಿಂದ ಇರಬೇಕು. ಗುಣವನ್ನು ಗ್ರಹಿಸುವಂತೆ ಆಗಬೇಕು. ನಾನು ಖಂಡಿತಾ ದರಿದ್ರಳಾಗಬಾರದು. ಇದು ದರ್ಶನ ಭಾಷೆ. ಇದಕ್ಕೆ  ಆಚಾರ್ಯರು ನಿರ್ಣಯ ನೀಡುತ್ತಾ, ‘ಜಗತ್ತಿಗೆ ಶಿಕ್ಷಣ ಕೊಡುವುದಕ್ಕಾಗಿ ಸತ್ಯಭಾಮೆಯು, ವಿಷ್ಣುವಿನ ಪ್ರೀತಿಗಾಗಿ,  ಭೀಮ ಎಂಬ ಹೆಸರಿನ ದ್ವಾದಶಿಯನ್ನು ಉಪವಾಸಮಾಡಿ, ಕೋಟಿಧಾರಾ ಜಲವ್ರತವನ್ನು ಕೈಗೊಂಡಳು’ ಎಂದು ಹೇಳಿದ್ದಾರೆ].

 

ತಯಾ ಯುಕ್ತೋ ಗರುಡಸ್ಕನ್ಧಸಂಸ್ಥೋ ದೂರಾನುಯಾತೋ ವಜ್ರಭೃತಾsಪ್ಯನುಜ್ಞಾಮ್ ।

ದತ್ವಾsಮುಷ್ಮೈ ಪ್ರಯಯೌ ವಾಯುಜುಷ್ಟಾಮಾಶಾಂ ಕೃಷ್ಣೋ ಭೌಮವಧೇ ಧೃತಾತ್ಮಾ ॥೨೦.೮೯॥

 

ಸತ್ಯಭಾಮೆಯ ಸಹಿತನಾದ ಶ್ರೀಕೃಷ್ಣನು ಗರುಡನ ಹೆಗಲೇರಿ,  ವಜ್ರಧಾರಿ ಇಂದ್ರನಿಂದ ಬಹಳ ದೂರದ ತನಕ  ಅನುಸರಿಸಲ್ಪಟ್ಟವನಾಗಿ, ತದನಂತರ ಇಂದ್ರನಿಗೆ ಅವನ ಲೋಕಕ್ಕೆ ಹೋಗಲು ಅನುಜ್ಞೆಯನ್ನು ನೀಡಿ, ನರಕಾಸುರನನ್ನು ಕೊಲ್ಲಲೆಂದು ವಾಯುವ್ಯದಿಕ್ಕಿಗೆ ತೆರಳಿದನು.

 

ಭೌಮೋ ಹ್ಯಾಸೀದ್ ಬ್ರಹ್ಮವರಾದವದ್ಧ್ಯೋ ನ ಶಸ್ತ್ರಭೃಜ್ಜೀಯಸ ಇತ್ಯಮುಷ್ಮೈ ।

ದತ್ತೋ ವರೋ ಬ್ರಹ್ಮಣಾ ತದ್ವದೇವ ತಸ್ಯಾಮಾತ್ಯಾನಾಂ ತದ್ವದವದ್ಧ್ಯತಾ ಚ ॥೨೦.೯೦॥

 

ನರಕಾಸುರನು ಬ್ರಹ್ಮವರದಿಂದ ಅವಧ್ಯನಾಗಿದ್ದನು. ಶಸ್ತ್ರಧಾರಿಯಾದ ನೀನು ಎಂದೂ ಸೋಲುವುದಿಲ್ಲ ಎಂದು ಅವನಿಗಾಗಿ ಬ್ರಹ್ಮನಿಂದ ವರವು ಕೊಡಲ್ಪಟ್ಟಿತ್ತು. ಅಂತೆಯೇ ಅವನ ಅಮಾತ್ಯರಿಗೂ ಕೂಡಾ ಅವಧ್ಯತ್ವದ ವರವಿತ್ತು.

[ಅವನ ಅಮಾತ್ಯರು ಯಾರು ಎನ್ನುವುದನ್ನು ಹರಿವಂಶದಿಂದ ತಿಳಿಯಬಹುದು. ‘ಹಯಗ್ರೀವೋ ನಿಸುಮ್ಭಶ್ಚ ಪೀಠಃ ಪಞ್ಚಜನಸ್ತಥಾ । ಮುರಃ ಪುತ್ರಸಹಸ್ರೈಶ್ಚ ವರಮತ್ತೋsಸುರೋ  ಮಹಾನ್’ (ವಿಷ್ಣುಪರ್ವಣಿ ೬೩.೧೮) ಈ ಎಲ್ಲರೂ ಬ್ರಹ್ಮನ ವರಮತ್ತರಾಗಿದ್ದರು ಎಂದಿದೆ ಹರಿವಂಶ. ಇಲ್ಲಿ ಮುರನಿಗೆ ಸಾವಿರ ಮಕ್ಕಳಿದ್ದರು ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಾಗವತದಲ್ಲಿ ‘ಧ್ರುವಶ್ಚರಿಷ್ಣುಃ ಶ್ರವಣೋ ವಿಭಾವಸುರ್ನಭೋ ವಸುಶ್ಚಾನರಣಶ್ಚ ಸಪ್ತಮಃ’(೧೦.೬೩.೧೬)   ಎಂದು ಏಳು ಮಕ್ಕಳು ಎಂದಿದ್ದಾರೆ. ಆದ್ದರಿಂದ ಮೇಲೆ ಹೇಳಿದ ‘ಸಹಸ್ರ’ ಎಂದರೆ ಸಹ-ಸರಂತಿ. ಯಾವಾಗಲೂ ಅಪ್ಪನ ಜೊತೆಜೊತೆಗೇ ಇರುವವರು ಎಂದರ್ಥ.  ಸಹಸಾ-ರಾಂತಿ ಗಚ್ಛಂತಿ – ಏಳೂ ಜನರೂ ಜೊತೆಜೊತೆಗೇ ಯುದ್ಧಕ್ಕೆ ಹೋಗುತ್ತಾರೆ ಎನ್ನುವ ಅರ್ಥದಲ್ಲಿ ಸಹಸ್ರ ಎಂದು ಹೇಳಿದ್ದಾರೆ. ವಸ್ತುತಃ ಅವರು ಏಳು ಮಂದಿ.]

(ಸಮಾನಬಲವುಳ್ಳವರು ಯಾವತ್ತೂ ಪರಸ್ಪರ ಸ್ನೇಹದಿಂದ ಇರುವುದು ಸಾತ್ವಿಕರಲ್ಲೇ ಇರುವುದು ಕಷ್ಟ. ಹೀಗಿರುವಾಗ ತಾಮಸಾಗ್ರಗಣ್ಯರಾದ, ಅವಧ್ಯತ್ವದ ವರವನ್ನು ಹೊಂದಿದ್ದ ಈ ಅಮಾತ್ಯರೆಲ್ಲರೂ ಒಟ್ಟಿಗೇ  ನರಕಾಸುರನ ಅಧೀನದಲ್ಲಿ ಹೇಗಿದ್ದರು ಎಂದರೆ:)

 

 

ಭೌಮೇನ ಜಯ್ಯತ್ವಮಪಿ ಹ್ಯಮೀಷಾಂ ದತ್ತಂ ಭೌಮಾಯ ಬ್ರಹ್ಮಣಾ ಕ್ರೋಡರೂಪಾತ್ ।

ವಿಷ್ಣೋರ್ಜ್ಜಾತಾಯಾಸ್ಯ ದುರ್ಗ್ಗಂ ಚ ದತ್ತಂ ಪ್ರಾಗ್ಜ್ಯೋತಿಷಂ ನಾಮ ಪುರಂ ಸಮಸ್ತೈಃ ॥೨೦.೯೧ ॥

 

ಅಮಾತ್ಯರಿಗೆ ನರಕಾಸುರನಿಂದ ಸೋಲಿಸುವಿಕೆಯ ವರವು ಬ್ರಹ್ಮದೇವರಿಂದ ಕೊಡಲ್ಪಟ್ಟಿತ್ತು. (ಬೇರೆಯವರಿಂದ ಅವರು ಅವಧ್ಯರಾದರೂ ಕೂಡಾ, ನರಕಾಸುರ ಅವರನ್ನು ಗೆಲ್ಲಬಹುದಾಗಿತ್ತು. ಹಾಗಾಗಿ ಅವರು ನರಕಾಸುರನ ದಾಸರಾಗಿದ್ದರು). ವರಾಹರೂಪಿಯಾದ ವಿಷ್ಣುವಿನಿಂದ ಹುಟ್ಟಿರುವ ಈ ನರಕನಿಗೆ  ಯಾರಿಂದಲೂ ಹೋಗಲು ಅಸಾಧ್ಯವಾಗಿರುವ ಪ್ರಾಗ್ಜ್ಯೋತಿಷ(ಅಸಾಮ್ ಪ್ರಾಂತ್ಯ) ಎನ್ನುವ ಪಟ್ಟಣವು ಕೊಡಲ್ಪಟ್ಟಿತ್ತು.

 

ಆಸೀದ್ ಬಾಹ್ಯೇ ಗಿರಿದುರ್ಗ್ಗಂ ತದನ್ತಃ ಪಾನೀಯದುರ್ಗ್ಗಂ ಮೌರವಂ ಪಾಶದುರ್ಗ್ಗಮ್ ।

ತಸ್ಯಾಪ್ಯನ್ತಃ ಕ್ಷುರಧಾರೋಪಮಂ ತತ್ಪಾಶಾಶ್ಚ ತೇ ಷಟ್ಸಹಸ್ರಾಶ್ಚ ಘೋರಾಃ  ॥೨೦.೯೨॥


 

ಪಟ್ಟಣದ ಹೊರಭಾಗದಲ್ಲಿ ಭೇದಿಸಲು ಅಸಾಧ್ಯವಾದ ಬೆಟ್ಟವಿತ್ತು(ಗಿರಿದುರ್ಗ). ಅದರ ಒಳಭಾಗದಲ್ಲಿ ಜಲದುರ್ಗ(ನೀರು) ಇತ್ತು. ನಂತರ ಮುರನಿಂದ ನಿರ್ಮಿಸಲ್ಪಟ್ಟ ಭಯಂಕರವಾದ, ಖಡ್ಗದ ಅಲುಗಿನಿಂತೆ ಹರಿತವಾದ ಆರುಸಾವಿರ ಪಾಶಗಳಿದ್ದವು.

[ಈ ಕುರಿತು ಮಹಾಭಾರತದ ಸಭಾಪರ್ವದಲ್ಲಿ(೫೫.೨೮) ಹೀಗೆ ಹೇಳಿದ್ದಾರೆ:  ‘ಕ್ಷುರಾನ್ತಾನ್ ಮೌರವಾನ್ ಪಾಶಾನ್ ಷಟ್ಸಹಸ್ರಂ ದದರ್ಶ ಸಃ’]   

 

ಅಭೇದ್ಯತ್ವಮರಿಭಿರತಾರ್ಯ್ಯತಾ ಚ ದತ್ತಾ ದುರ್ಗ್ಗಾಣಾಂ ಬ್ರಹ್ಮಣಾssರಾಧಿತೇನ ।

ತಸ್ಯಾಮಾತ್ಯಾಃ ಪೀಠಮುರೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ಶೂರಾಃ ॥೨೦.೯೩॥

 

ಬ್ರಹ್ಮನನ್ನು ಆರಾಧನೆ ಮಾಡಿದ್ದರಿಂದ ನರಕನಿಗೆ ಈ ದುರ್ಗಗಳನ್ನು ಶತ್ರುಗಳು ದಾಟದಂತೆ  ಅಭೇದಿತ್ಯದ ವರವಿತ್ತು. ಅವನ ಮಂತ್ರಿಗಳು  ಪೀಠ, ಮುರ, ನಿಸುಮ್ಭ, ಹಯಗ್ರೀವ ಮತ್ತು ಪಞ್ಚಜನ  ಎನ್ನುವ ಐವರು ಶೂರರಿದ್ದರು.


ಸಙ್ಕಲ್ಪ್ಯ ತಾನ್ ಲೋಕಪಾಲಾನಹಂ ಚ ಬ್ರಹ್ಮೇತ್ಯದ್ಧಾ ಭಾಷಮಾಣಃ ಸ ಆಸ್ತೇ ।

ಹನ್ತುಂ ಕೃಷ್ಣೋ ನರಕಂ ತತ್ರ ಗತ್ವಾ ಗಿರಿದುರ್ಗ್ಗಂ ಗದಯಾ ನಿರ್ಬಿಭೇದ ॥೨೦.೯೪॥

 

ಆ ಐವರನ್ನು ನರಕಾಸುರನು ಲೋಕಪಾಲಕರನ್ನಾಗಿ ಸಂಕಲ್ಪಿಸಿ, ತಾನು ‘ಬ್ರಹ್ಮ’ ಎಂದು ದರ್ಪದಿಂದ ನಿರಂತರವಾಗಿ ಹೇಳಿಕೊಳ್ಳುತ್ತಿದ್ದ. ಇಂತಹ ನರಕನನ್ನು ಕೊಲ್ಲಲು ಕೃಷ್ಣನು ಅಲ್ಲಿಗೆ ತೆರಳಿ ಗದೆಯಿಂದ ಗಿರಿದುರ್ಗವನ್ನು ಒಡೆದುಹಾಕಿದನು.

 

ವಾಯವ್ಯಾಸ್ತ್ರೇಣೋದಕಂ ಶೋಷಯಿತ್ವಾ ಚಕರ್ತ್ತ ಖಡ್ಗೇನ ಮುರಸ್ಯ ಪಾಶಾನ್ ।

ಅಥಾಭಿಪೇತುರ್ಮ್ಮುರಪೀಠೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ದೈತ್ಯಾಃ ॥೨೦.೯೫ ॥

 

ವಾಯುವ್ಯಾಸ್ತ್ರದಿಂದ ನೀರನ್ನು ಒಣಗಿಸಿ, ಖಡ್ಗದಿಂದ ಮುರನ ಕತ್ತಿಯ ಅಲುಗಿನಂತೆ ಇರುವ ಪಾಶಗಳನ್ನು ಶ್ರೀಕೃಷ್ಣ ಕತ್ತರಿಸಿದ. ತದನಂತರ ಮುರ, ಪೀಠ, ನಿಸುಮ್ಭ, ಹಯಗ್ರೀವ ಮತ್ತು  ಪಞ್ಚಜನ ಎನ್ನುವ ಆ ಐದುಜನ ದೈತ್ಯರು ಕಾದಲೆಂದು ಕೃಷ್ಣನನ್ನು ಎದುರುಗೊಂಡರು.

 

ತಾಞ್ಛೈಲಶಸ್ತ್ರಾಸ್ತ್ರಶಿಲಾಭಿವರ್ಷಿಣಶ್ಚಕ್ರೇ ವ್ಯಸೂಂಶ್ಚಕ್ರನಿಕೃತ್ತಕನ್ಧರಾನ್ ।

ತೇಷಾಂ ಸುತಾಃ ಸಪ್ತಸಪ್ತೋರುವೀರ್ಯ್ಯಾ ವರಾದವದ್ಧ್ಯಾ ಗಿರಿಶಸ್ಯಾಭಿಪೇತುಃ ॥೨೦.೯೬ ॥

 

ಪರ್ವತಗಳು, ಶಸ್ತ್ರಗಳು, ಅಸ್ತ್ರಗಳು ಮತ್ತು ಬಂಡೆಕಲ್ಲುಗಳನ್ನು ತೂರುತ್ತಾ ಬರುತ್ತಿರುವ ಅವರನ್ನು ಶ್ರೀಕೃಷ್ಣ ಚಕ್ರದಿಂದ ಕತ್ತು ಕತ್ತರಿಸಿ, ಪ್ರಾಣಹೀನರನ್ನಾಗಿಮಾಡಿದ. ಆಗ ಅವರೆಲ್ಲರ ಮಕ್ಕಳು ಏಳೇಳುಜನ ಸದಾಶಿವನ ವರದಿಂದ ಅವಧ್ಯರಾದವರು ಯುದ್ಧಕ್ಕಾಗಿ ಬಂದರು.

[ಮಹಾಭಾರತದ ಸಭಾಪರ್ವದಲ್ಲಿ ಈ ಕುರಿತು ಹೇಳಿದ್ದಾರೆ: ಸಞ್ಛಿದ್ಯ ಪಾಶಾಞ್ಛರೇಣ ಮುರಂ ಹತ್ವಾ ಸಹಾನ್ವಯಮ್ । ಶೈಲಸಙ್ಘಾನತಿಕ್ರಮ್ಯ ನಿಸುಮ್ಭಂ ಚ ವ್ಯಪೋಥಯತ್ । ಯಃ ಸಹಸ್ರಸಹಸ್ತ್ವೇಕಃ ಸರ್ವಾನ್ ದೇವಾನಪೋಥಯತ್ । ತಂ ಜಘಾನ ಮಹಾವೀರ್ಯಂ ಹಯಗ್ರೀವಂ ಮಹಾಬಲಮ್ । ಅಪಾರತೇಜಾ ದುರ್ಧರ್ಷಃ ಸರ್ವಯಾದವನನ್ದನಃ ।  ಮಧ್ಯೇ ಲೋಹಿತಗಙ್ಗಾಯಾಂ ಭಗವಾನ್ ದೇವಕೀಸುತಃ । ಔದಕಾಯಾಂ ವಿರೂಪಾಕ್ಷಂ ಜಘಾನ ಮಧುಸೂದನಃ’ (೫೫.೨೯-೩೨). ಇಲ್ಲಿ  ವಿರೂಪಾಕ್ಷ’ ಎಂದರೆ   ‘ಪಞ್ಚಜನ’ (ನಾಮಾಂತರ).  ]

 

ತಾನಸ್ತ್ರಶಸ್ತ್ರಾಭಿಮುಚಃ ಶರೋತ್ತಮೈಃ ಸಮರ್ಪ್ಪಯಾಮಾಸ ಸ ಮೃತ್ಯವೇsಚ್ಯುತಃ ।

ಹತ್ವಾ ಪಞ್ಚತ್ರಿಂಶತೋ ಮನ್ತ್ರಿಪುತ್ರಾನ್ ಜಗಾಮ ಭೌಮಸ್ಯ ಸಕಾಶಮಾಶು ॥೨೦.೯೭॥

 

ಅಸ್ತ್ರ-ಶಸ್ತ್ರಗಳನ್ನು ಬಿಡತಕ್ಕ ಆ ಮೂವತ್ತೈದು ಅಮಾತ್ಯಪುತ್ರರನ್ನು ತನ್ನ ಶ್ರೇಷ್ಠವಾದ ಬಾಣಗಳಿಂದ ಕೊಂದ ಶ್ರೀಕೃಷ್ಣ, ನರಕಾಸುರನ ಸಮೀಪಕ್ಕೆ ವೇಗವಾಗಿ ತೆರಳಿದನು.

Friday, December 18, 2020

Mahabharata Tatparya Nirnaya Kannada 2083_2087

 

ಸಾಕ್ಷಾತ್ ಸತ್ಯಾ ರುಗ್ಮಿಣೀತ್ಯೇಕಸಂವಿದ್ ದ್ವಿಧಾಭೂತಾ ನಾತ್ರ ಭೇದೋsಸ್ತಿ ಕಶ್ಚಿತ್ ।

ತಥಾsಪಿ ಸಾ ಪ್ರಮದಾನಾಂ ಸ್ವಭಾವಪ್ರಕಾಶನಾರ್ತ್ಥಂ ಕುಪಿತೇವಾsಸ ಸತ್ಯಾ॥೨೦.೮೩॥

 

ಸತ್ಯಭಾಮೆಯು ಸಾಕ್ಷಾತ್ ರುಗ್ಮಿಣಿಯೇ ಆಗಿದ್ದು ಅವರಿಬ್ಬರೂ ಒಂದೇ ಅಭಿಪ್ರಾಯವನ್ನು ಹೊಂದಿರುವವರು. ಅವರಿಬ್ಬರಲ್ಲಿ ಯಾವುದೇ ಅಭಿಪ್ರಾಯ ಭೇದವಿಲ್ಲ. ಒಬ್ಬಳೇ ಲಕ್ಷ್ಮೀ ಎರಡು ರೂಪಗಳಲ್ಲಿ ಅವತರಿಸಿರುವುದು. ಹಾಗಿದ್ದರೂ  ಕೂಡಾ  ಸತ್ಯಭಾಮೆಯು ಹೆಣ್ಣುಮಕ್ಕಳ ಸ್ವಭಾವವನ್ನು ಪ್ರಪಂಚಕ್ಕೆ ತೋರುವುದಕ್ಕಾಗಿ ಮುನಿದವಳಂತೆ ತೋರಿಕೊಂಡಳು.

[ಹರಿವಂಶದಲ್ಲಿ ಹೀಗೆ ಹೇಳಿದ್ದಾರೆ:  ಮಮೃಷೇ ನ ಸಪತ್ನ್ಯಾಸ್ತು ತತ್ ಸೌಭಾಗ್ಯಗುಣೋದಯಮ್ । ಸತ್ಯಭಾಮಾ ಪ್ರಿಯಾ ನಿತ್ಯಂ ವಿಷ್ಣೋರತುಲತೇಜಸಃ’ (ವಿಷ್ಣುಪರ್ವಣಿ ೬೫.೪೯)]

 

ಸಾಕಂ ರುಗ್ಮಿಣ್ಯಾ ರಾಜಮದ್ಧ್ಯೇ ಪ್ರವೇಶಾತ್ ಸ್ತವಾದೃಷೇಃ ಪುಷ್ಪದಾನಾಚ್ಚ ದೇವೀಮ್ ।

ಕೋಪಾನನಂ ದರ್ಶಯನ್ತೀಮುವಾಚ ವಿಡಮ್ಬಾರ್ತ್ಥಂ ಕಾಮಿಜನಸ್ಯ ಕೃಷ್ಣಃ ॥೨೦.೮೪॥

 

ದಾತಾಸ್ಮ್ಯಹಂ ಪಾರಿಜಾತಂ ತರುಂ ತ ಇತ್ಯೇವ ತತ್ರಾಥಾsಗಮದ್ ವಾಸವೋsಪಿ ।

ಸರ್ವೈರ್ದ್ದೇವೈರ್ಭೌಮಜಿತೋsಪ್ಯದಿತ್ಯಾಸ್ತೇನೈವಾಥೋ ಕುಣ್ಡಲಾಭ್ಯಾಂ ಹೃತಾಭ್ಯಾಮ್ ॥೨೦.೮೫॥

 

ರುಗ್ಮಿಣಿಯಿಂದ ಕೂಡಿಕೊಂಡು ಶ್ರೀಕೃಷ್ಣ ಆ ಎಲ್ಲಾ ಅರಸರ ಮಧ್ಯದಲ್ಲಿ ಪ್ರವೇಶಮಾಡಿದ್ದರಿಂದಲೂ, ನಾರದರು ರುಗ್ಮಿಣಿಯನ್ನು  ಸ್ತೋತ್ರಮಾಡಿದ್ದರಿಂದಲೂ, ಪಾರಿಜಾತ ಕುಸುಮವನ್ನು ಕೊಟ್ಟಿದ್ದರಿಂದಲೂ, ಮುನಿದ ಮೋರೆಯನ್ನು ತೋರಿಸುವ ಸತ್ಯಭಾಮೆಯನ್ನು ಕುರಿತು, ಕಾಮುಕ ಜನರ ಅನುಕರಣೆಗಾಗಿ ಶ್ರೀಕೃಷ್ಣನು ‘ನಾನು ನಿನಗೆ ಪಾರಿಜಾತ ಮರವನ್ನು ಕೊಡುತ್ತಿದ್ದೇನೆ’ ಎಂದು ಹೇಳಿದನು. [‘ಪರಿ ಜಾತೋ  ವಿಷ್ಣುಪದ್ಯಾಃ ಪಾರಿಜಾತೇತಿ ಶಬ್ದಿತಃ’(ವಿಷ್ಣುಪರ್ವಣಿ ೬೭.೭೦) ಆಕಾಶಗಂಗೆಯ ಪರಿಸರದಲ್ಲಿ ಮೊದಲು ಬೆಳೆದದ್ದರಿಂದ ಅದನ್ನು ಪಾರಿಜಾತ ಎಂದು ಕರೆದರು] ಕೆಲವು ಕಾಲ ಕಳೆದಮೇಲೆ ನರಕಾಸುರನಿಂದ ಪರಾಜಿತನಾದ ಇಂದ್ರನು ಸಮಸ್ತ ದೇವತೆಗಳಿಂದ ಕೂಡಿಕೊಂಡು, ಆ  ನರಕಾಸುರನಿಂದಲೇ  ಅದಿತಿಯ ಕುಂಡಲಗಳು ಬಲಾತ್ಕಾರವಾಗಿ ಕಸಿದುಕೊಂಡಿರುತ್ತಿರಲು ಆತ ಶ್ರೀಕೃಷ್ಣನ ಬಳಿ ಬಂದ.  

 

ತದೈವಾsಗುರ್ಮ್ಮುನಯಸ್ತೇನ ತುನ್ನಾ ಬದರ್ಯಾಸ್ತೇ ಸರ್ವ ಏವಾsಶು ಕೃಷ್ಣಮ್ ।

ಯಯಾಚಿರೇ ಭೌಮವಧಾಯ ನತ್ವಾ ಸ್ತುತ್ವಾ ಸ್ತೋತ್ರೈರ್ವೈದಿಕೈಸ್ತಾನ್ತ್ರಿಕೈಶ್ಚ ॥೨೦.೮೬॥

 

ಆಗಲೇ ಮುನಿಗಳೂ ಕೂಡಾ ಇಂದ್ರನಿಂದ ಪ್ರಚೋದಿತರಾಗಿ ಬದರಿಯಿಂದ ಶ್ರೀಕೃಷ್ಣನ ಬಳಿ ಬಂದರು. ಅವರೆಲ್ಲರೂ ಶ್ರೀಕೃಷ್ಣನಿಗೆ ನಮಸ್ಕರಿಸಿ, ವೈದಿಕವಾದ ತಂತ್ರಾದಿಗಳಿಂದ ಸ್ತೋತ್ರಮಾಡಿ, ನರಕಾಸುರನ ಸಾವಿಗಾಗಿ ಬೇಡಿದರು.   

 

ಇನ್ದ್ರೇಣ ದೇವೈಃ ಸಹಿತೇನ ಯಾಚಿತೋ ವಿಪ್ರೈಶ್ಚ ಸಸ್ಮಾರ ವಿಹಙ್ಗರಾಜಮ್ ।

ಆಗಮ್ಯ ನತ್ವಾ ಪುರತಃ ಸ್ಥಿತಂ ತಮಾರುಹ್ಯ ಸತ್ಯಾಸಹಿತೋ ಯಯೌ ಹರಿಃ ॥೨೦.೮೭॥

 

ಹೀಗೆ ದೇವತೆಗಳಿಂದ ಕೂಡಿದ ಇಂದ್ರನಿಂದಲೂ, ಬ್ರಾಹ್ಮಣರಿಂದಲೂ ಬೇಡಲ್ಪಟ್ಟವನಾದ ಶ್ರೀಕೃಷ್ಣ ಗರುಡನನ್ನು ಸ್ಮರಿಸಿದ. ಬಂದು ನಮಸ್ಕರಿಸಿ ತನ್ನ ಮುಂದೆ ನಿಂತ ಗರುಡನನ್ನು ಏರಿದ ಶ್ರೀಕೃಷ್ಣ, ಸತ್ಯಭಾಮೆಯಿಂದ ಕೂಡಿಕೊಂಡು ಅಲ್ಲಿಂದ ತೆರಳಿದನು.


Tuesday, December 15, 2020

Mahabharata Tatparya Nirnaya Kannada 2072_2082

 

ತಯೋಕ್ತೋsಹಂ ನಾವತಾರೇಷು ಕಶ್ಚಿದ್ ವಿಶೇಷ ಇತ್ಯೇವ ಯದುಪ್ರವೀರಮ್ ।

ಸರ್ವೋತ್ತಮೋsಸೀತ್ಯವದಂ ಸ ಚಾsಹ ನ ಕೇವಲಂ ಮೇsಙ್ಕಗಾಯಾಃ ಶ್ರಿಯೋsಹಮ್ ॥೨೦.೭೨॥

 

ಸದೋತ್ತಮಃ ಕಿನ್ತು ಯದಾ ತು ಸಾ ಮೇ ವಾಮಾರ್ದ್ಧರೂಪಾ ದಕ್ಷಿಣಾನಾಮಧೇಯಾ ।

ಯಸ್ಮಾತ್ ತಸ್ಯಾ ದಕ್ಷಿಣತಃ ಸ್ಥಿತೋsಹಂ ತಸ್ಮಾನ್ನಾಮ್ನಾ ದಕ್ಷಿಣೇತ್ಯೇವ ಸಾ ಸ್ಯಾತ್ ॥೨೦.೭೩ ॥

 

ಈ ರೀತಿಯಾಗಿ ಯಜ್ಞನಾಮಕ ಲಕ್ಷ್ಮೀದೇವಿಯಿಂದ ಹೇಳಲ್ಪಟ್ಟ ನಾನು(ನಾರದರು), ಶ್ರೀಹರಿಗೆ ಅವತಾರಗಳಲ್ಲಿ ಯಾವುದೇ ಭೇದವಿಲ್ಲವೆಂದೇ  ಯದುಶ್ರೇಷ್ಠ ಶ್ರೀಕೃಷ್ಣನನ್ನು ಕುರಿತು ‘ನೀನು ಉತ್ಕೃಷ್ಟ’ ಎಂದು ಹೇಳಿದೆ. ಆಗ ಅವನು ಹೀಗೆ ಹೇಳಿದ: ‘ಕೇವಲ ನನ್ನ ತೊಡೆಯಲ್ಲಿರುವ ಲಕ್ಷ್ಮೀದೇವಿಯಿಂದ ಮಾತ್ರ ನಾನು ಉತ್ಕೃಷ್ಟನಲ್ಲ,  ನನ್ನ ಎಡಗಡೆ ಭಾಗವೇ ಅವಳಾಗಿರುತ್ತಾಳೆ. ಯಾವ ಕಾರಣದಿಂದ ಅವಳ ಬಲಗಡೆ ನಾನಿದ್ದೇನೋ ಅದಕ್ಕಾಗಿ ಅವಳು ‘ದಕ್ಷಿಣಾ’ ಎಂದೇ ಹೆಸರಾಗಿದ್ದಾಳೆ.  

 

ಸಾ ದಕ್ಷಿಣಾಮಾನಿನೀ ದೇವತಾ ಚ ಸಾ ಚ ಸ್ಥಿತಾ ಬಹುರೂಪಾ ಮದರ್ದ್ಧಾ ।

ವಾಮಾರ್ದ್ಧೋ ಮೇ ತತ್ಪ್ರವಿಷ್ಟೋ ಯತೋ ಹಿ ತತೋsಹಂ ಸ್ಯಾಮರ್ದ್ಧನಾರಾಯಣಾಖ್ಯಃ ॥೨೦.೭೪॥

 

ದಕ್ಷಿಣೆಗೆ(ಮೂಲಭೂತವಾಗಿ ವೇದಜ್ಞಾನಕ್ಕೆ)  ಅಭಿಮಾನಿನಿಯಾಗಿರುವ ಅವಳು ಬಹಳ ರೂಪವುಳ್ಳವಳಾಗಿ ನನ್ನ ಅರ್ಧರೂಪದಿಂದ ಇದ್ದಾಳೆ. ನನ್ನ ಎಡಭಾಗವು ಅವಳಲ್ಲಿ ಪ್ರವೇಶವನ್ನು ಹೊಂದಿದೆ. ಆಕಾರಣದಿಂದ ನಾನು ‘ಅರ್ಧನಾರಾಯಣ’ ಎನ್ನುವ ಹೆಸರುಳ್ಳವನಾಗಿದ್ದೇನೆ.

 

ತದಾsಪ್ಯಸ್ಯಾ ಉತ್ತಮೋsಹಂ ಸುಪೂರ್ಣ್ಣೋ ನ ಮಾದೃಶಃ ಕಶ್ಚಿದಸ್ತ್ಯುತ್ತಮೋ ವಾ ।

ಇತ್ಯೇವಾವಾದೀದ್ ದಕ್ಷಿಣಾಭಿಃ ಸಹೇತಿ ಸರ್ವೋತ್ತಮತ್ವಂ ದಕ್ಷಿಣಾನಾಂ ಸ್ಮರನ್ತ್ಸಃ ॥೨೦.೭೫॥

 

ಆಗಲೂ ಕೂಡಾ ಅವಳಿಂದ ನಾನು ಪೂರ್ಣನಾಗಿದ್ದೇನೆ, ಉತ್ಕೃಷ್ಟನಾಗಿದ್ದೇನೆ. ನನಗೆ ಸದೃಶನಾಗಲೀ, ಉತ್ತಮನಾದವನಾಗಲೀ ಯಾರೂ ಇಲ್ಲ’. ಈ ರೀತಿಯಾದ ಅಭಿಪ್ರಾಯದಿಂದಲೇ ಶ್ರೀಕೃಷ್ಣ ‘ದಕ್ಷಿಣೆಯ ಜೊತೆಗೆ’ ಎಂದು ಹೇಳಿದ. (ಲಕ್ಷ್ಮಿಗಿಂತ ನಾನು ಯಾವಾಗಲೂ ಶ್ರೇಷ್ಠನಾಗಿದ್ದೇನೆ  ಎನ್ನುವ ಅಭಿಪ್ರಾಯದಲ್ಲಿ ಶ್ರೀಕೃಷ್ಣ ಈ ರೀತಿ ಹೇಳಿದ ಎಂದು ವಿವರಿಸಿದ್ದಾರೆ ನಾರದರು).

 

ತಾಭಿಶ್ಚೈತಾಭಿರ್ದ್ದಕ್ಷಿಣಾಭಿಃ ಸಮೇತಾದ್ ವರಿಷ್ಠೋsಹಂ ಜಗತಃ ಸರ್ವದೈವ ।

ಮತ್ಸಾಮರ್ತ್ಥ್ಯಾನ್ನೈವ  ಚಾನನ್ತಭಾಗೋ ದಕ್ಷಿಣಾನಾಂ ವಿದ್ಯತೇ ನಾರದೇತಿ ॥೨೦.೭೬॥

 

‘ಓ ನಾರದನೇ, ದಕ್ಷಿಣಾದೇವಿಯ ಎಲ್ಲಾ ರೂಪಗಳಿಂದ ಕೂಡಿರುವ ಈ ಜಗತ್ತಿನಿಂದ ಯಾವಾಗಲೂ ನಾನು  ಉತ್ಕೃಷ್ಟನಾಗಿದ್ದೇನೆ. ನನ್ನ ಸಾಮರ್ಥ್ಯದ ಅನಂತ ಭಾಗದ ಏಕದೇಶವೂ ಕೂಡಾ ದಕ್ಷಿಣಾದೇವಿಯರಿಗೆ(ಬಹುರೂಪಳಾದ ಶ್ರೀಲಕ್ಷ್ಮಿಗೆ) ಇಲ್ಲ’.  

 

ಉಕ್ತಂ ಕೃಷ್ಣೇನಾಪ್ರತಿಮೇನ ಭೂಪಾ ಅನ್ಯೋತ್ತಮತ್ವಂ ದಕ್ಷಿಣಾನಾಂ ಚ ಶಶ್ವತ್ ।

ಸೇಯಂ ಭೈಷ್ಮೀ ದಕ್ಷಿಣಾ ಕೇಶವೋsಯಂ ತಸ್ಯಾಃ ಶ್ರೇಷ್ಠಃ ಪಶ್ಯತ ರಾಜಸಙ್ಘಾಃ ॥೨೦.೭೭॥

 

ಇದು ಶ್ರೀಕೃಷ್ಣ ಹೇಳಿದ ಮಾತು ಎಂದು ಹೇಳಿದ ನಾರದರು, ಎಣೆಯಿರದ ಕೃಷ್ಣನಿಂದ ಯಾವಾಗಲೂ ಲಕ್ಷ್ಮೀದೇವಿಗೆ ಉಳಿದವರಿಗಿಂತ ಉತ್ತಮತ್ವವು ಹೇಳಲ್ಪಟ್ಟಿದೆ. ಎಲೋ ಅರಸರೇ, ಈ ರುಗ್ಮಿಣಿಯೇ ದಕ್ಷಿಣಾ. ಇವನೇ(ಶ್ರೀಕೃಷ್ಣನೇ) ಆ ನಾರಾಯಣ.

 

ಪ್ರತ್ಯಕ್ಷಂ ವೋ ವೀರ್ಯ್ಯಮಸ್ಯಾಪಿ ಕುನ್ತ್ಯಾ ಯುಧೇsರ್ತ್ಥಿತಃ ಕೇಶವೋ ವೀರ್ಯ್ಯಮಸ್ಯೈ ।

ಅದರ್ಶಯತ್ ಪಾಣ್ಡವಾನ್ ಧಾರ್ತ್ತರಾಷ್ಟ್ರಾನ್ ಭೀಷ್ಮದ್ರೋಣದ್ರೌಣಿಕೃಪಾನ್ ಸಕರ್ಣ್ಣಾನ್ ।

ನಿರಾಯುಧಾಂಶ್ಚಕ್ರ ಏಕಃ ಕ್ಷಣೇನ ಲೋಕಶ್ರೇಷ್ಠಾನ್ ದೈವತೈರಪ್ಯಜೇಯಾನ್ ॥೨೦.೭೮॥

 

ಇವನ ವೀರ್ಯವು ನಿಮಗೇ ಪ್ರತ್ಯಕ್ಷವಾಗಿದೆ’ ಎಂದು ಹೇಳಿ ನಾರದರು ತನ್ನ ಮಾತನ್ನು ನಿಲ್ಲಿಸಿದರು. ಆಗ ಕುಂತಿಯಿಂದ ಯುದ್ಧಕ್ಕಾಗಿ ಪ್ರಾರ್ಥಿಸಲ್ಪಟ್ಟ ಕೇಶವನು, ಕುಂತಿಗಾಗಿ ತನ್ನ ಬಲವನ್ನು ತೋರಿಸಿದನು. ಪಾಂಡವರನ್ನು, ಧೃತರಾಷ್ಟ್ರನ ಮಕ್ಕಳನ್ನು, ಭೀಷ್ಮ-ದ್ರೋಣ-ಅಶ್ವತ್ಥಾಮ-ಕೃಪಾಚಾರ್ಯ, ಕರ್ಣ, ಮೊದಲಾದ ಎಲ್ಲಾ ಲೋಕಶ್ರೇಷ್ಠರಾಗಿರುವ ವೀರರನ್ನು ಶ್ರೀಕೃಷ್ಣ ಒಬ್ಬನೇ ಒಂದೇ ಕ್ಷಣದಲ್ಲಿ ನಿರಾಯುಧರನ್ನಾಗಿ ಮಾಡಿದನು.

[ ಇದನ್ನು ಮಹಾಭಾರತದಲ್ಲೇ ಹೀಗೆ ಹೇಳಿದ್ದಾರೆ: ಅಥ ಗಾಣ್ಡೀವಧನ್ವಾನಂ ಕ್ರೀಡಾರ್ಥಂ ಮಧುಸೂದನಃ । ಜಿಗಾಯ ಭರತಶ್ರೇಷ್ಠ ಕುಂತ್ಯಾಶ್ಚ ಪ್ರಮುಖೇ ವಿಭುಃ । ದ್ರೌಣಿಂ ಕೃಪಂ ಚ ಕರ್ಣಂ ಚ ಭೀಮಸೇನಂ ಸುಯೋಧನಮ್(ಸಭಾಪರ್ವ ೬೧.೧೪-೧೫). ತದನಂತರ ಅರ್ಜುನನನ್ನು ಕೃಷ್ಣನು ಲೀಲೆಯಿಂದ ಗೆದ್ದ. ಕುಂತಿಯ ಸನ್ನಿಧಾನದಲ್ಲಿ ಅಶ್ವತ್ಥಾಮ, ಕೃಪಾಚಾರ್ಯ, ಕರ್ಣ, ಭೀಮಸೇನ, ದುರ್ಯೋಧನ, ಹೀಗೆ ಎಲ್ಲರನ್ನೂ ಗೆದ್ದ.  

ಹರಿವಂಶದ ವಿಷ್ಣುಪರ್ವದಲ್ಲಿ ಹೇಳುವಂತೆ:  ‘ತಥಾ ಗಾಣ್ಡೀವಧನ್ವಾನಂ ಕ್ರೀಡನ್ತಂ ಮಧುಸೂಧನಃ । ಜಿಗಾಯ ಭರತಶ್ರೇಷ್ಠಂ ಕುನ್ತ್ಯಾಃ ಪ್ರಮುಖತೋ ವಿಭುಃ । ದ್ರೋಣಂ ದ್ರೌಣಿಂ ಕೃಪಂ ಕರ್ಣಂ ಭೀಷ್ಮಂ ಚೈವ ಸುಯೋಧನಂ । ಚಕ್ರಾನುಯಾನೇ ಪ್ರಸ್ರವಣೇ ಜಿಗಾಯ ಪುರುಷೋತ್ತಮಃ’ (೧೦೨.೧೭-೧೮). ಮಹಾಭಾರತದ ಸಭಾಪರ್ವದಲ್ಲಿ ಭೀಮಸೇನನ ಕುರಿತು ಹೇಳಿದ್ದಾರೆ ಆದರೆ ಹರಿವಂಶದಲ್ಲಿ ಭೀಮಸೇನನ ಪಾಲ್ಗೊಳ್ಳುವಿಕೆಯನ್ನು ಹೇಳಲಿಲ್ಲ. ಇದು ವಿರೋಧ ಎನಿಸುತ್ತದೆ. ಆದರೆ ಆಚಾರ್ಯರು ಆ ಕುರಿತು ವಿವರಣೆ ನೀಡಿರುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

 

ವ್ರತಂ ಭೀಮಸ್ಯಾಸ್ತಿ ನೈವಾಭಿ ಕೃಷ್ಣಮಿಯಾಮಿತಿ ಸ್ಮಾsಜ್ಞಯಾ ತಸ್ಯ ವಿಷ್ಣೋಃ ।

ಚಕ್ರಂ ರಥಸ್ಯಾಗ್ರಹೀತ್ ಸಃ ಪ್ರಣಮ್ಯ ಕೃಷ್ಣಂ ಸ ತಂ ಕೇಶವೋsಪಾಹರಚ್ಚ ॥೨೦.೭೯॥

 

‘ಕೃಷ್ಣನನ್ನು ಎದುರುಗೊಳ್ಳಲಾರೆ’ ಎನ್ನುವುದು ಭೀಮಸೇನನ ವ್ರತ. ಆದರೆ ಕೃಷ್ಣ ಯುದ್ಧಮಾಡುವಂತೆ  ಆಜ್ಞೆಮಾಡಿದಾಗ ಭೀಮ ನಮಸ್ಕರಿಸಿ, ರಥದ ಚಕ್ರವನ್ನು ಹಿಡಿದು ನಿಂತ. ಆಗ ಅವನನ್ನು ಕೃಷ್ಣ ತಳ್ಳಿ, ಮುಂದಕ್ಕೆ ಯುದ್ಧಕ್ಕೆಂದು ಹೋದ.

[ಪರಮಾತ್ಮನ ಆಜ್ಞೆಯಿಂದಾಗಿ ಭೀಮ ಯುದ್ಧದಲ್ಲಿ ಪಾತ್ರಧಾರಿಯಾದ ಎನ್ನುವುದನ್ನು ಮಹಾಭಾರತ ಸೂಚಿಸಿದೆ. ಮಾನಸಿಕವಾಗಿ ಭೀಮ ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ ಮತ್ತು ಆಯುಧವನ್ನು ಹಿಡಿಯಲಿಲ್ಲ. ಆದ್ದರಿಂದ ಹರಿವಂಶದಲ್ಲಿ ಭೀಮನ ಹೆಸರನ್ನು ಹೇಳಲಿಲ್ಲ ಎನ್ನುವುದು ಆಚಾರ್ಯರ ನಿರ್ಣಯದಿಂದ ನಮಗಿಲ್ಲಿ ತಿಳಿಯುತ್ತದೆ.]

 

ಏವಂ ಕ್ರೀಡನ್ತೋsಪ್ಯಾತ್ಮಶಕ್ತ್ಯಾ ಪ್ರಯತ್ನಂ ಕುರ್ವನ್ತಸ್ತೇ ವಿಜಿತಾಃ ಕೇಶವೇನ ।

ತತಃ ಸರ್ವೇ ನೇಮುರಸ್ಮೈ ಪೃಥಾ ಚ ಸವಿಸ್ಮಯಾ ವಾಸುದೇವಂ ನನಾಮ ॥೨೦.೮೦॥

 

ಈರೀತಿಯಾಗಿ ಅವರು ಕ್ರೀಡಿಸಿದರೂ ಕೂಡಾ, ಎಲ್ಲಾ ಅರಸರು ತಮ್ಮ ಪೂರ್ಣಬಲದಿಂದ ಪ್ರಯತ್ನಪಟ್ಟರು. ಆದರೆ ಕೃಷ್ಣನಿಂದ ಸುಲಭವಾಗಿ ಸೋತರು ಕೂಡಾ. ಸೋತ ಎಲ್ಲರೂ ಕೃಷ್ಣನಿಗೆ ನಮಸ್ಕರಿಸಿದರು. ಕುಂತಿಯೂ ಕೂಡಾ ಅಚ್ಚರಿಯಿಂದ ಕೂಡಿ, ಕೃಷ್ಣನಿಗೆ ನಮಿಸಿದಳು.

 

ಏವಂವಿಧಾನ್ಯದ್ಭುತಾನೀಹ ಕೃಷ್ಣೇ ದೃಷ್ಟಾನಿ ವಃ ಶತಸಾಹಸ್ರಶಶ್ಚ ।

ತಸ್ಮಾದೇಷ ಹ್ಯದ್ಭುತೋsತ್ಯುತ್ತಮಶ್ಚೇತ್ಯುಕ್ತಾ ನೇಮುಸ್ತೇsಖಿಲಾ ವಾಸುದೇವಮ್ ॥೨೦.೮೧॥

 

‘ಈ ರೀತಿಯಾಗಿರುವ ಅದ್ಭುತಗಳು ಕೃಷ್ಣನಲ್ಲಿ ಲಕ್ಷಾನುಗಟ್ಟಲೆ ಕಾಣಲ್ಪಟ್ಟಿವೆ. ಆ ಕಾರಣದಿಂದ ಇವನು ಆಶ್ಚರ್ಯ ಹಾಗೂ ಅತ್ಯುತ್ತಮನಷ್ಟೇ’ ಎಂದು ಹೇಳಲ್ಪಟ್ಟ ಆ ಎಲ್ಲಾ ರಾಜರು ನಾರಾಯಣನಿಗೆ ನಮಸ್ಕರಿಸಿದರು.

 

ವಾಯ್ವಾಜ್ಞಯಾ ವಾಯುಶಿಷ್ಯಃ ಸ ಸತ್ಯಮಿತ್ಯಾದ್ಯುಕ್ತ್ವಾ ನಾರದೋ ರುಗ್ಮಿಣೀಂ ಚ ।

ಸ್ತುತ್ವಾ ಪುಷ್ಪಂ ಪಾರಿಜಾತಸ್ಯ ದತ್ವಾ ಯಯೌ ಲೋಕಂ ಕ್ಷಿಪ್ರಮಬ್ಜೋದ್ಭವಸ್ಯ ॥೨೦.೮೨॥

 

ವಾಯುದೇವರ ಆಜ್ಞೆಯಂತೆ, ವಾಯುದೇವರ ಶಿಷ್ಯರಾಗಿರುವ ನಾರದರು ‘ಇದು ಸತ್ಯಾ’ ಎಂದು, ಇವೇ ಮೊದಲಾದವುಗಳನ್ನು ಹೇಳಿ, ರುಗ್ಮಿಣೀದೇವಿಯನ್ನು ಸ್ತುತಿಸಿ, ದೇವಿಗೆ ಪಾರಿಜಾತದ ಹೂವನ್ನು ಕೊಟ್ಟು, ಕೂಡಲೇ ಬ್ರಹ್ಮನ ಲೋಕವನ್ನು ಕುರಿತು  ತೆರಳಿದರು.

[ಹರಿವಂಶದಲ್ಲಿ ಈ ಕುರಿತು ವಿವರಣೆ ಕಾಣಸಿಗುತ್ತದೆ: ‘ವಸತಸ್ತಸ್ಯ ಕೃಷ್ಣಸ್ಯ ಸದಾರಸ್ಯಾಮಿತೌಜಸಃ  । ಸಹಾsಸೀನಸ್ಯ  ರುಗ್ಮಿಣ್ಯಾ ನಾರದೋsಭ್ಯಾಯಯೌ ಮುನಿಃ । ಆಗತಂ ಚಾಪ್ರಮೇಯಾತ್ಮಾ ಮುನಿಮಿನ್ದ್ರಾನುಜಸ್ತದಾ । ಶಾಸ್ತ್ರದೃಷ್ಟೇನ ವಿಧಿನಾ  ಹ್ಯರ್ಚಯಾಮಾಸ ಕೇಶವಃ । ಸೋsರ್ಚಿತೋ ವಾಸುದೇವೇನ ಮುನಿರರ್ಚ್ಯತಮಃ ಸತಾಮ್ । ಪಾರಿಜಾತತರೋಃ ಪುಷ್ಪಂ ದದೌ ಕೃಷ್ಣಾಯ ಭಾರತ । ತದ್ ವೃಕ್ಷರಾಜಕುಸುಮಂ ರುಗ್ಮಿಣ್ಯಾಃ ಪ್ರದದೌ ಹರಿಃ’ (ವಿಷ್ಣುಪರ್ವಣಿ ೬೫.೧೨-೧೫) ]