ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 30, 2021

Mahabharata Tatparya Nirnaya Kannada 21: 157-167

 

ಸಞ್ಚೂರ್ಣ್ಣಿತಗದೌ ವೀರೌ ಜಘ್ನತುರ್ಮ್ಮುಷ್ಟಿಭಿರ್ಮ್ಮಿಥಃ ।

ಬ್ರಹ್ಮಾಣ್ಡಸ್ಫೋಟಸಙ್ಕಾಶೈರ್ಯ್ಯಥಾ ಕೇಶವಕೈಟಭೌ               ೨೧.೧೫೭

 

ಪುಡಿಯಾದ ಗದೆಯುಳ್ಳ(ಪರಸ್ಪರ ಗದೆಯನ್ನು ಕಳೆದುಕೊಂಡ) ಆ ಇಬ್ಬರು ವೀರರು ಕೇಶವ-ಕೈಟಭರಂತೆ ಮುಷ್ಟಿಗಳಿಂದ ಕಾದಾಡಲು ಆರಂಭಿಸಿದರು. ಆಗ ಅಲ್ಲಿ ಬ್ರಹ್ಮಾಂಡ ಬಿರಿಯಿತೋ ಎನ್ನುವಂತೆ ಶಬ್ದ ಆಗುತ್ತಿತ್ತು.

 

[ಭಾಗವತದಲ್ಲಿ(೧೦.೮೦.೩೮)  ಭೀಮ-ಜರಾಸಂಧರ ಯುದ್ಧದ ಕುರಿತು ಹೀಗೆ ಹೇಳಿದ್ದಾರೆ: ‘ಇತ್ಥಂ ತಯೋಃ ಪ್ರಹತಯೋರ್ಗದಯೋರ್ನೃವೀರೌ ಕೃದ್ಧೌ ಸ್ವಮುಷ್ಟಿಭಿರಯಃಸ್ಪರುಶೈರ್ವ್ಯಪಿಷ್ಟಾಮ್’].  

 

ಚಚಾಲ ಪೃಥ್ವೀ ಗಿರಯಶ್ಚ ಚೂರ್ಣ್ಣಿತಾಃ ಕುಲಾಚಲಾಶ್ಚೇಲುರಲಂ ವಿಚುಕ್ಷುಭುಃ ।

ಸಮಸ್ತವಾರಾಮ್ಪತಯಃ ಸುರಾಸುರಾ ವಿರಿಞ್ಚಶರ್ವಾದಯ ಆಸದನ್ನಭಃ             ೨೧.೧೫೮

 

ಅವರಿಬ್ಬರ ಮುಷ್ಟಿಯುದ್ಧದ ರಭಸಕ್ಕೆ ಭೂಮಿಯು ನಡುಗಿತು. ಪರ್ವತಗಳು ನಲುಗಿದವು. ಪುಟ್ಟಪುಟ್ಟ ಗುಡ್ಡಗಳು ಪುಡಿಪುಡಿಯಾದವು. ಸಮುದ್ರಗಳು ಅಲ್ಲೋಲ ಕಲ್ಲೋಲಗೊಂಡವು. ದೇವತೆಗಳು, ಅಸುರರು ಬ್ರಹ್ಮ-ರುದ್ರಾದಿಗಳು ಆಕಾಶದಲ್ಲಿ ನೆರೆದರು.

 

ಸುರಾಸ್ತು ಭೀಮಸ್ಯ ಜಯಾಭಿಕಾಙ್ಕ್ಷಿಣಸ್ತಥಾsಸುರಾದ್ಯಾ ಮಗಧಾಧಿಪಸ್ಯ ।

ಪಶ್ಯನ್ತಿ ಸರ್ವೇ ಕ್ರಮಶೋ ಬಲಂ ಸ್ವಂ ಸಮಾದದೇ ಮಾರುತನನ್ದನೋsಪಿ             ೨೧.೧೫೯

 

ದೇವತೆಗಳು ಭೀಮಸೇನನಿಗೆ ಗೆಲುವಾಗಲಿ ಎಂದು ಬಯಸಿದರೆ,  ಅಸುರಾದಿಗಳು ಜರಾಸಂಧನ ಗೆಲ್ಮೆಯಾಗಲಿ ಎಂದು ಬಯಸಿ ಅವರಿಬ್ಬರ ಯುದ್ಧವನ್ನು ನೋಡುತ್ತಿದ್ದರು. ಭೀಮಸೇನನಾದರೋ, ಕ್ರಮವಾಗಿ ತನ್ನ ಸ್ವರೂಪಭೂತವಾದ ಬಲವನ್ನು ತೆಗೆದುಕೊಳ್ಳಲಾರಂಭಿಸಿದನು(ಅಭಿವ್ಯಕ್ತಗೊಳಿಸಿದನು).

[ಪ್ರಾಣದೇವರು ಅವತಾರದಲ್ಲೂ ಸ್ವಇಚ್ಛೆಯಿಂದ ಯಾವರೀತಿ ಮೂಲರೂಪದ ಬಲವನ್ನು ಸ್ವೀಕರಿಸಬಹುದು, ಉಳಿದ ದೇವತೆಗಳಲ್ಲಿ ಇದು ಹೇಗೆ ಭಿನ್ನ, ಇತ್ಯಾದಿ ವಿವರವನ್ನು ಮುಂದಿನ ಅಧ್ಯಾಯಗಳಲ್ಲಿ ನಾವು ಕಾಣಬಹುದು].

 

ಮಾನಯಿತ್ವಾ ವರಂ ಧಾತುರ್ದ್ದಿವಸಾನ್ ದಶ ಪಞ್ಚ ಚ ।

ವಾಸುದೇವಾಜ್ಞಯಾ ಭೀಮಃ ಶತ್ರುಂ ಹನ್ತುಂ ಮನೋ ದಧೇ             ೨೧.೧೬೦

 

ಸ ಪ್ರಣಮ್ಯ ಹೃಷೀಕೇಶಂ ಹರ್ಷಾದಾಶ್ಲಿಷ್ಯ ಫಲ್ಗುನಮ್ ।

ರಿಪುಂ  ಜಗ್ರಾಹ ಮುಕುಟೇ ವಾರಣಂ ಮೃಗರಾಡಿವ                   ೨೧.೧೬೧

 

ಬ್ರಹ್ಮದೇವರ ವರವನ್ನು ಹದಿನೈದು ದಿನಗಳ ಕಾಲ ಗೌರವಿಸಿ ಯುದ್ಧಮಾಡಿದ ಭೀಮಸೇನನು, ವಾಸುದೇವನ ಆಜ್ಞೆಯಿಂದ ಶತ್ರುವಾದ ಜರಾಸಂಧನನ್ನು ಕೊಲ್ಲಲು ನಿಶ್ಚಯಿಸಿದನು.

ಭೀಮಸೇನನು  ಕೃಷ್ಣನನ್ನು ನಮಿಸಿ, ಅರ್ಜುನನನ್ನು ಸಂತಸದಿಂದ ಆಲಂಗಿಸಿ, ಸಿಂಹವೊಂದು ಆನೆಯನ್ನು ಹಿಡಿಯುವಂತೆ ಶತ್ರುವನ್ನು ತಲೆಯಲ್ಲಿ ಹಿಡಿದನು.

 

[ಮಹಾಭಾರತ: ಕಾರ್ತ್ತಿಕಸ್ಯ ತು ಮಾಸಸ್ಯ ಪ್ರವೃತ್ತಂ ಪ್ರಥಮೇsಹನಿ  ತದಾ ತದ್ಯುದ್ಧಮಭವದ್ ದಿನಾನಿ ದಶ ಪಞ್ಚ ಚ’ (ಸಭಾಪರ್ವ ೨೪.೩೩)- ಕಾರ್ತಿಕಮಾಸದ ಶುಕ್ಲಪಕ್ಷದ ಪಾಡ್ಯ ಪ್ರಾರಂಭವಾಗಿ ಹದಿನೈದು ದಿನಗಳ ಕಾಲ ಯುದ್ಧ ನಡೆಯಿತು. ‘ಚತುರ್ದಶ್ಯಾಂ ನಿಶಾಯಾಂ  ತು ನಿವೃತ್ತೋ ಮಾಗಧಃ ಕ್ಲಮಾತ್ । ತಂ ರಾಜಾನಂ ತಥಾ ಕ್ಲಾನ್ತಂ ದೃಷ್ಟ್ವಾ ರಾಜನ್ ಜನಾರ್ದನಃ । ಉವಾಚ ಭೀಮಕರ್ಮಾಣಂ ಭೀಮಂ ಸಮ್ಬೋಧಯನ್ನಿವ’ (೩೪-೩೫). ‘ಯತ್ತೇ ದೈವಂ ಪರಂ ಸತ್ವಂ ಯಚ್ಚ ತೇ ಮಾತರಿಶ್ವನಃ  । ಬಲಂ ಭೀಮ ಜರಾಸಂಧೇ ದರ್ಶಯಾsಶು ತದದ್ಯ  ವೈ (೨೫.೪) ಹದಿನಾಲ್ಕನೇ ದಿನ ರಾತ್ರಿ ಜರಾಸಂಧನು ಆಯಾಸಗೊಂಡು ಹಿಂದೆ ಸರಿದನು. ಆಗ ಶ್ರೀಕೃಷ್ಣ ‘ನಿನ್ನ ಸ್ವರೂಪ ಬಲವನ್ನು ಸ್ವೀಕರಿಸು’ ಎಂದು ಭೀಮನಲ್ಲಿ ಹೇಳಿದ. ‘ಏವಮುಕ್ತಸ್ತತೋ ಭೀಮೋ ಮನಸಾ ಚಿಂತ್ಯ ಮಾರುತಮ್ ।  ಜನಾರ್ದನಂ ನಮಸ್ಕೃತ್ಯ ಪರಿಶ್ವಜ್ಯ ಚ ಫಲ್ಗುನಮ್ । ಪ್ರಭಞ್ಜನಬಲಾವಿಷ್ಟೋ ಜರಾಸನ್ಧಮರಿನ್ದಮಃ । ಉತ್ಕ್ಷಿಪ್ಯ  ಭ್ರಾಮಯಾಮಾಸ  ಬಲವನ್ತಮರಿನ್ದಮಃ’( ೨೫.೮-೯)- ಮನಸ್ಸಿನಿಂದ ತನ್ನ ಸ್ವರೂಪವನ್ನು ಚಿಂತಿಸಿ, ಕೃಷ್ಣನಿಗೆ ನಮಸ್ಕರಿಸಿ, ಅರ್ಜುನನನ್ನು ಆಲಂಗಿಸಿದ ಭೀಮ, ಜರಾಸಂಧನನ್ನು ಹಿಡಿದು ಮೇಲಕ್ಕೆತ್ತಿ ಗರಗರನೆ ತಿರುಗಿಸಿದನು,]

 

ಪೃಷ್ಠೇsಸ್ಯ ಜಾನುಮಾಧಾಯ ಕೂರ್ಮ್ಮದೇಶಂ ಬಭಞ್ಜ ಹ ।

ಮೃತಿಕಾಲೇ ಪುನರ್ದ್ದೇಹಂ ವಿದದಾರ ಯಥಾ ಪುರಾ                 ೨೧.೧೬೨

 

ಜರಾಸಂಧನ ಬೆನ್ನು ಹುರಿಯ ಮೂಳೆಯಲ್ಲಿ ತನ್ನ ಮೊಣಕಾಲನ್ನಿಟ್ಟು ಅವನ ಕೂರ್ಮದೇಶವನ್ನು(ಸೊಂಟವನ್ನು) ಭೀಮಸೇನ ಸೀಳಿದನು. ಹುಟ್ಟುವಾಗ ಯಾವ ರೀತಿ ದೇಹ ಸೀಳಿತ್ತೋ ಅದೇ ರೀತಿ ಮರಣಕಾಲದಲ್ಲಿ ಅವನ ದೇಹವನ್ನು ಭೀಮ ಸೀಳಿದ.

 

ಮರ್ಮ್ಮಣ್ಯೇವ ನ ಹನ್ತವ್ಯೋ ಮಯಾsಯಮಿತಿ ಮಾರುತಿಃ ।

ಸ್ವಪೌರುಷಪ್ರಕಾಶಾಯ ಬಭಞ್ಜೈನಮಮರ್ಮ್ಮಣಿ                     ೨೧.೧೬೩

 

ಈ ಜರಾಸಂಧನು ನನ್ನಿಂದ ಮರ್ಮಸ್ಥಾನವನ್ನು ಬಳಸಿ ಕೊಲ್ಲಲು ಯೋಗ್ಯನಲ್ಲ [ಮರ್ಮಸ್ಥಾನಕ್ಕೆ ಹೊಡೆದು ಯಾರು ಬೇಕಾದರೂ ಗೆಲ್ಲಬಹುದು. ಉದಾಹರಣೆಗೆ ಹಿಂದೆ ಆಕಸ್ಮಿಕವಾಗಿ ಕರ್ಣ ಜರಾಸಂಧನ ಮರ್ಮಸ್ಥಾನಕ್ಕೆ ಹೊಡೆದು ಗೆಲುವನ್ನು ಕಂಡಿದ್ದನ್ನು ನಾವು ನೋಡಿದ್ದೇವೆ. ಆದರೆ ಭೀಮ ಹಾಗೆ ಮಾಡಲು ಇಷ್ಟಪಡದೇ] ತನ್ನ ಬಲ ಎಷ್ಟಿದೆ ಎಂದು ಜಗತ್ತಿಗೆ ತೋರಿಸಲು, ಜರಾಸಂಧನಲ್ಲಿ ಯಾವುದು ಮರ್ಮಸ್ಥಾನ ಅಲ್ಲವೋ ಅಲ್ಲಿಗೇ ಹೊಡೆದ.

[ಭಾಗವತ: ‘ಏಕಂ ಪಾದಂ ಪದಾssಕ್ರಮ್ಯ ದೊರ್ಭ್ಯಾಮನ್ಯಂ ಪ್ರಗೃಹ್ಯ ಸಃ । ಗುದತಃ ಪಾಠಯಾಮಾಸ ಶಾಖಾಮಿವ ಮತಙ್ಗಜಃ (೧೦.೮೦.೪೩) – ಅವನ ಒಂದು ಕಾಲಿಗೆ ಇವನ ಒಂದು ಕಾಲನ್ನು ಒತ್ತಿ, ಇನ್ನೊಂದು ಕಾಲನ್ನು ಹಿಡಿದುಕೊಂಡು ದೇಹವನ್ನು ಸೀಳಿಬಿಟ್ಟ. ಒಂದು ಆನೆ ಮರದ  ಕೊಂಬೆಯನ್ನು ಸೀಳುವಂತೆ ಸೀಳಿದ.  ತತಸ್ತ್ವಾಜ್ಞಾಯ ತಸ್ಯೈವ ಪಾದಮುತ್ಕ್ಷಿಪ್ಯ ಮಾರುತಿಃ । ದ್ವಿಧಾ ಬಭಞ್ಜ ತದ್ ಗಾತ್ರಂ ಪ್ರಾಕ್ಷಿಪದ್ ವಿನನಾದ ಚ । ಪುನಃ ಸನ್ಧಾಯ ತು ತದಾ ಜರಾಸನ್ಧಃ ಪ್ರತಾಪವಾನ್ । ಭೀಮೇನ ಚ ಸಮಾಗಮ್ಯ ಬಾಹುಯುದ್ಧಂ ಚಕಾರ ಹ ಮಹಾಭಾರತ(ಸಭಾಪರ್ವ ೨೫.೧೬-೧೭). ಒಮ್ಮೆ ಸೀಳಿದ-ಮತ್ತೆ ಜರಾಸಂಧನ ದೇಹ ಸೇರಿತು. ಆಗ ಅವನು ಮತ್ತೆ ಯುದ್ಧಕ್ಕೆ ಬಂದ  ಭೀಮಸೇನಸ್ತದಾ ಜ್ಞಾತ್ವಾ ನಿರ್ಬಿಭೇದ ಚ ಮಾಗಧಂ । ದ್ವಿಧಾ ವ್ಯತ್ಯಸ್ಯ ಪಾದೇನ ಪ್ರಾಕ್ಷಿಪಚ್ಚ ನನಾದ ಹ (೨೦) ಮತ್ತಿನ್ನೊಮ್ಮೆ ಬಂದ ಜರಾಸಂಧನ ದೇಹವನ್ನು ಭೀಮಸೇನ ಸೀಳಿ ಬೇರೆಬೇರೆ ಕಡೆ ಹಾಕಿದ]

 

ಭಜ್ಯಮಾನೇ ಶರೀರೇsಸ್ಯ ಬ್ರಹ್ಮಾಣ್ಡಸ್ಫೋಟಸನ್ನಿಭಃ ।

ಬಭೂವ ರಾವೋ ಯೇನೈವ ತ್ರಸ್ತಮೇತಜ್ಜಗತ್ತ್ರಯಮ್             ೨೧.೧೬೪

 

ಈ ಜರಾಸಂಧನ ದೇಹವು ಸೀಳಲ್ಪಡುತ್ತಿರಲು ಬ್ರಹ್ಮಾಂಡವೇ ಸ್ಪೋಟಗೊಂಡಂತೆ ಶಬ್ದವಾಯಿತು. ಆ ಶಬ್ದದಿಂದ ಮೂಜಗವೂ ಕೂಡಾ ಭಯಗ್ರಸ್ಥವಾಯಿತು.

 

ನಿಹತ್ಯ ಕೃಷ್ಣಸ್ಯ ರಿಪುಂ ಸ ಭೀಮಃ  ಸಮರ್ಪ್ಪಯಾಮಾಸ ತದರ್ಚ್ಚನಂ ಹರೇಃ ।

ಕೃತಾಂ ಹಿ ಭೀಮೇನ ಸಮರ್ಚ್ಚನಾಂ ತಾಂ ಸಮಕ್ಷಮಾದಾತುಮಿಹಾsಗತೋ ಹ್ಯಜಃ ೨೧.೧೬೫

 

ಕೃಷ್ಣನೆದುರು ಶತ್ರುವನ್ನು ಕೊಂದ ಭೀಮಸೇನ, ಎಲ್ಲವನ್ನೂ ಪರಮಾತ್ಮನ ಪೂಜೆ ಎಂದು ಶ್ರೀಕೃಷ್ಣನಿಗೆ  ಅರ್ಪಿಸಿದ. ಭೀಮಸೇನನಿಂದ ಮಾಡಲ್ಪಟ್ಟ ಆ ಪೂಜೆಯನ್ನು ಪ್ರತ್ಯಕ್ಷವಾಗಿ ಸ್ವೀಕರಿಸಲೆಂದೇ ಶ್ರೀಕೃಷ್ಣನು ಬಂದಿದ್ದನಷ್ಟೇ.

[ತಸ್ಮಿನ್”ನಪೋ ಮಾ”ತರಿಶ್ವಾ” ದಧಾತಿ ಎನ್ನುವ ಈಶಾವಾಸ್ಯ ಉಪನಿಷತ್ತಿನ ಮಾತೂ ಕೂಡಾ ಇಲ್ಲಿ ಅನ್ವಯವಾಗುತ್ತದೆ. ಬ್ರಹ್ಮಾಂಡದಲ್ಲಾಗಲೀ, ಪಿಂಡಾಂಡದಲ್ಲಾಗಲೀ ಮುಖ್ಯಪ್ರಾಣದೇವರು ತಮ್ಮ ಪ್ರತಿಯೊಂದು ಕಾರ್ಯವನ್ನೂ ಸದಾ ಭಗವಂತನ ಪೂಜಾರೂಪವಾಗಿಯೇ ಮಾಡುತ್ತಾರೆ.]

 

ಸ್ವೀಕೃತ್ಯ ಪೂಜಾಂ ಚ ವೃಕೋದರಸ್ಯ ದೃಢಂ ಸಮಾಶ್ಲಿಷ್ಯ ಚ ತಂ ಜನಾರ್ದ್ದನಃ ।

ಪ್ರೀತೋ ನಿತಾನ್ತಂ ಪುನರೇವ ಕೃಷ್ಣಂ ನನಾಮ ಭೀಮಃ ಪ್ರಣತೋsರ್ಜ್ಜುನೇನ ೨೧.೧೬೬

 

ಹೀಗೆ ಜನಾರ್ದನನು ಭೀಮಸೇನನ ಪೂಜೆಯನ್ನು ಸ್ವೀಕರಿಸಿ, ಅವನನ್ನು ಗಟ್ಟಿಯಾಗಿ ಆಲಂಗಿಸಿ ಸಂತುಷ್ಟನಾದ. ಭೀಮಸೇನನು ಅರ್ಜುನನಿಂದ ನಮಸ್ಕಾರವನ್ನು ಸ್ವೀಕರಿಸಿ, ಮತ್ತೆಮತ್ತೆ ಕೃಷ್ಣನಿಗೆ ನಮಸ್ಕರಿಸಿದ.

 

ಜಗ್ಮುಃ ಸುರಾಶ್ಚಾತಿತರಾಂ ಪ್ರಹೃಷ್ಟಾ ಬ್ರಹ್ಮಾದಯೋ ದೀನತರಾಶ್ಚ ದೈತ್ಯಾಃ ।

ಬಲಾದುಮೇಶಸ್ಯ ವರೇ ಪ್ರಭಗ್ನೇ ವೃಕೋದರೇಣಾಚ್ಯುತಸಂಶ್ರಯೇಣ             ೨೧.೧೬೭

 

ಕೃಷ್ಣನನ್ನು ಆಶ್ರಯಿಸಿದ ಭೀಮಸೇನನಿಂದ ರುದ್ರನ ಅಜೇಯತ್ವ ವರವು ನಾಶವಾಗಲು, ಬ್ರಹ್ಮಾದಿ ದೇವತೆಗಳು ಅತ್ಯಂತ ಸಂತಸಗೊಂಡು ತೆರಳಿದರೆ, ದೈತ್ಯರು ದುಃಖಿತರಾಗಿ ತೆರಳಿದರು.

Tuesday, December 28, 2021

Mahabharata Tatparya Nirnaya Kannada 21: 153-156

 

ಬಲಂ ಭೀಮೇ ಮನ್ಯಮಾನೋsಧಿಕಂ ತು ಗದಾಶಿಕ್ಷಾಮಾತ್ಮನಿ ಚಾಧಿಕಾಂ ನೃಪಃ ।

ಭೀತೋ ನಿಯುದ್ಧೇsಸ್ಯ ದದೌ ಗದಾಂ ಸ ಭೀಮಾಯ ಚಾನ್ಯಾಂ ಸ್ವಯಮಗ್ರಹೀದ್ ಬಲೀ ೨೧.೧೫೩

 

ಬಲಶಾಲಿಯಾದ ಜರಾಸಂಧನು ಭೀಮನಲ್ಲಿ ಅಧಿಕವಾದ ಬಾಹುಬಲವಿದೆ ಹಾಗೂ ತನ್ನಲ್ಲಿ ಅಧಿಕವಾದ ಗದಾಭ್ಯಾಸ ಕೌಶಲವಿದೆ ಎಂದು ತಿಳಿದವನಾಗಿ, ಭೀಮನೊಂದಿಗೆ ಮಲ್ಲಯುದ್ಧಕ್ಕೆ ಹೆದರಿ, ಒಂದು ಗದೆಯನ್ನು ಭೀಮನಿಗೆ ನೀಡಿ, ಇನ್ನೊಂದು ಗದೆಯನ್ನು ತಾನು ಹಿಡಿದನು.    

 

ತದರ್ತ್ಥಮೇವಾsಶು ಗದಾಂ ಪ್ರಗೃಹ್ಯ ಭೀಮೋ ಯಯೌ ಮಾಗಧಸಂಯುತೋ ಬಹಿಃ ।

ಪುರಾತ್ ಸಕೃಷ್ಣಾರ್ಜ್ಜುನ ಏವ ತತ್ರ ತ್ವಯುದ್ಧ್ಯತಾಂ ಕೇಶವಪಾರ್ತ್ಥಯೋಃ ಪುರಃ           ೨೧.೧೫೪

 

ಜರಾಸಂಧನ ಆಲೋಚನೆಯನ್ನು ತಿಳಿದ ಭೀಮಸೇನನು ಗದಾಯುದ್ಧದ ಕೌಶಲವನ್ನು ತೋರುವುದಕ್ಕಾಗಿಯೇ ಗದೆಯನ್ನು ಹಿಡಿದು, ಕೃಷ್ಣಾರ್ಜುನರಿಂದ ಕೂಡಿಕೊಂಡು, ಜರಾಸಂಧನೊಂದಿಗೆ ನಗರದ ಹೊರಭಾಗಕ್ಕೆ ಬಂದನು. ಅಲ್ಲಿ ಕೃಷ್ಣಾರ್ಜುನರ ಮುಂದೆ ಭೀಮ-ಜರಾಸಂಧರು ಯುದ್ಧ ಮಾಡಿದರು.

 

ವಾಚಾsಜಯತ್ ತಂ ಪ್ರಥಮಂ ವೃಕೋದರಃ ಶಿವಾಶ್ರಯಂ ವಿಷ್ಣುಗುಣಪ್ರಕಾಶಯಾ ।

ತತೋ ಗದಾಭ್ಯಾಮಭಿಪೇತತುಸ್ತೌ ವಿಚಿತ್ರಮಾರ್ಗ್ಗಾನಪಿ ದರ್ಶಯನ್ತೌ             ೨೧.೧೫೫

 

ಭೀಮಸೇನನು ಶಿವಭಕ್ತನಾದ ಜರಾಸಂಧನನ್ನು ಮೊದಲು ‘ಭಗವಂತನ ಗುಣಗಳನ್ನು ಪ್ರತಿಪಾದನೆ ಮಾಡುವ ಮಾತುಗಳಿಂದ’ ಗೆದ್ದನು. ತದನಂತರ ಜರಾಸಂಧ ಭೀಮಸೇನರು ಗದಾಯುದ್ಧದ ವಿವಿಧ- ವಿಚಿತ್ರವಾದ ಮಂಡಲಗಳನ್ನು ತೋರಿಸುತ್ತಾ ಕಾದಾಡಿದರು.

[ಆಚಾರ್ಯರು ಮೇಲಿನ ಶ್ಲೋಕದಲ್ಲಿ ಹೇಳಿರುವ ಮಾತಿನ ಸೂಕ್ಷ್ಮ ವಿವರಣೆ ಮಹಾಭಾರತದಲ್ಲಿ (ಸಭಾಪರ್ವ ೨೪.೩೦)  ಕಾಣಸಿಗುತ್ತದೆ: ‘ತತಃ ಶಬ್ದೇನ ಮಹತಾ ಭತ್ಸಯನ್ತೌ ಪರಸ್ಪರಮ್’ ಇಲ್ಲಿ ಗಟ್ಟಿ ಧ್ವನಿಯಲ್ಲಿ ಬೈದಾಡಿಕೊಂಡರು ಎಂದು ಹೇಳಿರುವುದು ತಿಳಿಯುತ್ತದೆ. ಬೈದಾಡಲು ಇರುವ ವಿಷಯ ಯಾವುದು ಎಂದು ವಿಶ್ಲೇಷಣೆ ಮಾಡಿದರೆ- ಹಿಂದೆ ಹೇಳಿದ ಕೆಲವು ವಿವರಗಳಿಂದ ಅದು ತಿಳಿಯುತ್ತದೆ. ಅವೈದಿಕ ಯಜ್ಞವನ್ನು ಮಾಡುತ್ತಿದ್ದೀಯ, ನರಬಲಿ ಮಾಡಬಾರದು ಎನ್ನುವುದು ಭೀಮನ ಅಭಿಪ್ರಾಯವಾಗಿತ್ತು. ಏಕೆ ನರಬಲಿ ಮಾಡಬಾರದು ಎನ್ನುವುದರ ವಿವರ ನಮಗೆ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಕಾಣಸಿಗುತ್ತದೆ. ಮನುಷ್ಯನ ದೇಹ ಎನ್ನುವುದು ಪುರುಷಾರ್ಥ ಸಾಧನೆಯಲ್ಲೇ ಶ್ರೇಷ್ಠವಾದುದು. ಬೇರೆ ಯಾವ ಪ್ರಾಣಿಗಳ ದೇಹವೂ ಕೂಡಾ ಪುರುಷಾರ್ಥ ಸಾಧನವಾದುದಲ್ಲ. ಎಲ್ಲಿ ಪುರುಷಾರ್ಥಕ್ಕೆ ಆತ್ಯಂತಿಕವಾಗಿ ಅಡ್ಡಿಯಾಗುತ್ತದೋ ಅದು ಹಿಂಸೆ. ಎಲ್ಲಿ ಆಗುವುದಿಲ್ಲವೋ ಅದು ಹಿಂಸೆಯಲ್ಲ. ಆದ್ದರಿಂದ ನಾವು ಇರುವೆಯನ್ನು ತುಳಿದರೆ ಅದು ಆತ್ಯಂತಿಕ ಹಿಂಸೆಯಾಗುವುದಿಲ್ಲ. ಏಕೆಂದರೆ ಪುರುಷಾರ್ಥ ಸಾಧನ ಅಲ್ಲಿ ಅಡ್ಡಿ ಬರುವುದಿಲ್ಲ. ಅದೇ ರೀತಿ ಯಜ್ಞದಲ್ಲಿ ಪಶುಗಳನ್ನು ಆಹುತಿಯಾಗಿ ನೀಡಿದರೆ ಅಲ್ಲಿ ಪುರುಷಾರ್ಥ ಸಾಧನ ಅಡ್ಡಿಯಾಗುವುದಿಲ್ಲ. ಇದು ಪ್ರಾಚೀನ ಗ್ರಂಥಗಳಿಂದ ಸಿಗುವ ಗಟ್ಟಿಯಾದ ವಿಶ್ಲೇಷಣೆ. ಹೀಗಾಗಿ ನರಬಲಿ ಮಾಡುತ್ತಿರುವುದು ಅಪರಾಧ ಎನ್ನುವುದು  ಭೀಮನ ವಾದವಾದರೆ, ನಾನು ಶಿವಭಕ್ತ ಅವನಿಗಾಗಿ ನರಬಲಿ ಮಾಡುತ್ತಿದ್ದೇನೆ ಎನ್ನುವುದು ಜರಾಸಂಧನ ವಾದ.  ಹೀಗೆ ಅವರಿಬ್ಬರು ಮೊದಲು ಮಾತಿನಲ್ಲಿ ಯುದ್ಧಮಾಡಿದರು. ಅಲ್ಲಿ ಭೀಮಸೇನ ಜರಾಸಂಧನನ್ನು ವೈದಿಕವಾದ ಮಾತುಗಳಿಂದ ಗೆದ್ದ ಎಂದು ನಾವಿಲ್ಲಿ ತಿಳಿಯಬೇಕು.

ಭಾಗವತ(೧೦.೮೦.೩೫): ಮಣ್ಡಲಾನಿ ವಿಚಿತ್ರಾಣಿ ಸವ್ಯಂ ದಕ್ಷಿಣಮೇವ ಚ । ಚರತೋಃ  ಶುಶುಭೇ ಯುದ್ಧಂ ನಟಯೋರಿವ ರಙ್ಗಿಣೋಃ’].

 

ತಯೋರ್ಗ್ಗದೇ ತೇsಶನಿಸನ್ನಿಕಾಶೇ ಚೂರ್ಣ್ಣೀಕೃತೇ ದೇಹಮಹಾದೃಢಿಮ್ನಾ ।

ಅನ್ಯೋನ್ಯಯೋರ್ವಕ್ಷಸಿ ಪಾತಿತೇ ರುಷಾ ಯಥಾsಶ್ಮನೋಃ ಪಾಂಸುಪಿಣ್ಡೌ ಸುಮುಕ್ತೌ ೨೧.೧೫೬

 

ಹೇಗೆ ಕಲ್ಲು ಬಂಡೆಗಳ ಮೇಲೆ ಹೊಡೆಯಲ್ಪಟ್ಟ ಮಣ್ಣಿನ ಹೆಂಟೆ ಪುಡಿಪುಡಿಯಾಗುವುದೋ ಹಾಗೇ, ಮಿಂಚಿನಂತಹ ಕಾಂತಿಯಿರುವ ಅವರಿಬ್ಬರ ಗದೆಗಳು ಅವರ ದೇಹದ ಗಟ್ಟಿತನದಿಂದ ಅವರವರ ಎದೆಯ ಮೇಲೆ ಹೊಡೆಯಲ್ಪಟ್ಟು ಪುಡಿಪುಡಿಯಾದವು.   

[ತತೋ ಭೀಮಂ ಜರಾಸಂಧೋ ಜಘಾನೋರಸಿ ಮುಷ್ಟಿನಾ । ಭೀಮೋsಪಿ ತಂ ಜರಾಸನ್ಧಂ ವಕ್ಷಸ್ಯಭಿಜಘಾನ ಹ - ಅವರು ಮುಷ್ಟಿಯಿಂದ ಹೊಡೆದಾಡಿದರು ಎಂದು ಮಹಾಭಾರತ(ಸಭಾಪರ್ವ ೨೪.೩೧)  ಹೇಳಿದರೆ, ತೇ ವೈ ಗದೇ ಭುಜಜವೇನ ನಿಪಾತ್ಯಮಾನೇ ಅನ್ಯೋನ್ಯಯೋಃ ಸಕಟಿಪಾದಕರೋರುಜತೃೂನ್  । ಚೂರ್ಣೀಬಭೂವತುರುಪೇತ್ಯ-‘ ಗದೆ ಪುಡಿಯಾಯಿತು ಎಂದು ಭಾಗವತ(೧೦.೮೦.೩೭) ಹೇಳುತ್ತದೆ].

Monday, December 27, 2021

Mahabharata Tatparya Nirnaya Kannada 21: 139-152

 [ಅವರು ಬ್ರಾಹ್ಮಣ ವೇಷದಲ್ಲಿ ಏಕೆ ಬಂದಿರುವುದು ಎನ್ನುವುದನ್ನು ವಿವರಿಸುತ್ತಾರೆ:]

 

ಕೃಷ್ಣಭೀಮಾರ್ಜ್ಜುನಾಸ್ತೇನ ವಿಪ್ರವೇಷಾಶ್ಚ ತೇsಭವನ್ ।

ನಿರಾಯುಧಃ ಕ್ಷತ್ರವೇಷೋ ನೈವ ಯೋಗ್ಯಃ ಕಥಞ್ಚನ    ೨೧.೧೩೯

 

ಆಯುಧವಿಲ್ಲದ ಕ್ಷತ್ರವೇಷ ಎಂದಿಗೂ ಯೋಗ್ಯವಲ್ಲ (ಕ್ಷತ್ರಿಯ ವೇಷ ಎಂದರೆ ಅಲ್ಲಿ ಆಯುಧ ಇರಲೇಬೇಕು). ನಿರಾಯುಧರಾಗಿ ಹೋಗಬೇಕಾಗಿರುವುದರಿಂದ ಕೃಷ್ಣ-ಭೀಮ-ಅರ್ಜುನರು ಬ್ರಾಹ್ಮಣ ವೇಷವನ್ನು ತೊಟ್ಟಿದ್ದರು.

 

ತತೋ ಜಗ್ಮುರ್ವಿಪ್ರವೇಷಾಸ್ತೃಣೀಕರ್ತ್ತುಂ ಹಿ ಮಾಗಧಮ್ ।

ಮಾಗಧಸ್ಯ ಸಸೈನ್ಯಸ್ಯ ಸ್ವಗೃಹೇ ಸಂಸ್ಥಿತಸ್ಯ                        ೨೧.೧೪೦

 

ನಿರಾಯುಧೇನ ಭೀಮೇನ ಸಮಾಹ್ವಾನೇ ಕೃತೇsಮಿತಮ್ ।

ಧರ್ಮ್ಮಂ ಯಶಶ್ಚ ಭೀಮಸ್ಯ ವರ್ದ್ಧಯಾಮಾಸ ಕೇಶವಃ             ೨೧.೧೪೧

 

ಹೀಗೆ ಜರಾಸಂಧನನ್ನು ಕಡೆಗಣಿಸಲೆಂದೇ ಆಯುಧರಹಿತರಾಗಿ ವಿಪ್ರವೇಷವನ್ನು ತೊಟ್ಟು ಅವರು  ತೆರಳಿದ್ದರು. ಸೈನ್ಯದಿಂದ ಕೂಡಿರುವ, ತನ್ನ ಮನೆಯಲ್ಲಿಯೇ ಇರುವ ಜರಾಸಂಧನಿಗೆ, ನಿರಾಯುಧನಾಗಿರುವ ಭೀಮಸೇನ ಸವಾಲು ಹಾಕಿದರೆ ಭೀಮನ ಕೀರ್ತಿ ಹಿರಿದಾಗುವುದಷ್ಟೇ. ಈ ರೀತಿ ಶ್ರೀಕೃಷ್ಣ ಭೀಮನ ಕೀರ್ತಿಯನ್ನು ಬೆಳೆಸಿದ.

 

[ಅರ್ಜುನನನ್ನು ಏಕೆ ಶ್ರೀಕೃಷ್ಣ ಕರೆದುಕೊಂಡು ಹೋಗಿದ್ದ ಎನ್ನುವುದನ್ನು ವಿವರಿಸುತ್ತಾರೆ:]

 

ತೃತೀಯಮರ್ಜ್ಜುನಂ ಚೈವ ಸಮಾದಾಯ ಯಯೌ ರಿಪುಮ್ ।

ಹರಿಸ್ತಸ್ಮಾಚ್ಚ ಭೀಮಸ್ಯ ಮಹಾಧಿಕ್ಯಂ ಪ್ರಕಾಶಯನ್                  ೨೧.೧೪೨

 

ಮುಖೇನ ಮಾಗಧಸ್ಯೈವ ವೃಣ್ವೇಕಂ ನ ಇತಿ ಬ್ರುವನ್ ।

ವೃಣ್ವೇಕಮಸ್ಮಾಸ್ವಿತಿ ಸಃ ಪ್ರೋಕ್ತ ಆಹ ಜರಾಸುತಃ                    ೨೧.೧೪೩

 

ಶ್ರೀಕೃಷ್ಣ ಮೂರನೆಯವನನ್ನಾಗಿ ಅರ್ಜುನನನ್ನು ಕರೆದುಕೊಂಡು ಶತ್ರುವಾದ ಜರಾಸಂಧನಲ್ಲಿಗೆ ಬಂದಿದ್ದ. ಭೀಮನ ಆಧಿಕ್ಯವನ್ನು ತೋರಿಸಲೋಸುಗವೇ ಶ್ರೀಕೃಷ್ಣ ಹೀಗೆ ಮಾಡಿದ್ದ. ‘ನಮ್ಮಲ್ಲಿ ಒಬ್ಬನನ್ನು ಆರಿಸಿಕೋ’ ಎಂದು ಜರಾಸಂಧನಿಗೆ ಕೃಷ್ಣ ಆಯ್ಕೆ ಕೊಟ್ಟಾಗ ಜರಾಸಂಧ ಹೀಗೆ ಹೇಳುತ್ತಾನೆ:

 

ಕುರ್ಯ್ಯಾಂ ನೈವಾರ್ಜ್ಜುನೇನಾಹಮಬಲೇನೈವ ಸಙ್ಗರಮ್ ।

ಪಞ್ಚಪಞ್ಚಾಶದಬ್ದೋsದ್ಯ ಹ್ಯಯಮೇವಂ ಚ ಬಾಲವತ್              ೨೧.೧೪೪

 

ಅಬಲತ್ವಾದ್ ಯುವಾsಪ್ಯೇಷ ಬಾಲ ಏವ ಮತೋ ಮಮ ।

ಇತ್ಯುಕ್ತೋsಪ್ಯರ್ಜ್ಜುನೋ ನಾsಹ ಕುರು ತರ್ಹಿ ಪರೀಕ್ಷಣಮ್              ೨೧.೧೪೫

 

‘ನಾನು ದುರ್ಬಲನಾದ ಅರ್ಜುನನ ಜೊತೆಗೆ ಯುದ್ಧ ಮಾಡಲಾರೆ. ಇವನು ಐವತ್ತೈದು ವರ್ಷದವನಾದರೂ ಬಾಲಕ ಸದೃಶನೇ. ಬಲರಹಿತನಾಗಿರುವ ಇವನು ಯುವಕನಾಗಿದ್ದರೂ ಕೂಡಾ ಬಾಲಕ ಎನ್ನುವುದು ನನ್ನ ಭಾವನೆ. ಈರೀತಿಯಾಗಿ ಜರಾಸಂಧ ಹೀಯಾಳಿಸಿ ಮಾತನಾಡಿದರೂ ಕೂಡಾ ಅರ್ಜುನನು ‘ ಹಾಗಿದ್ದರೆ ಪರೀಕ್ಷೆ ಮಾಡು ನೋಡೋಣ’ ಎಂದು ಪ್ರತಿಯಾಗಿ ಸವಾಲು ಹಾಕಲಿಲ್ಲ.

[ಈ ಮಾತನ್ನು ಮಹಾಭಾರತದಲ್ಲೂ ಕಾಣುತ್ತೇವೆ: ‘ಮತ್ವಾ ದೇವಂ ಗೋಪ ಇತಿ ಬಾಲೋsರ್ಜುನ ಇತಿ ಸ್ಮ ಹ (ಸಭಾಪರ್ವ ೨೪.೫) ಕೃಷ್ಣನನ್ನು ಗೋಪ ಎಂದು ತಿರಸ್ಕಾರ ಮಾಡಿದ ಜರಾಸಂಧ ಬಾಲಕನಾದ ಅರ್ಜುನನೊಂದಿಗೆ ಯುದ್ಧ ಮಾಡುವುದಿಲ್ಲ ಎನ್ನುತ್ತಾನೆ].

 

ಬಾಹುಭ್ಯಾಂ ಧನುಷಾ ವೇತಿ ಶಙ್ಕಮಾನಃ ಪರಾಜಯಮ್ ।

ಅತೋ ಭೀಮೇ ಬಲಾಧಿಕ್ಯಂ ಸುಪ್ರಸಿದ್ಧಮಭೂನ್ಮಹತ್              ೨೧.೧೪೬

 

‘ಮಲ್ಲಯುದ್ಧ ಅಥವಾ ಬಿಲ್ಲುಯುದ್ಧ ಯಾವುದಕ್ಕಾದರೂ ನಾನು ಸಿದ್ಧ’ ಎಂದು ಅರ್ಜುನ ಜರಾಸಂಧನಲ್ಲಿ ಹೇಳಬಹುದಿತ್ತು. ಆದರೆ ಅವನು ಹಾಗೆ ಹೇಳಲಿಲ್ಲ. ಏಕೆಂದರೆ ‘ಎಲ್ಲಿ ತನಗೆ ಸೋಲಾಗುತ್ತದೋ ಏನೋ’ ಎನ್ನುವ ಅನುಮಾನ ಅವನಲ್ಲಿತ್ತು. ಆ ಕಾರಣದಿಂದ ಭೀಮಸೇನನಲ್ಲಿ ಬಲಾಧಿಕ್ಯವು ಪ್ರಸಿದ್ಧವಾಯಿತು.

[ಮಹಾಭಾರತದಲ್ಲಿ ದೇವತಾ ತಾರತಮ್ಯವೂ ಸುಪ್ತವಾಗಿ ಹೇಳಲ್ಪಟ್ಟಿದೆ. ವೇದಗಳಲ್ಲಿ ಏನನ್ನು ಹೇಳಿದ್ದಾರೋ, ಆ ತಾರತಮ್ಯ ಮಹಾಭಾರತದಲ್ಲೂ ಇದೆ. ಅದನ್ನು ಕಥೆಯಲ್ಲಿ ತೋರಿಸಲೋಸುಗ ಕೃಷ್ಣ ಹೀಗೆ ಮಾಡಿದ. ಅರ್ಜುನನನ್ನು ಕರೆದುಕೊಂಡು ಹೋಗಿರುವುದರಿಂದ ಅವನಿಗಿಂತ ದುರ್ಬಲರಾದ ಧರ್ಮರಾಜ ಹಾಗೂ ಇತರರ ಪ್ರಶ್ನೆ ಇಲ್ಲಿ ಬರುವುದಿಲ್ಲ. ಇನ್ನು ಭೀಮಸೇನನನ್ನು ಕರೆದುಕೊಂಡು ಹೋಗಿರುವುದರಿಂದ ತಾರತಮ್ಯದಲ್ಲಿ ಅರ್ಜುನ ಹಾಗೂ ಭೀಮನ ನಡುವೆ ಬರುವ ಬಲರಾಮನ ಹಾಗೂ  ಅಶ್ವತ್ಥಾಮರ ಆಧಿಕ್ಯವೂ ಸಿದ್ಧವಾಗುವುದಿಲ್ಲ. ಜರಾಸಂಧನನ್ನು ಯುದ್ಧದಲ್ಲಿ ಮಣಿಸಿರುವುದರಿಂದ ಅರ್ಜುನನಿಗಿಂತ ಬಲರಾಮ ಮಿಗಿಲು ಎನ್ನುವುದು ತಿಳಿಯುತ್ತದೆ. ಅಶ್ವತ್ಥಾಮನ ಮೇಲೆ ಜರಾಸಂಧ ಗೌರವ ಇಟ್ಟುಕೊಂಡಿದ್ದರಿಂದ ಅವನೂ ಅರ್ಜುನನಿಗಿಂತ ಮಿಗಿಲು ಎನ್ನುವುದು ತಿಳಿಯುತ್ತದೆ. ಹೀಗಾಗಿ ಶ್ರೀಕೃಷ್ಣ ಭೀಮಾರ್ಜುನರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿರುವುದರ ಹಿನ್ನೆಲೆಯಲ್ಲಿ ದೇವತಾತಾರತಮ್ಯ ಅಡಗಿದೆ ಎನ್ನುವುದು ನಮಗಿಲ್ಲಿ ತಿಳಿಯುತ್ತದೆ.]

 

ಏತದರ್ತ್ಥಂ ಹಿ ಕೃಷ್ಣೇನ ಸಹಾsನೀತಃ ಸ ಫಲ್ಗುನಃ ।

ಜಾನನ್ ಕೃಷ್ಣೇ ಬಲಂ ಘೋರಮವಿಷಹ್ಯಂ ಸ ಮಾಗಧಃ             ೨೧.೧೪೭

 

ಕುತ್ಸಯನ್ ಗೋಪ ಇತಿ ತಂ ಭಯಾನ್ನೈವಾsಹ್ವಯತ್ ಪ್ರಭುಮ್ ।

ಆಹ್ವಯಾಮಾಸ ಭೀಮಂ ತು ಸ್ಯಾದ್ ವಾ ಮೇ ಜೀವನಂ ತ್ವಿತಿ              ೨೧.೧೪೮

 

ಹನಿಷ್ಯತ್ಯೇವ ಮಾಂ ಕೃಷ್ಣ ಇತ್ಯಾಸೀನ್ನೃಪತೇರ್ಭಯಮ್ ।

ತಸ್ಮಾತ್ ತಂ ನಾsಹ್ವಯಾಮಾಸ ವಾಸುದೇವಂ ಸ ಮಾಗಧಃ             ೨೧.೧೪೯

 

ಇದಕ್ಕಾಗಿ (ಅರ್ಜುನನ ಮಿತಿಯನ್ನು ಜಗತ್ತಿಗೂ ಮತ್ತು ಸ್ವಯಂ ಅರ್ಜುನನಿಗೂ ತಿಳಿಸಲೋಸುಗ)ಕೃಷ್ಣನಿಂದ ಅರ್ಜುನನು ಜೊತೆಗೆ ಕರೆದೊಯ್ಯಲ್ಪಟ್ಟನು.

ಜರಾಸಂಧನಾದರೋ.  ಕೃಷ್ಣನಲ್ಲಿರುವ ಘೋರವಾದ ಮತ್ತು ತಡೆಯಲು ಅಸಾಧ್ಯವಾದ ಬಲವನ್ನು ತಿಳಿದವನಾಗಿ, ಹೊರನೋಟಕ್ಕೆ ‘ಇವನು ಗೋವಳ’ ಎಂದು ನಿಂದಿಸಿದರೂ, ವಸ್ತುತಃ  ‘ಕೃಷ್ಣನನ್ನು ಯುದ್ಧಕ್ಕೆ ಕರೆದರೆ ಖಂಡಿತವಾಗಿ ನಾನು ಸಾಯುತ್ತೇನೆ, ಅವನು ನನ್ನನ್ನು ಕೊಂದೇ ಕೊಲ್ಲುತ್ತಾನೆ’ ಎನ್ನುವ ಅಳುಕಿದ್ದುದರಿಂದಲೇ ವಾಸುದೇವನನ್ನು ಯುದ್ಧಕ್ಕೆ ಕರೆಯಲಿಲ್ಲ.

 ‘ಭೀಮನೊಂದಿಗೆ ಯುದ್ಧ ಮಾಡಿದರೆ ನಾನು ಗೆದ್ದರೂ ಗೆಲ್ಲಬಹುದು, ಬದುಕುಳಿಯಬಹುದು’ ಎನ್ನುವ ಆಲೋಚನೆಯಿಂದ ಜರಾಸಂಧ ಭೀಮನನ್ನು ಯುದ್ಧಕ್ಕೆ ಕರೆದ.

 

[ಹಾಗಿದ್ದರೆ ಜರಾಸಂಧ ಸುಲಭವಾಗಿ ಅರ್ಜುನನನ್ನು ಯುದ್ಧಕ್ಕೆ ಕರೆದು ಗೆಲ್ಲಬಹುದಿತ್ತಲ್ಲವೇ ಎಂದರೆ : ]

 

ಅರ್ಜ್ಜುನೇ ತು ಜಿತೇ ಕೃಷ್ಣಭೀಮೌ ಮಾಂ ನಿಹನಿಷ್ಯತಃ

ತ್ರಯಾಣಾಂ ದುರ್ಬಲಾಹ್ವಾನಾನ್ನಶ್ಯೇತ್ ಕೀರ್ತ್ತಿಶ್ಚ ಮೇ ದ್ಧ್ರುವಾ ೨೧.೧೫೦

 

ಇತಿ ಮತ್ವಾsಹ್ವಯಾಮಾಸ ಭೀಮಸೇನಂ ಸ ಮಾಗಧಃ ।

ಕಥಞ್ಚಿಜ್ಜೀವಿತಂ ವಾ ಸ್ಯಾನ್ನತು ನಶ್ಯತಿ ಮೇ ಯಶಃ                  ೨೧.೧೫೧

 

‘ಅರ್ಜುನ ನನ್ನಿಂದ ಸೋಲಿಸಲ್ಪಟ್ಟರೂ ಕೂಡಾ ಕೃಷ್ಣ ಹಾಗೂ ಭೀಮ ನನ್ನನ್ನು ಕೊಂದೇ ಕೊಲ್ಲುತ್ತಾರೆ. ಮೂರು ಜನರಲ್ಲಿ ದುರ್ಬಲನನ್ನು ಆಯ್ಕೆ ಮಾಡಿದ ಎನ್ನುವ ಕಾರಣಕ್ಕೆ ನನ್ನ ಕೀರ್ತಿಯೂ ನಾಶವಾಗುತ್ತದೆ’ ಎಂದು ಯೋಚಿಸಿದ ಜರಾಸಂಧ ಭೀಮಸೇನನನ್ನೇ ಯುದ್ಧಕ್ಕೆ ಕರೆದ. ‘ಭೀಮಸೇನನೊಂದಿಗೆ ಯುದ್ಧಮಾಡಿ ಬದುಕುಳಿದರೂ ಕೀರ್ತಿ ಸಿಗುತ್ತದೆ, ಸೋತರೂ ಕೂಡಾ ನನ್ನ ಕೀರ್ತಿ ನಾಶವಾಗದು’ ಎಂದವನು ಆಲೋಚಿಸಿದ್ದ.

 

ಇತಿ ಸ್ಮ ಭೀಮಂ ಪ್ರತಿಯೋಧನಾಯ ಸಙ್ಗೃಹ್ಯ ರಾಜಾ ಸ ಜರಾಸುತೋ ಬಲೀ ।

ರಾಜ್ಯೇ ನಿಜಂ ಚಾsತ್ಮಜಮಭ್ಯಷಿಞ್ಚತ್ ಪುರಾ ಖ್ಯಾತಂ ಪತ್ರತಾಪಾಖ್ಯರುದ್ರಮ್ ೨೧.೧೫೨

 

ಈರೀತಿಯಾಗಿ ಆಲೋಚಿಸಿದ ಬಲಿಷ್ಠನಾದ ಆ ಜರಾಸಂಧ ಭೀಮಸೇನನನ್ನೇ ಯುದ್ಧಕ್ಕೆಂದು ಆರಿಸಿ, ತನ್ನ ಮಗನಿಗೆ(ಸಹದೇವನಿಗೆ)  ರಾಜ್ಯಾಭಿಷೇಕ ಮಾಡಿ, ಯುದ್ಧಕ್ಕೆಂದು ಸಿದ್ಧನಾದ. ಜರಾಸಂಧನ ಮಗ ಏಕಾದಶರುದ್ರರಲ್ಲಿ ಒಬ್ಬನಾದ  ಪತ್ರತಾಪನ ಅವತಾರವಾಗಿದ್ದ.

[ಭಾಗವತ(೧೦.೮೦.೩೧-೩೩): ‘ನ ತ್ವಯಾ ಭೀರುಣಾ ಯೋತ್ಸ್ಯೇ ಯುಧಿ ವಿಕ್ಲಬಚೇತಸಾ । ಮಧುರಾಂ ಸ್ವಾಂ ಪುರೀಂ ತ್ಯಕ್ತ್ವಾ ಸಮುದ್ರೇ ಶರಣಂ ಗತಃ । ಅಯಂ ತು ವಯಸಾsತುಲ್ಯೋ ನಾತಿಸತ್ವೋ ನ ಮೇ ಸಮಃ ।  ಅರ್ಜುನೋ ನ ಭವೇದ್ ಯೋದ್ಧಾ  ಭೀಮಸ್ತುಲ್ಯಬಲೋ ಮತಃ । ಇತ್ಯುಕ್ತ್ವಾ ಭೀಮಸೇನಾಯ ದತ್ವಾ ಸ ಮಹತೀಂ ಗದಾಮ್ ।  ದ್ವಿತೀಯಾಂ  ಸ್ವಯಮಾದಾಯ ನಿರ್ಜಗಾಮ ಪುರಾದ್ ಬಹಿಃ’ – ‘ಮಧುರಾಪಟ್ಟಣವನ್ನು ಬಿಟ್ಟು ಸಮುದ್ರದಲ್ಲಿ ಅವಿತುಕೊಂಡಿರುವ ನಿನ್ನೊಡನೆ ಯುದ್ಧ ಮಾಡಲಾರೆ. ನಿನ್ನಷ್ಟೇ ವಯಸ್ಸಿನವನಾದ ಅರ್ಜುನ ನನಗೆ ಸಮನಾದ ಪ್ರತಿಸ್ಪರ್ಧಿಯಲ್ಲ. ಭೀಮಸೇನ ನನ್ನೊಡನೆ ಹೋರಾಡುವ ಅಂತಸ್ತಿರುವವನು’ ಎಂದು ಹೇಳಿದ ಜರಾಸಂಧ,   ಭೀಮಸೇನನಿಗೆ ಗದೆಯನ್ನು ಕೊಟ್ಟು, ಇನ್ನೊಂದು ಗದೆಯನ್ನು ತಾನು ತೆಗೆದುಕೊಂಡು, ಯುದ್ಧ ಮಾಡಲೆಂದು ನಗರದ ಹೊರಭಾಗಕ್ಕೆ ನಡೆದನು]