ಬಲಂ ಭೀಮೇ ಮನ್ಯಮಾನೋsಧಿಕಂ ತು
ಗದಾಶಿಕ್ಷಾಮಾತ್ಮನಿ ಚಾಧಿಕಾಂ ನೃಪಃ ।
ಭೀತೋ ನಿಯುದ್ಧೇsಸ್ಯ ದದೌ ಗದಾಂ ಸ ಭೀಮಾಯ ಚಾನ್ಯಾಂ ಸ್ವಯಮಗ್ರಹೀದ್ ಬಲೀ ॥೨೧.೧೫೩॥
ಬಲಶಾಲಿಯಾದ ಜರಾಸಂಧನು ಭೀಮನಲ್ಲಿ ಅಧಿಕವಾದ ಬಾಹುಬಲವಿದೆ ಹಾಗೂ
ತನ್ನಲ್ಲಿ ಅಧಿಕವಾದ ಗದಾಭ್ಯಾಸ ಕೌಶಲವಿದೆ ಎಂದು ತಿಳಿದವನಾಗಿ, ಭೀಮನೊಂದಿಗೆ ಮಲ್ಲಯುದ್ಧಕ್ಕೆ
ಹೆದರಿ, ಒಂದು ಗದೆಯನ್ನು ಭೀಮನಿಗೆ ನೀಡಿ, ಇನ್ನೊಂದು ಗದೆಯನ್ನು ತಾನು ಹಿಡಿದನು.
ತದರ್ತ್ಥಮೇವಾsಶು ಗದಾಂ ಪ್ರಗೃಹ್ಯ ಭೀಮೋ ಯಯೌ ಮಾಗಧಸಂಯುತೋ ಬಹಿಃ ।
ಪುರಾತ್ ಸಕೃಷ್ಣಾರ್ಜ್ಜುನ ಏವ ತತ್ರ ತ್ವಯುದ್ಧ್ಯತಾಂ ಕೇಶವಪಾರ್ತ್ಥಯೋಃ ಪುರಃ ॥೨೧.೧೫೪॥
ಜರಾಸಂಧನ ಆಲೋಚನೆಯನ್ನು ತಿಳಿದ ಭೀಮಸೇನನು ಗದಾಯುದ್ಧದ
ಕೌಶಲವನ್ನು ತೋರುವುದಕ್ಕಾಗಿಯೇ ಗದೆಯನ್ನು ಹಿಡಿದು, ಕೃಷ್ಣಾರ್ಜುನರಿಂದ ಕೂಡಿಕೊಂಡು, ಜರಾಸಂಧನೊಂದಿಗೆ
ನಗರದ ಹೊರಭಾಗಕ್ಕೆ ಬಂದನು. ಅಲ್ಲಿ ಕೃಷ್ಣಾರ್ಜುನರ ಮುಂದೆ ಭೀಮ-ಜರಾಸಂಧರು ಯುದ್ಧ ಮಾಡಿದರು.
ವಾಚಾsಜಯತ್ ತಂ ಪ್ರಥಮಂ ವೃಕೋದರಃ ಶಿವಾಶ್ರಯಂ ವಿಷ್ಣುಗುಣಪ್ರಕಾಶಯಾ ।
ತತೋ
ಗದಾಭ್ಯಾಮಭಿಪೇತತುಸ್ತೌ ವಿಚಿತ್ರಮಾರ್ಗ್ಗಾನಪಿ ದರ್ಶಯನ್ತೌ ॥೨೧.೧೫೫॥
ಭೀಮಸೇನನು ಶಿವಭಕ್ತನಾದ ಜರಾಸಂಧನನ್ನು ಮೊದಲು ‘ಭಗವಂತನ ಗುಣಗಳನ್ನು ಪ್ರತಿಪಾದನೆ ಮಾಡುವ ಮಾತುಗಳಿಂದ’
ಗೆದ್ದನು. ತದನಂತರ ಜರಾಸಂಧ ಭೀಮಸೇನರು ಗದಾಯುದ್ಧದ ವಿವಿಧ- ವಿಚಿತ್ರವಾದ ಮಂಡಲಗಳನ್ನು
ತೋರಿಸುತ್ತಾ ಕಾದಾಡಿದರು.
[ಆಚಾರ್ಯರು ಮೇಲಿನ ಶ್ಲೋಕದಲ್ಲಿ ಹೇಳಿರುವ ಮಾತಿನ ಸೂಕ್ಷ್ಮ ವಿವರಣೆ ಮಹಾಭಾರತದಲ್ಲಿ (ಸಭಾಪರ್ವ
೨೪.೩೦) ಕಾಣಸಿಗುತ್ತದೆ: ‘ತತಃ ಶಬ್ದೇನ ಮಹತಾ ಭತ್ಸಯನ್ತೌ ಪರಸ್ಪರಮ್’ ಇಲ್ಲಿ ಗಟ್ಟಿ ಧ್ವನಿಯಲ್ಲಿ ಬೈದಾಡಿಕೊಂಡರು ಎಂದು ಹೇಳಿರುವುದು
ತಿಳಿಯುತ್ತದೆ. ಬೈದಾಡಲು ಇರುವ ವಿಷಯ ಯಾವುದು ಎಂದು ವಿಶ್ಲೇಷಣೆ ಮಾಡಿದರೆ- ಹಿಂದೆ ಹೇಳಿದ ಕೆಲವು
ವಿವರಗಳಿಂದ ಅದು ತಿಳಿಯುತ್ತದೆ. ಅವೈದಿಕ ಯಜ್ಞವನ್ನು ಮಾಡುತ್ತಿದ್ದೀಯ,
ನರಬಲಿ ಮಾಡಬಾರದು ಎನ್ನುವುದು ಭೀಮನ ಅಭಿಪ್ರಾಯವಾಗಿತ್ತು. ಏಕೆ ನರಬಲಿ ಮಾಡಬಾರದು ಎನ್ನುವುದರ
ವಿವರ ನಮಗೆ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಕಾಣಸಿಗುತ್ತದೆ. ಮನುಷ್ಯನ ದೇಹ ಎನ್ನುವುದು
ಪುರುಷಾರ್ಥ ಸಾಧನೆಯಲ್ಲೇ ಶ್ರೇಷ್ಠವಾದುದು. ಬೇರೆ ಯಾವ ಪ್ರಾಣಿಗಳ ದೇಹವೂ ಕೂಡಾ ಪುರುಷಾರ್ಥ ಸಾಧನವಾದುದಲ್ಲ.
ಎಲ್ಲಿ ಪುರುಷಾರ್ಥಕ್ಕೆ ಆತ್ಯಂತಿಕವಾಗಿ ಅಡ್ಡಿಯಾಗುತ್ತದೋ ಅದು ಹಿಂಸೆ. ಎಲ್ಲಿ ಆಗುವುದಿಲ್ಲವೋ
ಅದು ಹಿಂಸೆಯಲ್ಲ. ಆದ್ದರಿಂದ ನಾವು ಇರುವೆಯನ್ನು ತುಳಿದರೆ ಅದು ಆತ್ಯಂತಿಕ ಹಿಂಸೆಯಾಗುವುದಿಲ್ಲ.
ಏಕೆಂದರೆ ಪುರುಷಾರ್ಥ ಸಾಧನ ಅಲ್ಲಿ ಅಡ್ಡಿ ಬರುವುದಿಲ್ಲ. ಅದೇ ರೀತಿ ಯಜ್ಞದಲ್ಲಿ ಪಶುಗಳನ್ನು
ಆಹುತಿಯಾಗಿ ನೀಡಿದರೆ ಅಲ್ಲಿ ಪುರುಷಾರ್ಥ ಸಾಧನ ಅಡ್ಡಿಯಾಗುವುದಿಲ್ಲ. ಇದು ಪ್ರಾಚೀನ ಗ್ರಂಥಗಳಿಂದ
ಸಿಗುವ ಗಟ್ಟಿಯಾದ ವಿಶ್ಲೇಷಣೆ. ಹೀಗಾಗಿ ನರಬಲಿ ಮಾಡುತ್ತಿರುವುದು ಅಪರಾಧ ಎನ್ನುವುದು ಭೀಮನ ವಾದವಾದರೆ, ನಾನು ಶಿವಭಕ್ತ
ಅವನಿಗಾಗಿ ನರಬಲಿ ಮಾಡುತ್ತಿದ್ದೇನೆ ಎನ್ನುವುದು ಜರಾಸಂಧನ ವಾದ. ಹೀಗೆ ಅವರಿಬ್ಬರು ಮೊದಲು ಮಾತಿನಲ್ಲಿ ಯುದ್ಧಮಾಡಿದರು.
ಅಲ್ಲಿ ಭೀಮಸೇನ ಜರಾಸಂಧನನ್ನು ವೈದಿಕವಾದ ಮಾತುಗಳಿಂದ ಗೆದ್ದ ಎಂದು ನಾವಿಲ್ಲಿ ತಿಳಿಯಬೇಕು.
ಭಾಗವತ(೧೦.೮೦.೩೫): ಮಣ್ಡಲಾನಿ ವಿಚಿತ್ರಾಣಿ ಸವ್ಯಂ ದಕ್ಷಿಣಮೇವ
ಚ । ಚರತೋಃ ಶುಶುಭೇ ಯುದ್ಧಂ ನಟಯೋರಿವ
ರಙ್ಗಿಣೋಃ’].
ತಯೋರ್ಗ್ಗದೇ ತೇsಶನಿಸನ್ನಿಕಾಶೇ ಚೂರ್ಣ್ಣೀಕೃತೇ ದೇಹಮಹಾದೃಢಿಮ್ನಾ ।
ಅನ್ಯೋನ್ಯಯೋರ್ವಕ್ಷಸಿ
ಪಾತಿತೇ ರುಷಾ ಯಥಾsಶ್ಮನೋಃ ಪಾಂಸುಪಿಣ್ಡೌ ಸುಮುಕ್ತೌ ॥೨೧.೧೫೬॥
ಹೇಗೆ ಕಲ್ಲು ಬಂಡೆಗಳ ಮೇಲೆ ಹೊಡೆಯಲ್ಪಟ್ಟ ಮಣ್ಣಿನ ಹೆಂಟೆ
ಪುಡಿಪುಡಿಯಾಗುವುದೋ ಹಾಗೇ, ಮಿಂಚಿನಂತಹ ಕಾಂತಿಯಿರುವ ಅವರಿಬ್ಬರ ಗದೆಗಳು
ಅವರ ದೇಹದ ಗಟ್ಟಿತನದಿಂದ ಅವರವರ ಎದೆಯ ಮೇಲೆ ಹೊಡೆಯಲ್ಪಟ್ಟು ಪುಡಿಪುಡಿಯಾದವು.
[‘ತತೋ ಭೀಮಂ ಜರಾಸಂಧೋ ಜಘಾನೋರಸಿ ಮುಷ್ಟಿನಾ । ಭೀಮೋsಪಿ
ತಂ ಜರಾಸನ್ಧಂ ವಕ್ಷಸ್ಯಭಿಜಘಾನ ಹ’ - ಅವರು ಮುಷ್ಟಿಯಿಂದ ಹೊಡೆದಾಡಿದರು
ಎಂದು ಮಹಾಭಾರತ(ಸಭಾಪರ್ವ ೨೪.೩೧) ಹೇಳಿದರೆ, ತೇ
ವೈ ಗದೇ ಭುಜಜವೇನ ನಿಪಾತ್ಯಮಾನೇ ಅನ್ಯೋನ್ಯಯೋಃ ಸಕಟಿಪಾದಕರೋರುಜತೃೂನ್ । ಚೂರ್ಣೀಬಭೂವತುರುಪೇತ್ಯ-‘ ಗದೆ ಪುಡಿಯಾಯಿತು
ಎಂದು ಭಾಗವತ(೧೦.೮೦.೩೭) ಹೇಳುತ್ತದೆ].
No comments:
Post a Comment