ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 5, 2021

Mahabharata Tatparya Nirnaya Kannada 21: 99-105

 

ಇತೀರಿತೇsಮುನಾ ಹರಿಃ ಸಮುದ್ಯಮಾತ್ ಪ್ರಧಾನತಃ ।

ಸ್ಥಿತೇ ಹಿ ಯಜ್ಞಕಾರಣೇ ವೃಕೋದರೇ ಜಗಾದ ಹ           ೨೧.೯೯

 

ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಡುತ್ತಿರಲು, ‘ಪ್ರಧಾನವಾಗಿರುವ ಪ್ರಯತ್ನವನ್ನು ಮಾಡುವ, ಯಜ್ಞಕ್ಕೆ ಕಾರಣನಾಗಿರುವ ಭೀಮಸೇನನಿರಲು ಈ ಯಜ್ಞ ನಡೆಯುವುದು ಸೂಕ್ತ ಎನ್ನುತ್ತಾನೆ  ಶ್ರೀಕೃಷ್ಣ.

[ಸಮಗ್ರ ರಾಜಕೀಯ ಪರಿಸ್ಥಿತಿಯೊಂದಿಗೆ ಆದಿಭೌತಿಕ ಪರಿಸ್ಥಿತಿಯನ್ನೂ ಕೂಡಾ ಕೃಷ್ಣ ಇಲ್ಲಿ ಹೇಳುತ್ತಾ, ರಾಜಕೀಯದ ಪ್ರಾಮುಖ್ಯತೆಯನ್ನು ಪ್ರತಿಪಾದನೆ ಮಾಡುತ್ತಿದ್ದಾನೆ].


ಸ ಏಕ ಏವ ಪೂರುಷೋ ಜರಾಸುತೋsದ್ಯ ವರ್ತ್ತತೇ ।

ಸಮಸ್ತಸದ್ವಿರೋಧಿನಾಂ ಬಲಂ ಕಲೇರನನ್ತರಃ              ೨೧.೧೦೦

 

ಈ ಯಾಗಕ್ಕೆ ಅಡ್ಡಿ ಮಾಡುವ ಒಬ್ಬನೇ ಒಬ್ಬ ಪುರುಷನಿದ್ದಾನೆ. ಅವನೇ ಜರಾಸಂಧ. ಎಲ್ಲಾ ದುಷ್ಟರಿಗೆ ಬಲ ತುಂಬುವಂತೆ ಇರುವ(ಆಶ್ರಯಭೂತನು) ಅವನು ಕಲಿಯ ನಂತರದ ಸ್ಥಾನದಲ್ಲಿದ್ದಾನೆ.  

 

ತಥಾ ಸತಾಂ ಸಮಾಶ್ರಯೋ ಯದುದ್ಭವಾಃ ಸತಾಂ ಗುಣಾಃ ।

ಸ ಏಕ ಏವ ತಾದೃಶಸ್ತ್ವಯಾ ವಿಚಿನ್ತ್ಯ ಯಾತ್ಯತಾಮ್    ೨೧.೧೦೧

 

ಹಾಗೆಯೇ, ಸಜ್ಜನರಿಗೆ ಆಶ್ರಯನಾಗಿರುವವನು ಇಲ್ಲಿದ್ದಾನೆ. (ಹೇಗೆ ಅಸಜ್ಜನರಿಗೆ ಆಶ್ರಯನಾಗಿರುವ ಜರಾಸಂಧ ಅಲ್ಲಿದ್ದಾನೋ ಹಾಗೆಯೇ ಔದಾರ್ಯ, ಜ್ಞಾನ, ಭಕ್ತಿ,  ಮೊದಲಾದ ಎಲ್ಲಾ ಗುಣಗಳು ಯಾವ ಮುಖ್ಯಪ್ರಾಣನ ಅನುಗ್ರಹದಿಂದ ಸಜ್ಜನರಿಗೆ ಬರುವುದೋ ಅಂತಹ ಭೀಮಸೇನ ಇಲ್ಲಿದ್ದಾನೆ) ಅದರಿಂದಾಗಿ ನಿನ್ನಿಂದ(ಯುಧಿಷ್ಠಿರನಿಂದ) ಚಿಂತನಾಪೂರ್ವಕವಾಗಿ  ಯುದ್ಧಕ್ಕೆಂದು (ಆ ಭೀಮಸೇನನು) ಕಳುಹಿಸಲ್ಪಡಲಿ.

 

ಯದಿ ಸ್ಮ ತೇನ ಮಾಗಧೋ ನಿಹನ್ಯತೇ ಸತಾಂ ಜಯಃ ।

ವಿಪರ್ಯ್ಯಯೇಣ ಚಾಸತಾಮಿತಿ ಸ್ಮ ವಿದ್ಧಿ ನಾನ್ಯಥಾ      ೨೧.೧೦೨

 

ಒಂದು ವೇಳೆ ಭೀಮಸೇನನಿಂದ ಜರಾಸಂಧ ಹತನಾದರೆ ಸಜ್ಜನರಿಗೆ ಜಯವು. ಇಲ್ಲದಿದ್ದರೆ ದುರ್ಜನರಿಗೆ ಜಯವು. ಹೀಗೇ ತಿಳಿ, ಬೇರೆರೀತಿಯಾಗಿ ಅಲ್ಲ.

[ರಾಜಸೂಯ ಯಾಗ ಸಮಗ್ರ ವೇದಗಳ ನಿರ್ಣಯ. ಸಮಗ್ರ ಸತ್ಕರ್ಮಗಳ ನಿರ್ಣಯ. ವೇದಗಳ ನಿಯಮ ಸಮಗ್ರವಾಗಿರಬೇಕಾದರೆ ಈ ಯಾಗ ಯಶಸ್ವಿಯಾಗಬೇಕು. ಒಂದು ವೇಳೆ, ಸಜ್ಜನರಿಗೆ ಆಶ್ರಯನಾದ ಮುಖ್ಯಪ್ರಾಣನ ಅವತಾರವಾದ ಭೀಮಸೇನನಿಂದ ಜರಾಸಂಧನ ಕೊಲೆಯಾದರೆ - ಸಮಗ್ರ ವೇದ, ಇತಿಹಾಸ, ಪುರಾಣಗಳು, ನೀತಿಗಳು, ಭಕ್ತಿ ಮೊದಲಾದ ಗುಣಗಳ ಜಯವಾದಂತೆ. ವ್ಯತಿರಿಕ್ತ ನಡೆದರೆ  ವೇದ-ಧರ್ಮಗಳು  ಪ್ರಮಾಣ ಅಲ್ಲಾ ಎಂದು ಸಿದ್ದವಾಗುತ್ತದೆ. ಹೀಗೇ ತಿಳಿ. ಬೇರೆ ರೀತಿಯಾಗಿ ಅಲ್ಲಾ ಎಂದಿದ್ದಾನೆ ಶ್ರೀಕೃಷ್ಣ. ಹೀಗಾಗಿ ರಾಜಸೂಯ ಯಾಗ ಎನ್ನುವುದು ಇಂದಿನ ಯುದ್ಧಗಳಂತೆ ತಮ್ಮ ಪ್ರಭುತ್ವವನ್ನು ಸಾಧಿಸಲು ಮಾಡಿದ ಯುದ್ಧವಾಗಿರಲಿಲ್ಲ. ಅದು ಜಗತ್ತಿಗೇ ಒಂದು ಸಂದೇಶವಾಗಿತ್ತು. ಜರಾಸಂಧ ಗೆದ್ದರೆ ವೇದ ಪ್ರಮಾಣವೇ ಅಲ್ಲವೆಂದು ತಿಳಿಯಬೇಕು, ಭೀಮಸೇನ ಗೆದ್ದರೆ ವೇದ-ಧರ್ಮ ಪ್ರಮಾಣ ಎಂದು ತಿಳಿದುಕೊಳ್ಳಬೇಕು -ಇಷ್ಟು ಸೈದ್ಧಾಂತಿಕ ಹಿನ್ನೆಲೆ ಭೀಮ-ಜರಾಸಂಧರ ಯುದ್ಧಕ್ಕಿತ್ತು ಎನ್ನುವುದು ಶ್ರೀಕೃಷ್ಣನ ಈ ಮಾತಿನಿಂದ ನಮಗೆ ತಿಳಿಯುತ್ತದೆ].

 

ಸ ಪಾರಮೇಷ್ಠ್ಯಸತ್ಪದಂ ಪ್ರಯಾತ್ಯಸಂಶಯಂ ಯುಧಿ ।

ಯ ಏವ ಹನ್ತಿ ಮಾಗಧಂ ಸ ವೇದಧರ್ಮ್ಮಪಾಲಕಃ        ೨೧.೧೦೩

 

ಯಾರು ಜರಾಸಂಧನನ್ನು ಕೊಲ್ಲುತ್ತಾನೋ ಅವನು ವೇದದ ಧರ್ಮವನ್ನು ಪಾಲನೆ ಮಾಡುವವನು. ಅವನೇ ಸಂಶಯಕ್ಕೆ ಎಣೆಯಿಲ್ಲದಂತೆ ಬ್ರಹ್ಮನ ಲೋಕಕ್ಕೆ ತೆರಳುತ್ತಾನೆ ಮತ್ತು ಬ್ರಹ್ಮಪದವಿಯನ್ನು ಹೊಂದುತ್ತಾನೆ.

 

ನಿಹನ್ತಿ ಮಾಗಧೇಶ್ವರಂ ಯ ಏಷ ವೈಷ್ಣವಂ ಜಗತ್ ।

ಕರೋತಿ ಶರ್ವಪಾಲಿತೋ ಯತಃ ಸ ಬಾರ್ಹದ್ರಥಃ        ೨೧.೧೦೪

 

ಯಾವ ಕಾರಣದಿಂದ ಜರಾಸಂಧನು ಶಿವನಿಂದ ಪಾಲಿತನಾದವನೋ, (ಶೈವಜಗತ್ತಿನ ಪ್ರತಿನಿಧಿಯೋ) ಅಂತಹ ಜರಾಸಂಧನನ್ನು ಯಾರು ಕೊಲ್ಲುತ್ತಾನೋ ಅವನು ಪ್ರಪಂಚವನ್ನು ಪರಮಾತ್ಮನ ಭಕ್ತಿಯಲ್ಲಿ  ನೆಲೆಗೊಳಿಸುತ್ತಾನೆ.

 

ನಿಹನ್ತಿ ಶೈವನಾಯಕಂ ಯ ಏಷ ವೈಷ್ಣವಾಗ್ರಣೀಃ ।

ಇತಿ ಸ್ಮ ಭಾವಸಂಯುತೇ ವದತ್ಯಜೇsಬಿಭೇನ್ನೃಪಃ      ೨೧.೧೦೫

 

‘ಯಾರು ಶೈವರಿಗೆ ಗುರುವಾಗಿರುವ ಜರಾಸಂಧನನ್ನು ಕೊಲ್ಲುತ್ತಾನೋ, ಅವನು ವೈಷ್ಣವಗ್ರೇಸರನಾಗುತ್ತಾನೆ(ಪರಮಾತ್ಮನ ಭಕ್ತರಲ್ಲಿ ಶ್ರೇಷ್ಠನೆನಿಸುತ್ತಾನೆ). ಈರೀತಿಯಾಗಿ ಭಗವಂತ  ನುಡಿಯಲು  ಯುಧಿಷ್ಠಿರನಿಗೆ  ಭಯವಾಯಿತು.

 

[ಜರಾಸಂಧ ಶೈವರಿಗೆ ಗುರು. ಆತ ಎಲ್ಲಾ ಶಿವಾಗಮಗಳನ್ನೂ ಬಲ್ಲವನಾಗಿದ್ದ. ಬಲಶಾಲಿಯೂ ಹೌದು. ಶಿವನ ತತ್ವವನ್ನು ಆಗಮಗಳಲ್ಲಿರುವಂತೆಯೇ ಪಾಲನೆ ಮಾಡುತ್ತಿರುವವನು ಜರಾಸಂಧ. ಅದೇ ರೀತಿ ವೈಷ್ಣವ ಆಗಮಗಳನ್ನು, ವೈಷ್ಣವಪ್ರಜ್ಞೆಯನ್ನು ಜಗತ್ತಿನಲ್ಲಿ ಬಿತ್ತುತ್ತಾ ವೈಷ್ಣವ ಗುರುವಾಗಿರುವವನು ಭೀಮಸೇನ. ಅವರಿಬ್ಬರ ನಡುವೆ ಕಾದಾಟ ಏರ್ಪಟ್ಟಾಗ ಜ್ಞಾನದಿಂದ ಹಾಗೂ ಬಲದಿಂದ ಯಾರು ಗೆಲ್ಲುತ್ತಾರೋ ಅದು ಶಾಸ್ತ್ರದ ನಿರ್ಣಯವಾಗುತ್ತದೆ. (ಸೂಚನೆ: ಬಲ ದೇವತೆಗಳಿಗೆ ಮತ್ತು ಕ್ಷತ್ರಿಯರಿಗೆ ಮಾತ್ರ ಮಾಪಕ ಹೊರತು ಇತರರಿಗಲ್ಲ). ಹೀಗಾಗಿ ಇಲ್ಲಿ ಅವರಿಬ್ಬರ ನಡುವಿನ ಕಾದಾಟಕ್ಕೆ ಈ ಮಟ್ಟದ ಪ್ರಾಮುಖ್ಯತೆಯಿದೆ. ಈ ಹಿನ್ನೆಲೆಯಿಂದ ಶ್ರೀಕೃಷ್ಣ ಮೇಲಿನ ಮಾತನ್ನು ಹೇಳಿದ್ದಾನೆ].

No comments:

Post a Comment