ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 9, 2021

Mahabharata Tatparya Nirnaya Kannada 21: 113-117

 

ಇತೀರಿತೇsವದತ್ ಪುನರ್ವೃಕೋದರೋsರಿಕಕ್ಷಭುಕ್ ।

ಯದೀಯನೇತೃಕಾ ರಮಾವಿರಿಞ್ಚಶರ್ವಪೂರ್ವಕಾಃ      ೨೧.೧೧೩

 

ವಶೇ ಚ ಯಸ್ಯ ತದ್ ಬಲಂ ಸುರಾಸುರೋರಗಾದಿನಾಮ್ ।

ಸ ಏಷ ಕೇಶವಃ ಪ್ರಭುಃ ಕ್ವ ಚಾಸ್ಯ ಬಾರ್ಹದ್ರಥಃ             ೨೧.೧೧೪

 

ಈರೀತಿಯಾಗಿ ಯುಧಿಷ್ಠಿರನು ನುಡಿಯಲು, ಅರಿಗಳೆಂಬ ಕಾಡನ್ನುಣ್ಣುವ, ಬೆಂಕಿಯಂತಿರುವ ಭೀಮಸೇನನು ಹೇಳುತ್ತಾನೆ: ‘ಲಕ್ಷ್ಮಿ, ಬ್ರಹ್ಮ, ರುದ್ರ ಮೊದಲಾದ ಎಲ್ಲಾ ದೇವತೆಗಳೂ ಕೂಡಾ ಯಾರ ಮಾರ್ಗದರ್ಶನವನ್ನು ಹೊಂದಿರುತ್ತಾರೋ, ದೇವತೆಗಳು, ದೈತ್ಯರು, ಮೊದಲಾದವರ ಬಲವು ಯಾರ ಕೈವಶವಾಗಿದೆಯೋ, ಅಂತಹ ಈ ಕೇಶವನು ನಮ್ಮ ಒಡೆಯ. ಇವನಿಗೆ ಜರಾಸಂಧನು ಯಾವ ಲೆಕ್ಕ?    

 

ಅಧೃಷ್ಯಮಸ್ತಿ ಮೇ ಬಲಂ ಹರಿಃ ಪ್ರಣಾಯಕೋsಸ್ಯ ಚ ।

ಸಮಸ್ತಲೋಕನೇತರಿ ಪ್ರಭೌ ಹಿ ಸರ್ವಶಕ್ತಿತಾ               ೨೧.೧೧೫

 

ಶ್ರೀಕೃಷ್ಣನೇ ಪ್ರೇರಕನಾಗಿರುವ ನನ್ನ ಕಸುವು ಅಜೇಯವಾಗಿದೆ. ಎಲ್ಲಾ ಲೋಕಗಳನ್ನೂ ಕೂಡಾ ಆಯಾ ಕಾಲದ ಗತಿಗೆ ಕೊಂಡೊಯ್ಯುವ ಈ ಕೃಷ್ಣನಲ್ಲಿ ಸರ್ವಶಕ್ತಿತ್ವ ಇದೆಯಷ್ಟೇ.

 

ಅಜೇಯತಾ ತಥಾsರ್ಜ್ಜುನೇ ಹರೇರ್ವರೋದ್ಭವಾsಸ್ತಿ ಹಿ ।

ಅತೋ ವಯಂ ತ್ರಯೋsದ್ಯ ತಂ ಪ್ರಯಾಮ ಮಾಗಧಂ  ರಿಪುಮ್             ೨೧.೧೧೬

 

ಹಾಗೆಯೇ ಅರ್ಜುನನಲ್ಲಿ ಪರಮಾತ್ಮನ ವರದಿಂದ ಉಂಟಾದ ಅಜೇಯತ್ವ ಇದೆಯಷ್ಟೇ. ಆ ಕಾರಣದಿಂದ ನಾವು ಮೂರುಜನ ಈಗ ಜರಾಸಂಧನನ್ನು ಕುರಿತು ಹೊರಡುತ್ತೇವೆ.

 

ಹನಿಷ್ಯ ಏವ ಮಾಗಧಂ ಹರೇಃ ಪುರೋ ನ ಸಂಶಯಃ ।

ಇತೀರಿತೇsಮುನಾ ಹರಿರ್ಜ್ಜಗಾದ ಧರ್ಮ್ಮನನ್ದನಮ್     ೨೧.೧೧೭

 

ನಾನು ಪರಮಾತ್ಮನ ಎದುರು ಜರಾಸಂಧನನ್ನು ಕೊಂದೇ ಕೊಲ್ಲುತ್ತೇನೆ. ಇದಕ್ಕೆ ಸಂಶಯವಿಲ್ಲ’. ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಡುತ್ತಿರಲು, ಪರಮಾತ್ಮನು ಧರ್ಮರಾಜನನ್ನು ಕುರಿತು ಮಾತನಾಡಿದ.

[‘ಕೃಷ್ಣೇ ನಯೋ ಮಯಿ ಬಲಂ ಜಯಃ ಪಾರ್ಥೇ ಧನಞ್ಜಯೇ । ಮಾಗಧಂ ಸಾಧಯಿಷ್ಯಾಮ ಇಷ್ಟಿಂ ತ್ರಯ ಇವಾಗ್ನಯಃ’ (ಮಹಾಭಾರತ ಸಭಾಪರ್ವ ೧೫.೧೩) ಕೃಷ್ಣನಲ್ಲಿ ನೀತಿ(ಕೃಷ್ಣನ ಮಾರ್ಗದರ್ಶನ), ನನ್ನಲ್ಲಿ ಬಲ, ಅರ್ಜುನನಲ್ಲಿ ಜಯವಿದೆ. ಅದರಿಂದ ಯಾಗಕ್ಕೆ ಹೇಗೆ ಮೂರು ಅಗ್ನಿಗಳೋ ಹಾಗೇ, ಈ ಜರಾಸಂಧ ವದೆ ಎನ್ನುವ ಯಜ್ಞಕ್ಕೆ ನಾವು ಮೂರು ಜನ ಅಗ್ನಿಗಳಿದ್ದಂತೆ]  

No comments:

Post a Comment