ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 2, 2021

Mahabharata Tatparya Nirnaya Kannada 21: 90-98

 

[ಈ ರೀತಿಯಾಗಿ ಹೇಳಿದ ಕೃಷ್ಣ ಮುಂದೆ ಇನ್ನೂ ಕೆಲವು ಮಾತುಗಳನ್ನು ಹೇಳಲಿದ್ದಾನೆ. ಆದರೆ ಅದಕ್ಕೂ ಮೊದಲು, ಹಿನ್ನೆಲೆಯಾಗಿ,  ಮುಂದೆ ಶ್ರೀಕೃಷ್ಣ ಹೇಳಲಿರುವ ಮಾತುಗಳ ಹಿಂದೆ ಯಾವ ಭಾವವಿದೆ ಎನ್ನುವುದನ್ನು ಮುಂದಿನ ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ:]

 

ಉದೀರ್ಯ್ಯ ಚೈವಮೀಶ್ವರಃ ಕ್ರತೋರಮುಷ್ಯ ಯೋಗ್ಯತಾ ।

ವೃಕೋದರೇ ಯತೋsಖಿಲಾ ಚತುರ್ಮ್ಮುಖತ್ವಯೋಗ್ಯತಾ     ೨೧.೯೦

 

ತತಃ ಸುಪೂರ್ಣ್ಣಮಸ್ಯ ತತ್ ಫಲಂ ವಿಧಾತುಮಞ್ಜಸಾ ।

ಜಗಾದ ವಾಯುವಾಹನೋ ವಚೋ ಯುಧಿಷ್ಠಿರಂ ತ್ವಿದಮ್        ೨೧.೯೧

 

ಸರ್ವಸಮರ್ಥನಾದ ಶ್ರೀಕೃಷ್ಣನು ಈ ರೀತಿಯಾಗಿ ಹೇಳಿ, ಯಾವ ಕಾರಣದಿಂದ ಈ ರಾಜಸೂಯ ಯಾಗದ ಸಮಗ್ರವಾದ ಫಲವನ್ನು ಪಡೆಯುವ ಯೋಗ್ಯತೆ (ಮುಂದೆ ಚತುರ್ಮುಖನಾಗುವ ಯೋಗ್ಯತೆ) ಭೀಮಸೇನನಲ್ಲಿ ಇದೆಯೋ, ಅದರಿಂದ ಈ ಯಾಗದ ಪೂರ್ಣಫಲವನ್ನು ಭೀಮಸೇನನಿಗೆ ಚೆನ್ನಾಗಿ ಹೊಂದಿಸಿಕೊಡುವುದಕ್ಕಾಗಿ, ವಾಯುವಾಹನನು (ಮುಖ್ಯಪ್ರಾಣನನ್ನೇರಿ ಸಾಗುವ ಶ್ರೀಕೃಷ್ಣನು) ಯುಧಿಷ್ಠಿರನನ್ನು ಕುರಿತು ಮಾತನ್ನು ಹೇಳಿದ:

 

ಕ್ವ ರಾಜಸೂಯಮದ್ಯ ತೇ ಜರಾಸುತೇ ತು ಜೀವತಿ ।

ಜಯೇತ್ ಕ ಏವ ತಂ ಯುಧಾ ಮೃತೋ ನ ಯೋsಪಿ ಸೀರಿಣಾ ೨೧.೯೨

 

‘ನಿನಗೆ ಪ್ರಚಲಿತ ರಾಜಕೀಯ ಪರಿಸ್ಥಿತಿಯಲ್ಲಿ ರಾಜಸೂಯ ಯಾಗ ಮಾಡಲು ಸಾಧ್ಯವೇ? ವಿಶೇಷವಾಗಿ ಜರಾಸಂಧ ಬದುಕಿರುವಾಗ ಅವನನ್ನು ಯುದ್ಧದಿಂದ ಯಾರು ತಾನೇ ಗೆದ್ದಾರು? ಯಾರು ಬಲರಾಮನಿಂದಲೂ ಕೂಡಾ ಸಾವನ್ನಪ್ಪಲಿಲ್ಲವೋ, ಅಂತಹ ಜರಾಸಂಧನನ್ನು ಯಾರು ಗೆಲ್ಲುತ್ತಾನೆ? 

 

ವಿರಿಞ್ಚಶರ್ವವಾಕ್ಯತಃ ಸಮಸ್ತಲೋಕಜಾಯಿನಿ ।

ಸ್ಥಿತೇ ತು ತೇ ಜರಾಸುತೇ ನ ಸೇತ್ಸ್ಯತಿ ಕ್ರತೂತ್ತಮಃ     ೨೧.೯೩

 

ಬ್ರಹ್ಮ ಹಾಗೂ ರುದ್ರರ ವರದಿಂದ ಎಲ್ಲಾ ಲೋಕವನ್ನೂ ಗೆದ್ದ ಜರಾಸಂಧನಿರಲು ನಿನ್ನ ರಾಜಸೂಯ ಯಾಗವು ಸಿದ್ಧವಾಗುವುದಿಲ್ಲ’.

 

ಇತೀರಿತೇ ರಥಾಙ್ಗಿನಾ ಜಗಾದ ಧರ್ಮ್ಮನನ್ದನಃ ।

ನಿವರ್ತ್ತಿತಂ ಮನಃ ಕ್ರತೋರಲಂ ಮಮಾಮುನಾ ಪ್ರಭೋ    ೨೧.೯೪

 

ಈರೀತಿಯಾಗಿ ಚಕ್ರಧರನಾದ ಕೃಷ್ಣನಿಂದ ಹೇಳಲ್ಪಡುತ್ತಿರಲು, ಧರ್ಮರಾಜನು ಹೇಳುತ್ತಾನೆ: ‘ಪ್ರಭೋ, ಈಗ ನನ್ನ ಮನಸ್ಸು ಯಜ್ಞದಿಂದ ನಿವೃತ್ತವಾಗಿದೆ’ ಎಂದು.  

 

ಬಭೂವುರೇವ ಭೂಭೃತೋ ನಚಾsಧಿರಾಜ್ಯಮಾಪಿರೇ ।

ಯದಾ ಚ ಚಕ್ರವರ್ತ್ತಿನಸ್ತದೇದೃಶಾ ನ ಶತ್ರವಃ                          ೨೧.೯೫

 

ಈ ಮೊದಲು ಅನೇಕ ರಾಜರು ಬಂದು ಹೋಗಿದ್ದಾರೆ. ಆದರೆ ಎಲ್ಲರೂ ವಿಸ್ತಾರವಾದ ಸಕಲ ಪ್ರಪಂಚವನ್ನು ಸಾಮ್ರಾಜ್ಯವನ್ನಾಗಿ ಮಾಡಿಕೊಳ್ಳಲು ಶಕ್ತರಾಗಲಿಲ್ಲ(ಎಲ್ಲರೂ ಚಕ್ರವರ್ತಿಗಳಾಗಲು ಸಾಧ್ಯವಾಗಿಲ್ಲ). ಇನ್ನು ಹಿಂದೆ ಚಕ್ರವರ್ತಿಗಳಾದವರು (ಉದಾಹರಣೆಗೆ ಹರಿಶ್ಚಂದ್ರ), ಅವರ ಕಾಲದಲ್ಲಿ  ಜರಾಸಂಧನಂತಹ ಬಲಿಷ್ಠ ಶತ್ರುಗಳು ಇರಲಿಲ್ಲ.

 

ಇತೀರಿತೇsಮುನಾsವದತ್ ಪ್ರಧಾನಮಾರುತಾತ್ಮಜಃ ।

ಪದಂ ಚತುರ್ಮ್ಮುಖಸ್ಯ ವಾ ಸುಸಾದ್ಧ್ಯಮೇವ ಯತ್ನತಃ              ೨೧.೯೬

 

ಈರೀತಿಯಾಗಿ ಹೇಳಿದಾಗ ಮುಖ್ಯಪ್ರಾಣನ ಮಗನಾದ ಭೀಮಸೇನನು ಹೇಳುತ್ತಾನೆ: ‘ಚತುರ್ಮುಖನ ಪದವಿಯನ್ನು ಕೂಡಾ ಪ್ರಯತ್ನಪಟ್ಟು ಗಳಿಸಬಹುದು’ ಎಂದು.

 

ನಿಜಾನುಭಾವವರ್ಜ್ಜಿತಾ ಹರೇರನುಗ್ರಹೋಜ್ಝಿತಾಃ

ಮಹಾಪ್ರಯತ್ನವರ್ಜ್ಜಿತಾ ಜನಾ ನ ಜಗ್ಮುರುನ್ನತಿಮ್                 ೨೧.೯೭

 

‘ಸ್ವರೂಪಭೂತವಾದಭಕ್ತಿಯಿಂದ ರಹಿತರಾದವರು, ಪರಮಾತ್ಮನ ಅನುಗ್ರಹದಿಂದ ಉಜ್ಝಿತರಾದವರು (ವರ್ಜಿತರಾದವರು),  ಮಹಾಪ್ರಯತ್ನ ಮಾಡದ ಜನರು ಎತ್ತರದ ಸ್ಥಾನವನ್ನು ಹೊಂದುವುದಿಲ್ಲ.

 

ಸ್ಥಿರೋsನುಭಾವ ಏವ ಮೇ ಮಹಾನನುಗ್ರಹೋ ಹರೇಃ ।

ಪ್ರಯತ್ನಮೇಕಮಗ್ರತೋ ನಿಧಾಯ ಭೂತಿಮಾಪ್ನುಮಃ              ೨೧.೯೮

 

ನನಗೆ ಪರಮಾತ್ಮನಲ್ಲಿ ಭಕ್ತಿ ಸ್ಥಿರವಾಗಿದೆ. ದೇವರ ಅನುಗ್ರಹ ದೊಡ್ಡದಾಗಿ ನನ್ನ ಮೇಲಿದೆ. ಹಾಗಾಗಿ ನಮ್ಮ ಪ್ರಯತ್ನವನ್ನು ಮುಂದೆ ಇಟ್ಟುಕೊಂಡು ಸಂಪತ್ತನ್ನು ಹೊಂದೋಣ’ ಎನ್ನುತ್ತಾನೆ ಭೀಮಸೇನ.

No comments:

Post a Comment