ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, December 19, 2021

Mahabharata Tatparya Nirnaya Kannada 21: 127-132

 ತಾನ್ ವಿಪ್ರವೇಷಾನ್ ಸ ನಿಶಾಮ್ಯ ರಾಜಾ ಮಹಾಭುಜಾನ್ ಸ್ನಾತಕವೇಷಯುಕ್ತಾನ್ ।

  ದ್ವಿತೀಯವರ್ಣ್ಣಾನ್ ಪ್ರವಿಚಿನ್ತ್ಯ ಬಾಹೂನ್ ಜ್ಯಾಕರ್ಕ್ಕಶಾನ್ ವೀಕ್ಷ್ಯ ಬಭಾಷ ಏತಾನ್             ೨೧.೧೨೭

 

ಜರಾಸಂಧನು ದಪ್ಪನಾದ ತೋಳ್ಗಳುಳ್ಳ ಆದರೆ ಬ್ರಾಹ್ಮಣರ ವೇಷವನ್ನು ಧರಿಸಿರುವ, ಬಿಲ್ಲಿನ ದಾರದಿಂದ ಒರಟಾಗಿರುವ ಕೈಗಳಿರುವ ಇವರನ್ನು ಕ್ಷತ್ರಿಯರು ಎಂದು ಚಿಂತಿಸಿ, ಅವರನ್ನು ಕುರಿತು ಹೀಗೆ ಹೇಳಿದನು:

 

ಕೇ ಷ್ಠಾಥ ಕಿಂಹೇತುತ ಆಗತಾಶ್ಚ ಕುತಶ್ಚ ಮೇ ಪರ್ವತಲಿಙ್ಗಭೇದನಮ್ ।

ಕೃತಂ ಭವದ್ಭಿಃ ಕುತ ಏವ ದುರ್ನ್ನಯಾಃ  ಕೃತಾಸ್ತಥಾsನ್ಯೇ ದ್ವಿಜವರ್ಯ್ಯವೇಷೈಃ ೨೧.೧೨೮

 

‘ನೀವು ಯಾರು? ಏಕಾಗಿ ಬಂದಿದ್ದೀರಿ? ಏಕಾಗಿ ನನ್ನ ಪರ್ವತ ಲಿಂಗವನ್ನು ಒಡೆದಿರಿ? ಬ್ರಾಹ್ಮಣರಂತೆ ಕಾಣಿಸಿಕೊಂಡು ಏಕೆ ಈ ರೀತಿ ತೀರ ಕೆಟ್ಟದ್ದಾಗಿ ನೆಡೆದುಕೊಂಡಿರಿ? 

 

ಇತಿ ಬ್ರುವಾಣಂ ಭಗವಾನುವಾಚ ಕಾರ್ಯ್ಯಂ ಹಿ ಶತ್ರೋರಖಿಲಂ ಪ್ರತೀಪಮ್ ।

ಇತ್ಯುಕ್ತ ಊಚೇ ನಹಿ ವಿಪ್ರಶತ್ರುರಹಂ ಕುತೋ ವೋ ಮಮ ಶತ್ರುತಾ ಭವೇತ್             ೨೧.೧೨೯

 

ಈರೀತಿಯಾಗಿ ಹೇಳುವ ಜರಾಸಂಧನನ್ನು ಕುರಿತು ಶ್ರೀಕೃಷ್ಣನು: ‘ಶತ್ರುವಿಗಾಗಬೇಕಾದರೆ ಎಲ್ಲವನ್ನೂ ವಿರುದ್ಧವಾಗಿಯೇ ಮಾಡಬೇಕು. (ಶತ್ರುವಿನ ಮನೆಯನ್ನು ಹಿಂಬಾಗಿಲಿನಿಂದಲೇ ಪ್ರವೇಶಿಸಬೇಕು.  ಶತ್ರುವಿನ ರಾಜ್ಯದಲ್ಲಿ ಅವನ ಪ್ರತಿಷ್ಠೆಯ ಸಂಕೇತವೇನಿದೆ ಅದನ್ನು ಮೊದಲು ಒಡೆದುಹಾಕಬೇಕು-ಇದು ರಾಜನೀತಿ ಅದನ್ನು ಮಾಡಿದೆವು ಎನ್ನುವ ಅಭಿಪ್ರಾಯದಲ್ಲಿ ಶ್ರೀಕೃಷ್ಣ ಮಾತನಾಡಿದ). ಈರೀತಿಯಾಗಿ ಹೇಳಲ್ಪಟ್ಟಾಗ  ಜರಾಸಂಧ ಹೇಳುತ್ತಾನೆ: ‘ನಾನು ಬ್ರಾಹ್ಮಣರ ಶತ್ರುವೇ ಅಲ್ಲ. ನೀವು ನನಗೆ ಶತ್ರುಗಳಾಗಲು ಸಾಧ್ಯವಿಲ್ಲ’ ಎಂದು. (ಜರಾಸಂಧನ ಈ ಮಾತಿನಿಂದ ಇನ್ನೂ ಕೂಡಾ ಅವನಿಗೆ ಇವರು ಬ್ರಾಹ್ಮಣರಲ್ಲ ಎನ್ನುವುದು ನಿಶ್ಚಯವಾಗಿಲ್ಲ ಎನ್ನುವುದು ತಿಳಿಯುತ್ತದೆ).

 

ಇತ್ಯುಕ್ತವಾಕ್ಯಂ ನೃಪತಿಂ ಜಗಾದ ಜನಾರ್ದ್ದನೋ ನೈವ ಹಿ ತಾದೃಶಾ ದ್ವಿಜಾಃ ।

ವಯಂ ರಿಪುಸ್ತೇsಸ್ಮಿ ಹಿ ವಾಸುದೇವ ಇಮೌ ಚ ಭೀಮಾರ್ಜ್ಜುನನಾಮಧೇಯೌ             ೨೧.೧೩೦

 

ಈರೀತಿಯಾಗಿ ಹೇಳುತ್ತಿರಲು ಶ್ರೀಕೃಷ್ಣನು ಜರಾಸಂಧನನ್ನು ಕುರಿತು : ‘ನಾವು ನೀನು ಅಂದುಕೊಂಡಂತಹ ಬ್ರಾಹ್ಮಣರಲ್ಲ. (ವೇದವನ್ನು ಓದುವವರು ಆದರೆ ನೀನು ಅಂದುಕೊಂಡ ಕ್ಷಮಪ್ರಧಾನರಾದ, ದುರ್ಬಲರಾದ, ಜ್ಞಾನಮಾರ್ಗದಲ್ಲಿ ಮಾತ್ರ ಇರುವ ಬ್ರಾಹ್ಮಣರಲ್ಲ ಎನ್ನುವ ಧ್ವನಿ).  ನಾನು ಯಾರು ನಿನ್ನನ್ನು ದ್ವೇಷಿಸುತ್ತಿರುವನೋ ಆ ವಾಸುದೇವ. ಇವರಿಬ್ಬರು-ಭೀಮಾರ್ಜುನರು.

 

ಯದ್ ಬಾನ್ಧವಾನ್ ನಃ ಪಿಶಿತಾಶಿಧರ್ಮ್ಮತೋ ರೌದ್ರೇ ಮಖೇ ಕಲ್ಪಯಿತುಂ ಪಶುತ್ವೇ ।

ಇಚ್ಛಸ್ಯರೇ ವೇದಪಥಂ ವಿಹಾಯ ತಂ ತ್ವಾಂ ಬಲಾಚ್ಛಾಸ್ತುಮಿಹಾsಗತಾ ವಯಮ್ ೨೧.೧೩೧

 

ಯಾವ ಕಾರಣದಿಂದ ನಮ್ಮ ಬಂಧುಗಳಾಗಿರುವ ರಾಜರನ್ನು ರಾಕ್ಷಸಧರ್ಮದಿಂದ ರುದ್ರನಿಗೆ ಸಂಬಂಧಿಸಿದ ಯಾಗದಲ್ಲಿ ಪಶುಗಳನ್ನಾಗಿ ಮಾಡಲು ನೀನು ಬಯಸುತ್ತಿದ್ದೀಯ? ಎಲೈ ಶತ್ರುವೇ, ನೀನು  ವೇದಮಾರ್ಗವನ್ನು ಬಿಟ್ಟು ನರಮೇದವನ್ನು ಮಾಡಲು ಹೊರಟಿದ್ದೀಯ. ಅಂತಹ ನಿನ್ನನ್ನು ಬಲದಿಂದ ನಿಗ್ರಹಿಸಲು ನಾವು ಬಂದಿದ್ದೇವೆ.

 

ವಿಮೋಕ್ಷಯಾಮಃ ಸ್ವಜನಾನ್ ಯದಿ ತ್ವಂ ನ ಮೋಚಯಸ್ಯದ್ಯ ನಿಗೃಹ್ಯ ಚ ತ್ವಾಮ್ ।

ಮುಞ್ಚಾಥ ವಾ ತಾನಭಿಯಾಹಿ ವಾsಸ್ಮಾನ್ ರಣಾಯ ಮರ್ತ್ತುಂ ಕೃತನಿಶ್ಚಯೋsತ್ರ ೨೧.೧೩೨

 

ಒಂದುವೇಳೆ ನೀನು ನಮ್ಮ ಬಂಧುಗಳಾದ ರಾಜರನ್ನು ಬಿಡುವುದಿಲ್ಲವಾದರೆ, ನಿನ್ನನ್ನು ಕೊಂದು ನಮ್ಮವರನ್ನು ಬಿಡಿಸುತ್ತೇವೆ. ಅದರಿಂದ ಅವರನ್ನು ಬಿಡು ಅಥವಾ ಯುದ್ಧದಿಂದ ನಮ್ಮನ್ನು ಗೆಲ್ಲು. ಸಾಯುವ ನಿಶ್ಚಯ ಮಾಡಿಕೊಂಡೇ ನಮ್ಮೊಂದಿಗೆ ಯುದ್ಧಕ್ಕೆ ಬಾ’.

No comments:

Post a Comment