[ಅವರು ಬ್ರಾಹ್ಮಣ ವೇಷದಲ್ಲಿ ಏಕೆ ಬಂದಿರುವುದು ಎನ್ನುವುದನ್ನು ವಿವರಿಸುತ್ತಾರೆ:]
ಕೃಷ್ಣಭೀಮಾರ್ಜ್ಜುನಾಸ್ತೇನ
ವಿಪ್ರವೇಷಾಶ್ಚ ತೇsಭವನ್ ।
ನಿರಾಯುಧಃ ಕ್ಷತ್ರವೇಷೋ
ನೈವ ಯೋಗ್ಯಃ ಕಥಞ್ಚನ ॥೨೧.೧೩೯॥
ಆಯುಧವಿಲ್ಲದ ಕ್ಷತ್ರವೇಷ ಎಂದಿಗೂ ಯೋಗ್ಯವಲ್ಲ (ಕ್ಷತ್ರಿಯ ವೇಷ
ಎಂದರೆ ಅಲ್ಲಿ ಆಯುಧ ಇರಲೇಬೇಕು). ನಿರಾಯುಧರಾಗಿ ಹೋಗಬೇಕಾಗಿರುವುದರಿಂದ ಕೃಷ್ಣ-ಭೀಮ-ಅರ್ಜುನರು ಬ್ರಾಹ್ಮಣ
ವೇಷವನ್ನು ತೊಟ್ಟಿದ್ದರು.
ತತೋ
ಜಗ್ಮುರ್ವಿಪ್ರವೇಷಾಸ್ತೃಣೀಕರ್ತ್ತುಂ ಹಿ ಮಾಗಧಮ್ ।
ಮಾಗಧಸ್ಯ ಸಸೈನ್ಯಸ್ಯ
ಸ್ವಗೃಹೇ ಸಂಸ್ಥಿತಸ್ಯ ಚ ॥೨೧.೧೪೦॥
ನಿರಾಯುಧೇನ ಭೀಮೇನ
ಸಮಾಹ್ವಾನೇ ಕೃತೇsಮಿತಮ್ ।
ಧರ್ಮ್ಮಂ ಯಶಶ್ಚ
ಭೀಮಸ್ಯ ವರ್ದ್ಧಯಾಮಾಸ ಕೇಶವಃ ॥೨೧.೧೪೧॥
ಹೀಗೆ ಜರಾಸಂಧನನ್ನು ಕಡೆಗಣಿಸಲೆಂದೇ ಆಯುಧರಹಿತರಾಗಿ ವಿಪ್ರವೇಷವನ್ನು
ತೊಟ್ಟು ಅವರು ತೆರಳಿದ್ದರು. ಸೈನ್ಯದಿಂದ
ಕೂಡಿರುವ, ತನ್ನ ಮನೆಯಲ್ಲಿಯೇ ಇರುವ ಜರಾಸಂಧನಿಗೆ, ನಿರಾಯುಧನಾಗಿರುವ ಭೀಮಸೇನ ಸವಾಲು ಹಾಕಿದರೆ
ಭೀಮನ ಕೀರ್ತಿ ಹಿರಿದಾಗುವುದಷ್ಟೇ. ಈ ರೀತಿ ಶ್ರೀಕೃಷ್ಣ ಭೀಮನ ಕೀರ್ತಿಯನ್ನು ಬೆಳೆಸಿದ.
[ಅರ್ಜುನನನ್ನು ಏಕೆ ಶ್ರೀಕೃಷ್ಣ ಕರೆದುಕೊಂಡು ಹೋಗಿದ್ದ
ಎನ್ನುವುದನ್ನು ವಿವರಿಸುತ್ತಾರೆ:]
ತೃತೀಯಮರ್ಜ್ಜುನಂ ಚೈವ
ಸಮಾದಾಯ ಯಯೌ ರಿಪುಮ್ ।
ಹರಿಸ್ತಸ್ಮಾಚ್ಚ
ಭೀಮಸ್ಯ ಮಹಾಧಿಕ್ಯಂ ಪ್ರಕಾಶಯನ್ ॥೨೧.೧೪೨॥
ಮುಖೇನ ಮಾಗಧಸ್ಯೈವ
ವೃಣ್ವೇಕಂ ನ ಇತಿ ಬ್ರುವನ್ ।
ವೃಣ್ವೇಕಮಸ್ಮಾಸ್ವಿತಿ ಸಃ
ಪ್ರೋಕ್ತ ಆಹ ಜರಾಸುತಃ ॥೨೧.೧೪೩॥
ಶ್ರೀಕೃಷ್ಣ ಮೂರನೆಯವನನ್ನಾಗಿ ಅರ್ಜುನನನ್ನು ಕರೆದುಕೊಂಡು ಶತ್ರುವಾದ
ಜರಾಸಂಧನಲ್ಲಿಗೆ ಬಂದಿದ್ದ. ಭೀಮನ ಆಧಿಕ್ಯವನ್ನು ತೋರಿಸಲೋಸುಗವೇ ಶ್ರೀಕೃಷ್ಣ ಹೀಗೆ ಮಾಡಿದ್ದ. ‘ನಮ್ಮಲ್ಲಿ
ಒಬ್ಬನನ್ನು ಆರಿಸಿಕೋ’ ಎಂದು ಜರಾಸಂಧನಿಗೆ ಕೃಷ್ಣ ಆಯ್ಕೆ ಕೊಟ್ಟಾಗ
ಜರಾಸಂಧ ಹೀಗೆ ಹೇಳುತ್ತಾನೆ:
ಕುರ್ಯ್ಯಾಂ ನೈವಾರ್ಜ್ಜುನೇನಾಹಮಬಲೇನೈವ
ಸಙ್ಗರಮ್ ।
ಪಞ್ಚಪಞ್ಚಾಶದಬ್ದೋsದ್ಯ ಹ್ಯಯಮೇವಂ ಚ ಬಾಲವತ್ ॥೨೧.೧೪೪॥
ಅಬಲತ್ವಾದ್ ಯುವಾsಪ್ಯೇಷ ಬಾಲ ಏವ ಮತೋ ಮಮ ।
ಇತ್ಯುಕ್ತೋsಪ್ಯರ್ಜ್ಜುನೋ ನಾsಹ ಕುರು ತರ್ಹಿ
ಪರೀಕ್ಷಣಮ್ ॥೨೧.೧೪೫॥
‘ನಾನು ದುರ್ಬಲನಾದ ಅರ್ಜುನನ ಜೊತೆಗೆ ಯುದ್ಧ ಮಾಡಲಾರೆ. ಇವನು ಐವತ್ತೈದು ವರ್ಷದವನಾದರೂ ಬಾಲಕ ಸದೃಶನೇ. ಬಲರಹಿತನಾಗಿರುವ ಇವನು ಯುವಕನಾಗಿದ್ದರೂ ಕೂಡಾ ಬಾಲಕ
ಎನ್ನುವುದು ನನ್ನ ಭಾವನೆ’. ಈರೀತಿಯಾಗಿ ಜರಾಸಂಧ ಹೀಯಾಳಿಸಿ
ಮಾತನಾಡಿದರೂ ಕೂಡಾ ಅರ್ಜುನನು ‘ ಹಾಗಿದ್ದರೆ ಪರೀಕ್ಷೆ ಮಾಡು ನೋಡೋಣ’ ಎಂದು ಪ್ರತಿಯಾಗಿ ಸವಾಲು
ಹಾಕಲಿಲ್ಲ.
[ಈ ಮಾತನ್ನು ಮಹಾಭಾರತದಲ್ಲೂ ಕಾಣುತ್ತೇವೆ: ‘ಮತ್ವಾ ದೇವಂ
ಗೋಪ ಇತಿ ಬಾಲೋsರ್ಜುನ ಇತಿ ಸ್ಮ ಹ’ (ಸಭಾಪರ್ವ ೨೪.೫) ಕೃಷ್ಣನನ್ನು ಗೋಪ ಎಂದು
ತಿರಸ್ಕಾರ ಮಾಡಿದ ಜರಾಸಂಧ ‘ಬಾಲಕನಾದ ಅರ್ಜುನನೊಂದಿಗೆ ಯುದ್ಧ
ಮಾಡುವುದಿಲ್ಲ’ ಎನ್ನುತ್ತಾನೆ].
ಬಾಹುಭ್ಯಾಂ ಧನುಷಾ
ವೇತಿ ಶಙ್ಕಮಾನಃ ಪರಾಜಯಮ್ ।
ಅತೋ ಭೀಮೇ ಬಲಾಧಿಕ್ಯಂ
ಸುಪ್ರಸಿದ್ಧಮಭೂನ್ಮಹತ್ ॥೨೧.೧೪೬॥
‘ಮಲ್ಲಯುದ್ಧ ಅಥವಾ ಬಿಲ್ಲುಯುದ್ಧ ಯಾವುದಕ್ಕಾದರೂ ನಾನು
ಸಿದ್ಧ’ ಎಂದು ಅರ್ಜುನ ಜರಾಸಂಧನಲ್ಲಿ ಹೇಳಬಹುದಿತ್ತು. ಆದರೆ ಅವನು ಹಾಗೆ ಹೇಳಲಿಲ್ಲ. ಏಕೆಂದರೆ ‘ಎಲ್ಲಿ
ತನಗೆ ಸೋಲಾಗುತ್ತದೋ ಏನೋ’ ಎನ್ನುವ ಅನುಮಾನ ಅವನಲ್ಲಿತ್ತು. ಆ ಕಾರಣದಿಂದ ಭೀಮಸೇನನಲ್ಲಿ
ಬಲಾಧಿಕ್ಯವು ಪ್ರಸಿದ್ಧವಾಯಿತು.
[ಮಹಾಭಾರತದಲ್ಲಿ ದೇವತಾ ತಾರತಮ್ಯವೂ ಸುಪ್ತವಾಗಿ
ಹೇಳಲ್ಪಟ್ಟಿದೆ. ವೇದಗಳಲ್ಲಿ ಏನನ್ನು ಹೇಳಿದ್ದಾರೋ, ಆ ತಾರತಮ್ಯ
ಮಹಾಭಾರತದಲ್ಲೂ ಇದೆ. ಅದನ್ನು ಕಥೆಯಲ್ಲಿ ತೋರಿಸಲೋಸುಗ ಕೃಷ್ಣ ಹೀಗೆ ಮಾಡಿದ. ಅರ್ಜುನನನ್ನು
ಕರೆದುಕೊಂಡು ಹೋಗಿರುವುದರಿಂದ ಅವನಿಗಿಂತ ದುರ್ಬಲರಾದ ಧರ್ಮರಾಜ ಹಾಗೂ ಇತರರ ಪ್ರಶ್ನೆ ಇಲ್ಲಿ ಬರುವುದಿಲ್ಲ.
ಇನ್ನು ಭೀಮಸೇನನನ್ನು ಕರೆದುಕೊಂಡು ಹೋಗಿರುವುದರಿಂದ ತಾರತಮ್ಯದಲ್ಲಿ ಅರ್ಜುನ ಹಾಗೂ ಭೀಮನ ನಡುವೆ
ಬರುವ ಬಲರಾಮನ ಹಾಗೂ ಅಶ್ವತ್ಥಾಮರ ಆಧಿಕ್ಯವೂ
ಸಿದ್ಧವಾಗುವುದಿಲ್ಲ. ಜರಾಸಂಧನನ್ನು ಯುದ್ಧದಲ್ಲಿ ಮಣಿಸಿರುವುದರಿಂದ ಅರ್ಜುನನಿಗಿಂತ ಬಲರಾಮ
ಮಿಗಿಲು ಎನ್ನುವುದು ತಿಳಿಯುತ್ತದೆ. ಅಶ್ವತ್ಥಾಮನ ಮೇಲೆ ಜರಾಸಂಧ ಗೌರವ ಇಟ್ಟುಕೊಂಡಿದ್ದರಿಂದ ಅವನೂ
ಅರ್ಜುನನಿಗಿಂತ ಮಿಗಿಲು ಎನ್ನುವುದು ತಿಳಿಯುತ್ತದೆ. ಹೀಗಾಗಿ ಶ್ರೀಕೃಷ್ಣ ಭೀಮಾರ್ಜುನರನ್ನು
ತನ್ನೊಂದಿಗೆ ಕರೆದುಕೊಂಡು ಹೋಗಿರುವುದರ ಹಿನ್ನೆಲೆಯಲ್ಲಿ ದೇವತಾತಾರತಮ್ಯ ಅಡಗಿದೆ ಎನ್ನುವುದು ನಮಗಿಲ್ಲಿ
ತಿಳಿಯುತ್ತದೆ.]
ಏತದರ್ತ್ಥಂ ಹಿ
ಕೃಷ್ಣೇನ ಸಹಾsನೀತಃ ಸ ಫಲ್ಗುನಃ ।
ಜಾನನ್ ಕೃಷ್ಣೇ ಬಲಂ
ಘೋರಮವಿಷಹ್ಯಂ ಸ ಮಾಗಧಃ ॥೨೧.೧೪೭॥
ಕುತ್ಸಯನ್ ಗೋಪ ಇತಿ ತಂ
ಭಯಾನ್ನೈವಾsಹ್ವಯತ್ ಪ್ರಭುಮ್ ।
ಆಹ್ವಯಾಮಾಸ ಭೀಮಂ ತು
ಸ್ಯಾದ್ ವಾ ಮೇ ಜೀವನಂ ತ್ವಿತಿ ॥೨೧.೧೪೮॥
ಹನಿಷ್ಯತ್ಯೇವ ಮಾಂ
ಕೃಷ್ಣ ಇತ್ಯಾಸೀನ್ನೃಪತೇರ್ಭಯಮ್ ।
ತಸ್ಮಾತ್ ತಂ ನಾsಹ್ವಯಾಮಾಸ ವಾಸುದೇವಂ ಸ ಮಾಗಧಃ ॥೨೧.೧೪೯॥
ಇದಕ್ಕಾಗಿ (ಅರ್ಜುನನ ಮಿತಿಯನ್ನು ಜಗತ್ತಿಗೂ ಮತ್ತು ಸ್ವಯಂ
ಅರ್ಜುನನಿಗೂ ತಿಳಿಸಲೋಸುಗ)ಕೃಷ್ಣನಿಂದ ಅರ್ಜುನನು ಜೊತೆಗೆ ಕರೆದೊಯ್ಯಲ್ಪಟ್ಟನು.
ಜರಾಸಂಧನಾದರೋ. ಕೃಷ್ಣನಲ್ಲಿರುವ ಘೋರವಾದ ಮತ್ತು ತಡೆಯಲು ಅಸಾಧ್ಯವಾದ ಬಲವನ್ನು
ತಿಳಿದವನಾಗಿ, ಹೊರನೋಟಕ್ಕೆ ‘ಇವನು ಗೋವಳ’ ಎಂದು ನಿಂದಿಸಿದರೂ, ವಸ್ತುತಃ ‘ಕೃಷ್ಣನನ್ನು ಯುದ್ಧಕ್ಕೆ ಕರೆದರೆ ಖಂಡಿತವಾಗಿ ನಾನು ಸಾಯುತ್ತೇನೆ,
ಅವನು ನನ್ನನ್ನು ಕೊಂದೇ ಕೊಲ್ಲುತ್ತಾನೆ’ ಎನ್ನುವ ಅಳುಕಿದ್ದುದರಿಂದಲೇ ವಾಸುದೇವನನ್ನು ಯುದ್ಧಕ್ಕೆ
ಕರೆಯಲಿಲ್ಲ.
‘ಭೀಮನೊಂದಿಗೆ ಯುದ್ಧ
ಮಾಡಿದರೆ ನಾನು ಗೆದ್ದರೂ ಗೆಲ್ಲಬಹುದು, ಬದುಕುಳಿಯಬಹುದು’
ಎನ್ನುವ ಆಲೋಚನೆಯಿಂದ ಜರಾಸಂಧ ಭೀಮನನ್ನು ಯುದ್ಧಕ್ಕೆ ಕರೆದ.
[ಹಾಗಿದ್ದರೆ ಜರಾಸಂಧ ಸುಲಭವಾಗಿ ಅರ್ಜುನನನ್ನು ಯುದ್ಧಕ್ಕೆ
ಕರೆದು ಗೆಲ್ಲಬಹುದಿತ್ತಲ್ಲವೇ ಎಂದರೆ : ]
ಅರ್ಜ್ಜುನೇ ತು ಜಿತೇ
ಕೃಷ್ಣಭೀಮೌ ಮಾಂ ನಿಹನಿಷ್ಯತಃ ।
ತ್ರಯಾಣಾಂ
ದುರ್ಬಲಾಹ್ವಾನಾನ್ನಶ್ಯೇತ್ ಕೀರ್ತ್ತಿಶ್ಚ ಮೇ ದ್ಧ್ರುವಾ ॥೨೧.೧೫೦॥
ಇತಿ ಮತ್ವಾsಹ್ವಯಾಮಾಸ ಭೀಮಸೇನಂ ಸ ಮಾಗಧಃ ।
ಕಥಞ್ಚಿಜ್ಜೀವಿತಂ ವಾ
ಸ್ಯಾನ್ನತು ನಶ್ಯತಿ ಮೇ ಯಶಃ ॥೨೧.೧೫೧॥
‘ಅರ್ಜುನ ನನ್ನಿಂದ ಸೋಲಿಸಲ್ಪಟ್ಟರೂ ಕೂಡಾ ಕೃಷ್ಣ ಹಾಗೂ ಭೀಮ
ನನ್ನನ್ನು ಕೊಂದೇ ಕೊಲ್ಲುತ್ತಾರೆ. ಮೂರು ಜನರಲ್ಲಿ ದುರ್ಬಲನನ್ನು ಆಯ್ಕೆ ಮಾಡಿದ ಎನ್ನುವ
ಕಾರಣಕ್ಕೆ ನನ್ನ ಕೀರ್ತಿಯೂ ನಾಶವಾಗುತ್ತದೆ’ ಎಂದು ಯೋಚಿಸಿದ ಜರಾಸಂಧ ಭೀಮಸೇನನನ್ನೇ ಯುದ್ಧಕ್ಕೆ ಕರೆದ.
‘ಭೀಮಸೇನನೊಂದಿಗೆ ಯುದ್ಧಮಾಡಿ ಬದುಕುಳಿದರೂ ಕೀರ್ತಿ ಸಿಗುತ್ತದೆ, ಸೋತರೂ ಕೂಡಾ ನನ್ನ ಕೀರ್ತಿ
ನಾಶವಾಗದು’ ಎಂದವನು ಆಲೋಚಿಸಿದ್ದ.
ಇತಿ ಸ್ಮ ಭೀಮಂ
ಪ್ರತಿಯೋಧನಾಯ ಸಙ್ಗೃಹ್ಯ ರಾಜಾ ಸ ಜರಾಸುತೋ ಬಲೀ ।
ರಾಜ್ಯೇ ನಿಜಂ ಚಾsತ್ಮಜಮಭ್ಯಷಿಞ್ಚತ್ ಪುರಾ ಖ್ಯಾತಂ ಪತ್ರತಾಪಾಖ್ಯರುದ್ರಮ್ ॥೨೧.೧೫೨॥
ಈರೀತಿಯಾಗಿ ಆಲೋಚಿಸಿದ ಬಲಿಷ್ಠನಾದ ಆ ಜರಾಸಂಧ ಭೀಮಸೇನನನ್ನೇ ಯುದ್ಧಕ್ಕೆಂದು ಆರಿಸಿ, ತನ್ನ
ಮಗನಿಗೆ(ಸಹದೇವನಿಗೆ) ರಾಜ್ಯಾಭಿಷೇಕ ಮಾಡಿ, ಯುದ್ಧಕ್ಕೆಂದು ಸಿದ್ಧನಾದ. ಜರಾಸಂಧನ ಮಗ ಏಕಾದಶರುದ್ರರಲ್ಲಿ ಒಬ್ಬನಾದ ಪತ್ರತಾಪನ ಅವತಾರವಾಗಿದ್ದ.
[ಭಾಗವತ(೧೦.೮೦.೩೧-೩೩): ‘ನ ತ್ವಯಾ ಭೀರುಣಾ ಯೋತ್ಸ್ಯೇ
ಯುಧಿ ವಿಕ್ಲಬಚೇತಸಾ । ಮಧುರಾಂ ಸ್ವಾಂ ಪುರೀಂ ತ್ಯಕ್ತ್ವಾ ಸಮುದ್ರೇ ಶರಣಂ ಗತಃ । ಅಯಂ ತು ವಯಸಾsತುಲ್ಯೋ ನಾತಿಸತ್ವೋ ನ ಮೇ ಸಮಃ । ಅರ್ಜುನೋ ನ ಭವೇದ್ ಯೋದ್ಧಾ ಭೀಮಸ್ತುಲ್ಯಬಲೋ ಮತಃ । ಇತ್ಯುಕ್ತ್ವಾ ಭೀಮಸೇನಾಯ
ದತ್ವಾ ಸ ಮಹತೀಂ ಗದಾಮ್ । ದ್ವಿತೀಯಾಂ ಸ್ವಯಮಾದಾಯ ನಿರ್ಜಗಾಮ ಪುರಾದ್ ಬಹಿಃ’ – ‘ಮಧುರಾಪಟ್ಟಣವನ್ನು
ಬಿಟ್ಟು ಸಮುದ್ರದಲ್ಲಿ ಅವಿತುಕೊಂಡಿರುವ ನಿನ್ನೊಡನೆ ಯುದ್ಧ ಮಾಡಲಾರೆ. ನಿನ್ನಷ್ಟೇ ವಯಸ್ಸಿನವನಾದ
ಅರ್ಜುನ ನನಗೆ ಸಮನಾದ ಪ್ರತಿಸ್ಪರ್ಧಿಯಲ್ಲ. ಭೀಮಸೇನ ನನ್ನೊಡನೆ ಹೋರಾಡುವ ಅಂತಸ್ತಿರುವವನು’ ಎಂದು
ಹೇಳಿದ ಜರಾಸಂಧ, ಭೀಮಸೇನನಿಗೆ ಗದೆಯನ್ನು ಕೊಟ್ಟು, ಇನ್ನೊಂದು ಗದೆಯನ್ನು
ತಾನು ತೆಗೆದುಕೊಂಡು, ಯುದ್ಧ ಮಾಡಲೆಂದು ನಗರದ ಹೊರಭಾಗಕ್ಕೆ ನಡೆದನು]
No comments:
Post a Comment