ಇತೀರಿತೋsಸೌ ಮಗಧಾಧಿಪೋ ರುಷಾ ಜಗಾದ ನಾಹಂ ಶಿವಯಾಗಯುಕ್ತಾನ್ ।
ಮೋಕ್ಷ್ಯೇ ಪಶೂನ್ ಯುಗಪದ್ ವಾ ಕ್ರಮೇಣ ಯೋತ್ಸ್ಯೇ ಚ ವೋsಥಾಪಿ ಚಮೂಸಹಾಯಾನ್ ॥೨೧.೧೩೩॥
ಈರೀತಿಯಾಗಿ ಕೃಷ್ಣ ನುಡಿದಾಗ ಜರಾಸಂಧ ಸಿಟ್ಟಿನಿಂದ ಮಾತನಾಡುತ್ತಾನೆ:
‘ನಾನು ಸದಾಶಿವನ ಯಾಗದಲ್ಲಿ ಮೀಸಲಾಗಿಟ್ಟಿರುವ ಪಶುಗಳನ್ನು ಬಿಡುವುದಿಲ್ಲ. ನೀವು ಮೂವರ ವಿರುದ್ಧ
ಏಕಕಾಲದಲ್ಲಿ ಅಥವಾ ಕ್ರಮವಾಗಿ ಒಬ್ಬರಾದ ಮೇಲೆ ಒಬ್ಬರೊಂದಿಗೆ ಅಥವಾ ನೀವು ಸೇನಾ ಸಹಾಯದಿಂದ ಕೂಡಿ
ಬಂದರೂ ಕೂಡಾ ನಾನು ಯುದ್ಧ ಮಾಡುತ್ತೇನೆ.
ನಿರಾಯುಧಃ ಸಾಯುಧೋ ವಾ
ಯುಷ್ಮದಿಷ್ಟಾಯುಧೇನ ವಾ ।
ಏಕೋsಪಿ ಸಕಲೈರ್ಯ್ಯೋತ್ಸ್ಯೇ ಸಸೇನೋ ವಾ ಸಸೈನಿಕಾನ್ ॥೨೧.೧೩೪॥
ನಿರಾಯುಧನಾಗಿ ಆಗಲೀ ಅಥವಾ ಆಯುಧ ಸಹಿತನಾಗಿ ಆಗಲೀ ಅಥವಾ ನಿಮಗೆ ಯಾವ ಆಯುಧ ಇಷ್ಟವೋ ಆ
ಆಯುಧದಿಂದಾಗಲೀ ನಾನು ಯುದ್ಧ ಮಾಡುತ್ತೇನೆ. ನೀವು ಸೈನ್ಯದಿಂದ ಬಂದರೆ ನಾನೊಬ್ಬನೇ ಎಲ್ಲರ ಜೊತೆಗೆ
ಹೋರಾಡುತ್ತೇನೆ ಅಥವಾ ನನ್ನ ಸೈನ್ಯದೊಂದಿಗೆ ಬರಬೇಕೆಂದರೆ ಅದಕ್ಕೂ ನಾನು ಸಿದ್ಧ’.
ಇತ್ಯುಕ್ತವನ್ತಮವದದಜಿತೋರುಬಲೋ
ಹರಿಃ ।
ಏಹ್ಯೇಕಮೇಕೋ ವಾsಸ್ಮಾಸು ಸಸೈನ್ಯೋ ವಾ ರಣೇ ನೃಪ ॥೨೧.೧೩೫॥
ಈ ರೀತಿಯಾಗಿ ಹೇಳುತ್ತಿರುವ ಜರಾಸಂಧನನ್ನು ಕುರಿತು ಯಾರೂ ಸೋಲಿಸಲಾಗದ ಬಲವುಳ್ಳ ಕೃಷ್ಣ ಪರಮಾತ್ಮನು ಹೀಗೆ ಹೇಳಿದ: ‘ಎಲೈ ರಾಜನೇ, ನಮ್ಮಲ್ಲಿ ಒಬ್ಬನನ್ನು ನೀನು ಆರಿಸಿಕೋ. ಸೈನ್ಯದೊಂದಿಗಾಗಲೀ
ಅಥವಾ ನೀನೊಬ್ಬನೇ ಆಗಲೀ.
ಯೇನ ಕಾಮಯಸೇ ಯೋದ್ಧುಂ
ತಂ ನ ಆಸಾದಯ ದ್ರುತಮ್ ।
ನಿರಾಯುಧಃ ಸಾಯುಧೋ ವಾ
ತ್ವದಭೀಷ್ಟಾಯುಧೇನ ವಾ ॥೨೧.೧೩೬॥
ನಮ್ಮ ಮೂವರಲ್ಲಿ ಯಾರೊಂದಿಗೆ ನೀನು ಯುದ್ಧ ಮಾಡಲು ಇಚ್ಛಿಸುವೆಯೋ
ಅವನನ್ನು ನೀನು ಹೊಂದು. ಆಯುಧ ರಹಿತನಾಗಿ ಆಗಲೀ ಆಯುಧದಿಂದ ಕೂಡಿದವನಾಗಿ ಆಗಲೀ ನಿನಗೆ ಇಷ್ಟವಾದ
ಆಯುಧದಿಂದಾಗಲೀ’.
ಇತ್ಯಾsಹ ಭಗವಾಞ್ಛತ್ರುಂ ಯಶೋ ಭೀಮೇ ವಿವರ್ದ್ದಯನ್ ।
ಘಾತಯಿತ್ವಾ ಸ್ವಶತ್ರುಂ
ಚ ಭೀಮೇನಾನುಗ್ರಹಂ ಪರಮ್ ॥೨೧.೧೩೭॥
ಭೀಮಸ್ಯ ಕರ್ತ್ತುಮಿಚ್ಛಂಶ್ಚ
ಭಕ್ತಿಜ್ಞಾನಾದಿವರ್ದ್ಧನಮ್[1] ।
ತೃಣೀಕರ್ತ್ತುಂ ರಿಪುಂ
ಚೈವ ನಿರಾಯುಧತಯಾsಗಮತ್ ॥೨೧.೧೩೮॥
ಈರೀತಿಯಾಗಿ ತನ್ನ ಶತ್ರುವಾದ ಜರಾಸಂಧನನ್ನು ಭೀಮನಿಂದ ಕೊಲ್ಲಿಸುವ ಮುಖೇನ ಭೀಮನ ಕೀರ್ತಿಯನ್ನು ಹೆಚ್ಚಿಸಲು, ಅವನಿಗೆ ಪರಮಾನುಗ್ರಹ ಮಾಡಲು, ಜ್ಞಾನ ಭಕ್ತಿ ಮೊದಲಾದವುಗಳನ್ನು ಭೀಮನಲ್ಲಿ
ಮತ್ತಷ್ಟು ಬೆಳೆಸಲು(/ಅನಾವರಣಗೊಳಿಸಲು) ಮತ್ತು ಶತ್ರುವಾಗಿರುವ ಜರಾಸಂಧನನ್ನು ಕಡೆಗಣಿಸಲು ಶ್ರೀಕೃಷ್ಣ ನಿರಾಯುಧನಾಗಿ
ಜರಾಸಂಧನಲ್ಲಿಗೆ ಬಂದಿದ್ದ.
No comments:
Post a Comment