ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, December 15, 2021

Mahabharata Tatparya Nirnaya Kannada 21: 123-126

 

ಸಮೇತ್ಯ ಮಾಗಧಾಂಸ್ತು ತೇ ಶಿವೋರುಲಿಙ್ಗಮಿತ್ಯಲಮ್ ।

ಸುಮಾಲ್ಯವಸ್ತ್ರಭೂಷಣೈಃ ಸಮರ್ಚ್ಚಿತಂ ಗಿರಿಂ ಯಯುಃ           ೨೧.೧೨೩

 

ಅವರು ಮಗಧದೇಶವನ್ನು ತಲುಪಿ, ಪ್ರತಿದಿನವೂ ಪುಷ್ಪಮಾಲೆ-ವಸ್ತ್ರಾಭರಣಗಳಿಂದ ಚೆನ್ನಾಗಿ ಪೂಜೆಗೊಳ್ಳುತ್ತಿದ್ದ ಉತ್ಕೃಷ್ಟವಾದ ಲಿಂಗದ ಆಕಾರದಲ್ಲಿರುವ ಪರ್ವತವನ್ನು ಹೊಂದಿದರು.  [ಆ ಬೆಟ್ಟಕ್ಕೆ ಜರಾಸಂಧನ ರಾಜ್ಯದಲ್ಲಿ ವಿಶೇಷವಾದ ಗೌರವ ಸಲ್ಲುತ್ತಿತ್ತು. ಅದು ಲಿಂಗದ ಆಕಾರದಲ್ಲಿರುವುದರಿಂದ ಪ್ರತಿದಿನವೂ ಆ ಬೆಟ್ಟವನ್ನು ವಸ್ತ್ರಾಭರಣಗಳನ್ನು ಹಾಕಿ ಆತ ಪೂಜಿಸುತ್ತಿದ್ದ].

[ಮಹಾಭಾರತದಲ್ಲಿ ಈ ಕುರಿತ  ವಿವರ ಕಾಣಸಿಗುತ್ತದೆ:  ದುರ್ವಾಸಾಸ್ತು ಸಹಂಸೇನ ಡಿಭಕೇನ ನಿರಾಕೃತಃ । ಜರಾಸನ್ಧಂ ಸಮಾಗಮ್ಯ ಜಹಿ ತಾವಿತ್ಯುವಾಚ ಹ । ಉಪೇಕ್ಷಿತೇ  ತೇನ ಕಾರ್ಯೇ ಶಿಷ್ಯಾವಿತಿ ತಪೋಧನಃ । ಶಶಾಪ ಮಾಗಧಂ ರೋಷಾತ್ ತ್ಯಕ್ಷ್ಯತೀಶಃ  ಪುರಂ  ತವ । ತ್ವದರ್ಚಿತಂ  ಚ ಲಿಙ್ಗಂ ವೈ  ಪರ್ವತಂ  ವಿಫಲಂ ಭವೇತ್’  ಹಂಸ ಮತ್ತು ಡಿಭಕರು ಶಿವನ ವರಪಡೆದು ಶಿವನ ಅವತಾರವೇ ಆಗಿರುವ ದುರ್ವಾಸರಿಗೆ ಕಾಟ ಕೊಟ್ಟರು. ಆಗ ದುರ್ವಾಸರು ಮೊದಲು ಜರಾಸಂಧನ ಬಳಿಗೆ ಹೋಗಿ ಈ ಕುರಿತು ಹೇಳಿದರು. ಆದರೆ ಜರಾಸಂಧ ತನ್ನ ಶಿಷ್ಯರಾದ ಹಂಸ-ಡಿಭಕರನ್ನು ಕೊಲ್ಲಲಿಲ್ಲ. ಆಗ ದುರ್ವಾಸರು ಅವನಿಗೆ ‘ಇನ್ನು ಮುಂದೆ  ರುದ್ರದೇವರ ಅನುಗ್ರಹ ನಿನ್ನ ಮೇಲಿರುವುದಿಲ್ಲ. ನೀನು ಶಿವಲಿಂಗ ಎಂದು ಪೂಜಿಸುವ ಆ ಪರ್ವತವನ್ನು ಸದ್ಯದಲ್ಲೇ ನಿನ್ನ ಶತ್ರುಗಳು ನಾಶಮಾಡಲಿದ್ದಾರೆ’ ಎಂದು ಶಾಪವಿತ್ತಿದ್ದರು].

 

ಸ್ವಶೀರ್ಷತೋsಪಿ ಚಾsದೃತಂ ಜರಾಸುತೇನ ತೇ ಗಿರಿಮ್ ।

ನ್ಯಪಾತಯನ್ತ ಬಾಹುಭಿಸ್ತಮಸ್ಯ ಚೋತ್ತಮಾಙ್ಗವತ್                  ೨೧.೧೨೪

 

ಜರಾಸಂಧ ತನ್ನ ತಲೆಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ(ದಿನವೂ ತಲೆ ಮಣಿಯುತ್ತಿದ್ದ)  ಆ ಲಿಂಗಾಕಾರದ ಗಿರಿಯನ್ನು  ಅವರು ತಮ್ಮ  ಕೈಗಳಿಂದ, ಅವನ ಶಿರಚ್ಛೇದ ಮಾಡುವಂತೆ ಬೀಳಿಸಿದರು

 

ಅದ್ವಾರತಸ್ತೇ ನಗರಂ ಪ್ರವಿಶ್ಯ ಮಾಷಸ್ಯ ನಾಳೇನ ಕೃತಾಸ್ತ್ರಿಭೇರೀಃ ।

ಪುಷ್ಟಿಪ್ರದಾ ಬಿಭಿದುಸ್ತಸ್ಯ ಕೀರ್ತ್ತಿಶಾಸ್ತ್ರೋಪಮಾ ನ್ಯಕ್ಕೃತಮಾಗಧೇಶಾಃ             ೨೧.೧೨೫

 

ಕೃಷ್ಣ-ಭೀಮಾರ್ಜುನರು  ನಗರದ ಮುಖ್ಯದ್ವಾರದಿಂದ ಪ್ರವೇಶಿಸದೇ, ಹಿಂದಿನ ದ್ವಾರದಿಂದ  ನಗರವನ್ನು ಪ್ರವೇಶಮಾಡಿ, ಮಾಷನೆಂಬ ರಕ್ಕಸನ ಕಂಠನಾಳಗಳಿಂದ ಮಾಡಿದ, ಅದರ ಶಬ್ದವನ್ನು ಕೇಳಿದೊಡನೆ ಶಕ್ತಿಯನ್ನು ಕೊಡುವ(ಜರಾಸಂಧನ ಕೀರ್ತಿಯೋ ಎಂಬಂತಿದ್ದ) ಮೂರು ಭೇರಿಗಳನ್ನು ಜರಾಸಂಧನನ್ನು ತಿರಸ್ಕರಿಸಿ ಅವರು ಒಡೆದು ಹಾಕಿದರು.

[ಮಹಾಭಾರತದಲ್ಲಿ(ಸಭಾಪರ್ವ ೨೧.೨೦) ಹೀಗಿದೆ: ‘ವೃಷಭಾಕಾರಮಸುರಂ ಮಾಷನಾಮಾನಮಾಹನತ್ । ತಂ ಹತ್ವಾ ಮಾಷನಾಳೇಭ್ಯಸ್ತಿಸ್ರೋ ಭೇರಿರಕಾರಯತ್ । ಅನಡುಚ್ಚರ್ಮಣಾ ತೇನ ಸ್ಥಾಪಯಾಮಾಸ ವೈ ಪುರೇ’] ಮಾಷ ಎನ್ನುವ ಒಬ್ಬ ನರಭಕ್ಷಕ ಅಸುರನಿದ್ದ. ಅವನು ಎತ್ತಿನ ವೇಷವನ್ನು ಹಾಕಿಕೊಂಡಿರುತ್ತಿದ್ದ.  ಜರಾಸಂಧ ಆ ಅಸುರನನ್ನು ಕೊಂದು, ಅವನ ಚರ್ಮವನ್ನು ಸುಲಿಸಿ, ಅದರಿಂದ ಮೂರು ಭೇರಿಗಳನ್ನು ಮಾಡಿ ನಗರದಲ್ಲಿಟ್ಟಿದ್ದ. ಆ ಭೇರಿಗಳನ್ನು ಇವರು ಒಡೆದು ಹಾಕಿದರು].

 

ತಥಾsಪಣೇಭ್ಯೋ ಬಹುಮಾಲ್ಯಗನ್ಧಾನ್ ಪ್ರಸ̐ಹ್ಯ ಸಙ್ಗೃಹ್ಯ ಶುಭಾಂಶ್ಚ ದಧ್ರುಃ ।

ಅದ್ವಾರತಸ್ತಸ್ಯ ಗೃಹಂ ಚ ಸಸ್ರುರ್ಭೋಶಬ್ದತಸ್ತಂ  ಚ ನೃಪಂ ಪ್ರಸಸ್ರುಃ  ೨೧.೧೨೬

 

ಹಾಗೆಯೇ, ಅಂಗಡಿಗಳಿಂದ ಹಾರಗಳನ್ನೂ, ಗಂಧಗಳನ್ನೂ ಬಲಾತ್ಕಾರವಾಗಿ ತೆಗೆದುಕೊಂಡ ಅವರು, ಗಂಧವನ್ನು ಪೂಸಿಕೊಂಡು ಹಾರವನ್ನು ಧರಿಸಿದರು. ನಂತರ ಜರಾಸಂಧನ ಮನೆಯನ್ನು ಹಿತ್ತಲ ಬಾಗಿಲಿನಿಂದ ಪ್ರವೇಶ ಮಾಡಿದರು. ‘ಭೋಃ - ಜರಾಸಂಧ’ ಎಂದು ಆ ಜರಾಸಂಧನ ಬಳಿ ಬಂದರು.

[‘ಬಲಾದ್ ಗೃಹೀತ್ವಾ ಮಾಲ್ಯಾನಿ ಮಾಲಾಕಾರಾನ್ಮಹಾಬಲಾಃ’ (ಸಭಾಪರ್ವ ೨೧.೩೦) ‘ಅಧ್ವಾರೇಣ ಪ್ರವಿಷ್ಟಾ ಸ್ಥ ನಿರ್ಭಯಾ ರಾಜಕಿಲ್ಬಿಷಾತ್’ (೫೨). ರಾಜನಿಗೆ ವಿರುದ್ಧವಾದ ತಮ್ಮ ನಡೆಯ ಬಗ್ಗೆ ಭಯಪಡದೇ ಅವರು ಇವೆಲ್ಲವನ್ನೂ ಮಾಡಿದರು. ‘ಭೋಶಬ್ದೇನೈವ ರಾಜಾನಮೂಚುಸ್ತೇ ತು ಮಹಾರಥಾಃ’ (೩೭) ಬ್ರಾಹ್ಮಣರು ‘ಭೋಃ ಎಂದು ಸಂಬೋಧನೆ ಮಾಡಬಹುದೇ ವಿನಃ, ಆ ರೀತಿಯಾಗಿ ರಾಜನನ್ನು ಎಲ್ಲರೂ ಸಂಬೊಧನೆ ಮಾಡುವಂತಿಲ್ಲ. ಆದರೆ ಇಲ್ಲಿ ಕ್ಷತ್ರಿಯರಾದ ಅವರು ಆ ರೀತಿ ಸಂಬೋಧನೆ ಮಾಡಿದರು].

No comments:

Post a Comment