ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 29, 2023

Mahabharata Tatparya Nirnaya Kannada 27-150-159

 

ಉವಾಚ ವಾಚಂ ಪುರುಷಪ್ರವೀರಃ ಸತ್ಯಾಂ ಪ್ರತಿಜ್ಞಾಂ ಲೋಕಮದ್ಧ್ಯೇ ವಿಧಾಯ ।

ಯಾಃ ಸಪತಯಸ್ತಾ ಅಪತಯೋ ಹಿ ಜಾತಾ ಯಾಸಾSಪತಿಃ ಸಾ ಸಪತಿಶ್ಚ ಜಾತಾ ॥೨೭.೧೫೦ ॥

 

ಪುರುಷಶ್ರೇಷ್ಠನಾದ ಭೀಮಸೇನನು ಸಮಸ್ತ ಲೋಕದ ಮುಂದೆ ತಾನು ಹಿಂದೆ ಮಾಡಿದ್ದ ಪ್ರತಿಜ್ಞೆಯನ್ನು ಪೂರೈಸಿ ಹೇಳುತ್ತಾನೆ- ‘ಯಾರು ಪತಿ ಸಹಿತರಾಗಿದ್ದರೋ ಅಂತಹ ಕೌರವರ ಪತ್ನಿಯರು ಇಂದು ಪತಿರಹಿತರಾದರು. ಯಾವ ದ್ರೌಪದಿಯನ್ನು ಹಿಂದೆ ಪತಿರಹಿತಳು ಎಂದು ಕರೆದಿದ್ದರೋ, ಅವಳು ಪತಿ ಸಹಿತಳಾಗಿದ್ದಾಳೆ’.

 

ಪಶ್ಯನ್ತು ಚಿತ್ರಾಂ ಪರಮಸ್ಯ ಶಕ್ತಿಂ ಯೇ ವೈ ತಿಲಾಃ ಷಣ್ಢತಿಲಾ ಬಭೂವುಃ ।

ಏನಂ ಗೃಹೀತಂ ಚ ಮಯಾ ಯದೀಹ ಕಶ್ಚಿತ್ ಪುಮಾನ್ ಮೋಚಯತು ಸ್ವವೀರ್ಯ್ಯಾತ್ ॥೨೭.೧೫೧ ॥

 

ಎಲೋ ವೀರರೇ, ಸರ್ವೋತ್ತಮನಾದ ಶ್ರೀಹರಿಯ ಶಕ್ತಿಯನ್ನು ನೋಡಿರಿ. ಯಾರು ತಮ್ಮನ್ನು ಗಟ್ಟಿಎಳ್ಳು(ವೀರ್ಯವಂತರು) ಎಂದು ತಿಳಿದಿದ್ದರೋ, ಅವರು ಈಗ ನಪುಂಸಕಪ್ರಾಯರೂ, ವೀರ್ಯಹೀನರೂ(ಷಣ್ಢತಿಲಾಃ) ಆದರು. ಇಲ್ಲಿರುವ ವೀರರ ನಡುವೆ ಯಾರಾದರೂ ಪುಂಸ್ತ್ವವುಳ್ಳವನು ಇದ್ದರೆ,  ನನ್ನಿಂದ ಹಿಡಿಯಲ್ಪಟ್ಟ ಇವನನ್ನು ಬಿಡಿಸಲಿ.

 

ಇತಿ ಬ್ರುವಾಣಃ ಪುನರೇವ ರಕ್ತಂ ಪಪೌ ಸುಧಾಂ ದೇವವರೋ ಯಥಾ ದಿವಿ ।

ಪುನಶ್ಚ ಸಪ್ರಾಣಮಮುಂ ವಿಸೃಜ್ಯ ನದನ್ ನನರ್ತ್ತಾರಿಬಲೇ ನಿರಾಯುಧಃ ॥೨೭.೧೫೨ ॥

 

ಈರೀತಿ ಮತ್ತೆ ಮತ್ತೆ ಹೇಳುತ್ತಾ, ಭೀಮಸೇನನು ಹೇಗೆ ದೇವೇಂದ್ರ ಅಮೃತಪಾನ ಮಾಡುತ್ತಾನೋ ಹಾಗೆ ರಕ್ತವನ್ನು ಪಾನಮಾಡುವವನಂತೆ ತೋರಿಸಿಕೊಂಡನು ಮತ್ತು ಇನ್ನೂ ಉಸಿರಾಡುತ್ತಿರುವ ದುಃಶಾಸನನನ್ನು ಬಿಟ್ಟು, ಸಿಂಹನಾದವನ್ನು ಮಾಡುತ್ತಾ, ಆಯುಧರಹಿತನಾಗಿ ಶತ್ರು ಸೈನ್ಯದ ಮಧ್ಯದಲ್ಲಿ ಕುಣಿದಾಡಿದನು.  

 

ಪ್ರತ್ಯನೃತ್ಯನ್ ಪುರಾ ಯೇSಸ್ಮಾನ್ ಪುನರ್ಗೌರಿತಿ ಗೌರಿತಿ ।

ತಾನ್ ವಯಂ ಪ್ರತಿನೃತ್ಯಾಮಃ ಪುನರ್ಗ್ಗೌರಿತಿ ಗೌರಿತಿ ॥೨೭.೧೫೩ ॥

 

ಯಾವ ಕೌರವರು ನಮ್ಮನ್ನು ಕುರಿತು ಗೂಳಿ-ಗೂಳಿ ಎಂದು ಅಣಕಿಸಿ ಕುಣಿದಿದ್ದರೋ,  ಅವರನ್ನು ನಾವಿಂದು ಗೂಳಿ-ಗೂಳಿ ಎಂದು ಅಣಕಿಸಿ ಕುಣಿಯುತ್ತೇವೆ.

 

ಇತಿ ಬ್ರುವನ್ ನೃತ್ಯಮಾನೋSರಿಮದ್ಧ್ಯ ಆಸ್ಫೋಟಯಚ್ಛತ್ರುಗಣಾನಜೋಹವೀತ್ ।

ಶಶಾಖ ಚ ದ್ರಷ್ಟುಮಮುಂ ನ ಕಶ್ಚಿದ್ ವೈಕರ್ತ್ತನದ್ರೌಣಿಸುಯೋಧನಾದಿಷು ॥೨೭.೧೫೪ ॥

 

ಈರೀತಿ ಹೇಳುತ್ತಾ, ಶತ್ರುಗಳ ಮಧ್ಯದಲ್ಲಿ ಕುಣಿಯುವವನಾಗಿ, ಭೀಮಸೇನ ತೊಡೆತಟ್ಟಿ ಶತ್ರುಗಳ ಸಮೂಹವನ್ನು ಯುದ್ಧಕ್ಕಾಗಿ ಕರೆದನು. ಕರ್ಣ, ಅಶ್ವತ್ಥಾಮ, ದುರ್ಯೋಧನ, ಮೊದಲಾದವರಲ್ಲಿ ಯಾರೊಬ್ಬನೂ ಈ ಭೀಮಸೇನನನ್ನು ಕಣ್ಣೆತ್ತಿ ನೋಡಲು ಕೂಡಾ ಸಮರ್ಥರಾಗಲಿಲ್ಲ.

 

ಭಯಾಚ್ಚ ಕರ್ಣ್ಣಸ್ಯ ಪಪಾತ ಕಾರ್ಮ್ಮುಕಂ ನಿಮೀಲಯಾಮಾಸ ತದಾSಕ್ಷಿಣೀ ಚ ।

ಸಮ್ಬೋಧಿತೋ ಮದ್ರರಾಜೇನ ಯುದ್ಧೇ ಸ್ಥಿತಃ ಕಥಞ್ಚಿತ್ ಸ ತು ಪಾರ್ತ್ಥಭಾಗಃ ॥೨೭.೧೫೫ ॥

 

ಇದನ್ನು ನೋಡಿ ಭಯದಿಂದಲೇ ಕರ್ಣನ ಬಿಲ್ಲು ಕೈಜಾರಿ ಬಿದ್ದಿತು. ಆಗ ಅವನು ಕಣ್ಣುಗಳನ್ನು ಮುಚ್ಚಿಕೊಂಡನು. ಶಲ್ಯನಿಂದ ಪದೇ ಪದೇ ಎಚ್ಚರಿಸಲ್ಪಟ್ಟ ಕರ್ಣನು ಪ್ರಾಯಾಸದಿಂದ ಯುದ್ಧದಲ್ಲಿ ಸ್ಥಿರನಾದನು. ಅವನು ಸಂಹಾರದಲ್ಲಿ ಅರ್ಜುನನ ಭಾಗವಾದ್ದರಿಂದ ಹೇಗೋ ಬದುಕುಳಿದನು.

 

ದ್ರೌಣಿರ್ವಿಹಾಯೈನಮಪಾಜಗಾಮ ದೂರಂ ತದಾ ಭೀಮಸೇನೋ ಜಗಾದ ।

ಪೀತಃ ಸೋಮೋ ಯುದ್ಧಯಜ್ಞೇ ಮಯಾSದ್ಯ ವದ್ಧ್ಯಃ ಪಶುರ್ಮ್ಮೇ ಹರಯೇ ಸುಯೋಧನಃ ॥೨೭.೧೫೬ ॥

 

ಅಶ್ವತ್ಥಾಮ ಭೀಮನ ದೃಷ್ಟಿಯಿಂದ ದೂರಕ್ಕೆ ಹೊರಟುಹೋದ. ಆಗ ಭೀಮಸೇನ ಹೇಳುತ್ತಾನೆ- ‘ನನ್ನಿಂದ ಈ ಯುದ್ಧವೆಂಬ ಯಜ್ಞದಲ್ಲಿ ಸೋಮಪಾನ ಮಾಡಲ್ಪಟ್ಟಿತು. ಇನ್ನು ಶ್ರೀಹರಿಯ ಪ್ರೀತಿಗಾಗಿ ದುರ್ಯೋಧನನೆಂಬ ಯಜ್ಞಪಶುವು ನನ್ನಿಂದ ವಧಾರ್ಹವಾಗಿದೆ’.

 

ಇತಿ ಬ್ರುವನ್ ಮೃತಮುತ್ಸೃಜ್ಯ ಶತ್ರುಂ ದುರ್ಯ್ಯೋಧನಂ ಚಾSಶು ರುಷಾSಭಿದುದ್ರುವೇ ।

ಆಯಾನ್ತಮೀಕ್ಷ್ಯೈವ ತಮುಗ್ರಪೌರುಷಂ ದುದ್ರಾವ ಭೀತಃ ಸ ಸುಯೋಧನೋ ಭೃಶಮ್ ॥೨೭.೧೫೭ ॥

 

ಹೀಗೆ ಹೇಳುತ್ತಾ, ಸತ್ತ ದುಃಶಾಸನನ ದೇಹವನ್ನು ದೂರಕ್ಕೆ ಎಸೆದ ಭೀಮಸೇನ ಶೀಘ್ರದಲ್ಲಿ ಸಿಟ್ಟಿನಿಂದ ದುರ್ಯೋಧನನನ್ನು ಕುರಿತು ಧಾವಿಸಿದ.  ತನ್ನೆದುರುಬರುತ್ತಿರುವ ಉಗ್ರಪೌರುಷವುಳ್ಳ ಭೀಮಸೇನನನ್ನು ಕಂಡ ದುರ್ಯೋಧನ ಅತ್ಯಂತ ಭಯಗ್ರಸ್ಥನಾಗಿ ಓಡಿಹೋದ.

 

ಬಲದ್ವಯಂ ಚಾಪಯಯೌ ವಿಹಾಯ ಭಯಾದ್ ಭೀಮಂ ಕೃಷ್ಣಪಾರ್ತ್ಥೌ ವಿನೈವ ।

ಆಯೋಧನಂ ಶೂನ್ಯಮಭೂನ್ಮುಹೂರ್ತ್ತಂ ನನರ್ತ್ತ ಭೀಮೋ ವ್ಯಾಘ್ರಪದೇನ ಹರ್ಷಾತ್ ॥೨೭.೧೫೮ ॥

 

ಆಗ ಕೃಷ್ಣಾರ್ಜುನರನ್ನು ಬಿಟ್ಟು ಇತರ ಸೇನೆ (ಕೌರವ ಹಾಗೂ ಪಾಂಡವ ಸೇನೆ) ಅಲ್ಲಿಂದ ಪಲಾಯನಮಾಡಿತು. ಸುಮಾರು ಒಂದು ಮಹೂರ್ತದ ತನಕ ಆ ಪ್ರದೇಶ (ಆ ಮೂವರನ್ನು ಬಿಟ್ಟು) ಜನರಹಿತವಾಯಿತು. ಆಗ ಭೀಮಸೇನ ಹುಲಿಯಂತೆ ಹೆಜ್ಜೆ ಹಾಕುತ್ತಾ, ಹರ್ಷದಿಂದ ಕುಣಿದಾಡಿದನು.

 

ಸಙ್ಕಲ್ಪ್ಯ ಶತ್ರೂನ್ ಗೋವದೇವಾSಜಿಮದ್ಧ್ಯೇ ಶಾರ್ದ್ದೂಲವತ್ ತಚ್ಚರಿತಂ ನಿಶಾಮ್ಯ ।

ಜಹಾಸ ಕೃಷ್ಣಶ್ಚ ಧನಞ್ಜಯಶ್ಚ ಶಶಂಸತುಶ್ಚೈನಮತಿಪ್ರಹೃಷ್ಟೌ ॥೨೭.೧೫೯ ॥

 

ಆ ಯುದ್ಧಭೂಮಿಯಲ್ಲಿ ತನ್ನ ಶತ್ರುಗಳನ್ನು ಪಶುಗಳಂತೆ ಸಂಕಲ್ಪಿಸಿ, ಹುಲಿಯಂತೆ ಭೀಮ ಮಾಡಿದ ಕರ್ಮವನ್ನು ನೋಡಿ ಕೃಷ್ಣಾರ್ಜುನರು ನಕ್ಕರು. ಅತ್ಯಂತ ಸಂತುಷ್ಟರಾಗಿ ಭೀಮಸೇನನನ್ನು ಹೊಗಳಿದರು ಕೂಡಾ.

Mahabharata Tatparya Nirnaya Kannada 27-143-149

 

ಪುನಶ್ಚ ನಿಘ್ನನ್ತಮರಿಪ್ರವೀರಾನ್  ವಿದ್ರಾವಯನ್ತಂ ಚ ನಿಜಾಂ ವರೂಥಿನೀಮ್ ।

ಸಸಾರ ದುಃಶಾಸನ ಆತ್ತಧನ್ವಾ ಭೀಮೋSಪಿ ತಂ ಸಿಂಹ ಇವಾಭಿಪೇತಿವಾನ್ ॥೨೭.೧೪೩ ॥

 

ಪುನಃ, ಶತ್ರುಸೈನಿಕರನ್ನು ಕೊಲ್ಲುತ್ತಾ, ಸೈನ್ಯವನ್ನು ಓಡಿಸುತ್ತಿರುವ ಭೀಮಸೇನನನ್ನು ದುಃಶಾಸನನು ಇನ್ನೊಂದು ಧನುಸ್ಸನ್ನು ಹಿಡಿದು ಎದುರಿಸಿದನು. ಆಗ ಭೀಮಸೇನ ಸಿಂಹವು ಮೃಗವನ್ನು ಹೊಂದುವಂತೆ ಆ ದುಃಶಾಸನನನ್ನು ಹೊಂದಿದನು.  

 

ತಂ ರೂಕ್ಷವಾಚೋ ಮುಹುರರ್ಪ್ಪ್ಯಯನ್ತಂ ವಿಧಾಯ ಭೀಮೋ ವಿರಥಂ ಕ್ಷಣೇನ ।

ಪ್ರಗೃಹ್ಯ ಭೂಮೌ ವಿನಿಪಾತ್ಯ ವಕ್ಷೋ ವಿದಾರಯಾಮಾಸ ಗದಾಪ್ರಹಾರತಃ ॥೨೭.೧೪೪ ॥

 

ಕೆಟ್ಟ ರೀತಿಯಿಂದ ಕ್ರೂರವಾದ ಮಾತುಗಳನ್ನು ಮತ್ತೆ-ಮತ್ತೆ ನುಡಿಯುತ್ತಿದ್ದ ಆ ದುಃಶಾಸನನನ್ನು ಭೀಮಸೇನ ಕ್ಷಣದಲ್ಲಿ ರಥಹೀನನನ್ನಾಗಿ ಮಾಡಿ,  ಭೂಮಿಯಲ್ಲಿ ಕೆಡವಿ, ಅವನ ವಕ್ಷಃಸ್ಥಳಕ್ಕೆ ಗದಾಪ್ರಹಾರ ಮಾಡಿದನು.

 

ಆಕ್ರಮ್ಯ ಕಣ್ಠಂ ಚ ಪದೋದರೇSಸ್ಯ ನಿವಿಶ್ಯ ಪಶ್ಯನ್ ಮುಖಮಾತ್ತರೋಷಃ ।

ವಿಕೋಶಮಾಕಾಶನಿಭಂ ವಿಧಾಯ ಮಹಾಸಿಮಸ್ಯೋರಸಿ ಸಞ್ಚಖಾನ ॥೨೭.೧೪೫ ॥

 

ಕಾಲಿನಿಂದ ಅವನ ಕುತ್ತಿಗೆಯನ್ನು ಒತ್ತಿ, ಅವನ ಹೊಟ್ಟೆಯಮೇಲೆ ಕುಳಿತು, ಕೋಪದಿಂದ ಅವನ ಮುಖವನ್ನು ನೋಡುತ್ತಾ, ಆಕಾಶಕ್ಕೆ ಸದೃಶವಾದ ನಿರ್ಮಲವಾದ ಮಹಾಖಡ್ಗವನ್ನು ಒರೆಯಿಂದ ತೆಗೆದ ಭೀಮಸೇನನು, ದುಃಶಾಸನನ ವಕ್ಷಃಸ್ಥಳವನ್ನು ಸೀಳಿದನು.

 

ಕೃತ್ವಾSಸ್ಯ ವಕ್ಷಸ್ಯುರುಸತ್ತಟಾಕಂ ಪಪೌ ನಿಕಾಮಂ ತೃಷಿತೋSಮೃತೋಪಮಮ್ ।

ತಚ್ಛೋಣಿತಾಮ್ಭೋ ಭ್ರಮದಕ್ಷಮೇನಂ ಸಂಸ್ಮಾರಯಾಮಾಸ ಪುರಾಕೃತಾನಿ ॥೨೭.೧೪೬ ॥

 

ದುಃಶಾಸನನ ವಕ್ಷಃಸ್ಥಳದಲ್ಲಿ ಅಗಲವಾದ ರಕ್ತದ ಮಡುವನ್ನು ಮಾಡಿದ ಭೀಮಸೇನ, ಬಾಯಾರಿದವನು ಅಮೃತ ಕುಡಿಯುವಂತೆ ದುಃಶಾಸನನ ರಕ್ತವನ್ನು ತಾನು ಯಥೇಷ್ಟ ಪಾನ ಮಾಡಿದಂತೆ ಮಾಡಿದನು. ಕಣ್ಣನ್ನು ಹೊರಳಿಸುತ್ತಿರುವ ದುಃಶಾಸನನಿಗೆ ಭೀಮಸೇನ ಹಿಂದೆ ಅವನು ಮಾಡಿದ ಕೆಟ್ಟ ಕರ್ಮಗಳನ್ನು ನೆನಪಿಸಿದನು.

 

ವಾಕ್ಸಾಯಕಾಂಶ್ಚಾಸ್ಯ ಪುರಾ ಸಮರ್ಪ್ಪಿತಾನ್ ಸಂಸ್ಮಾರಯಾಮಾಸ ಪುನಃಪುನರ್ಭೃಶಮ್ । 

ದನ್ತಾನ್ತರಂ ನ ಪ್ರವಿವೇಶ ತಸ್ಯ ರಕ್ತಂ ಹ್ಯಪೇಯಂ ಪುರುಷಸ್ಯ ಜಾನತಃ ॥೨೭.೧೪೭ ॥

 

ಭೀಮಸೇನ ದುಃಶಾಸನನಿಗೆ, ಅವನು ಮೊದಲು ಆಡಿದ ಚುಚ್ಚು ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿದನು. ಮಾನವರಕ್ತ ಪಾನಮಾಡಲು ಯೋಗ್ಯವಲ್ಲ ಎಂದು ತಿಳಿದಿರುವ ಭೀಮಸೇನ, ರಕ್ತ ತನ್ನ ಹಲ್ಲುಗಳಿಗಿಂತ ಮುಂದೆ (ಒಳಗೆ) ಪ್ರವೇಶ ಮಾಡದಂತೆ ನೋಡಿಕೊಂಡ. (ಭೀಕರವಾಗಿ ರಕ್ತಪಾನ ಮಾಡಿದಂತೆ ತೋರಿದನೇ ಹೊರತು ನಿಜವಾಗಿ ಭೀಮ ರಕ್ತವನ್ನು ಕುಡಿಯಲಿಲ್ಲ)   

 

 

ತಥಾSಪಿ  ಶತ್ರುಪ್ರತಿಭೀಷಣಾಯ ಪಪಾವಿವಾSಸ್ವಾದ್ಯ ಪುನಃಪನರ್ಭೃಶಮ್ ।

ಸ್ಮರನ್ ನೃಹಿಂಹಂ ಭಗವನ್ತಮೀಶ್ವರಂ ಸ ಮನ್ಯುಸೂಕ್ತಂ ಚ ದದರ್ಶ ಭಕ್ತ್ಯಾ ॥೨೭.೧೪೮ ॥

 

‘ಯಸ್ತೇ ಮನ್ಯೋ’ ಇತ್ಯತೋ ನಾರಸಿಂಹಂ ಸೋಮಂ ತಸ್ಮೈ ಚಾರ್ಪ್ಪಯಚ್ಛೋಣಿತಾಖ್ಯಮ್ ।

ಯುದ್ಧಾಖ್ಯಯಜ್ಞೇ ಸೋಮಬುದ್ಧ್ಯಾsರಿವಕ್ಷ ಇಹೇತಿ ಸಾಮ್ನಾ ಗದಯಾ ವಿಭಿನ್ದನ್ ॥೨೭.೧೪೯ ॥

 

ಆದರೂ ಕೂಡಾ, ಶತ್ರುಗಳನ್ನು ಭಯಗೊಳಿಸಲು ಭೀಮಸೇನ ಮತ್ತೆ ಮತ್ತೆ ರಕ್ತಪಾನ ಮಾಡುವವನಂತೆ ಅಭಿನಯಿಸಿದನು. ಆ ಭೀಮಸೇನನು ಸರ್ವೇಶ್ವರನಾದ, ಪೂಜ್ಯನಾದ, ಮನ್ಯುಸೂಕ್ತ ಪ್ರತಿಪಾದ್ಯ ನರಸಿಂಹರೂಪಿ ಶ್ರೀಹರಿಯನ್ನು ಭಕ್ತಿಯಿಂದ ಸ್ಮರಿಸುತ್ತಾ,ಯಸ್ತೇ ಮನ್ಯೋ’ ಇದೇ ಮೊದಲಾದ ಸೂಕ್ತದಿಂದ ನರಸಿಂಹನನ್ನು  ಕಂಡು, ಯುದ್ಧವೆನ್ನುವ ಯಜ್ಞದಲ್ಲಿ ಶತ್ರುವಿನ ಎದೆಯನ್ನು ಸೋಮಲತೆ ಎಂಬ ಬುದ್ಧಿಯಿಂದ ‘ಇಹ ಎನ್ನುವ ಪದದಿಂದ ಪ್ರಾರಂಭವಾಗುವ ಸಾಮಮಂತ್ರದೊಂದಿಗೆ, ಶತ್ರುವಾದ ದುಃಶಾಸನನ ಎದೆಯನ್ನು ಸೋಮಲತೆಯಂತೆ ಜಜ್ಜಿದನು.

Sunday, May 28, 2023

Mahabharata Tatparya Nirnaya Kannada 27-138-142

 

ತಂ ಶಙ್ಕಿತಂ ಕರ್ಣ್ಣಜಯೇ ಸ್ವಿನ್ನಗಾತ್ರಂ ಹರಿಸ್ತದಾ ।

ಸಙ್ಕೀರ್ತ್ತ್ಯ ಪೂರ್ವಕರ್ಮ್ಮಾಣಿ ನರಾವೇಶಂ ವಿಶೇಷತಃ ।

ವ್ಯಞ್ಜಯಾಮಾಸ ಧೈರ್ಯ್ಯಂ ಚ ತಸ್ಯಾSಸೀತ್ ತೇನ ಸುಸ್ಥಿರಮ್ ॥೨೭.೧೩೮ ॥

 

ಕರ್ಣನನ್ನು ಗೆಲ್ಲುತ್ತೇನೋ ಇಲ್ಲವೋ ಎಂದು ಭಯಗೊಂಡು, ಬೆವರಿಳಿದ ಮೈಯ್ಯವನಾದ ಅರ್ಜುನನನ್ನು ಪರಮಾತ್ಮನು ಅವನು ಮಾಡಿದ ಹಿಂದಿನ ಕೆಲಸಗಳನ್ನು ನೆನಪಿಸಿ, ಅವನಲ್ಲಿ ನರನ ಆವೇಶ ಇದೇ ಎನ್ನುವುದನ್ನೂ ಹೇಳಿ, ಅವನಲ್ಲಿದ್ದ ನರಾವೇಶವನ್ನು ಉಕ್ಕುವಂತೆ ಮಾಡಿದ.  ಆಗ ಅರ್ಜುನನಿಗೆ ಸ್ಥಿರವಾದ ಧೈರ್ಯ ಬಂದಿತು.

 

ಭೀಮಸ್ತದಾ ಶತ್ರುಬಲಂ ಸಮಸ್ತಂ ವಿದ್ರಾವಯಾಮಾಸ ಜಘಾನ ಚಾSಜೌ ।

ವೀರಾನ್ ರಣಾಯಾಭಿಮುಖಾನ್ ಸ್ವಯನ್ತ್ರಾ ಕುರ್ವಂಶ್ಚ ವಾರ್ತ್ತಾ ರಮಮಾಣ ಏವ ॥೨೭.೧೩೯ ॥

 

ಅಷ್ಟು ಹೊತ್ತಿಗೆ ಇಲ್ಲಿ ಭೀಮಸೇನನು ಯುದ್ಧದಲ್ಲಿ ಎಲ್ಲಾ ಶತ್ರುಗಳ ಪಡೆಯನ್ನು ಓಡಿಸಿ, ಉಳಿದವರನ್ನು ಕೊಂದ ಕೂಡಾ. ಭೀಮಸೇನನು ಅಭಿಮುಖವೀರರೊಂದಿಗೆ ಕಾದುತ್ತಾ,  ವಿಶೋಕನೊಂದಿಗೆ ಹರಟೆ ಹೊಡೆಯುತ್ತಾ, ಆನಂದದಿಂದ ಶತ್ರುಗಳನ್ನು ಕೊಲ್ಲುತ್ತಿದ್ದ.

[ಮಹಾಭಾರತದಲ್ಲಿ (೮೦.೧೫) ಈ ಪ್ರಸಂಗವನ್ನು ವರ್ಣಿಸಿದ್ದಾರೆ- ಸರ್ವಾಂಸ್ತೂಣಾನ್ ಸಾಯಕಾನಾಮವೇಕ್ಷ್ಯ ಕಿಂ ಶಿಷ್ಟಂ ಸ್ಯಾತ್ ಸಾಯಕಾನಾಂ ರಥೇ ಮೇ। ಕಾ ವಾ ಜಾತಿಃ ಕಿಂ ಪ್ರಮಾಣಂ ಚ ತೇಷಾಂ ಜ್ಞಾತ್ವಾ ವ್ಯಕ್ತಂ ತನ್ಮಮಾSಚಕ್ಷ್ವ ಸೂತ। ಕತಿ ವಾ ಸಹಸ್ರಾಣಿ ಕತಿ ವಾ ಶತಾನಿ ಹ್ಯಾಚಕ್ಷ್ವ ಮೇ ಸಾರಥೇ ಕ್ಷಿಪ್ರಮೇವ]

 

ತದಾSSಸದತ್ ತಂ ಶಕುನಿಃ ಸಸೈನ್ಯೋ ದುರ್ಯ್ಯೋಧನಸ್ಯಾವರಜೈರುಪೇತಃ ।

ತಂ ಭೀಮಸೇನೋ ವಿರಥಂ ನಿರಾಯುಧಂ ವಿಧಾಯ ಬಾಣೈರ್ಭುವಿ ಚ ನ್ಯಪಾತಯತ್ ॥೨೭.೧೪೦ ॥

 

ಆಗ ದುರ್ಯೋಧನನ ತಮ್ಮನ್ದಿರೊಂದಿಗೆ ಮತ್ತು ಸೈನ್ಯದಿಂದ ಕೂಡಿದ ಶಕುನಿಯು ಭೀಮಸೇನನನ್ನು ಎದುರುಗೊಂಡ. ಭೀಮಸೇನನು ತನ್ನ ಬಾಣಗಳಿಂದ ಅವನನ್ನು ಆಯುಧಹೀನನನ್ನಾಗಿಯೂ, ರಥಹೀನನನ್ನಾಗಿಯೂ ಮಾಡಿ ಭೂಮಿಯಲ್ಲಿ ಕೆಡವಿದನು.

 

ನ ಜಘ್ನಿವಾಂಸ್ತಂ ಸಹದೇವಭಾಗಂ ಪ್ರಕಲ್ಪಿತಂ ಸ್ವೇನ ತದಾSಕ್ಷಗೋಷ್ಠ್ಯಾಮ್ ।

ತಂ ಮೂರ್ಚ್ಛಿತಂ ಶ್ವಾಸಮಾತ್ರಾವಶೇಷಂ ದುರ್ಯ್ಯೋಧನಃ ಸ್ವರಥೇನಾಪನಿನ್ಯೇ ॥೨೭.೧೪೧ ॥

 

ಸಹದೇವನು ಶಕುನಿಯನ್ನು ತಾನು ಕೊಲ್ಲುತ್ತೇನೆ ಎಂದು ಹಿಂದೆ ಪ್ರತಿಜ್ಞೆ ಮಾಡಿದ್ದರಿಂದ ಭೀಮಸೇನ ಅವನನ್ನು ಕೊಲ್ಲಲಿಲ್ಲ. ಮೂರ್ಛೆ ಹೊಂದಿರುವ ಕೇವಲ ಶ್ವಾಸಮಾತ್ರ ಉಳಿದಿರತಕ್ಕ ಶಕುನಿಯನ್ನು ದುರ್ಯೋಧನ ತನ್ನ ರಥದಲ್ಲಿರಿಸಿಕೊಂಡು ಆಚೆ ಕೊಂಡೊಯ್ದ.

 

ದುರ್ಯ್ಯೋಧನಸ್ಯಾವರಜಾ ದಶಾತ್ರ ಪ್ರದುದ್ರುವುರ್ಭೀಮಸೇನಂ ವಿಹಾಯ ।

ತದಾSರ್ಜ್ಜುನಂ ವಾಸುದೇವಂ ಚ ದೃಷ್ಟ್ವಾ ಪ್ರೀತಃ ಶ್ರುತ್ವಾ  ಧರ್ಮ್ಮರಾಜಪ್ರವೃತ್ತಿಮ್ ॥೨೭.೧೪೨ ॥

 

ದುರ್ಯೋಧನನ ಹತ್ತು ಮಂದಿ ತಮ್ಮಂದಿರು ಭೀಮಸೇನನನ್ನು ಬಿಟ್ಟು ಓಡಿಹೋದರು.  ಆಗ ಭೀಮಸೇನ, ಬರುತ್ತಿರುವ ಅರ್ಜುನ ಹಾಗೂ ಶ್ರೀಕೃಷ್ಣನನ್ನು ನೋಡಿ, ಧರ್ಮರಾಜನ ಕ್ಷೇಮಸಮಾಚಾರವನ್ನು ಅವರಿಂದ ತಿಳಿದು ಸಂತುಷ್ಟನಾದನು.

Thursday, May 25, 2023

Mahabharata Tatparya Nirnaya Kannada 27-128-137

 

ತಚ್ಛ್ರುತ್ವಾ ಗರ್ಹಯಿತ್ವೈನಂ ಪುನರಾಹ ಜನಾರ್ದ್ದನಃ ।

ಮತಿಪೂರ್ವಂ ದೇಹಹಾನಾತ್ ಪಾಪಂ ಮಹದವಾಪ್ಯತೇ  ॥೨೭.೧೨೮ ॥

 

ಧರ್ಮಾರ್ತ್ಥಕಾಮಮೋಕ್ಷಾಣಾಂ ಸಾಧನಂ ದೇಹತೋSಸ್ತಿ ಯತ್ ।

ಅತೋ ಮಾ ತ್ಯಜ ದೇಹಂ ತು ಕುರು ಚಾSತ್ಮಪ್ರಶಂಸನಮ್ ॥೨೭.೧೨೯ ॥

 

(ದೊಡ್ಡವರನ್ನು ಬೈದಿದ್ದೇನೆ ಎಂದರೆ ಅವರನ್ನು ನಾನು ಕೊಂದಿದ್ದೇನೆ ಎಂದರ್ಥ. ಇಂತಹ ಬಾಳು ನನಗೇಕೆ  ಬೇಕು? ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಅಭಿಪ್ರಾಯದಲ್ಲಿ ಅರ್ಜುನ ಖಡ್ಗ ತೆಗೆದಿದ್ದ). ಅದನ್ನು ಕೇಳಿದ ಕೃಷ್ಣ ಅವನನ್ನು ಚೆನ್ನಾಗಿ ಬೈದು ಹೇಳುತ್ತಾನೆ- ‘ಬುದ್ಧಿಪೂರ್ವಕವಾಗಿ ದೇಹವನ್ನು ನಾಶ ಮಾಡಿಕೊಂಡರೆ ಮಹತ್ತಾದ ಪಾಪವು ಹೊಂದಲ್ಪಡುತ್ತದೆ. ಯಾವ ಕಾರಣದಿಂದ ಭಗವಂತ ಕೊಟ್ಟ ಈ ದೇಹ ಧರ್ಮ, ಅರ್ಥ, ಕಾಮ, ಮೋಕ್ಷಕ್ಕೆ ಸಾಧನವಾಗಿದೆಯೋ, ಆ ಕಾರಣದಿಂದ ದೇಹವನ್ನು ಬಿಡಬೇಡ. ನೀನು ಆತ್ಮಪ್ರಶಂಸೆ ಮಾಡಿಕೋ. ಆಗ ಅದು ನಿನ್ನನ್ನು ನೀನೇ ಕೊಂದುಕೊಂಡ ಹಾಗಾಗುತ್ತದೆ’ ಎಂದು.

 

ವಧೋ ಗುರೂಣಾಂ ತ್ವಙ್ಕಾರಃ ಸ್ವಪ್ರಶಂಸೈವ ಚಾSತ್ಮನಃ ।

ಇತ್ಯುಕ್ತಃ ಸ ತ್ವಹಙ್ಕಾರಾಚ್ಛಶಂಸ ಸ್ವಗುಣಾನಲಮ್ ॥೨೭.೧೩೦ ॥

 

‘ಕೀಳುಮಟ್ಟದ ಭಾಷೆಯಲ್ಲಿ ಗುರುಗಳನ್ನು ನಿಂದಿಸುವುದು ಅವರ ವಧೆ ಎನಿಸುತ್ತದೆ. ಹಾಗೆಯೇ. ತನ್ನನ್ನು ತಾನು ವಿಪರೀತ ಹೊಗಳಿಕೊಂಡರೆ ಅದು ಆತ್ಮಹತ್ಯೆ ಎನಿಸುತ್ತದೆ’. ಈರೀತಿಯಾಗಿ ಕೃಷ್ಣನಿಂದ ಹೇಳಲ್ಪಟ್ಟ ಅರ್ಜುನ ಅಹಂಕಾರದಿಂದ ತನ್ನ ಗುಣಗಳನ್ನೇ ತಾನು ಚೆನ್ನಾಗಿ ಹೊಗಳಿಕೊಂಡ.

 

ಗುರುನಿನ್ದಾSSತ್ಮಪೂಜಾ ಚ  ನ ಧರ್ಮ್ಮಾಯ ಭವೇತ್ ಕ್ವಚಿತ್ ।

ತಥಾSಪ್ಯರ್ಜ್ಜುನಹಾರ್ದ್ದಂ ತತ್ ಸಮ್ಪ್ರಕಾಶ್ಯ ಜನಾರ್ದ್ದನಃ ॥೨೭.೧೩೧ ॥

 

ತಸ್ಯ ಲಜ್ಜಾಂ ಸಮುತ್ಪಾದ್ಯ ನಾಶಯಿತ್ವಾ ಚ ತಂ ಮದಮ್ ।

ನಾಹಂ ವೇದ ಪರಂ ಧರ್ಮ್ಮಂ ಕೃಷ್ಣ ಏವ ಗತಿರ್ಮ್ಮಮ ॥೨೭.೧೩೨ ॥

 

ಇತಿ ಭಾವಂ ಸಮುತ್ಪಾದ್ಯ ದೋಷಾನ್ ನಾಶಯಿತುಂ ಹರಿಃ ।

ಕಾರಯಾಮಾಸ ತತ್ ಸರ್ವಮರ್ಜ್ಜುನೇನ ಜಗತ್ಪತಿಃ ॥೨೭.೧೩೩ ॥

 

ಗುರುನಿಂದನೆ, ಸ್ವಪ್ರಶಂಸೆ ಇತ್ಯಾದಿ ಕೂಡಾ ಧರ್ಮವಲ್ಲ. ಆದರೂ ಕೃಷ್ಣ ಇದನ್ನು ಅರ್ಜುನನನಿಂದ ಏಕೆ ಮಾಡಿಸಿದ ಎಂದರೆ- ಅರ್ಜುನನ ಅಭಿಪ್ರಾಯವನ್ನು ಲೋಕಕ್ಕೆ ತೋರಿಸಿ, ಅವನಿಗೆ ನಾಚಿಕೆಯನ್ನು ಹುಟ್ಟಿಸಿ, ಅವನಲ್ಲಿ ಹುಟ್ಟಿಕೊಂಡ ಅಹಂಕಾರವನ್ನು ನಾಶಮಾಡಿ,  ‘ನನಗೆ ಧರ್ಮ ಗೊತ್ತಿಲ್ಲ, ಕೃಷ್ಣನೇ ನನಗೆ ಗತಿ’ ಎನ್ನುವ ಭಾವವನ್ನು ಅವನಲ್ಲಿ ಹುಟ್ಟಿಸಿ, ಅವನ ದೋಷಗಳನ್ನು ನಾಶಮಾಡಲೆಂದೇ ಜಗತ್ಪತಿಯಾದ ಕೃಷ್ಣನು ಅರ್ಜುನನಿಂದ ಇದೆಲ್ಲವನ್ನೂ ಮಾಡಿಸಿದ.

 

ತತ ಏತದವಿಜ್ಞಾನಾತ್ ಕುಪಿತೋ ನೃಪತಿರ್ಭೃಶಮ್ ।

ಆಹಾಸ್ತು ರಾಜಾ ಭೀಮಸ್ತ್ವಂ ಯುವಾ ಮಾಂ ಜಹಿ ಚ ಸ್ವಯಮ್ ।

ವನಂ ವಾ ವಿಫಲೋ ಯಾಮೀತ್ಯುಕ್ತ್ವೋತ್ತಸ್ಥೌ ಸ್ವತಲ್ಪತಃ ॥೨೭.೧೩೪ ॥

 

ತದನಂತರ, ಈ ಎಲ್ಲಾ ಹಿನ್ನೆಲೆಯನ್ನು ತಿಳಿಯದೇ ಕೋಪಗೊಂಡ ಧರ್ಮರಾಜ- ‘ಭೀಮಸೇನ ರಾಜನಾಗಲಿ, ನೀನು ಯುವರಾಜನಾಗು, ನನ್ನನ್ನು ನೀನೇ ಕೊಂದುಬಿಡು, ಇಲ್ಲಾ ನಾನು ಕಾಡಿಗೆ ಹೋಗಿಬಿಡುತ್ತೇನೆ’ ಎಂದು ಹೇಳಿ,  ತಾನು ಮಲಗಿದ್ದ ಹಾಸಿಗೆಯಿಂದ ಮೇಲೆದ್ದ.

 

ತಂ ವಾಸುದೇವಃ ಪ್ರತಿಗೃಹ್ಯ ಹೇತುಮುಕ್ತ್ವಾ ಸರ್ವಂ ಶಮಯಾಮಾಸ ನೇತಾ ।

ಪಾರ್ತ್ಥಶ್ಚ ಭೂಪಸ್ಯ ಪಪಾತ ಪಾದಯೋಃ  ಕ್ಷಮಾಪಯನ್ ಸೋSಪಿ ಸುಪ್ರೀತಿಮಾಪ ॥೨೭.೧೩೫ ॥

 

ಅವನನ್ನು ವಾಸುದೇವ ಕೃಷ್ಣನು ತಡೆದು, ಘಟನೆಯ ಹಿಂದಿನ ಎಲ್ಲಾ ಕಾರಣಗಳನ್ನು ಅವನಿಗೆ ಹೇಳಿ ಸಮಾಧಾನಗೊಳಿಸಿದ. ಅರ್ಜುನನಾದರೋ, ಕ್ಷಮೆಯನ್ನು ಬೇಡುತ್ತಾ, ಯುಧಿಷ್ಠಿರನ ಪಾದಕ್ಕೆ ಬಿದ್ದ. ಧರ್ಮರಾಜನೂ ಕೂಡಾ ಅವನ ಬಗೆಗೆ ಪ್ರೀತಿಯನ್ನು ಹೊಂದಿದ.

 

ತೌ ಭ್ರಾತರೌ ವಾಸುದೇವಪ್ರಸಾದಾನ್ಮಹಾಪದೋ ಮುಕ್ತಿಮಾಪ್ಯಾತಿಹೃಷ್ಟೌ ।

ಭಕ್ತ್ಯಾ ಸಮಸ್ತಾಧಿಪತಿಂ ಶಶಂಸತುಸ್ತ್ವಯಾ ಸಮಃ ಕೋ ನು ಹರೇ ಹಿತೋ  ನಃ ॥೨೭.೧೩೬ ॥

 

ಹೀಗೆ ಆ ಇಬ್ಬರು ಅಣ್ಣತಮ್ಮಂದಿರು ಪರಮಾತ್ಮನ ಅನುಗ್ರಹದಿಂದ ದೊಡ್ಡ ಆಪತ್ತಿನಿಂದ ಬಿಡುಗಡೆಯನ್ನು ಹೊಂದಿ, ಅತ್ಯಂತ ಸಂತುಷ್ಟರಾಗಿ, ಭಕ್ತಿಯಿಂದ ಎಲ್ಲಕ್ಕೂ ಒಡೆಯನಾಗಿರುವ ಶ್ರೀಕೃಷ್ಣನನ್ನು ಹೊಗಳಿದರು. ಪರಮಾತ್ಮನೇ, ನಿನಗಿಂತ ಹೊರತಾದ, ಹಿತವಾದವರು ನಮಗೆ ಯಾರಿದ್ದಾರೆ? (ಯಾರೊಬ್ಬನೂ ಇಲ್ಲ).

 

ತತಃ ಪ್ರಣಮ್ಯ ಬೀಭತ್ಸುರಗ್ರಜಂ ಪರಿರಮ್ಭಿತಃ ।

ತೇನಾಭಿನನ್ದಿತಃ ಪ್ರೀತ್ಯಾ ಚಾSಶೀರ್ಭಿಃ ಪ್ರಯಯೌ ಯುಧೇ ॥೨೭.೧೩೭ ॥

 

ತದನಂತರ ಅರ್ಜುನನು ಅಣ್ಣನಿಗೆ ನಮಸ್ಕರಿಸಿ, ಆಲಂಗಿತನಾಗಿ, ಅವನಿಂದ ಆಶೀರ್ವಾದದೊಂದಿಗೆ ಅಭಿನಂದನೆಗೊಳಗಾಗಿ, ಯುದ್ಧಕ್ಕೆಂದು ತೆರಳಿದನು.