ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, May 14, 2023

Mahabharata Tatparya Nirnaya Kannada 27-77-85

 

ಅಥ ದುರ್ಯ್ಯೋಧನೋ ರಾಜಾ ಮಾದ್ರೇಯಾವಭ್ಯಯಾದ್ ರಥೀ ।

ತಾಭ್ಯಾಂ ತಸ್ಯಾಭವದ್ ಘೋರಂ ಯುದ್ಧಮದ್ಭುತದರ್ಶನಮ್ ॥೨೭.೭೭ ॥

 

ಇನ್ನೊಂದೆಡೆ ದುರ್ಯೋಧನನು ರಥವನ್ನೇರಿ ನಕುಲ-ಸಹದೇವರನ್ನು ಕುರಿತು ಯುದ್ಧಕ್ಕೆಂದು ತೆರಳಿದನು. ಅಲ್ಲಿ ಅವರಿಬ್ಬರೊಂದಿಗೆ ಅವನಿಗೆ ಅತ್ಯಂತ ವಿಚಿತ್ರವಾದ, ಘೋರ ಯುದ್ಧವಾಯಿತು.

 

ತತ್ರ ನಾತಿಪ್ರಯತ್ನೇನ ತೇನ ತೌ ವಿರಥೀಕೃತೌ ।

ಸ್ವಯಂ ಯುಧಿಷ್ಠಿರೋ ರಾಜಾ ತದಾ ತಂ ಸಮವಾರಯತ್ ।

ವ್ಯಶ್ವಸೂತಧ್ವಜಂ ಚಕ್ರೇ ತಂ ಚ ದುರ್ಯ್ಯೋಧನೋ ರಣೇ ॥೨೭.೭೮ ॥

 

ಆ ಯುದ್ಧದಲ್ಲಿ ಯಾವುದೇ ಪ್ರಯಾಸವಿಲ್ಲದೇ, ದುರ್ಯೋಧನನು ನಕುಲ ಸಹದೇವರನ್ನು ರಥಹೀನರನ್ನಾಗಿ ಮಾಡಿದನು. ಇದನ್ನು ನೋಡಿದ ಯುಧಿಷ್ಠಿರನು ತಾನೇ ದುರ್ಯೋಧನನನ್ನು ತಡೆದ. ಆಗ ದುರ್ಯೋಧನ ಅವನನ್ನೂ ರಥಹೀನನನ್ನಾಗಿಯೂ, ಆಯುಧಹೀನನನ್ನಾಗಿಯೂ, ಕುದುರೆಗಳಿಂದ ಹೀನನನ್ನಾಗಿಯೂ ಮಾಡಿದನು.

 

ಅಥಾSಗತಂ ಸೂರ್ಯ್ಯಸುತಂ ಪುನಶ್ಚ ಜಗಾಮ ಭೀಮೋ ರಭಸೋ ರಥೇನ

ದುರ್ಯ್ಯೋಧನಂ ಚಾಸ್ಯ ಸಮಕ್ಷಮೇವ ಚಕಾರ ವೀರೋ ವಿರಥಂ ಕ್ಷಣೇನ ॥೨೭.೭೯ ॥

 

ಇದೇ ಸಮಯದಲ್ಲಿ ಮತ್ತೆ ಕಾದಲೆಂದು ಬಂದ ಕರ್ಣನನ್ನು ಕಂಡ ಭೀಮಸೇನನು, ರಭಸವಾಗಿ ರಥದಿಂದ ಅವನನ್ನು ಹೊಂದಿದನು. ಕರ್ಣ ನೋಡುತ್ತಿರುವಂತೆಯೇ ಕ್ಷಣದಲ್ಲಿಯೇ ಭೀಮಸೇನನು ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿದನು. 

 

ನಿವಾರ್ಯ್ಯ ಕರ್ಣ್ಣಂ ಚ ಶರೈರಮುಷ್ಯ ಸೂನೋಃ ಸುಷೇಣಸ್ಯ ಶಿರಶ್ಚಕರ್ತ್ತ ।

ಪಪಾತ ಭೂಮೌ ಸ ಪಿತುಃ ಸಮೀಪೇ  ಯಥಾ ಹತಃ ಸತ್ಯಸೇನೋSಮುನೈವ ।

ಯಥೈವ ಕರ್ಣ್ಣಾವರಜೌ ಪುರೈವ ನಿಶಾಯುದ್ಧೇ ಕರ್ಣ್ಣಪುರಃ ಪ್ರಪಾತಿತೌ ॥೨೭.೮೦ ॥

 

ಬಾಣಗಳಿಂದ ಕರ್ಣನನ್ನೂ ತಡೆದು, ಕರ್ಣನ ಮಗನಾಗಿರುವ ಸುಷೇಣ ಎನ್ನುವವನ ತಲೆಯನ್ನು ಭೀಮ ಕತ್ತರಿಸಿದನು. ಸುಷೇಣ ತನ್ನ ತಂದೆಯ ಎದುರೇ ಭೂಮಿಯಲ್ಲಿ ಕುಸಿದುಬಿದ್ದ. ಯಾವ ರೀತಿ, ಇದೇ ಭೀಮಸೇನನಿಂದ ಸತ್ಯಸೇನ ಎನ್ನುವ ಕರ್ಣನ ಮಗನು ಹಿಂದೆ ಸತ್ತಿದ್ದನೋ ಹಾಗೆಯೇ. ಹೇಗೆ ಹಿಂದೆ  ರಾತ್ರಿ ಯುದ್ಧದಲ್ಲಿ ಕರ್ಣನ ಎದುರೇ ಕರ್ಣನ ತಮ್ಮಂದಿರು ಭೀಮಸೇನನಿಂದ ಸತ್ತರೋ ಹಾಗೇ, ಸುಷೇಣ ಕೂಡಾ ಸಂಹರಿಸಲ್ಪಟ್ಟ.  

 

ಹತಂ ತಮೀಕ್ಷ್ಯೈವ ವಿಕರ್ತ್ತನಾತ್ಮಜಃ ಕ್ರೋಧಾನ್ವಿತೋ ಭೀಮಸೇನಂ ವಿಹಾಯ ।

ಯಯೌ ಪ್ರಮೃದ್ಯೈವ ಚಮೂಂ ಯುಧಿಷ್ಠಿರಂ ರಥೇSಪರೇ ಸ್ವಶ್ವಯುತೇ ವ್ಯವಸ್ಥಿತಃ ॥೨೭.೮೧ ॥

 

ತನ್ನ ಮಗನು ಸತ್ತದ್ದನ್ನು ಕಂಡೇ ಸಿಟ್ಟುಗೊಂಡ ಕರ್ಣನು ಭೀಮಸೇನನನ್ನು ಬಿಟ್ಟು, ಸೇನೆಯನ್ನು ನಾಶಮಾಡಿ, ಇನ್ನೊಂದು ಒಳ್ಳೆಯ ಕುದುರೆ ಇರುವ ರಥದಲ್ಲಿ ಇದ್ದವನಾದ ಯುಧಿಷ್ಠಿರನತ್ತ ತೆರಳಿದನು.

 

ನ್ಯವಾರಯೇತಾಂ ಶಿನಿಪೌತ್ರಪಾರ್ಷತೌ ಕೃಷ್ಣಾಸುತಾಃ ಸೋಮಕಸಙ್ಘಯುಕ್ತಾಃ ।

ಸ ತಾನ್ ಸಮಸ್ತಾನ್ ವಿರಥಾನ್ ವಿಧಾಯ ಯುಧಿಷ್ಠಿರಂ ಪ್ರಾಪ ಯುತಂ ಯಮಾಭ್ಯಾಮ್ ॥೨೭.೮೨ ॥

 

ಆಗ ಸಾತ್ಯಕಿ, ಧೃಷ್ಟದ್ಯುಮ್ನ ಮತ್ತು ದ್ರೌಪದಿಯ ಮಕ್ಕಳು, ಪಾಂಚಾಲದೇಶದ ಬೆಂಗಾವಲು ಪಡೆಯಿಂದ ಕೂಡಿಕೊಂಡು ಕರ್ಣನನ್ನು ತಡೆದರು. ಕರ್ಣನಾದರೋ ಅವರೆಲ್ಲರನ್ನೂ ರಥಹೀನರನ್ನಾಗಿ ಮಾಡಿ, ನಕುಲಸಹದೇವರಿಂದ ಕೂಡಿದ ಯುಧಿಷ್ಠಿರನನ್ನು ಹೊಂದಿದನು.

 

ನಿಹತ್ಯ ಸೋSಶ್ವಾನ್ ಯುಧಿ ಧರ್ಮ್ಮಸೂನೋರ್ನ್ನಿರಾಯುಧೌ ತೌ ಚ ಯಮೌ ಚಕಾರ ।

ತಾನೇಕಯಾನೋಪಗತಾನ್ ಪುನಶ್ಚ ಮಮರ್ದ್ದ ಬಾಣೈಶ್ಚ ವಚೋಭಿರುಗ್ರೈಃ ॥೨೭.೮೩ ॥

 

ಯುದ್ಧದಲ್ಲಿ ಕರ್ಣನು ಧರ್ಮರಾಜನ ಕುದುರೆಗಳನ್ನು ಕೊಂದು, ಆ ನಕುಲ-ಸಹದೇವರನ್ನು  ಆಯುಧಹೀನರನ್ನಾಗಿ ಮಾಡಿದನು. ನಂತರ ಒಂದೇ ರಥದಲ್ಲಿ ಕುಳಿತ ಆ ಮೂರೂ ಜನರನ್ನು ಮತ್ತೆ ಮತ್ತೆ ಬಾಣಗಳಿಂದ, ಕ್ರೂರವಾದ ಮಾತುಗಳಿಂದ  ಕರ್ಣ ಘಾಸಿಗೊಳಿಸಿದ.

 

ತದೈವ ಮೋಕ್ಷಾಯ ನೃಪಸ್ಯ ಭೀಮೋ ದುರ್ಯ್ಯೋಧನಂ ವಿರಥಂ ಸಂವಿಧಾಯ ।

ವಿವ್ಯಾಧ ಮರ್ಮ್ಮಸ್ವತಿತೀಕ್ಷ್ಣ ಸಾಯಕೈಸ್ತಂ ದರ್ಶಯಾಮಾಸ ರವೇಃ ಸುತಾಯ ॥೨೭.೮೪ ॥

 

ಆಗಲೇ ಧರ್ಮರಾಜನ ಬಿಡುಗಡೆಗಾಗಿ ಭೀಮಸೇನನು ದುರ್ಯೋಧನನನ್ನು ರಥಹೀನನನ್ನಾಗಿ ಮಾಡಿ, ಅವನ ಮರ್ಮಸ್ಥಾನಗಳಲ್ಲಿ ಅತ್ಯಂತ ಚೂಪಾದ ಬಾಣಗಳಿಂದ ಹೊಡೆದ. ಶಲ್ಯನು ಕರ್ಣನಿಗೆ ಅದನ್ನು ತೋರಿಸಿದ.  

 

ಶಲ್ಯಸ್ತದಾ ಧರ್ಮ್ಮಸುತಂ ವಿಹಾಯ ಕರ್ಣ್ಣೋ ಯಯೌ ತತ್ರ ಯುಧಿಷ್ಠಿರೋSಪಿ ।

ಗತ್ವಾ ಶನೈಃ ಶಿಬಿರಂ ತತ್ರ ಶಿಶ್ಯೇ ಕರ್ಣ್ಣೋ ಯದಾ ರಾಜಗೃಧ್ನೀ ಜಗಾಮ ॥೨೭.೮೫ ॥

 

ಆಗ ಕರ್ಣನು ಧರ್ಮರಾಜನನ್ನು ಬಿಟ್ಟು, ದುರ್ಯೋಧನನಿದ್ದೆಡೆಗೆ ತೆರಳಿದ. ಕರ್ಣನು ದುರ್ಯೋಧನನೆಡೆಗೆ ಹೋಗುತ್ತಿದ್ದಂತೆಯೇ  ಧರ್ಮರಾಜ ಮೆಲ್ಲಗೆ ಶಿಬಿರಕ್ಕೆ ಹೋಗಿ ಅಲ್ಲಿಯೇ ಮಲಗಿಕೊಂಡನು.


No comments:

Post a Comment