ತ್ಯಕ್ತ್ವಾ ರಣಂ ನಾಹಮಿತೋ
ವ್ರಜೇಯಂ ನ ಮಾಂ ವದೇತ್ ಕಶ್ಚನ ಯುದ್ಧಭೀತಮ್ ।
ಇತಿ ಬ್ರುವಾಣಂ
ತಮನನ್ತಶಕ್ತಿಃ ಪ್ರೀತಃ ಕೃಷ್ಣಃ ಪ್ರಶಶಂಸಾಧಿಕೇಷ್ಟಮ್ ॥೨೭.೧೧೨ ॥
ಯುದ್ಧವನ್ನು ಬಿಟ್ಟು
ನಾನು ಇಲ್ಲಿಂದ ಯಾವತ್ತೂ ಹೋಗುವುದಿಲ್ಲ. ಏಕೆಂದರೆ ಯಾವೊಬ್ಬನೂ ಕೂಡಾ ನನ್ನನ್ನು ‘ಯುದ್ಧದಿಂದ
ಹೆದರಿದವ’ ಎಂದು ಯಾವತ್ತೂ ಹೇಳಬಾರದು. ಈರೀತಿಯಾಗಿ ಹೇಳುತ್ತಿರುವ ಭೀಮಸೇನನನ್ನು ಅನಂತಶಕ್ತನಾದ
ಶ್ರೀಕೃಷ್ಣ ಚೆನ್ನಾಗಿ ಪ್ರಶಂಸಿದ.
[ಶ್ರೀಕೃಷ್ಣ ಭೀಮನನ್ನು
ಕುರಿತು ಹೀಗೆ ಹೇಳುತ್ತಾನೆ- ‘ನೈತಚ್ಚಿತ್ರಂ ತವ ಕರ್ಮಾದ್ಯ ಭೀಮ ಯಾಸ್ಯಾವಹೇ ಜಹಿ ಪಾರ್ಥಾರಿಸಙ್ಘಾನ್’ [ಮಹಾಭಾರತ(೬೮.೨೨)] – ಹೌದು, ನೀನು ಹೀಗೆ ಹೇಳುವುದರಲ್ಲಿ
ಯಾವ ಅಚ್ಚರಿಯೂ ಇಲ್ಲ. ನಾವಿಬ್ಬರೂ ಹೋಗುತ್ತಿದ್ದೇವೆ. ಅರ್ಜುನನ ಶತ್ರುಗಳಾದ ಸಂಶಪ್ತಕರನ್ನೂ
ನೀನೇ ಕೊಲ್ಲು]
ಯಯೌ ಯುಧಿಷ್ಠಿರಂ ದ್ರಷ್ಟುಂ ಶಿಬಿರಂ ಸಾರ್ಜ್ಜುನೋ ಹರಿಃ ।
ದೃಷ್ಟ್ವಾತೌ ನೃಪತಿಃ ಕರ್ಣ್ಣಂ
ಹತಂ ಮತ್ವಾ ಶಶಂಸ ಹ ॥೨೭.೧೧೩ ॥
ಯುಧಿಷ್ಠಿರನನ್ನು ಕಾಣಲು ಅರ್ಜುನನೊಂದಿಗೆ ಶ್ರೀಕೃಷ್ಣ ತೆರಳಿದ. ಇವರಿಬ್ಬರನ್ನು ಕಂಡು ಯುಧಿಷ್ಠಿರ,
ಕರ್ಣ ಸತ್ತ ಎಂದು ಊಹಿಸಿ ಅವರನ್ನು ಚೆನ್ನಾಗಿ ಹೊಗಳಿದ.
ಅಭಿವಾದ್ಯ
ಹನಿಷ್ಯಾಮೀತ್ಯುಕ್ತಃ ಪಾರ್ತ್ಥೇನ ಸ ಕ್ರುಧಾ ।
ಭೃಶಂ ವಿನಿನ್ದ್ಯ
ಭೀಭತ್ಸುಮಾಹ ಕೃಷ್ಣಾಯ ಗಾಣ್ಡಿವಮ್ ॥೨೭.೧೧೪ ॥
ದೇಹಿ ಪುತ್ರಂ ಸ ರಾಧಾಯ
ಹನಿಷ್ಯತಿ ನ ಸಂಶಯಃ ।
ಅಥವಾ ಭೀಮ ಏವೈನಂ
ನಿವೃತ್ತೇ ತ್ವಯಿ ಪಾತಯೇತ್ ॥೨೭.೧೦೫ ॥
ತ್ವಂ ತು ಕುನ್ತ್ಯಾ
ವೃಥಾ ಸೂತಃ ಕ್ಲೀಬೊ ಮಿಥ್ಯಾಪ್ರತಿಶ್ರುತಃ ।
ಅಹಂ ಹಿ ಸೂತಪುತ್ರೇಣ
ಕ್ಲಿಷ್ಟೋ ಮಾರುತಿತೇಜಸಾ ॥೨೭.೧೧೬ ॥
ಜೀವಾಮೀತ್ಯಗ್ರಜೇನೋಕ್ತ
ಉದ್ಬಬರ್ಹಾಸಿಮುತ್ತಮಮ್ ।
ವಾಸುದೇವಸ್ತದಾSSಹೇದಂ ಕಿಮೇತದಿತಿ ಸರ್ವವಿತ್
॥೨೭.೧೧೭ ॥
ಆಗ ಅರ್ಜುನ ನಮಸ್ಕರಿಸಿ, ‘ಕರ್ಣನನ್ನು ಇನ್ನು ಕೊಲ್ಲಬೇಕಷ್ಟೇ’ ಎಂದು ಹೇಳಲು, ಧರ್ಮರಾಜನು ಸಿಟ್ಟಿನಿಂದ ಅವನನ್ನು ಚೆನ್ನಾಗಿ
ಬೈದ. ‘ಗಾಂಡೀವವನ್ನು ಇಟ್ಟುಕೊಂಡು ನೀನು ಏನು ಮಾಡುತ್ತಿರುವೆ? ಅದನ್ನು
ಕೃಷ್ಣನಿಗೆ ಕೊಡು. ಅವನು ಆ ರಾಧೇಯನನ್ನು ಕೊಲ್ಲುತ್ತಾನೆ. ನೀನು ನಿನ್ನ ಪ್ರತಿಜ್ಞೆಯನ್ನು ಹಿಂದೆ
ತೆಗೆದುಕೊಂಡಿರುವುದಾಗಿ ಹೇಳಿದರೆ ಭೀಮಸೇನನೇ ಅವನನ್ನು ಕೊಲ್ಲುತ್ತಾನೆ. ನೀನು ಕುಂತಿಗೆ
ವ್ಯರ್ಥವಾಗಿ ಹುಟ್ಟಿದ್ದೀಯ. ನಪುಂಸಕ ನೀನು. ನಿನಗೆ ಮಾಡಿದ ಪ್ರತಿಜ್ಞೆಯನ್ನು ಉಳಿಸಿಕೊಳ್ಳವ ಯೋಗ್ಯತೆ ಇಲ್ಲ. ನಾನು ಕರ್ಣನಿಂದ ಬಹಳ ಕಷ್ಟಪಟ್ಟೆ. ಭೀಮಸೇನನ ಬಲದಿಂದಾಗಿ
ನಾನು ಬದುಕುಳಿದಿದ್ದೇನೆ’. ಈರೀತಿಯಾಗಿ ಅಣ್ಣನಿಂದ ಹೇಳಲ್ಪಟ್ಟ ಅರ್ಜುನನು ಒರೆಯಿಂದ ತನ್ನ ದೊಡ್ಡ
ಕತ್ತಿಯನ್ನು ತೆಗೆದ. ಆಗ ಸರ್ವಜ್ಞನಾದ ಕೃಷ್ಣನು ‘ಏನು ಮಾಡುತ್ತಿರುವೆ’ ಎಂದು ಕೇಳಿದ.
ತಮಾಹ ಗಾಣ್ಡಿವಂ ದಾತುಂ
ಯೋ ವದೇತ್ ತದ್ವಧೋ ಮಯಾ ।
ಪ್ರತಿಜ್ಞಾತಸ್ತತೋ
ಹನ್ಮಿ ನೃಪಮಿತ್ಯಾಹ ತಂ ಹರಿಃ ॥೨೭.೧೧೮ ॥
ಆಗ ಅರ್ಜುನ- ‘ಗಾಂಡೀವವನ್ನು ಬೇರೆಯವರಿಗೆ ಕೊಟ್ಟುಬಿಡು’ ಎಂದು ಯಾರು ಹೇಳುತ್ತಾರೋ, ಅವರ ಸಂಹಾರವು ನನ್ನಿಂದ ಪ್ರತಿಜ್ಞೆ ಮಾಡಲ್ಪಟ್ಟಿದೆ. ಆ ಕಾರಣದಿಂದ ಧರ್ಮರಾಜನನ್ನು
ಕೊಲ್ಲುತ್ತೇನೆ ಎನ್ನುತ್ತಾನೆ. ಆಗ ಶ್ರೀಕೃಷ್ಣ
ಹೇಳುತ್ತಾನೆ-
ಸತ್ಯಸ್ಯ ವಚನಂ ಶ್ರೇಯಃ
ಸತ್ಯಜ್ಞಾನಂ ತು ದುಷ್ಕರಮ್ ।
ಯತ್ ಸತಾಂ
ಹಿತಮತ್ಯನ್ತಂ ತತ್ ಸತ್ಯಮಿತಿ ನಿಶ್ಚಯಃ ॥೨೭.೧೧೯ ॥
ಧರ್ಮ್ಮಸ್ಯ ಚರಣಂ
ಶ್ರೇಯೋ ಧರ್ಮ್ಮಜ್ಞಾನಂ ತು ದುಷ್ಕರಮ್ ।
ಯಃ ಸತಾಂ ಧಾರಕೋ
ನಿತ್ಯಂ ಸ ಧರ್ಮ್ಮ ಇತಿ ನಿಶ್ಚಯಃ ॥೨೭.೧೨೦ ॥
ಸತ್ಯವನ್ನಾಡುವುದು ಒಳ್ಳೆಯದೇ, ಆದರೆ ಸತ್ಯದ ಜ್ಞಾನ ಮಾತ್ರ ದುರ್ಲಭ. ಯಾವುದು ಸಜ್ಜನರಿಗೆ ಹಿತವೋ ಅದು ಸತ್ಯ. ಧರ್ಮ ಮಾಡುವುದು ಒಳ್ಳೆಯದೇ. ಆದರೆ ಧರ್ಮ ಯಾವುದು ಎಂದು ತಿಳಿಯುವುದು ಕಷ್ಟ. ಯಾವುದನ್ನು ಮಾಡುವುದರಿಂದ ಸಜ್ಜನರು ಬದುಕುತ್ತಾರೋ ಅದು ಧರ್ಮ. ಇದು ನಿಶ್ಚಯ.
ಕೌಶಿಕಾಖ್ಯೋ
ಬ್ರಾಹ್ಮಣೋ ಹಿ ಲೀನಂ ಗ್ರಾಮಜನಂ ಕ್ವಚಿತ್ ।
ತಸ್ಕರೇಷ್ವಭಿಧಾಯೈವ
ನಿರಯಂ ಪ್ರತ್ಯಪದ್ಯತ ॥೨೭.೧೨೧ ॥
ಕೌಶಿಕಾ ಎಂಬ ಹೆಸರಿನ ಬ್ರಾಹ್ಮಣನು (ಸತ್ಯವನ್ನು ಹೇಳುವೆನು ಎಂದು) ತನ್ನ ಆಶ್ರಮದಲ್ಲಿ
ಅಡಗಿಕೊಂಡ ಗ್ರಾಮದವರನ್ನು ಕಳ್ಳರಿಗೆ ತಿಳಿಸಿಯೇ ನರಕವನ್ನು ಹೊಂದಿರುವನು.
ಕಶ್ಚಿದ್ ವ್ಯಾಧೋ ಮೃಗಂ
ಹತ್ವಾ ಮಾತಾಪಿತೃನಿಮಿತ್ತತಃ ।
ಭಕ್ಷಾರ್ತ್ಥಮಭ್ಯಗಾತ್
ಸ್ವರ್ಗ್ಗಮಸುರೋSಸೌ
ಮೃಗೋ ಯತಃ ॥೨೭.೧೨೨ ॥
ಉಪದ್ರವಾಯ ಲೋಕಸ್ಯ
ತಪಶ್ಚರತಿ ದುರ್ಮ್ಮತಿಃ ।
ತಸ್ಮಾತ್ ಸದ್ಧಾರಕೋ ಧರ್ಮ್ಮ
ಇತಿ ಕೃತ್ವಾ ವಿನಿಶ್ಚಯಮ್ ॥೨೭.೧೨೩ ॥
ಮಾ ನೃಪಂ ಜಹಿ ಸತ್ಯಾಂ
ತ್ವಙ್ಕುರು ವಾಚಂ ತತಃ ಕುರು ।
ಇತ್ಯುಕ್ತೋ ಬಹುಧಾSನಿನ್ದತ್ ಕ್ರೋಧಾದೇವಾರ್ಜ್ಜುನೋ
ಭೃಶಮ್ ॥೨೭.೧೨೪ ॥
ಯಾವುದೋ ಒಬ್ಬ ಬೇಡ, ತಂದೆ ತಾಯಿಯರಿಗೆ ಪ್ರೀತಿಯಾಗಲೀ ಎಂದು, ಅವರ ಆಹಾರಕ್ಕಾಗಿ ಮೃಗವನ್ನು ಕೊಂದೂ ಸ್ವರ್ಗವನ್ನು ಹೊಂದಿದರು. (ಹೇಗೆ ಮೃಗ
ಹತ್ಯೆ ಧರ್ಮವಾಯಿತು ಎಂದರೆ-) ಆ ಮೃಗದ ರೂಪದಲ್ಲಿ
ಯಾವ ಕಾರಣದಿಂದ ಅಸುರನಿದ್ದನೋ, ಅವನು ಲೋಕಕ್ಕೆ ಉಪದ್ರವ ಕೊಡುವುದಕ್ಕಾಗಿ ತಪಸ್ಸನ್ನಾಚರಿಸುತ್ತಿದ್ದ.
ಹೀಗಾಗಿ ಸಜ್ಜನರನ್ನು ಬದುಕಕೊಡುವುದಕ್ಕಾಗಿ ದುರ್ಜನ ಸಂಹಾರ ಅಲ್ಲಿ ಧರ್ಮವಾಯಿತು. ಆದ್ದರಿಂದ
ಸಜ್ಜನರಿಗೆ ಪೋಷಕವಾದುದು ಎಂದು ನಿಶ್ಚಯಮಾಡಿ, ನಿನ್ನ ಅಣ್ಣನಾದ ಧರ್ಮರಾಜನನ್ನು
ಕೊಲ್ಲಬೇಡ. ಆದರೆ ಮಾತನ್ನೂ(ಪ್ರತಿಜ್ಞೆಯನ್ನೂ)
ಸತ್ಯವನ್ನಾಗಿ ಮಾಡು. ಅದಕ್ಕಾಗಿ ನೀನು ನಿನ್ನ
ಅಣ್ಣನನ್ನು ಚೆನ್ನಾಗಿ ಬೈದುಬಿಡು(ಉತ್ತಮರ ತಿರಸ್ಕಾರವೂ ಅವರ ಸಂಹಾರವೇ ಆಗಿದೆ). ಈ ರೀತಿಯಾಗಿ
ಹೇಳಿದಾಗ, ಅತ್ಯಂತ ಸಿಟ್ಟಿನಿಂದ ಅರ್ಜುನನು ಅಣ್ಣನನ್ನು ಚೆನ್ನಾಗಿ ಬೈದ.
ತ್ವಂ ನೃಶಂಸೋSಕೃತಜ್ಞಶ್ಚ ನಿರ್ವೀರ್ಯ್ಯಃ ಪರುಷಂವಧಃ ।
ತ್ವತ್ತಃ ಸುಖಂ ನಾಸ್ತಿ
ಕಿಞ್ಚಿನ್ನ ಮಾಂ ಗರ್ಹಿತುಮರ್ಹಸಿ ॥೨೭.೧೨೫ ॥
ಭೀಮೋ ಮಾಂ ಗರ್ಹಿತುಂ
ಯೋಗ್ಯೋ ಯೋ ಹ್ಯಸ್ಮಾಕಂ ಸದಾ ಗತಿಃ ।
ಯೋ ಯುದ್ಧ್ಯತೇ
ಸರ್ವವೀರೈರದ್ಯಾಪಿ ತ್ವಂ ತು ನಿನ್ದಕಃ ॥೨೭.೧೨೬ ॥
ದಯೆ ಇಲ್ಲದ ನೀನು ಕೃತಜ್ಞನೇ ಅಲ್ಲ. ನಿರ್ವೀರ್ಯ ನೀನು. ಕೆಲಸಮಾಡಿದವರನ್ನು ಏಕೆ ಬಯ್ಯುತ್ತಿರುವೆ? ನಮಗೆ ನಿನ್ನಿಂದೇನು ಸುಖವಿದೆ? ನನ್ನನ್ನು ಬೈಯ್ಯುವ ಯಾವುದೇ
ಯೋಗ್ಯತೆ ನಿನಗಿಲ್ಲ. ನನ್ನನ್ನು ಬಯ್ಯುವ ಅಧಿಕಾರ
ಇದ್ದರೆ ಅದು ಭೀಮಸೇನನಿಗೆ ಮಾತ್ರ. ಅವನಲ್ಲವೇ ನಮಗೆ ಗತಿ? ಈಗಲೂ ಕೂಡಾ
ಎಲ್ಲಾ ವೀರರ ಜೊತೆಗೆ ಯುದ್ಧ ಮಾಡುತ್ತಿದ್ದಾನೆ. ನೀನೋ ಬರೀ ಬಯ್ಯುತ್ತಿದ್ದೀಯ.
ಇತ್ಯಾದ್ಯುಕ್ತ್ವಾSSತ್ಮನಾಶಾಯ ವಿಕೋಶಂ
ಚಕೃವಾನಸಿಮ್ ।
ಪುನಃ ಕೃಷ್ಣೇನ ಪೃಷ್ಟಃ
ಸನ್ ಸ್ವಾಭಿಪ್ರಾಯಮುವಾಚ ಸಃ ॥೨೭.೧೨೭ ॥
ಇವೇ ಮೊದಲಾದ ಮಾತುಗಳನ್ನಾಡಿ ತನ್ನನ್ನು ಕೊಂದುಕೊಳ್ಳಬೇಕು ಎಂದು ಒರೆಯಿಂದ ಖಡ್ಗವನ್ನು ತೆಗೆದ.
ಪುನಃ ಶ್ರೀಕೃಷ್ಣನಿಂದ ಪ್ರಶ್ನಿಸಲ್ಪಟ್ಟ ಅರ್ಜುನ ತನ್ನ ಅಭಿಪ್ರಾಯವೇನೆಂದು ಹೇಳಿದ.
No comments:
Post a Comment