ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 29, 2023

Mahabharata Tatparya Nirnaya Kannada 27-143-149

 

ಪುನಶ್ಚ ನಿಘ್ನನ್ತಮರಿಪ್ರವೀರಾನ್  ವಿದ್ರಾವಯನ್ತಂ ಚ ನಿಜಾಂ ವರೂಥಿನೀಮ್ ।

ಸಸಾರ ದುಃಶಾಸನ ಆತ್ತಧನ್ವಾ ಭೀಮೋSಪಿ ತಂ ಸಿಂಹ ಇವಾಭಿಪೇತಿವಾನ್ ॥೨೭.೧೪೩ ॥

 

ಪುನಃ, ಶತ್ರುಸೈನಿಕರನ್ನು ಕೊಲ್ಲುತ್ತಾ, ಸೈನ್ಯವನ್ನು ಓಡಿಸುತ್ತಿರುವ ಭೀಮಸೇನನನ್ನು ದುಃಶಾಸನನು ಇನ್ನೊಂದು ಧನುಸ್ಸನ್ನು ಹಿಡಿದು ಎದುರಿಸಿದನು. ಆಗ ಭೀಮಸೇನ ಸಿಂಹವು ಮೃಗವನ್ನು ಹೊಂದುವಂತೆ ಆ ದುಃಶಾಸನನನ್ನು ಹೊಂದಿದನು.  

 

ತಂ ರೂಕ್ಷವಾಚೋ ಮುಹುರರ್ಪ್ಪ್ಯಯನ್ತಂ ವಿಧಾಯ ಭೀಮೋ ವಿರಥಂ ಕ್ಷಣೇನ ।

ಪ್ರಗೃಹ್ಯ ಭೂಮೌ ವಿನಿಪಾತ್ಯ ವಕ್ಷೋ ವಿದಾರಯಾಮಾಸ ಗದಾಪ್ರಹಾರತಃ ॥೨೭.೧೪೪ ॥

 

ಕೆಟ್ಟ ರೀತಿಯಿಂದ ಕ್ರೂರವಾದ ಮಾತುಗಳನ್ನು ಮತ್ತೆ-ಮತ್ತೆ ನುಡಿಯುತ್ತಿದ್ದ ಆ ದುಃಶಾಸನನನ್ನು ಭೀಮಸೇನ ಕ್ಷಣದಲ್ಲಿ ರಥಹೀನನನ್ನಾಗಿ ಮಾಡಿ,  ಭೂಮಿಯಲ್ಲಿ ಕೆಡವಿ, ಅವನ ವಕ್ಷಃಸ್ಥಳಕ್ಕೆ ಗದಾಪ್ರಹಾರ ಮಾಡಿದನು.

 

ಆಕ್ರಮ್ಯ ಕಣ್ಠಂ ಚ ಪದೋದರೇSಸ್ಯ ನಿವಿಶ್ಯ ಪಶ್ಯನ್ ಮುಖಮಾತ್ತರೋಷಃ ।

ವಿಕೋಶಮಾಕಾಶನಿಭಂ ವಿಧಾಯ ಮಹಾಸಿಮಸ್ಯೋರಸಿ ಸಞ್ಚಖಾನ ॥೨೭.೧೪೫ ॥

 

ಕಾಲಿನಿಂದ ಅವನ ಕುತ್ತಿಗೆಯನ್ನು ಒತ್ತಿ, ಅವನ ಹೊಟ್ಟೆಯಮೇಲೆ ಕುಳಿತು, ಕೋಪದಿಂದ ಅವನ ಮುಖವನ್ನು ನೋಡುತ್ತಾ, ಆಕಾಶಕ್ಕೆ ಸದೃಶವಾದ ನಿರ್ಮಲವಾದ ಮಹಾಖಡ್ಗವನ್ನು ಒರೆಯಿಂದ ತೆಗೆದ ಭೀಮಸೇನನು, ದುಃಶಾಸನನ ವಕ್ಷಃಸ್ಥಳವನ್ನು ಸೀಳಿದನು.

 

ಕೃತ್ವಾSಸ್ಯ ವಕ್ಷಸ್ಯುರುಸತ್ತಟಾಕಂ ಪಪೌ ನಿಕಾಮಂ ತೃಷಿತೋSಮೃತೋಪಮಮ್ ।

ತಚ್ಛೋಣಿತಾಮ್ಭೋ ಭ್ರಮದಕ್ಷಮೇನಂ ಸಂಸ್ಮಾರಯಾಮಾಸ ಪುರಾಕೃತಾನಿ ॥೨೭.೧೪೬ ॥

 

ದುಃಶಾಸನನ ವಕ್ಷಃಸ್ಥಳದಲ್ಲಿ ಅಗಲವಾದ ರಕ್ತದ ಮಡುವನ್ನು ಮಾಡಿದ ಭೀಮಸೇನ, ಬಾಯಾರಿದವನು ಅಮೃತ ಕುಡಿಯುವಂತೆ ದುಃಶಾಸನನ ರಕ್ತವನ್ನು ತಾನು ಯಥೇಷ್ಟ ಪಾನ ಮಾಡಿದಂತೆ ಮಾಡಿದನು. ಕಣ್ಣನ್ನು ಹೊರಳಿಸುತ್ತಿರುವ ದುಃಶಾಸನನಿಗೆ ಭೀಮಸೇನ ಹಿಂದೆ ಅವನು ಮಾಡಿದ ಕೆಟ್ಟ ಕರ್ಮಗಳನ್ನು ನೆನಪಿಸಿದನು.

 

ವಾಕ್ಸಾಯಕಾಂಶ್ಚಾಸ್ಯ ಪುರಾ ಸಮರ್ಪ್ಪಿತಾನ್ ಸಂಸ್ಮಾರಯಾಮಾಸ ಪುನಃಪುನರ್ಭೃಶಮ್ । 

ದನ್ತಾನ್ತರಂ ನ ಪ್ರವಿವೇಶ ತಸ್ಯ ರಕ್ತಂ ಹ್ಯಪೇಯಂ ಪುರುಷಸ್ಯ ಜಾನತಃ ॥೨೭.೧೪೭ ॥

 

ಭೀಮಸೇನ ದುಃಶಾಸನನಿಗೆ, ಅವನು ಮೊದಲು ಆಡಿದ ಚುಚ್ಚು ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿದನು. ಮಾನವರಕ್ತ ಪಾನಮಾಡಲು ಯೋಗ್ಯವಲ್ಲ ಎಂದು ತಿಳಿದಿರುವ ಭೀಮಸೇನ, ರಕ್ತ ತನ್ನ ಹಲ್ಲುಗಳಿಗಿಂತ ಮುಂದೆ (ಒಳಗೆ) ಪ್ರವೇಶ ಮಾಡದಂತೆ ನೋಡಿಕೊಂಡ. (ಭೀಕರವಾಗಿ ರಕ್ತಪಾನ ಮಾಡಿದಂತೆ ತೋರಿದನೇ ಹೊರತು ನಿಜವಾಗಿ ಭೀಮ ರಕ್ತವನ್ನು ಕುಡಿಯಲಿಲ್ಲ)   

 

 

ತಥಾSಪಿ  ಶತ್ರುಪ್ರತಿಭೀಷಣಾಯ ಪಪಾವಿವಾSಸ್ವಾದ್ಯ ಪುನಃಪನರ್ಭೃಶಮ್ ।

ಸ್ಮರನ್ ನೃಹಿಂಹಂ ಭಗವನ್ತಮೀಶ್ವರಂ ಸ ಮನ್ಯುಸೂಕ್ತಂ ಚ ದದರ್ಶ ಭಕ್ತ್ಯಾ ॥೨೭.೧೪೮ ॥

 

‘ಯಸ್ತೇ ಮನ್ಯೋ’ ಇತ್ಯತೋ ನಾರಸಿಂಹಂ ಸೋಮಂ ತಸ್ಮೈ ಚಾರ್ಪ್ಪಯಚ್ಛೋಣಿತಾಖ್ಯಮ್ ।

ಯುದ್ಧಾಖ್ಯಯಜ್ಞೇ ಸೋಮಬುದ್ಧ್ಯಾsರಿವಕ್ಷ ಇಹೇತಿ ಸಾಮ್ನಾ ಗದಯಾ ವಿಭಿನ್ದನ್ ॥೨೭.೧೪೯ ॥

 

ಆದರೂ ಕೂಡಾ, ಶತ್ರುಗಳನ್ನು ಭಯಗೊಳಿಸಲು ಭೀಮಸೇನ ಮತ್ತೆ ಮತ್ತೆ ರಕ್ತಪಾನ ಮಾಡುವವನಂತೆ ಅಭಿನಯಿಸಿದನು. ಆ ಭೀಮಸೇನನು ಸರ್ವೇಶ್ವರನಾದ, ಪೂಜ್ಯನಾದ, ಮನ್ಯುಸೂಕ್ತ ಪ್ರತಿಪಾದ್ಯ ನರಸಿಂಹರೂಪಿ ಶ್ರೀಹರಿಯನ್ನು ಭಕ್ತಿಯಿಂದ ಸ್ಮರಿಸುತ್ತಾ,ಯಸ್ತೇ ಮನ್ಯೋ’ ಇದೇ ಮೊದಲಾದ ಸೂಕ್ತದಿಂದ ನರಸಿಂಹನನ್ನು  ಕಂಡು, ಯುದ್ಧವೆನ್ನುವ ಯಜ್ಞದಲ್ಲಿ ಶತ್ರುವಿನ ಎದೆಯನ್ನು ಸೋಮಲತೆ ಎಂಬ ಬುದ್ಧಿಯಿಂದ ‘ಇಹ ಎನ್ನುವ ಪದದಿಂದ ಪ್ರಾರಂಭವಾಗುವ ಸಾಮಮಂತ್ರದೊಂದಿಗೆ, ಶತ್ರುವಾದ ದುಃಶಾಸನನ ಎದೆಯನ್ನು ಸೋಮಲತೆಯಂತೆ ಜಜ್ಜಿದನು.

No comments:

Post a Comment