ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, May 25, 2023

Mahabharata Tatparya Nirnaya Kannada 27-128-137

 

ತಚ್ಛ್ರುತ್ವಾ ಗರ್ಹಯಿತ್ವೈನಂ ಪುನರಾಹ ಜನಾರ್ದ್ದನಃ ।

ಮತಿಪೂರ್ವಂ ದೇಹಹಾನಾತ್ ಪಾಪಂ ಮಹದವಾಪ್ಯತೇ  ॥೨೭.೧೨೮ ॥

 

ಧರ್ಮಾರ್ತ್ಥಕಾಮಮೋಕ್ಷಾಣಾಂ ಸಾಧನಂ ದೇಹತೋSಸ್ತಿ ಯತ್ ।

ಅತೋ ಮಾ ತ್ಯಜ ದೇಹಂ ತು ಕುರು ಚಾSತ್ಮಪ್ರಶಂಸನಮ್ ॥೨೭.೧೨೯ ॥

 

(ದೊಡ್ಡವರನ್ನು ಬೈದಿದ್ದೇನೆ ಎಂದರೆ ಅವರನ್ನು ನಾನು ಕೊಂದಿದ್ದೇನೆ ಎಂದರ್ಥ. ಇಂತಹ ಬಾಳು ನನಗೇಕೆ  ಬೇಕು? ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುವ ಅಭಿಪ್ರಾಯದಲ್ಲಿ ಅರ್ಜುನ ಖಡ್ಗ ತೆಗೆದಿದ್ದ). ಅದನ್ನು ಕೇಳಿದ ಕೃಷ್ಣ ಅವನನ್ನು ಚೆನ್ನಾಗಿ ಬೈದು ಹೇಳುತ್ತಾನೆ- ‘ಬುದ್ಧಿಪೂರ್ವಕವಾಗಿ ದೇಹವನ್ನು ನಾಶ ಮಾಡಿಕೊಂಡರೆ ಮಹತ್ತಾದ ಪಾಪವು ಹೊಂದಲ್ಪಡುತ್ತದೆ. ಯಾವ ಕಾರಣದಿಂದ ಭಗವಂತ ಕೊಟ್ಟ ಈ ದೇಹ ಧರ್ಮ, ಅರ್ಥ, ಕಾಮ, ಮೋಕ್ಷಕ್ಕೆ ಸಾಧನವಾಗಿದೆಯೋ, ಆ ಕಾರಣದಿಂದ ದೇಹವನ್ನು ಬಿಡಬೇಡ. ನೀನು ಆತ್ಮಪ್ರಶಂಸೆ ಮಾಡಿಕೋ. ಆಗ ಅದು ನಿನ್ನನ್ನು ನೀನೇ ಕೊಂದುಕೊಂಡ ಹಾಗಾಗುತ್ತದೆ’ ಎಂದು.

 

ವಧೋ ಗುರೂಣಾಂ ತ್ವಙ್ಕಾರಃ ಸ್ವಪ್ರಶಂಸೈವ ಚಾSತ್ಮನಃ ।

ಇತ್ಯುಕ್ತಃ ಸ ತ್ವಹಙ್ಕಾರಾಚ್ಛಶಂಸ ಸ್ವಗುಣಾನಲಮ್ ॥೨೭.೧೩೦ ॥

 

‘ಕೀಳುಮಟ್ಟದ ಭಾಷೆಯಲ್ಲಿ ಗುರುಗಳನ್ನು ನಿಂದಿಸುವುದು ಅವರ ವಧೆ ಎನಿಸುತ್ತದೆ. ಹಾಗೆಯೇ. ತನ್ನನ್ನು ತಾನು ವಿಪರೀತ ಹೊಗಳಿಕೊಂಡರೆ ಅದು ಆತ್ಮಹತ್ಯೆ ಎನಿಸುತ್ತದೆ’. ಈರೀತಿಯಾಗಿ ಕೃಷ್ಣನಿಂದ ಹೇಳಲ್ಪಟ್ಟ ಅರ್ಜುನ ಅಹಂಕಾರದಿಂದ ತನ್ನ ಗುಣಗಳನ್ನೇ ತಾನು ಚೆನ್ನಾಗಿ ಹೊಗಳಿಕೊಂಡ.

 

ಗುರುನಿನ್ದಾSSತ್ಮಪೂಜಾ ಚ  ನ ಧರ್ಮ್ಮಾಯ ಭವೇತ್ ಕ್ವಚಿತ್ ।

ತಥಾSಪ್ಯರ್ಜ್ಜುನಹಾರ್ದ್ದಂ ತತ್ ಸಮ್ಪ್ರಕಾಶ್ಯ ಜನಾರ್ದ್ದನಃ ॥೨೭.೧೩೧ ॥

 

ತಸ್ಯ ಲಜ್ಜಾಂ ಸಮುತ್ಪಾದ್ಯ ನಾಶಯಿತ್ವಾ ಚ ತಂ ಮದಮ್ ।

ನಾಹಂ ವೇದ ಪರಂ ಧರ್ಮ್ಮಂ ಕೃಷ್ಣ ಏವ ಗತಿರ್ಮ್ಮಮ ॥೨೭.೧೩೨ ॥

 

ಇತಿ ಭಾವಂ ಸಮುತ್ಪಾದ್ಯ ದೋಷಾನ್ ನಾಶಯಿತುಂ ಹರಿಃ ।

ಕಾರಯಾಮಾಸ ತತ್ ಸರ್ವಮರ್ಜ್ಜುನೇನ ಜಗತ್ಪತಿಃ ॥೨೭.೧೩೩ ॥

 

ಗುರುನಿಂದನೆ, ಸ್ವಪ್ರಶಂಸೆ ಇತ್ಯಾದಿ ಕೂಡಾ ಧರ್ಮವಲ್ಲ. ಆದರೂ ಕೃಷ್ಣ ಇದನ್ನು ಅರ್ಜುನನನಿಂದ ಏಕೆ ಮಾಡಿಸಿದ ಎಂದರೆ- ಅರ್ಜುನನ ಅಭಿಪ್ರಾಯವನ್ನು ಲೋಕಕ್ಕೆ ತೋರಿಸಿ, ಅವನಿಗೆ ನಾಚಿಕೆಯನ್ನು ಹುಟ್ಟಿಸಿ, ಅವನಲ್ಲಿ ಹುಟ್ಟಿಕೊಂಡ ಅಹಂಕಾರವನ್ನು ನಾಶಮಾಡಿ,  ‘ನನಗೆ ಧರ್ಮ ಗೊತ್ತಿಲ್ಲ, ಕೃಷ್ಣನೇ ನನಗೆ ಗತಿ’ ಎನ್ನುವ ಭಾವವನ್ನು ಅವನಲ್ಲಿ ಹುಟ್ಟಿಸಿ, ಅವನ ದೋಷಗಳನ್ನು ನಾಶಮಾಡಲೆಂದೇ ಜಗತ್ಪತಿಯಾದ ಕೃಷ್ಣನು ಅರ್ಜುನನಿಂದ ಇದೆಲ್ಲವನ್ನೂ ಮಾಡಿಸಿದ.

 

ತತ ಏತದವಿಜ್ಞಾನಾತ್ ಕುಪಿತೋ ನೃಪತಿರ್ಭೃಶಮ್ ।

ಆಹಾಸ್ತು ರಾಜಾ ಭೀಮಸ್ತ್ವಂ ಯುವಾ ಮಾಂ ಜಹಿ ಚ ಸ್ವಯಮ್ ।

ವನಂ ವಾ ವಿಫಲೋ ಯಾಮೀತ್ಯುಕ್ತ್ವೋತ್ತಸ್ಥೌ ಸ್ವತಲ್ಪತಃ ॥೨೭.೧೩೪ ॥

 

ತದನಂತರ, ಈ ಎಲ್ಲಾ ಹಿನ್ನೆಲೆಯನ್ನು ತಿಳಿಯದೇ ಕೋಪಗೊಂಡ ಧರ್ಮರಾಜ- ‘ಭೀಮಸೇನ ರಾಜನಾಗಲಿ, ನೀನು ಯುವರಾಜನಾಗು, ನನ್ನನ್ನು ನೀನೇ ಕೊಂದುಬಿಡು, ಇಲ್ಲಾ ನಾನು ಕಾಡಿಗೆ ಹೋಗಿಬಿಡುತ್ತೇನೆ’ ಎಂದು ಹೇಳಿ,  ತಾನು ಮಲಗಿದ್ದ ಹಾಸಿಗೆಯಿಂದ ಮೇಲೆದ್ದ.

 

ತಂ ವಾಸುದೇವಃ ಪ್ರತಿಗೃಹ್ಯ ಹೇತುಮುಕ್ತ್ವಾ ಸರ್ವಂ ಶಮಯಾಮಾಸ ನೇತಾ ।

ಪಾರ್ತ್ಥಶ್ಚ ಭೂಪಸ್ಯ ಪಪಾತ ಪಾದಯೋಃ  ಕ್ಷಮಾಪಯನ್ ಸೋSಪಿ ಸುಪ್ರೀತಿಮಾಪ ॥೨೭.೧೩೫ ॥

 

ಅವನನ್ನು ವಾಸುದೇವ ಕೃಷ್ಣನು ತಡೆದು, ಘಟನೆಯ ಹಿಂದಿನ ಎಲ್ಲಾ ಕಾರಣಗಳನ್ನು ಅವನಿಗೆ ಹೇಳಿ ಸಮಾಧಾನಗೊಳಿಸಿದ. ಅರ್ಜುನನಾದರೋ, ಕ್ಷಮೆಯನ್ನು ಬೇಡುತ್ತಾ, ಯುಧಿಷ್ಠಿರನ ಪಾದಕ್ಕೆ ಬಿದ್ದ. ಧರ್ಮರಾಜನೂ ಕೂಡಾ ಅವನ ಬಗೆಗೆ ಪ್ರೀತಿಯನ್ನು ಹೊಂದಿದ.

 

ತೌ ಭ್ರಾತರೌ ವಾಸುದೇವಪ್ರಸಾದಾನ್ಮಹಾಪದೋ ಮುಕ್ತಿಮಾಪ್ಯಾತಿಹೃಷ್ಟೌ ।

ಭಕ್ತ್ಯಾ ಸಮಸ್ತಾಧಿಪತಿಂ ಶಶಂಸತುಸ್ತ್ವಯಾ ಸಮಃ ಕೋ ನು ಹರೇ ಹಿತೋ  ನಃ ॥೨೭.೧೩೬ ॥

 

ಹೀಗೆ ಆ ಇಬ್ಬರು ಅಣ್ಣತಮ್ಮಂದಿರು ಪರಮಾತ್ಮನ ಅನುಗ್ರಹದಿಂದ ದೊಡ್ಡ ಆಪತ್ತಿನಿಂದ ಬಿಡುಗಡೆಯನ್ನು ಹೊಂದಿ, ಅತ್ಯಂತ ಸಂತುಷ್ಟರಾಗಿ, ಭಕ್ತಿಯಿಂದ ಎಲ್ಲಕ್ಕೂ ಒಡೆಯನಾಗಿರುವ ಶ್ರೀಕೃಷ್ಣನನ್ನು ಹೊಗಳಿದರು. ಪರಮಾತ್ಮನೇ, ನಿನಗಿಂತ ಹೊರತಾದ, ಹಿತವಾದವರು ನಮಗೆ ಯಾರಿದ್ದಾರೆ? (ಯಾರೊಬ್ಬನೂ ಇಲ್ಲ).

 

ತತಃ ಪ್ರಣಮ್ಯ ಬೀಭತ್ಸುರಗ್ರಜಂ ಪರಿರಮ್ಭಿತಃ ।

ತೇನಾಭಿನನ್ದಿತಃ ಪ್ರೀತ್ಯಾ ಚಾSಶೀರ್ಭಿಃ ಪ್ರಯಯೌ ಯುಧೇ ॥೨೭.೧೩೭ ॥

 

ತದನಂತರ ಅರ್ಜುನನು ಅಣ್ಣನಿಗೆ ನಮಸ್ಕರಿಸಿ, ಆಲಂಗಿತನಾಗಿ, ಅವನಿಂದ ಆಶೀರ್ವಾದದೊಂದಿಗೆ ಅಭಿನಂದನೆಗೊಳಗಾಗಿ, ಯುದ್ಧಕ್ಕೆಂದು ತೆರಳಿದನು.

No comments:

Post a Comment