ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, May 19, 2023

Mahabharata Tatparya Nirnaya Kannada 27-86-93

 

ದ್ರೌಣಿಃ ಕೃಪಶ್ಚಾತ್ರ ತದೈವ ಜಗ್ಮತುಸ್ತದಾ ಭೀಮೋ ದ್ರೌಣಿಕರ್ಣ್ಣೌ ಜಗಾಮ ।

ಯದಾ ಭೀಮೋ ದ್ರೌಣಿಕರ್ಣ್ಣೌ ಜಗಾಮ ಕೃಪೋ ನೃಪಂ ರಥಮಾರೋಪಯಚ್ಚ ॥೨೭.೮೬ ॥

 

ಆಗಲೇ ಅಶ್ವತ್ಥಾಮ ಮತ್ತು  ಕೃಪಾಚಾರ್ಯ ಕೂಡಾ  ದುರ್ಯೋಧನನ ಬಳಿ ತೆರಳಿದರು.  ಭೀಮಸೇನ ಅಶ್ವತ್ಥಾಮ ಮತ್ತು ಕರ್ಣನನ್ನು ಯುದ್ಧದಲ್ಲಿ ಎದುರುಗೊಂಡ. ಆಗ ಕೃಪಾಚಾರ್ಯರು ದುರ್ಯೋಧನನನ್ನು ತನ್ನ ರಥಕ್ಕೇರಿಸಿಕೊಂಡರು.  

 

ನೃಪಂ ಸಮಾದಾಯ ಕೃಪೇSಪಯಾತೇ ಭೀಮಾರ್ದ್ದಿತೌ ದ್ರೌಣಿಕರ್ಣ್ಣೌ ಶರೌಘೈಃ ।

ವಿಹಾಯ ತಂ ಜಗ್ಮತುಃ ಸೋಮಕಾನಾಂ ಚಮೂಂ ಶರೌಘೈರಭಿಪಾತಯನ್ತೌ ॥೨೭.೮೭ ॥

 

ಕೃಪಾಚಾರ್ಯರು ದುರ್ಯೋಧನನನ್ನು ಕರೆದುಕೊಂಡು ಯುದ್ಧಭೂಮಿಯಿಂದ ಹೊರಹೋಗಲು, ಅಶ್ವತ್ಥಾಮ ಮತ್ತು ಕರ್ಣ ಭೀಮಸೇನನ ಬಾಣಗಳಿಂದ ಪೀಡಿತರಾಗಿ, ಭೀಮಸೇನನನ್ನು ಬಿಟ್ಟು ಪಾಂಚಾಲರ ಸೇನೆಯನ್ನು ಬಾಣಗಳಿಂದ ನಾಶಮಾಡುವವರಾಗಿ ತೆರಳಿದರು.

 

ಅಥಾತ್ರ ರಾಜಾನಮಚಕ್ಷಮಾಣೋ ಧನಞ್ಜಯೋ ವಾಸುದೇವಪ್ರಣುನ್ನಃ ।

ಅಭ್ಯಾಯಯೌ ಪಾರ್ಷತಃ ಸ್ವಾಂ ತು ಸೇನಾಂ ಕರ್ಣ್ಣಾಹತಾಂ ವೀಕ್ಷ್ಯ ಕುರೂನಪೀಡಯತ್ ॥೨೭.೮೮ ॥

 

ತದನಂತರ ಯುದ್ಧಭೂಮಿಯಲ್ಲಿ ಧರ್ಮರಾಜ ಕಾಣದೇ ಇದ್ದಾಗ ಕೃಷ್ಣನಿಂದ ಪ್ರೇರಿತನಾದ ಧನಂಜಯನು, ಸಂಶಪ್ತಕರನ್ನು ಬಿಟ್ಟು ಬಂದ. ಇತ್ತ ಧೃಷ್ಟದ್ಯುಮ್ನನು ತನ್ನ ಸೇನೆಯು ಕರ್ಣನಿಂದ ಕೊಲ್ಲಲ್ಪಡುತ್ತಿರುವುದನ್ನು ಕಂಡು, ದುರ್ಯೋಧನಾದಿಗಳ ಸೇನೆಯ ಮೇಲೆ ದಾಳಿಮಾಡಿದ.

 

ನ್ಯವಾರಯತ್ ಸಮಾಯಾನ್ತಂ ಕಪಿಪ್ರವರಕೇತನಮ್ ।

ದ್ರೌಣಿರ್ದ್ದುಃಶಾಸನಶ್ಚೈವ ಧೃಷ್ಟದ್ಯುಮ್ನಮವಾರಯತ್ ॥೨೭.೮೯ ॥

 

ರಾಜನನ್ನು ಹುಡುಕಿಕೊಂಡು, ಸಂಶಪ್ತಕರನ್ನು ಬಿಟ್ಟುಬರುತ್ತಿರುವ ಕಪಿಧ್ವಜ ಅರ್ಜುನನನ್ನು ಅಶ್ವತ್ಥಾಮ ತಡೆದ. ದುಃಶ್ಯಾಸನನು ಧೃಷ್ಟದ್ಯುಮ್ನನನ್ನು ತಡೆದ.

 

ಉಭಾವತಿರಥೌ ತೌ ತು ಶಸ್ತ್ರಾಸ್ತ್ರೈರಭ್ಯವರ್ಷತಾಮ್ ।

ದುಃಶಾಸನಃ ಪಾರ್ಷತಶ್ಚ ಕುರ್ವನ್ತೌ ಬಾಣಜಂ ತಮಃ ॥೨೭.೯೦ ॥

 

ಅತಿರಥರಾದ ದುಃಶಾಸನ ಧೃಷ್ಟದ್ಯುಮ್ನ ಇಬ್ಬರೂ ಪರಸ್ಪರ ಶಸ್ತ್ರಾಸ್ತ್ರಗಳಿಂದ, ಬಾಣಗಳ ಮಳೆಗರೆಯುತ್ತಾ, ಆಗಸವನ್ನು ಕತ್ತಲಾಗಿಸಿ  ಪರಸ್ಪರ ಪೀಡಿಸಿಕೊಂಡರು.

 

ತತ್ರ ದುಃಶಾಸನೇನಾSಜೌ ಸ್ತಮ್ಭಿತೋ ದ್ರುಪದಾತ್ಮಜಃ ।

ಯತಮಾನೋSಪಿ ನಿರ್ಯ್ಯತ್ನಃ ಕೃತೋ ಯುದ್ಧೇ ನಿರಾಯುಧಃ ॥೨೭.೯೧ ॥

 

ಈ ಯುದ್ಧದಲ್ಲಿ ಧೃಷ್ಟದ್ಯುಮ್ನನು ಎಷ್ಟೇ ಪ್ರಯತ್ನಪಟ್ಟರೂ ಕೂಡಾ ಸಫಲನಾಗದೇ, ದುಃಶಾಸನನಿಂದ ನಿರಾಯುಧನಾಗಿ ಸ್ತಮ್ಭಿತನಾದ.

 

ತದಾSಭವದ್ ಯುದ್ಧಮತೀವ ದಾರುಣಂ ದ್ರೌಣೇಸ್ತನೂಜೇನ ತು ವಜ್ರಪಾಣೇಃ ।

ತತ್ರಾಪಿ ಬದ್ಧಃ ಶರಪಞ್ಜರೇಣ ಪಾರ್ತ್ಥೋSಪನುತ್ತಾSಪಿ ಹಿ ಗಾಣ್ಡಿವಜ್ಯಾ ॥೨೭.೯೨ ॥

 

ಅದೇ ಸಂದರ್ಭದಲ್ಲಿ ಅಶ್ವತ್ಥಾಮನಿಗೆ ಇಂದ್ರನ ಮಗನಾಗಿರುವ ಅರ್ಜುನನೊಂದಿಗೆ ಅತ್ಯಂತ ಭಯಂಕರವಾದ ಯುದ್ಧವಾಯಿತು. ಆ ಯುದ್ಧದಲ್ಲಿಯೂ ಕೂಡಾ ಅರ್ಜುನನು ಶರಪಂಜರದಿಂದ ಕಟ್ಟಲ್ಪಟ್ಟ. ಗಾಂಡೀವಬಿಲ್ಲಿನ ದಾರವು ಕತ್ತರಿಸಲ್ಪಟ್ಟಿತು ಕೂಡಾ.

 

ಪಾರ್ತ್ಥೋSಥ ಕೃಷ್ಣೇಧಿತಬಾಹುವೀರ್ಯ್ಯೋ ನಿಹತ್ಯ ಸೂತಂ ಗುರುಪುತ್ರಕಸ್ಯ ।

ಛಿತ್ವಾ ಚ ರಶ್ಮೀಂಸ್ತುರಗಾನಮುಷ್ಯ ವಿದ್ರಾವಯಾಮಾಸ ಶರೈಃ ಸುದೂರಮ್ ॥೨೭.೯೩ ॥

 

ತದನಂತರ ಕೃಷ್ಣನ ಆಲಿಂಗನದಿಂದ ತೋಳ್ಬಲ ವೃದ್ಧಿಸಿಕೊಂಡ ಅರ್ಜುನನು ಅಶ್ವತ್ಥಾಮನ ಸಾರಥಿಯನ್ನು ಕೊಂದು, ಅವನ ಕುದುರೆಗಳ ಲಗಾಮನ್ನು ಕತ್ತರಿಸಿ, ಕುದುರೆಗಳನ್ನು ಬಾಣಗಳಿಂದ ಅತಿ ದೂರಕ್ಕೆ ಓಡಿಸಿಬಿಟ್ಟನು. 

No comments:

Post a Comment