ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 31, 2019

Mahabharata Tatparya Nirnaya Kannada 11.207-11.210


ವ್ಯಾಸಾವತಾರೇ ನಿಹತಸ್ತ್ವಯಾ ಯಃ ಕಲಿಃ ಸುಶಾಸ್ತ್ರೋಕ್ತಿಭಿರೇವ ಚಾದ್ಯ ।
ಶ್ರುತ್ವಾ ತ್ವದುಕ್ತೀಃ ಪುರುಷೇಷು ತಿಷ್ಠನ್ನೀಷಚ್ಚಕಾರೇವ ಮನಸ್ತ್ವಯೀಶ ॥೧೧.೨೦೭      

ಎಲೋ ಶ್ರೀಹರಿಯೇ,  ನಿನ್ನಿಂದ  ವೇದವ್ಯಾಸ ಅವತಾರದಲ್ಲಿ ಒಳ್ಳೆಯ ಶಾಸ್ತ್ರೀಯವಾದ ಮಾತುಗಳಿಂದ ಪುರುಷರ ಮನಸ್ಸಿನೊಳಗಿನ ಯಾವ ಕಲಿಯು ಕೊಲ್ಲಲ್ಪಟ್ಟಿದ್ದನೋ,  ಅವನೂ ಕೂಡಾ ಈಗ ಸತ್ಪುರುಷರಲ್ಲಿದ್ದು, ನಿನ್ನ ಉಕ್ತಿಗಳನ್ನು ಕೇಳಿ, ನಿನ್ನಲ್ಲಿ ಸ್ವಲ್ಪಮಟ್ಟಿಗೆ ಮನಸ್ಸು ಮಾಡಿದ್ದಾನೋ ಎಂಬಂತಿದ್ದಾನೆ.

ರಾಮಾತ್ಮನಾ ಯೇ ನಿಹತಾಶ್ಚ ರಾಕ್ಷಸಾ ದೃಷ್ಟ್ವಾ ಬಲಂ ತೇsಪಿ ತದಾ ತವಾದ್ಯ ।
ಸಮಂ ತವಾನ್ಯಂ ನಹಿ ಚಿನ್ತಯನ್ತಿ ಸುಪಾಪಿನೋsಪೀಶ ತಥಾ ಹನೂಮತಃ ॥೧೧.೨೦೮

ಈಶನೇ, ರಾಮನಾಗಿದ್ದಾಗ ನಿನ್ನಿಂದ ಯಾವ ರಾಕ್ಷಸರು ಕೊಲ್ಲಲ್ಪಟ್ಟಿದ್ದಾರೋ, ಅಂತಹ,  ಆಗ ನಿನ್ನ ಬಲವನ್ನು ಕಂಡ ಅವರೂ ಕೂಡಾ, ಈಗ ನಿನಗೆ ಸದೃಶನು  ಇನ್ನೊಬ್ಬನಿಲ್ಲಾ ಎಂದು ಚಿಂತಿಸುತ್ತಿದ್ದಾರೆ! ಅಷ್ಟೇ ಅಲ್ಲ,  ಅತ್ಯಂತ ಪಾಪಿಷ್ಠರಾಗಿರುವ ಅವರು  ಹನುಮಂತನಿಗೆ ಸಮನಾದ ಮತ್ತೊಬ್ಬನನ್ನು ಚಿಂತನೆ ಮಾಡುತ್ತಿಲ್ಲ.  (ಅಂಧಂತಮಸ್ಸಿಗೆ ಹೋಗಬೇಕಾದ ಈ ಪಾಪಿಷ್ಠರು ಸತ್ಯಜ್ಞಾನದತ್ತ ಹೊರಳುತ್ತಿದ್ದಾರೆ).

ಯೇ ಕೇಶವ ತ್ವದ್ಬಹುಮಾನಯುಕ್ತಾಸ್ತಥೈವ ವಾಯೌ ನಹಿ ತೇ ತಮೋsನ್ಧಮ್ ।
ಯೋಗ್ಯಾಃ ಪ್ರವೇಷ್ಟುಂ ತದತೋ ಹಿ ಮಾರ್ಗ್ಗಾರ್ಚ್ಚಾಲ್ಯಾಸ್ತ್ವಯಾ ಜನಯಿತ್ವೈವ ಭೂಮೌ ॥೧೧.೨೦೯     

ಓ ಕೇಶವನೇ, ನಿನ್ನಲ್ಲಿ ಮಹತ್ತ್ವಬುದ್ಧಿಯಿಂದೊಡಗೂಡಿದವರು ಹಾಗೂ ವಾಯುವಿನಲ್ಲಿಯೂ ಕೂಡಾ ಗೌರವ ಭಕ್ತಿಯಿಂದ  ಕೂಡಿರುವರು ಅಂಧಂತಮಸ್ಸನ್ನು ಪ್ರವೇಶಿಸಲು ಯೋಗ್ಯರಲ್ಲ. ಆ ಕಾರಣದಿಂದ ಈ ದೈತ್ಯರು, ನಿನ್ನಿಂದ ಭೂಮಿಯಲ್ಲಿ ಹುಟ್ಟಿಯೇ  ಒಳ್ಳೆಯ ಮಾರ್ಗದಿಂದ ಚ್ಯುತಿಗೊಳಿಸಬೇಕಾದವರಾಗಿದ್ದಾರೆ.

ನಿತಾನ್ತಮುತ್ಪಾದ್ಯ ಭವದ್ವಿರೋಧಂ ತಥಾ ಚ ವಾಯೌ ಬಹುಭಿಃ ಪ್ರಕಾರೈಃ ।
ಸರ್ವೇಷು ದೇವೇಷು ಚ ಪಾತನೀಯಾಸ್ತಮಸ್ಯಥಾನ್ಧೇ ಕಲಿಪೂರ್ವಕಾಸುರಾಃ ॥೧೧.೨೧೦

ನಿನ್ನ ವಿರೋಧವನ್ನು, ಹಾಗೆಯೇ ವಾಯುವಿನಲ್ಲಿ ಮತ್ತು ಎಲ್ಲಾ ದೇವತೆಗಳಲ್ಲಿ ವಿರೋಧವನ್ನು ಬಹಳ ಪ್ರಕಾರಗಳಿಂದ ಹುಟ್ಟಿಸಿ ,  ಅದರಿಂದ ಪಾಪಿಷ್ಠರಾದ ಕಲಿ ಮೊದಲಾದ ಅಸುರರು ಅಂಧಂತಮಸ್ಸಿನಲ್ಲಿ ಬೀಳಿಸಲ್ಪಡುವಂತಾಗಬೇಕು.

Wednesday, January 30, 2019

Mahabharata Tatparya Nirnaya Kannada 11.202-11.206


ಜಿತ್ವಾ ಜಲೇಶಂ ಚ ಹೃತಾನಿ ಯೇನ ರತ್ನಾನಿ ಯಕ್ಷಾಶ್ಚ ಜಿತಾಃ ಶಿವಸ್ಯ।
ಕನ್ಯಾವನಾರ್ತ್ಥಂ ಮಗಧಾಧಿಪೇನ ಪ್ರಯೋಜಿತಾಸ್ತೇ ಚ ಹೃತೇ ಬಲೇನ ॥ ೧೧.೨೦೨       

ವರುಣನನ್ನು ಗೆದ್ದ ಈ ಕಂಸನಿಂದ ಸಮುದ್ರದಲ್ಲಿರುವ ರತ್ನಗಳೆಲ್ಲವೂ  ಅಪಹರಿಸಲ್ಪಟ್ಟಿತು. ಜರಾಸಂಧನಿಂದ ತನ್ನಿಬ್ಬರ ಹೆಣ್ಣುಮಕ್ಕಳ(ಅಸ್ತಿ ಮತ್ತು ಪ್ರಾಸ್ತಿ)  ರಕ್ಷಣೆಗಾಗಿ  ನೇಮಿಸಲ್ಪಟ್ಟ ಶಿವನ ಯಕ್ಷರನ್ನು ಗೆದ್ದ ಕಂಸ, ಆ ಇಬ್ಬರು ಹೆಣ್ಣುಮಕ್ಕಳನ್ನೂ  ಕೂಡಾ ಬಲಾತ್ಕಾರದಿಂದ ಅಪಹರಿಸಿದ.

ಸ ವಿಪ್ರಚಿತ್ತಿಶ್ಚ ಜರಾಸುತೋsಭೂದ್ ವರಾದ್ ವಿಧಾತುರ್ಗ್ಗಿರಿಶಸ್ಯ ಚೈವ
ಸರ್ವೈರಜೇಯೋ ಬಲಮುತ್ತಮಂ ತತೋ ಜ್ಞಾತ್ವೈವ ಕಂಸಸ್ಯ ಮುದಾ ಸುತೇ ದದೌ ॥೧೧.೨೦೩     

ನಿವಾರಯಾಮಾಸ ನ ಕಂಸಮುದ್ಧತಂ ಶಕ್ತೋsಪಿ ಯೋ ಯಸ್ಯ ಬಲೇ ನ ಕಶ್ಚಿತ್ ।
ತುಲ್ಯಃ ಪೃಥಿವ್ಯಾಂ ವಿವರೇಷು ವಾ ಕ್ವಚಿದ್  ವಶೇ ಬಲಾದ್ ಯೋ ನೃಪತೀಂಶ್ಚ ಚಕ್ರೇ ॥೧೧.೨೦೪

ಯಾವ ವಿಪ್ರಚಿತ್ತಿಯು ಹಿಂದೆ  ಮುಖ್ಯಪ್ರಾಣನಿಂದ ಕೊಲ್ಲಲ್ಪಟ್ಟಿದ್ದನೋ, ಅವನೇ ಜರಾಸಂಧನಾಗಿ ಹುಟ್ಟಿ ಬ್ರಹ್ಮ-ರುದ್ರರ ವರಬಲದಿಂದ ಅಜೇಯನಾಗಿದ್ದಾನೆ. ಜರಾಸಂಧ ಕಂಸನ ಉತ್ಕೃಷ್ಟವಾದ ಬಲವನ್ನು ತಿಳಿದೇ ಅವನಿಗೆ  ಅತ್ಯಂತ ಸಂತಸದಿಂದ ತನ್ನ ಮಗಳಿಂದರನ್ನು ಕೊಟ್ಟನು. (ಕಂಸನಿಂದ ಅಪಹೃತರಾದ ತನ್ನ ಮಗಳಿಂದರನ್ನು ಜರಾಸಂಧ ಸಂತೋಷದಿಂದಲೇ ಅವನಿಗೇ ಮದುವೆ ಮಾಡಿಸಿಕೊಟ್ಟ).
ಜರಾಸಂಧನು ಶಕ್ತನಾದರೂ ಕೂಡಾ, ದೃಪ್ತನಾದ ಕಂಸನನ್ನು ತಡೆಯಲಿಲ್ಲ. (ಜರಾಸಂಧನ ಬಲಕ್ಕೆ ಹೋಲಿಸಿದರೆ ಕಂಸ ಏನೂ ಅಲ್ಲ. ಆದರೆ  ಸ್ವಾಭಾವಿಕವಾದ ಪ್ರೀತಿಯಿಂದ ತನ್ನ ಮಗಳಿಂದರನ್ನು ಆತ ಕಂಸನಿಗೆ ಕೊಟ್ಟ).  ಎಲ್ಲಾ ರಾಜರನ್ನೂ ಕೂಡಾ ಬಲಾತ್ಕಾರದಿಂದ ವಶಮಾಡಿಕೊಂಡಿರುವ ಜರಾಸಂಧನ ಬಲಕ್ಕೆ ತುಲ್ಯನಾದವನು ಭೂಮಿಯ ಯಾವ ಮೂಲೆಯಲ್ಲೂ ಇನ್ನೊಬ್ಬನಿಲ್ಲ.

ಹತೌ ಪುರಾ ಯೌ ಮಧುಕೈಟಭಾಖ್ಯೌ ತ್ವಯೈವ ಹಂಸೋ ಡಿಭಕಶ್ಚ ಜಾತೌ ।
ವರಾದಜೈಯೌ ಗಿರಿಶಸ್ಯ ವೀರೌ ಭಕ್ತೌ ಜರಾಸನ್ಧಮನು ಸ್ಮ ತೌ ಶಿವೇ ॥೧೧.೨೦೫

ಹಿಂದೆ ನಿನ್ನಿಂದಲೇ ಕೊಲ್ಲಲ್ಪಟ್ಟ  ಮಧು ಮತ್ತು ಕೈಟಭಾ ಎನ್ನುವ ಹೆಸರಿನ ದೈತ್ಯರು ಇದೀಗ ಹಂಸ ಮತ್ತು ಡಿಭಕ ಎನ್ನುವ ಹೆಸರಿನಿಂದ  ಹುಟ್ಟಿದ್ದಾರೆ. ರುದ್ರನ ವರದಿಂದ ಅವಧ್ಯರಾಗಿರುವ , ಅಜೇಯರಾಗಿರುವ ಇವರು  ಜರಾಸಂಧನನ್ನು ಅನುಸರಿಸುತ್ತಾ ಶಿವನಲ್ಲಿ ಭಕ್ತರಾಗಿದ್ದಾರೆ.

ಅನ್ಯೇsಪಿ ಭೂಮಾವಸುರಾಃ ಪ್ರಜಾತಾಸ್ತ್ವಯಾ ಹತಾ ಯೇ ಸುರದೈತ್ಯಸಙ್ಗರೇ ।
ಅನ್ಯೇ ತಥೈವಾನ್ಧತಮಃ ಪ್ರಪೇದಿರೇ ಕಾರ್ಯ್ಯಾ ತಥೈಷಾಂ ಚ ತಮೋಗತಿಸ್ತ್ವಯಾ ॥೧೧.೨೦೬      

ಇತರ ಯಾವ  ಅಸುರರು ಹಿಂದೆ  ನಿನ್ನಿಂದ  ದೇವತೆಗಳು ಮತ್ತು ದೈತ್ಯರ ಸಂಗ್ರಾಮದಲ್ಲಿ ಕೋಲ್ಲಲ್ಪಟ್ಟಿದ್ದರೋ, ಅವರಲ್ಲಿ ಕೆಲವರು ಅಂಧಂತಮಸ್ಸನ್ನು ಹೊಂದಿದ್ದಾರೆ. ಉಳಿದ ಹಲವರು ಇದೀಗ ಭೂಮಿಯಲ್ಲಿ ಹುಟ್ಟಿದ್ದಾರೆ. ಹೀಗೆ ಹುಟ್ಟಿರುವ ಇವರೆಲ್ಲರ ತಮಪ್ರಾಪ್ತಿಯು ನಿನ್ನಿಂದ ಮಾಡಲ್ಪಡಬೇಕು.

Tuesday, January 29, 2019

Mahabharata Tatparya Nirnaya Kannada 11.199-11.201


ಯ ಉಗ್ರಸೇನಃ ಸುರಗಾಯಕಃ ಸ ಜಾತೋ ಯದುಷ್ವೇಷ ತಥಾಭಿಧೇಯಃ ।
ತವೈವ ಸೇವಾರ್ತ್ಥಮಮುಷ್ಯ ಪುತ್ರೋ ಜಾತೋsಸುರಃ ಕಾಲನೇಮಿಃ ಸ ಈಶ ॥೧೧.೧೯೯    

ಉಗ್ರಸೇನನೆಂಬ ದೇವತೆಗಳ ಹಾಡುಗಾರ ಯಾರಿದ್ದಾನೋ, ಅವನು ನಿನ್ನ ಸೇವೆಗಾಗಿ ಯಾದವರಲ್ಲಿ ಅದೇ ಹೆಸರುಳ್ಳವನಾಗಿ (ಉಗ್ರಸೇನ ಎಂಬ ಹೆಸರುಳ್ಳವನಾಗಿ) ಹುಟ್ಟಿದ್ದಾನೆ. ಎಲೋ ಈಶನೇ,  ಈ ಉಗ್ರಸೇನನ  ಮಗನಾಗಿ ಕಾಲನೇಮಿ ಅಸುರ ಹುಟ್ಟಿದ್ದಾನೆ.

ಯಸ್ತ್ವತ್ಪ್ರಿಯಾರ್ತ್ಥಂ ನ ಹತೋ ಹಿ ವಾಯುನಾ ಭವತ್ಪ್ರಸಾದಾತ್ ಪರಮೀಶಿತಾsಪಿ ।
ಸ ಏಷ ಭೋಜೇಷು ಪುನಶ್ಚ ಜಾತೋ ವರಾದುಮೇಶಸ್ಯ ಪರೈರಜೇಯಃ ॥೧೧.೨೦೦

ನಿನ್ನ ಅನುಗ್ರಹದಿಂದ ಅತ್ಯಂತ ಸಮರ್ಥನಾಗಿರುವ ಮುಖ್ಯಪ್ರಾಣ,  ನಿನ್ನ ಪ್ರೀತಿಗಾಗಿ ಯಾರನ್ನು ಹಿಂದೆ ಕೊಲ್ಲಲಿಲ್ಲವೋ,  ಅಂತಹ ಆ ಕಾಲನೇಮಿ, ಇದೀಗ  ಭೋಜರಲ್ಲಿ(ಯಾದವರಲ್ಲಿ) ಹುಟ್ಟಿದ್ದಾನೆ. ರುದ್ರನ ವರದಿಂದ ಆತ ಬೇರೊಬ್ಬರಿಂದ ಜಯಿಸಲಸಾಧ್ಯನಾಗಿ (ಅಜೇಯನಾಗಿ) ಉಳಿದಿದ್ದಾನೆ.

[ಮಹಾಭಾರತದ ಆದಿಪರ್ವದಲ್ಲಿ(೬೮.೬೭) ಈ ಪ್ರಮೇಯವನ್ನು ‘ಕಾಲನೇಮಿರಿತಿ ಖ್ಯಾತೋ ದಾನವಾನಾಂ ಮಹಾಬಲಃ ಸ ಕಂಸ ಇತಿ ವಿಖ್ಯಾತ ಉಗ್ರಸೇನಸುತೋ ಬಲೀ’ ಎಂದು ಸ್ಪಷ್ಟವಾಗಿ ಹೇಳಿರುವುದನ್ನು ಕಾಣುತ್ತೇವೆ. ಅದೇ ರೀತಿ ಬ್ರಹ್ಮಪುರಾಣದಲ್ಲೂ(೧೮೧.೧) ಕೂಡಾ ಈ ವಿವರ ಕಾಣಸಿಗುತ್ತದೆ: ‘ಕಾಲನೇಮಿರ್ಹತೋ ಯೋsಸೌ ವಿಷ್ಣುನಾ ಪ್ರಭವಿಷ್ಣುನಾ  ಉಗ್ರಸೇನಸುತಃ ಕಂಸಃ  ಸಂಭೂತಃ ಸ ಮಹಾಸುರಃ’.

ಆದರೆ ಮಹಾಭಾರತದ ಆದಿಪರ್ವದಲ್ಲಿ(೬೮.೧೨-೧೩) ಉಗ್ರಸೇನನ ಕುರಿತು ‘ಸ್ವರ್ಭಾನುರಿತಿ ವಿಖ್ಯಾತಃ ಶ್ರೀಮಾನ್ ಯಸ್ತು ಮಹಾಸುರಃ  ಉಗ್ರಸೇನ ಇತಿ ಖ್ಯಾತಃ’ ಎಂದು ಹೇಳಿದ್ದಾರೆ.  ಇಲ್ಲಿ ‘ಸ್ವರ್ಭಾನು’ ಎನ್ನುವ ದೈತ್ಯ ಉಗ್ರಸೇನ ಎಂದು ಖ್ಯಾತನಾಗಿದ್ದಾನೆ ಎಂದು ಹೇಳಲಾಗಿದೆ. ಇದು ಮೇಲಿನ ವಿವರಣೆಗೆ ವಿರುದ್ಧವಲ್ಲವೇ? ಅಲ್ಲ! ಏಕೆಂದರೆ  ಇಲ್ಲಿ ಹೇಳಿರುವುದು ಅಸುರ ಆವೇಶವನ್ನು. ಅಂದರೆ: ಉಗ್ರಸೇನನಲ್ಲಿ ‘ಸ್ವರ್ಭಾನು’ ಎನ್ನುವ ಅಸುರನ ಆವೇಶವಿತ್ತು ಎನ್ನುವುದಷ್ಟೇ ಈ ಮಾತಿನ ತಾತ್ಪರ್ಯ. ಅಸುರಾವೇಶದಿಂದಲೇ ಉಗ್ರಸೇನನಿಗೆ ಕಂಸನನ್ನು ಪಾಲನೆ ಮಾಡಬೇಕು ಎನ್ನುವ ಅಭಿಲಾಷೆ ಬಂದಿರುವುದು. ಅಷ್ಟೇ ಅಲ್ಲ, ‘ಸ್ಯಮಂತಕ ಮಣಿ ನನಗೇ ಬೇಕು’ ಎಂಬಿತ್ಯಾದಿ  ಶ್ರೀಕೃಷ್ಣನ ವಿರುದ್ಧ ನಡೆಯನ್ನು ಆತ ತೋರಿರುವುದೂ ಅಸುರ ಆವೇಶದಿಂದಲೇ.]

ಸ ಔಗ್ರಸೇನೇ ಜನಿತೋsಸುರೇಣ ಕ್ಷೇತ್ರೇ ಹಿ ತದ್ರೂಪಧರೇಣ ಮಾಯಯಾ
ಗನ್ಧರ್ವಿಜೇನ ದ್ರಮಿಳೇನ ನಾಮ್ನಾ ಕಂಸೋ ಜಿತೋ ಯೇನ ವರಾಚ್ಛಚೀಪತಿಃ ೧೧.೨೦೧

ಉಗ್ರಸೇನನ ಹೆಂಡತಿಯಲ್ಲಿ,  ಕಪಟ ವಿದ್ಯೆಯಿಂದ ಉಗ್ರಸೇನನ ವೇಷವನ್ನು ಧರಿಸಿದ್ದ, ಗಂಧರ್ವಿಯಲ್ಲಿ ಹುಟ್ಟಿರುವ, ದ್ರಮಿಳನೆಂಬ ಅಸುರನಿಂದ ಹುಟ್ಟಿದ  ‘ಕಂಸ’, ರುದ್ರನ ವರಬಲದಿಂದ ಶಚೀಪತಿಯನ್ನೂ ಗೆದ್ದಿದ್ದಾನೆ. 
[ಒಮ್ಮೆ ಉಗ್ರಸೇನನ ಪತ್ನಿ ತವರು ಮನೆಗೆ ಹೋಗಿದ್ದ ಸಮಯದಲ್ಲಿ, ಗಂಧರ್ವಿಯಲ್ಲಿ ಹುಟ್ಟಿರುವ ದ್ರಮಿಳನೆನ್ನುವ ದೈತ್ಯನ ಕಣ್ಣಿಗೆ ಬೀಳುತ್ತಾಳೆ. ಆಕೆಯ ಸೌಂದರ್ಯವನ್ನು ಕಂಡ ಅಸುರ, ಉಗ್ರಸೇನನ ವೇಷವನ್ನು ಧರಿಸಿ, ಕಪಟವಾಗಿ ಬಂದು ಅವಳನ್ನು ಸೇರುತ್ತಾನೆ. ಈ ರೀತಿ  ಉಗ್ರಸೇನನ ಪತ್ನಿಯಲ್ಲಿ ದ್ರಮಿಳನಿಂದ ಕಾಲನೇಮಿಯು ಕಂಸ ಎನ್ನುವ ಹೆಸರಿನಿಂದ ಹುಟ್ಟುತ್ತಾನೆ].

Monday, January 28, 2019

Mahabharata Tatparya Nirnaya Kannada 11.195-11.198


ತತೋsಸುರಾಸ್ತೇ ನಿಹತಾ ಅಶೇಷಾಸ್ತ್ವಯಾ ತ್ರಿಭಾಗಾ ನಿಹತಾಶ್ಚತುರ್ತ್ಥಮ್ ।
ಜಘಾನ ವಾಯುಃ ಪುನರೇವ ಜಾತಾಸ್ತೇ ಭೂತಳೇ ಧರ್ಮ್ಮಬಲೋಪಪನ್ನಾಃ ॥೧೧.೧೯೫     

ಕಾಲನೇಮಿಯ ಸಂಹಾರದ ನಂತರ,  ಆ ಅಸುರರ ಮುಕ್ಕಾಲು ಭಾಗವನ್ನು ನೀನು ಸಂಹಾರ ಮಾಡಿದರೆ, ಉಳಿದ ಒಂದು ಭಾಗ ಮುಖ್ಯಪ್ರಾಣನಿಂದ ಸಂಹರಿಸಲ್ಪಟ್ಟಿತು. ಆ ಅಸುರರೇ ಪಾರಂಪರಿಕವಾದ ಧರ್ಮಬಲವುಳ್ಳವರಾಗಿ ಮತ್ತೆ ಭೂಮಿಯಲ್ಲಿ ಹುಟ್ಟಿದ್ದಾರೆ.  

ರಾಜ್ಞಾಂ ಮಹಾವಂಶಸುಜನ್ಮನಾಂ ತು ತೇಷಾಮಭೂದ್ ಧರ್ಮ್ಮಮತಿರ್ವಿಪಾಪಾ ।
ಶಿಕ್ಷಾಮವಾಪ್ಯ ದ್ವಿಜಪುಙ್ಗವಾನಾಂ ತ್ವದ್ಭಕ್ತಿರಪ್ಯೇಷು ಹಿ ಕಾಚನ ಸ್ಯಾತ್ ॥೧೧.೧೯೬

ಇದೀಗ ಭಾಗವತರಾದ  ದೊಡ್ಡ-ದೊಡ್ಡ ರಾಜವಂಶದಲ್ಲಿ ಹುಟ್ಟಿರುವ ಆ ದೈತ್ಯರಿಗೆ, ಧರ್ಮದಲ್ಲಿ ಬುದ್ಧಿಯು ಉಂಟಾಗಿದೆ. (ಪಾಪರಹಿತವಾದ ಧಾರ್ಮಿಕ ಪ್ರಜ್ಞೆ ಅವರಲ್ಲಿ ಬೆಳೆಯುವಂತಾಗಿದೆ). ಶ್ರೇಷ್ಠ ಬ್ರಾಹ್ಮಣರಿಂದ ಶಿಕ್ಷಣವನ್ನು ಹೊಂದಿದ ಅವರಲ್ಲಿ ಎಲ್ಲೋ ಒಂದು ಸಣ್ಣಅಂಶದಲ್ಲಿ ನಿನ್ನ ಭಕ್ತಿಯೂ ಉಂಟಾಗಿರಬಹುದು.

ತ್ವದ್ಭಕ್ತಿಲೇಶಾಭಿಯುತಃ ಸುಕರ್ಮ್ಮಾ ವ್ರಜೇನ್ನ ಪಾಪಾಂ ತು ಗತಿಂ ಕಥಞ್ಚಿತ್ ।
ದೈತ್ಯೇಶ್ವರಾಣಾಂ ಚ ತಮೋsನ್ಧಮೇವ ತ್ವಯೈವ ಕ್ಲೃಪ್ತಂ ನನು ಸತ್ಯಕಾಮ ॥೧೧.೧೯೭  

ನಿನ್ನ ಭಕ್ತಿಲೇಶವನ್ನು ಹೊಂದಿ ಸತ್ಕರ್ಮವನ್ನು ಮಾಡಿದವನು ಪಾಪಿಷ್ಠವಾದ ನರಕಾದಿ ಗತಿಯನ್ನು ಯಾವ ರೀತಿಯಲ್ಲಿಯೂ ಕೂಡಾ ಹೊಂದಲಾರ. ಎಲೋ ಸತ್ಯಕಾಮನೇ,  ಸತ್ಯಸಂಕಲ್ಪನೇ,  ದೈತ್ಯೇಯೇಶ್ವರರಿಗೆ ಅಂಧಂತಮಸ್ಸು ನಿನ್ನಿಂದಲೇ ನಿರ್ಧರಿಸಲ್ಪಟ್ಟಿದೆಯಲ್ಲವೇ.

ಧರ್ಮಸ್ಯ ಮಿತ್ಥ್ಯಾತ್ವಭಯಾದ್ ವಯಂ ತ್ವಾಮಥಾಪಿವಾ ದೈತ್ಯಶುಭಾಪ್ತಿಭೀಷಾ
ಸಮ್ಪ್ರಾರ್ತ್ಥಯಾಮೋ ದಿತಿಜಾನ್ ಸುಕರ್ಮ್ಮಣಸ್ತ್ವದ್ಭಕ್ತಿತಶ್ಚ್ಯಾವಯಿತುಂ ಚ ಶೀಘ್ರಮ್ ॥೧೧.೧೯೮

ಧರ್ಮ  ಸುಳ್ಳಾದೀತು (ಅಂದರೆ: ದೈತ್ಯರ  ಸ್ವಭಾವಕ್ಕೆ ಯೋಗ್ಯವಾದ ಗತಿ ಅಂಧಂತಮಸ್ಸು. ಆದರೆ ಇದೀಗ ರಾಜವಂಶದಲ್ಲಿ ಹುಟ್ಟಿದ ಅವರು ಮಾಡುತ್ತಿರುವ ಕೆಲಸ ಅಂಧಂತಮಸ್ಸಿಗೆ ಅವಕಾಶ ನೀಡುವುದಿಲ್ಲ. ಅಯೋಗ್ಯರಾದ ಅವರು ಭಕ್ತಿ ಮಾಡಿದರೂ ಸದ್ಗತಿಯನ್ನು ಪಡೆಯಲಾರರು ಎಂದರೆ ವೇದವಾಕ್ಯ ಸುಳ್ಳಾಗುತ್ತದೆ. ಏಕೆಂದರೆ ಯಾರು ನಿನ್ನನ್ನು ಭಜಿಸುತ್ತಾನೋ ಅವನು ಅಂಧಂತಮಸ್ಸನ್ನು ಹೊಂದುವುದಿಲ್ಲ ಎನ್ನುವುದು ವೇದವಾಕ್ಯ), ಧರ್ಮದ ಪ್ರಾಮಾಣ್ಯಕ್ಕಾಗಿ ಅವರಿಗೆ ಒಳ್ಳೆ ಗತಿಯನ್ನು ಕೊಡುತ್ತೇನೆ ಎಂದರೆ: ದೈತ್ಯರಿಗೆ ಅಯೋಗ್ಯವಾಗಿರುವ ಶುಭಗತಿಯು ಬರುತ್ತದೆ. ಈ ದ್ವಂದ್ವದ ಭಯದಿಂದ ತತ್ತರಿಸಿ [೧. ಧರ್ಮಸ್ಯ ಮಿಥ್ಯಾತ್ವಭಯಾದ್, ೨. ದೈತ್ಯಶುಭಾಪ್ತಿಭೀಷಾ ಈ ಎರಡು ಭಯಗಳಿಂದ ತತ್ತರಿಸಿ ]. ‘ದೈತ್ಯರನ್ನು ಸುಕರ್ಮದಿಂದ, ನಿನ್ನ ಭಕ್ತಿಯಿಂದಲೂ ಕೂಡಾ ಚ್ಯುತಿಗೊಳಿಸಲು, ಅವರನ್ನು ಜಾರುವಂತೆ ಮಾಡಲು ನಿನ್ನನ್ನು ಬೇಡುತ್ತಿದ್ದೇವೆ. 

Friday, January 18, 2019

Mahabharata Tatparya Nirnaya Kannada 11.189-11.194


ತಸ್ಮಿನ್ ಹತೇ ದಾನವಲೋಕಪಾಲೇ ದಿತೇಃ ಸುತಾ ದುದ್ರುವುರಿನ್ದ್ರಭೀಷಿತಾಃ ।
ತಾನ್ ವಿಪ್ರಚಿತ್ತಿರ್ವಿನಿವಾರ್ಯ್ಯ ಧನ್ವೀ ಸಸಾರ ಶಕ್ರಪ್ರಮುಖಾನ್ ಸುರೋತ್ತಮಾನ್ ೧೧.೧೮೯    

ತಮ್ಮ ಲೋಕವನ್ನು ಪಾಲನೆ ಮಾಡುತ್ತಿದ್ದ, ಒಡೆಯನಾದ ಶಂಬರನು ಇಂದ್ರನಿಂದ ಸಾಯುತ್ತಿರಲು ದೈತ್ಯರು ಭಯಗೊಂಡು ಓಡಲು ಪ್ರಾರಂಭಿಸಿದರು. ಓಡುತ್ತಿರುವ ಅವರನ್ನು ‘ವಿಪ್ರಚಿತ್ತಿ’ ಎಂಬ ಅಸುರನು ತಡೆದನು. ಬಿಲ್ಲನ್ನು ಹಿಡಿದ ವಿಪ್ರಚಿತ್ತಿ, ಇಂದ್ರನೇ ಮೊದಲಾಗಿರುವ ದೇವತೆಗಳನ್ನು ಎದುರುಗೊಂಡನು.

ವರಾದಜೇಯೇನ ವಿಧಾತುರೇವ ಸುರೋತ್ತಮಾಂಸ್ತೇನ ಶರೈರ್ನ್ನಿಪಾತಿತಾನ್ ।
ನಿರೀಕ್ಷ್ಯ ಶಕ್ರಂ ಚ ವಿಮೋಹಿತಂ ದ್ರುತಂ ನ್ಯವಾರಯತ್ ತಂ ಪವನಃ ಶರೌಘೈಃ ॥೧೧.೧೯೦    

ಬ್ರಹ್ಮದೇವರ ವರದಿಂದ  ಅಜೇಯನಾಗಿದ್ದ ವಿಪ್ರಚಿತ್ತಿಯ ಬಾಣಗಳಿಂದ ಕೆಳಗೆ ಬಿದ್ದ ದೇವತೆಗಳನ್ನು ಮತ್ತು ಮೂರ್ಛೆಗೊಂಡ ಇಂದ್ರನನ್ನು ನೋಡಿದ ಮುಖ್ಯಪ್ರಾಣನು, ತಕ್ಷಣ ತನ್ನ ಬಾಣಗಳಿಂದ ವಿಪ್ರಚಿತ್ತಿಯನ್ನು ತಡೆದನು.

ಅಸ್ತ್ರಾಣಿ ತಸ್ಯಾಸ್ತ್ರವರೈರ್ನ್ನಿವಾರ್ಯ್ಯ ಚಿಕ್ಷೇಪ ತಸ್ಯೋರಸಿ ಕಾಞ್ಚನೀಮ್ ಗದಾಮ್ ।
ವಿಚೂರ್ಣ್ಣಿತೋsಸೌ ನಿಪಪಾತ ಮೇರೌ ಮಹಾಬಲೋ ವಾಯುಬಲಾಭಿನುನ್ನಃ ೧೧.೧೯೧  

ಪವನನು ವಿಪ್ರಚಿತ್ತಿಯ ಅಸ್ತ್ರಗಳನ್ನು ತನ್ನ ಅಸ್ತ್ರಗಳಿಂದ ತಡೆದು, ವಿಪ್ರಚಿತ್ತಿಯ ಎದೆಯಮೇಲೆ ಬಂಗಾರದ ಗದೆಯನ್ನು ಎಸೆದನು. ಹೀಗೆ ಮುಖ್ಯಪ್ರಾಣನ ಬಲದಿಂದ ಪ್ರೇರಿಸಿಕೊಳ್ಳಲ್ಲಪಟ್ಟ   ವಿಪ್ರಚಿತ್ತಿಯು ಮೇರುಪರ್ವತದ ಮೇಲೆ  ಬಿದ್ದು ಪುಡಿಪುಡಿಯಾಗಿ ಸತ್ತನು.

ಅಥಾsಸಸಾದಾsಶು ಸ ಕಾಲನೇಮೀಸ್ತ್ವದಾಜ್ಞಯಾ ಯಸ್ಯ ವರಂ ದದೌ ಪುರಾ ।
ಸರ್ವೈರಜೇಯತ್ವಮಜೋsಸುರಃ ಸ ಸಹಸ್ರಶೀರ್ಷೋ ದ್ವಿಸಹಸ್ರಬಾಹುಯುಕ್ ॥೧೧.೧೯೨  

ವಿಪ್ರಚಿತ್ತಿ ಸತ್ತಮೇಲೆ, ಬ್ರಹ್ಮನು ಯಾವ ಕಾಲನೇಮಿಗೆ ನಿನ್ನ ಆಜ್ಞೆಯಂತೆ ಅಜೇಯತ್ವದ ವರವನ್ನು ಕೊಟ್ಟಿದ್ದನೋ, ಅಂತಹ ಸಾವಿರ ತಲೆಗಳು ಮತ್ತು ಎರಡು ಸಾವಿರ ಬಾಹುಗಳುಳ್ಳ  ಕಾಲನೇಮಿ ಯುದ್ಧಕ್ಕೆ ಬಂದನು.
 [ಮಹಾಭಾರತದ ಸಭಾಪರ್ವದಲ್ಲಿ(೫೧.೨೧) ಈ ವಿವರ ಕಾಣಸಿಗುತ್ತದೆ: ‘ಕಾಲನೇಮಿರಿತಿ ಖ್ಯಾತೋ ದಾನವಃ ಪ್ರತ್ಯದೃಶ್ಯತಾ॥ ಶತ್ರುಪ್ರಹರಣೇ ಘೋರಃ ಶತಬಾಹುಃ ಶತಾನನಃ’. ಹರಿವಂಶದಲ್ಲೂ(೧.೪೬.೫೦) ಕೂಡಾ ಈ ವಿವರ ಬರುತ್ತದೆ: ಶತಪ್ರಹರಣೋದಗ್ರಃ ಶತಬಾಹುಃ ಶತಾನನಃ ಶತಶೀರ್ಷಃ ಸ್ಥಿತಃ ಶ್ರೀಮಾನ್ ಶತಶೃಙ್ಗ ಇವಾಚಲಃ’].

ತಮಾಪತನ್ತನಂ ಪ್ರಸಮೀಕ್ಷ್ಯ ಮಾರುತಸ್ತ್ವದಾಜ್ಞಯಾ ದತ್ತವರಸ್ತ್ವಯೈವ ।
ಹನ್ತವ್ಯ ಇತ್ಯಸ್ಮರದಾಶು ಹಿ ತ್ವಾಂ ತದಾssವಿರಾಸೀಸ್ತ್ವಮನನ್ತಪೌರುಷಃ ॥೧೧.೧೯೩

ಯುದ್ಧಭೂಮಿಗೆ ಬರುತ್ತಿರುವ ಕಾಲನೇಮಿಯನ್ನು ಕಂಡ  ಮಾರುತನು,  ‘ನಿನ್ನ ಆಜ್ಞೆಯಂತೆ ವರವನ್ನು ಪಡೆದಿರುವ ಈತ ನಿನ್ನಿಂದಲೇ ಕೊಲ್ಲಲು ಯೋಗ್ಯನಾದವನು’ ಎನ್ನುವ  ಅಭಿಪ್ರಾಯವುಳ್ಳವನಾಗಿ ನಿನ್ನನ್ನು ಸ್ಮರಿಸಿದ. [ನಿನ್ನ ಸಂಕಲ್ಪ ಕಾಲನೇಮಿಯನ್ನು ನೀನೇ ಕೊಲ್ಲಬೇಕು ಎಂದಿತ್ತು. ಅದನ್ನು ಮುಖ್ಯಪ್ರಾಣ ಸ್ಮರಣೆ ಮಾಡಿ, ನಿನ್ನನ್ನು ಸ್ಮರಿಸಿದ. (ಮುಖ್ಯಪ್ರಾಣನ ಸಂಕಲ್ಪ ಎಂದೂ ಶ್ರೀಹರಿಗೆ ವಿರುದ್ಧವಾಗಿರುವುದಿಲ್ಲ. ಭಗವಂತನ ಸಂಕಲ್ಪವನ್ನು ತಿಳಿದಿದ್ದ ಮುಖ್ಯಪ್ರಾಣ ತಕ್ಷಣ ಆತನನ್ನು ಸ್ಮರಿಸಿದ)] ಆಗ ನೀನು ಅನಂತಪರಾಕ್ರಮವುಳ್ಳವನಾಗಿ ಆವೀರ್ಭೂತನಾದೆ.

ತಮಸ್ತ್ರಶಸ್ತ್ರಾಣಿ ಬಹೂನಿ ಬಾಹುಭಿಃ ಪ್ರವರ್ಷಮಾಣಂ ಭುವನಾಪ್ತದೇಹಮ್
ಚಕ್ರೇಣ ಬಾಹೂನ್ ವಿನಿಕೃತ್ಯ ಕಾನಿ ಚ ನ್ಯವೇದಯಶ್ಚಾsಶು ಯಮಾಯ ಪಾಪಮ್ ॥೧೧.೧೯೪     

ಬಹಳವಾಗಿರುವ  ಅಸ್ತ್ರ-ಶಸ್ತ್ರಗಳನ್ನು ತನ್ನೆಲ್ಲ ಕೈಗಳಿಂದ ಎಸೆಯುತ್ತಾ, ಭೂಮಿಯೆಲ್ಲಾ ವ್ಯಾಪಿಸಿರುವ ಆ ಕಾಲನೇಮಿಯ ಕೈಗಳನ್ನು ಮತ್ತು ಶಿರಸ್ಸುಗಳನ್ನು ಸುದರ್ಶನದಿಂದ ಛೇದಿಸಿದ ನೀನು, ಭೂಮಿಯಲ್ಲಿ ಬಿದ್ದ ದೇಹವುಳ್ಳ ಅವನನ್ನು ಯಮನಿಗೆ ಕೊಟ್ಟೆ.

Tuesday, January 15, 2019

Mahabharata Tatparya Nirnaya Kannada 11.184-11.188


ಜಘ್ನುರ್ಗ್ಗಿರೀನ್ದ್ರತಳಮುಷ್ಟಿಮಹಾಸ್ತ್ರಶಸ್ತ್ರೈಶ್ಚಕ್ರುರ್ನ್ನದೀಶ್ಚ ರುಧಿರೌಘವಹಾ ಮಹೌಘಮ್ ।
ತತ್ರ ಸ್ಮ ದೇವವೃಷಭೈರಸುರೇಶಚಮ್ವಾ ಯುದ್ಧೇ ನಿಸೂದಿತ ಉತೌಘಬಲೈಃ ಶತಾಂಶಃ ॥೧೧.೧೮೪

ಹೀಗೆ ಸೇರಿದ ದೈತ್ಯ-ದೇವತೆಗಳು ಪರಸ್ಪರ ಬೆಟ್ಟಗಳು, ಕೈತಳ, ಮುಷ್ಠಿ ಮತ್ತು ಅಸ್ತ್ರ-ಶಸ್ತ್ರಗಳಿಂದ ಹೊಡೆದಾಡಿಕೊಂಡರು. ಅವರು ಈ ರೀತಿಯ ಯುದ್ಧದಲ್ಲಿ ರಕ್ತದ ಹೊಳೆಹರಿಸುವ ನದಿಗಳನ್ನು ಮಾಡಿದರು. ಯುದ್ಧದಲ್ಲಿ ದೇವತಾಶ್ರೇಷ್ಠರಿಂದ ದೈತ್ಯರ ಸೈನ್ಯದ ನೂರನೇ ಒಂದು ಭಾಗವು ಕೊಲ್ಲಲ್ಪಟ್ಟಿತು.

ಅಥಾsತ್ಮಸೇನಾಮವಮೃದ್ಯಮಾನಾಂ ವೀಕ್ಷ್ಯಾಸುರಃ ಶಮ್ಬರನಾಮಧೇಯಃ ।
ಸಸಾರ ಮಾಯಾವಿದಸಹ್ಯ̐ಮಾಯೋ ವರಾದುಮೇಶಸ್ಯ ಸುರಾನ್ ವಿಮೋಹಯನ್ ॥೧೧.೧೮೫

ತದನಂತರ, ಕೊಲ್ಲಲ್ಪಡುತ್ತಿರುವ ತನ್ನ ಸೇನೆಯನ್ನು ಕಂಡು, ಮಾಯಾವಿದ್ಯೆಯನ್ನು ಬಲ್ಲವನಾದ ‘ಶಂಬರ’ ಎಂಬ ಹೆಸರುಳ್ಳ ಅಸುರನು, ಯಾರಿಗೂ ತಡೆಯಲಾಗದ ಕಣ್ಕಟ್ಟುವಿದ್ಯೆಯನ್ನು ಹೊಂದಿದವನಾಗಿ, ರುದ್ರನ ವರದಿಂದ ದೇವತೆಗಳನ್ನು ಪ್ರಜ್ಞೆತಪ್ಪುವಂತೆ ಮಾಡುತ್ತಾ ಯುದ್ಧಕ್ಕೆ ಬಂದನು. 

ಮಾಯಾಸಹಸ್ರೇಣ ಸುರಾಃ ಸಮರ್ದ್ದಿತಾ ರಣೇ ವಿಷೇದುಃ ಶಶಿಸೂರ್ಯ್ಯಮುಖ್ಯಾಃ ।
ತಾನ್ ವಿಕ್ಷ್ಯ ವಜ್ರೀ ಪರಮಾಂ ತು ವಿದ್ಯಾಂ ಸ್ವಯಮ್ಭುದತ್ತಾಮ್ ಪ್ರಯುಯೋಜ ವೈಷ್ಣವೀಮ್೧೧.೧೮೬

ಸಾವಿರಾರು ಮಾಯೆಗಳಿಂದ ಚಂದ್ರ, ಸೂರ್ಯ, ಮೊದಲಾದ ದೇವತೆಗಳು ಪೀಡಿತರಾಗಿ ಯುದ್ಧದಲ್ಲಿ ಆಯಾಸಗೊಂಡರು(ದುಃಖಗೊಂಡರು). ಅವರೆಲ್ಲರನ್ನು ನೋಡಿ ಇಂದ್ರನು ಬ್ರಹ್ಮದೇವರು ತನಗೆ ಕೊಟ್ಟ ವಿಷ್ಟುದೇವತಾಕವಾದ ಪರಮವಿದ್ಯೆಯನ್ನು(ವೈಷ್ಣವೀ ಮಾಯೆಯನ್ನು) ಶಂಬರನ ಮೇಲೆ ಪ್ರಯೋಗಿಸಿದನು.

ಸಮಸ್ತಮಾಯಾಪಹಯಾ ತಯೈವ ವರಾದ್ ರಮೇಶಸ್ಯ ಸದಾsಪ್ಯಸ̐ಹ್ಯಯಾ ।
ಮಾಯಾ ವಿನೇಶುರ್ದ್ದಿತಿಜೇನ್ದ್ರಸೃಷ್ಟಾ ವಾರೀಶವಹ್ನೀನ್ದುಮುಖಾಶ್ಚ ಮೋಚಿತಾಃ ॥೧೧.೧೮೭

ಎಲ್ಲಾ ಮಾಯೆಗಳನ್ನು ನಾಶಮಾಡುವ ಆ ವಿದ್ಯೆಯಿಂದ ಮತ್ತು ನಿನ್ನ ವರದಿಂದ, ಶಂಬರಾಸುರ ಸೃಷ್ಟಿಮಾಡಿದ್ದ ಮಾಯೆಯು ನಾಶವಾಯಿತು. ಹೀಗೆ ವರುಣ, ಅಗ್ನಿ, ಚಂದ್ರ, ಮೊದಲಾದ ದೇವತೆಗಳು ಇಂದ್ರನ ಕಾರಣದಿಂದ ಬಿಡುಗಡೆ ಮಾಡಲ್ಪಟ್ಟರು.

ಯಮೇನ್ದುಸೂರ್ಯ್ಯಾದಿಸುರಾಸ್ತತೋsಸುರಾನ್ ನಿಜಘ್ನುರಾಪ್ಯಾಯಿತವಿಕ್ರಮಾಸ್ತದಾ ।
ಸುರೇಶ್ವರೇಣೋರ್ಜ್ಜಿತಪೌರುಷಾ ಬಹೂನ್ ವಜ್ರೇಣ ವಜ್ರೀ ನಿಜಘಾನ ಶಮ್ಬರಮ್ ॥೧೧.೧೮೮

ತದನಂತರ ಯಮ, ಚಂದ್ರ, ಸೂರ್ಯ ಮೊದಲಾದ ಎಲ್ಲಾ ದೇವತೆಗಳು ತಮ್ಮ ಬಲವನ್ನು ಮರಳಿ ಪಡೆದು, ದೇವೆಂದ್ರನಿಂದ ವರ್ದಿತ ಬಲವುಳ್ಳವರಾಗಿ ಅನೇಕ ಅಸುರರನ್ನು ಕೊಂದರು. ಇಂದ್ರನು  ತನ್ನ ವಜ್ರದಿಂದ ಶಂಬರಾಸುರನನ್ನು ಕೊಂದನು.

Mahabharata Tatparya Nirnaya Kannada 11.179-11.183


ಏತಸ್ಮಿನ್ನೇವ ಕಾಲೇ ಕಮಲಭವಶಿವಾಗ್ರೇಸರಾಃ ಶಕ್ರಪೂರ್ವಾ
ಭೂಮ್ಯಾ ಪಾಪಾತ್ಮದೈತ್ಯೈರ್ಭುವಿ ಕೃತನಿಲಯೈರಾಕ್ರಮಂ ಚಾಸಹನ್ತ್ಯಾ ।
ಈಯುರ್ದ್ದೇವಾದಿದೇವಂ ಶರಣಮಜಮುರುಂ ಪೂರ್ಣ್ಣಷಾಡ್ಗುಣ್ಯಮೂರ್ತ್ತಿಂ
ಕ್ಷೀರಾಬ್ಧೌ ನಾಗಭೋಗೇ ಶಯಿತಮನುಪಮಾನನ್ದಸನ್ದೋಹದೇಹಮ್೧೧.೧೭೯

ಇದೇ ಕಾಲದಲ್ಲಿ,  ಭೂಮಿಯಲ್ಲಿ ವಾಸಮಾಡುತ್ತಿರುವ ಪಾಪಿಷ್ಠರಾದ ದೈತ್ಯರ ಆಕ್ರಮಣವನ್ನು ಸಹಿಸಲಾಗದ ಭೂದೇವಿಯೊಂದಿಗೆ, ಬ್ರಹ್ಮ, ಶಿವ, ಇವರನ್ನೇ ಮುಂದಿಟ್ಟುಕೊಂಡ ಇಂದ್ರ ಮೊದಲಾದ ದೇವತೆಗಳು, ದೇವತೆಗಳಿಗೂ ದೇವನಾಗಿರುವ, ಗುಣಪೂರ್ಣನಾದ, ಷಡ್ಗುಣಗಳೇ ಮೈವೆತ್ತುಬಂದ, ಕ್ಷೀರಸಮುದ್ರದಲ್ಲಿ ಶೇಷಶಯ್ಯೆಯಲ್ಲಿರುವ, ಆನಂದವೇ ಮೈವೆತ್ತುಬಂದ ನಾರಾಯಣನನ್ನು ಮೊರೆಹೊಂದಿದರು.  (ಎಲ್ಲಾ ದೇವತೆಗಳು ಭೂದೇವಿಯೊಂದಿಗೆ ಕೂಡಿಕೊಂಡು ಕ್ಷೀರಸಮುದ್ರದಲ್ಲಿರುವ ನಾರಾಯಣನನ್ನು ಸ್ತೋತ್ರಮಾಡಿದರು)

ಊಚುಃ ಪರಂ ಪುರುಷಮೇನಮನನ್ತಶಕ್ತಿಂ ಸೂಕ್ತೇನ ತೇsಬ್ಜಜಮುಖಾ ಅಪಿ ಪೌರುಷೇಣ ।
ಸ್ತುತ್ವಾ ಧರಾsಸುರವರಾಕ್ರಮಣಾತ್ ಪರೇಶ ಖಿನ್ನಾ ಯತೋ ಹಿ ವಿಮುಖಾಸ್ತವ ತೇsತಿಪಾಪಾಃ ೧೧.೧೮೦

ಬ್ರಹ್ಮದೇವರೇ ಮೊದಲಾಗಿರುವ ಆ ದೇವತೆಗಳು, ಅನಂತಶಕ್ತಿಯುಳ್ಳ ಪರಮಪುರುಷನಾಗಿರುವ ನಾರಾಯಣನನ್ನು ಪುರುಷಸೂಕ್ತದಿಂದ ಸ್ತೋತ್ರಮಾಡುತ್ತಾ ಹೇಳುತ್ತಾರೆ: ‘ಉತ್ತಮರಿಗೂ ಈಶನಾದವನೇ, ಯಾವ ಕಾರಣದಿಂದ ದೈತ್ಯರು ನಿನ್ನಿಂದ ವಿಮುಖರಾಗಿ ಅತ್ಯಂತ ಪಾಪಿಷ್ಠರಾಗಿದ್ದಾರೋ. ಅಂಥಹ ದೈತ್ಯಶ್ರೇಷ್ಟರ ಆಕ್ರಮಣದಿಂದ ಭೂಮಿಯು ಕಥಿ(ದುಃಖ)ಗೊಂಡಿದ್ದಾಳೆ’ ಎಂದು.
[ಭಾಗವತದಲ್ಲಿ(೧೦.೧.೧೭;೧೯)ಈಕುರಿತ ವಿವರವನ್ನು ಕಾಣುತ್ತೇವೆ. ರಾಜರೆಂಬ ನೆಪದ ದೈತ್ಯರ ಆಕ್ರಮಣವನ್ನು ಸಹಿಸದ ಭೂದೇವಿ ಬ್ರಹ್ಮದೇವರಲ್ಲಿಗೆ ಹೋಗುತ್ತಾಳೆ.  ನಂತರ ಅವರು ತ್ರಿನಯನನಾದ ರುದ್ರನಿಂದ ಕೂಡಿಕೊಂಡು ಕ್ಷೀರಸಾಗರಕ್ಕೆ  ತೆರಳುತ್ತಾರೆ  ‘ಭೂಮಿರ್ದ್ದೃಪ್ತನೃಪವ್ಯಾಜದೈತ್ಯಾನೀಕಶತಾಯುತೈಃ  ಆಕ್ರಾಂತಾ ಭೂರಿಭಾರೇಣ ಬ್ರಹ್ಮಾಣಂ ಶರಣಂ ಯಯೌ ..... ಬ್ರಹ್ಮಾ ತದುಪಧಾರ್ಯಾಥ ಸಹ ದೇವೈಸ್ತಯಾ ಸಹ ಜಗಾಮ ಸತ್ರಿನಯನಸ್ತೀರಂ ಕ್ಷೀರಪಯೋನಿಧೇಃ’.   ಕ್ಷೀರಸಾಗರದಲ್ಲಿರುವ ಶೇಷಶಯನನನ್ನು ದೇವತೆಗಳು ಪುರುಷಸೂಕ್ತದಿಂದ ಸ್ತೋತ್ರಮಾಡುವುದನ್ನೂ ಭಾಗವತ (೧೦.೧.೨೦) ವಿವರಿಸುತ್ತದೆ:  ...  ‘ಪುರುಷಂ ಪುರುಷಸೂಕ್ತಾದ್ಯೈರೂಪತಸ್ಥೆ ಸಮಾಹಿತಃ’
ದೇವತೆಗಳು ಸ್ತೋತ್ರ ಮಾಡುತ್ತಾ ತಮ್ಮ ನಿವೇದನೆಯನ್ನು ಭಗವಂತನ ಮುಂದಿರಿಸಿದರು. ಅವರ ನಿವೇದನೆಯೂ ಸ್ತೋತ್ರಾತ್ಮಕವಾಗಿರುವುದನ್ನು ನಾವಿಲ್ಲಿ ಕಾಣುತ್ತೇವೆ].

ದುಸ್ಸಙ್ಗತಿರ್ಭವತಿ ಭಾರವದೇವ ದೇವ ನಿತ್ಯಂ ಸತಾಮಪಿ ಹಿ ನಃ ಶೃಣು ವಾಕ್ಯಮೀಶ
ಪೂರ್ವಂ ಹತಾ ದಿತಿಸುತಾ ಭವತಾ ರಣೇಷು  ಹ್ಯಸ್ಮತ್ಪ್ರಿಯಾರ್ತ್ಥಮಧುನಾ ಭುವಿ ತೇSಭಿಜಾತಾಃ ॥೧೧.೧೮೧

ದೇವನೇ, ಸಜ್ಜನರಿಗೆ ಯಾವಾಗಲೂ ದುರ್ಜನರ ಸಮಾಗಮವು ಭಾರವೇ ಆಗುತ್ತದೆ(ದುರ್ಜನರ ಸಂಗಮ ಸಜ್ಜನರಿಗೆ ವಿಪರೀತ ಕಷ್ಟದಾಯಕ). ಓ ಒಡೆಯನೇ, ನಮ್ಮ ವಾಕ್ಯವನ್ನು ಕೇಳು:  ಹಿಂದೆ ನಮಗಾಗಿ, ನಮ್ಮ ಪ್ರೀತಿಗಾಗಿ, ನಿನ್ನಿಂದ ಯುದ್ಧದಲ್ಲಿ ಯಾವ ದಿತಿಯಮಕ್ಕಳು (ದೈತ್ಯರು) ಕೊಲ್ಲಲ್ಪಟ್ಟಿದ್ದರೋ, ಈಗ ಅವರೆಲ್ಲರೂ ಕೂಡಾ ಭೂಮಿಯಲ್ಲಿ ಮತ್ತೆ ಹುಟ್ಟಿದ್ದಾರೆ. 

ಆಸೀತ್ ಪುರಾ ದಿತಿಸುತೈರಮರೋತ್ತಮಾನಾಂ ಸಙ್ಗ್ರಾಮ ಉತ್ತಮಗಜಾಶ್ವರಥದ್ವಿಪದ್ಭಿಃ ।
ಅಕ್ಷೋಹಿಣೀಶತಮಹೌಘಮಹೌಘಮೇವ ಸೈನ್ಯಂ ಸುರಾತ್ಮಕಮಭೂತ್ ಪರಮಾಸ್ತ್ರಯುಕ್ತಮ್ ೧೧.೧೮೨

ಹಿಂದೆ ದೈತ್ಯರಿಗೂ ಮತ್ತು ದೇವತಾಶ್ರೇಷ್ಠರಿಗೂ ಯುದ್ಧವಾಯಿತು. ಆಗ ಉತ್ಕೃಷ್ಟವಾದ ಆನೆ, ಕುದುರೆ, ರಥ, ಕಾಲಾಳುಗಳನ್ನೊಳಗೊಂಡ ನೂರಾರು ಅಕ್ಷೋಹಿಣಿ, ಮಹೌಘಗಳ^ ಮಹೌಘವುಳ್ಳ, ಉತ್ಕೃಷ್ಟವಾದ ಅಸ್ತ್ರದಿಂದ ಕೂಡಿದ ಸೈನ್ಯವು ದೇವತೆಗಳಲ್ಲಿತ್ತು.
[^ಮಹೌಘ ಎನ್ನುವ ಸಂಖ್ಯೆಯ ಕುರಿತಾದ ವಿವರಣೆಯನ್ನು ನಾವು ಈಗಾಗಲೇ ಅಧ್ಯಾಯ ಎಂಟರಲ್ಲಿ (೮.೧೭೯) ವಿವರವಾಗಿ ನೋಡಿದ್ದೇವೆ].

ತಸ್ಮಾನ್ಮಹೌಘಗುಣಮಾಸ ಮಹಾಸುರಾಣಾಂ ಸೈನ್ಯಂ ಶಿಲಾಗಿರಿಮಹಾಸ್ತ್ರಧರಂ ಸುಘೋರಮ್
ತೇಷಾಂ ರಥಾಶ್ಚ ಬಹುನಲ್ವಪರಿಪ್ರಮಾಣಾ ದೇವಾಸುರಪ್ರವರಕಾರ್ಮ್ಮುಕಬಾಣಪೂರ್ಣ್ಣಾಃ
ನಾನಾಮ್ಬರಾಭರಣವೇಷವರಾಯುಧಾಢ್ಯಾ ದೇವಾಸುರಾಃ ಸಸೃಪುರಾಶು ಪರಸ್ಪರಂ ತೇ೧೧.೧೮೩

ದೇವತೆಗಳ ಸೈನ್ಯ ಸಂಖ್ಯೆಗಿಂತ ಮಹೌಘದಿಂದ ಗುಣಿತವಾದ,  ಕಲ್ಲುಗಳು, ಬೆಟ್ಟಗಳು, ಅಸ್ತ್ರಗಳನ್ನು ಧರಿಸಿರುವ, ಅತ್ಯಂತ ಭಯಾನಕವಾಗಿರುವ ಸೈನ್ಯ ದೈತ್ಯರಲ್ಲಿತ್ತು.  ಅವರಲ್ಲಿ ಬಿಲ್ಲು-ಬಾಣಗಳಿಂದ ಕೂಡಿರುವ  ಬಹುನಲ್ವಪರಿಪ್ರಮಾಣವುಳ್ಳ ರಥಗಳಿದ್ದವು. ದೇವತೆಗಳಲ್ಲೂ ಕೂಡಾ ಅದೇರೀತಿಯ ರಥಗಳಿದ್ದವು. ತರತರದ ಬಟ್ಟೆಗಳನ್ನೂ, ಆಭರಣಗಳನ್ನೂ, ವೇಷಗಳನ್ನೂ, ಆಯುಧಗಳನ್ನೂ ಕೂಡಾ ಹೊಂದಿರುವ ದೇವಾಸುರರು ಒಬ್ಬರನೊಬ್ಬರು ಯುದ್ಧಕ್ಕಾಗಿ ಸೇರಿದರು.

Saturday, January 12, 2019

Mahabharata Tatparya Nirnaya Kannada 11.174-11.178

ಪಾಣ್ಡುಸ್ತತೋ ರಾಜ್ಯಭರಂ ನಿಧಾಯ ಜ್ಯೇಷ್ಠೇsನುಜೇ ಚೈವ ವನಂ ಜಗಾಮ
ಪತ್ನೀದ್ವಯೇನಾನುಗತೋ ಬದರ್ಯ್ಯಾಮುವಾಸ ನಾರಾಯಣಪಾಲಿತಾಯಾಮ್ ॥೧೧.೧೭೪ 

ತದನಂತರ ಪಾಂಡುವು, ರಾಜ್ಯಭಾರವನ್ನು ಹಿರಿಯನಾದ ಧೃತರಾಷ್ಟ್ರನಲ್ಲಿ ಮತ್ತು ಕಿರಿಯನಾದ ವಿದುರನಲ್ಲಿಯೂ ಇತ್ತು  ಕಾಡಿಗೆ ತೆರಳಿದನು. ಪತ್ನಿಯರಿಂದ ಹಿಂಬಾಲಿಸಿದವನಾದ ಪಾಂಡುವು, ಧರ್ಮದೇವತೆಯ^ (ಯಮನ) ಮಗನಾದ  ನಾರಾಯಣನ^ ಪಾಲನೆಯಲ್ಲಿರುವ ಬದರಿಯಲ್ಲಿ ವಾಸಮಾಡಿದನು.

ಗೃಹಾಶ್ರಮೇಣೈವ ವನೇ ನಿವಾಸಂ ಕುರ್ವನ್ ಸ ಭೋಗಾನ್ ಬುಭುಜೇ ತಪಶ್ಚ       
ಚಕ್ರೇ ಮುನೀನ್ದ್ರೈಃ ಸಹಿತೋ ಜಗತ್ಪತಿಂ ರಮಾಪತಿಂ ಭಕ್ತಿಯುತೋsಭಿಪೂಜಯನ್ ॥೧೧.೧೭೫

ಅವನು ಗೃಹಸ್ಥಾಶ್ರಮದಿಂದಲೇ ಕಾಡಿನಲ್ಲಿ ವಾಸಮಾಡುತ್ತಾ, ಗೃಹಸ್ಥಾಶ್ರಮಕ್ಕೆ ಯೋಗ್ಯವಾದ ಸಕಲ ಭೋಗಗಳನ್ನೂ ಅನುಭೋಗಿಸಿದನು. ಮುನಿಗಳೊಂದಿಗೆ ಕೂಡಿಕೊಂಡು, ರಮೆಗೂ ಒಡೆಯನಾದ ಬದರೀನಾರಾಯಣನನ್ನು ಭಕ್ತಿಯಿಂದ ಪೂಜಿಸುತ್ತಾ  ತಪಸ್ಸನ್ನಾಚರಿಸಿದನು.   

ಸ ಕಾಮತೋ ಹರಿಣತ್ವಂ ಪ್ರಪನ್ನಂ ದೈವಾದೃಷಿಂ ಗ್ರಾಮ್ಯಕರ್ಮ್ಮಾನುಷಕ್ತಮ್      
ವಿದ್ಧ್ವಾ ಶಾಪಂ ಪ್ರಾಪ ತಸ್ಮಾತ್ ಸ್ತ್ರಿಯಾ ಯುಙ್ಮರಿಷ್ಯಸೀತ್ಯೇವ ಬಭೂವ ಚಾsರ್ತ್ತ ॥೧೧.೧೭೬

ನ್ಯಸಿಷ್ಣುರುಕ್ತಃ ಪೃಥಯಾ ಸ ನೇತಿ ಪ್ರಣಾಮಪೂರ್ವಂ ನ್ಯವಸತ್ ತಥೈವ ।
ತಾಭ್ಯಾಂ ಸಮೇತಃ ಶತಶೃಙ್ಗಪರ್ವತೇ ನಾರಾಯಣಸ್ಯಾsಶ್ರಮಮದ್ಧ್ಯಗೇ ಪುರಃ ॥೧೧.೧೭೭

ಒಮ್ಮೆ ದೈವಸಂಕಲ್ಪದಂತೆ, ಜಿಂಕೆಯ ವೇಷವನ್ನು ತೊಟ್ಟು  ಗ್ರಾಮ್ಯಕರ್ಮ(ಮೈಥುನ/ರತಿಕರ್ಮ)ದಲ್ಲಿ ತೊಡಗಿದ್ದ ಋಷಿಯನ್ನು ಪಾಂಡುವು ತನ್ನ ಬಾಣದಿಂದ  ಹೊಡೆದು,  ಆ ಋಷಿಯಿಂದ,  ‘ಹೆಣ್ಣಿನೊಂದಿಗೆ ಕೂಡಿದಾಗ ನಿನಗೆ ಸಾವು’ ಎಂಬ  ಶಾಪವನ್ನು ಪಡೆದನು. ಈ ಘಟನೆಯಿಂದ ಪಾಂಡು ಬಹಳ ಸಂಕಟಗೊಂಡು ತಾನು ಸನ್ಯಾಸವನ್ನು ತೆಗೆದುಕೊಳ್ಳಬೇಕೆಂಬ ಇಚ್ಛೆಯುಳ್ಳವನಾದನು. ಆದರೆ ಕುಂತಿಯಿಂದ ನಮಸ್ಕಾರಪೂರ್ವಕವಾಗಿ ‘ಸನ್ಯಾಸ ಬೇಡ’  ಎಂದು ಹೇಳಲ್ಪಟ್ಟವನಾಗಿ, ಗೃಹಸ್ಥಾಶ್ರಮಿಯಾಗಿಯೇ, ಶತಶೃಂಗ ಪರ್ವತದ ಮಧ್ಯದಲ್ಲಿರುವ ನಾರಾಯಣಾಶ್ರಮವುಳ್ಳ ಶತಶೃಂಗ ಪ್ರದೇಶದಲ್ಲಿ ಆವಾಸ ಮಾಡಿಕೊಂಡಿದ್ದನು.

ತಪೋ ನಿತಾನ್ತಂ ಸ ಚಚಾರ ತಾಭ್ಯಾಂ ಸಮನ್ವಿತಃ ಕೃಷ್ಣಪದಾಮ್ಬುಜಾಶ್ರಯಃ ।
ತತ್ಸಙ್ಗಪೂತದ್ಯುಸರಿದ್ವರಾಮ್ಭಃ ಸದಾವಗಾಹಾತಿಪವಿತ್ರಿತಾಙ್ಗಃ ॥೧೧.೧೭೮

ಅವನು ತನ್ನಿಬ್ಬರು ಹೆಂಡಂದಿರೊಂದಿಗೆ, ಕೃಷ್ಣನ^ ಪಾದವನ್ನೇ  ಸ್ಮರಣೆ ಮಾಡುತ್ತಾ, ಕೃಷ್ಣನ ಪಾದದ ಸಂಗದಿಂದ ಪವಿತ್ರವಾಗಿರುವ ಗಂಗಾನದಿಯ ಉತ್ಕೃಷ್ಟವಾದ ನೀರಿನಲ್ಲಿ ಯಾವಾಗಲೂ ಸ್ನಾನಮಾಡಿ, ಅತ್ಯಂತ  ಪವಿತ್ರವಾದ ಅಂಗವುಳ್ಳವನಾಗಿ, ನಿರಂತರವಾದ ತಪಸ್ಸನ್ನು ಮಾಡಿಕೊಂಡಿದ್ದನು.    
[^ಸ್ವಾಯಂಭುವಮನುವಿಗೆ ಮೂರು ಹೆಣ್ಣುಮಕ್ಕಳು. ೧. ಆಕೂತಿ; ೨. ದೇವಹೂತಿ ಮತ್ತು ೩. ಪ್ರಸೂತಿ. ಪ್ರಸೂತಿ ಮತ್ತು ದಕ್ಷಪ್ರಜಾಪತಿಯ ದಾಂಪತ್ಯದಲ್ಲಿ ಹತ್ತು ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಕೊನೆಯವಳು ‘ಮೂರ್ತಿ’. ಮೂರ್ತಿಯನ್ನು ಧರ್ಮದೇವತೆ(ಯಮ) ಮದುವೆ ಮಾಡಿಕೊಂಡ. ಅವರ ದಾಂಪತ್ಯದಲ್ಲಿ ನಾಲ್ಕು  ಗಂಡುಮಕ್ಕಳು ಜನಿಸಿದರು. ೧. ನರ; ೨. ನಾರಾಯಣ; ೩. ಹರಿ ಮತ್ತು ೪. ಕೃಷ್ಣ. ಇವರಲ್ಲಿ ನರ ಎಂದರೆ ಶೇಷ. ಶೇಷನಲ್ಲಿ ಭಗವಂತನ ವಿಶೇಷ ಆವೇಶವಿತ್ತು. ಇನ್ನು ಉಳಿದ ಮೂರು ರೂಪಗಳು ಭಗವಂತನ ಅವತಾರಗಳು. ಈ ಮೇಲಿನ ಶ್ಲೋಕಗಳಲ್ಲಿ ನಾರಾಯಣ(ಬದರೀನಾರಾಯಣ) ಮತ್ತು  ಕೃಷ್ಣ ಎಂದು ಉಲ್ಲೇಖಗೊಂಡಿರುವುದು ಧರ್ಮ ಮತ್ತು ಮೂರ್ತಿಯಲ್ಲಿ  ಅವತರಿಸಿಬಂದ ಶ್ರೀಮನ್ನಾರಾಯಣನ ರೂಪಗಳು.]

Mahabharata Tatparya Nirnaya Kannada 11.170-11.173


ನೈಷಾ ವಿರೋಧೇ  ಕುರುಪಾಣ್ಡವಾನಾಂ ತಿಷ್ಠೇದಿತಿ ವ್ಯಾಸ ಉದೀರ್ಣ್ಣಸದ್ಗುಣಃ ।   
ಸ್ವಮಾತರಂ ಸ್ವಾಶ್ರಮಮೇವ ನಿನ್ಯೇ ಸ್ನುಷೇ ಚ ತಸ್ಯಾ ಯಯತುಃ ಸ್ಮ ತಾಮನು ॥೧೧.೧೭೦

ಉತ್ಕೃಷ್ಟವಾದ ಗುಣವುಳ್ಳ ವೇದವ್ಯಾಸರು, ಮುಂದೆ ನಡೆಯಲಿರುವ  ಕೌರವ ಹಾಗು ಪಾಂಡವರ ಕಾಳಗವನ್ನು (ವಿರೋಧ ಪ್ರಾಪ್ತವಾಗುವುದನ್ನು)ತಾಯಿ ಸತ್ಯವತಿ ನೋಡಬಾರದು ಎಂದು(ಹಸ್ತಿನಾವತಿಯಲ್ಲಿ ಆಕೆ ಇರಬಾರದೆಂದು), ಆಕೆಯನ್ನು ತನ್ನ ಆಶ್ರಮಕ್ಕೆ ಕರೆದೊಯ್ದುರು. ಸತ್ಯವತಿಯ ಸೊಸೆಯರಿಬ್ಬರು (ಮತ್ತು ವಿದುರನ ತಾಯಿಯೂ), ಅವಳನ್ನು ಅನುಸರಿಸಿ ತೆರಳಿದರು.

ಸುತೋಕ್ತಮಾರ್ಗ್ಗೇಣ ವಿಚಿನ್ತ್ಯ ತಂ ಹರಿಂ ಸುತಾತ್ಮನಾ ಬ್ರಹ್ಮತಯಾ ಚ ಸಾ ಯಯೌ ।       
ಪರಂ ಪದಂ ವೈಷ್ಣವಮೇವ ಕೃಷ್ಣಪ್ರಸಾದತಃ ಸ್ವರ್ಯ್ಯಯತುಃ ಸ್ನುಷೇ ಚ ॥೧೧.೧೭೧     

ಸತ್ಯವತಿಯು, ಮಗನಾದ ವ್ಯಾಸರಿಂದ ಹೇಳಪಟ್ಟ ರೀತಿಯಿಂದ ನಾರಾಯಣನನ್ನು ಚಿಂತಿಸಿ, ವೇದವ್ಯಾಸರನ್ನು ಪುತ್ರಭಾವದಿಂದಲೂ, ಪರಬ್ರಹ್ಮಭಾವದಿಂದಲೂ ಅನುಸಂಧಾನ ಮಾಡಿ ಧ್ಯಾನಿಸಿ, ವೈಷ್ಣವ ಲೋಕವನ್ನು ಸೇರಿದಳು. ಆಕೆಯ ಸೊಸೆಯಂದಿರೂ ಕೂಡಾ  ನಾರಾಯಣನ ಅನುಗ್ರಹದಿಂದ ಸ್ವರ್ಗಲೋಕವನ್ನು ಹೊಂದಿದರು.

ಮಾತಾ ಚ ಸಾ ವಿದುರಸ್ಯಾsಪ ಲೋಕಂ ವೈರಿಞ್ಚಮನ್ವೇವ ಗತಾsಮ್ಬಿಕಾಂ ಸತೀ ।    
ವ್ಯಾಸಪ್ರಸಾದಾತ್ ಸುತಸದ್ಗುಣೈಶ್ಚ ಕಾಲೇನ ಮುಕ್ತಿಂ ಚ ಜಗಾಮ ಸನ್ಮತಿಃ ॥೧೧.೧೭೨    

ವಿದುರನ ತಾಯಿಯೂ ಕೂಡಾ, ಅಂಬಿಕೆಯನ್ನು ಅನುಸರಿಸಿ ಹೋದವಳಾಗಿ, ವೇದವ್ಯಾಸರ ಅನುಗ್ರಹದಿಂದ ಮತ್ತು  ವಿದುರನ ಸದ್ಗುಣಗಳಿಂದ, ಬ್ರಹ್ಮದೇವರ ಲೋಕವನ್ನು ಸೇರಿದಳು. ಕಾಲಕ್ರಮೇಣ, ಶುದ್ಧವಾದ ಭಗವದ್ಭಕ್ತಿಯುಳ್ಳವಳಾಗಿ ಮುಕ್ತಿಯನ್ನೂ ಸೇರಿದಳು.
[ಮುಕ್ತಿ ಪ್ರಾಪ್ತಿಯಾಗುವುದು ಕಲ್ಪಾಂತ್ಯದಲ್ಲಿ ಚತುರ್ಮುಖನ ಜೊತೆಗೇ. ಆದರೆ ಇಲ್ಲಿ ‘ಮುಕ್ತಿಯನ್ನು ಹೊಂದಿದರು’ ಎಂದು ಹೇಳಲಾಗಿದೆ. ಇದರ ಅರ್ಥ ಇಷ್ಟು: ಮುಕ್ತಿಯೋಗ್ಯರಿಗೆ  ಮುಕ್ತಿಪ್ರಾಪ್ತಿ ಕಲ್ಪಾಂತ್ಯದಲ್ಲೇ. ಮಧ್ಯದಲ್ಲಿ ಮುಕ್ತಿ ಎಂದರೆ: ಪ್ರಾರಾಭ್ದಕರ್ಮದ ಭೋಗಕ್ಕಾಗಿ ಮತ್ತೆ ಹುಟ್ಟದೇ ಇರುವುದು ಎಂದರ್ಥ. ಅಂದರೆ ಕಲ್ಪಾಂತ್ಯದ ತನಕ ತಮಗೆ ಪ್ರಾಪ್ತವಾದ ಊರ್ಧ್ವಲೋಕದಲ್ಲಿದ್ದು , ಕಲ್ಪಾಂತ್ಯದಲ್ಲಿ ಚತುರ್ಮುಖನೊಂದಿಗೆ ಮುಕ್ತಿಯನ್ನು ಪಡೆಯುತ್ತಾರೆ ಎನ್ನುವುದು ತಾತ್ಪರ್ಯ]

ಅಮ್ಬಾಲಿಕಾsಪಿ ಕ್ರಮಯೋಗತೋsಗಾತ್ ಪರಾಂ ಗತಿಂ ನೈವ ತಥಾsಮ್ಬಿಕಾ ಯಯೌ ।
ಯಥಾಯಥಾ ವಿಷ್ಣುಪರಶ್ಚಿದಾತ್ಮಾ ತಥಾತಥಾ ಹ್ಯಸ್ಯ ಗತಿಃ ಪರತ್ರ ॥೧೧.೧೭೩

ಅಮ್ಬಾಲಿಕೆಯೂ ಕೂಡಾ ಕ್ರಮೇಣ ಭಕ್ತಿಯಲ್ಲಿ ಬೆಳೆಯುತ್ತಾ, ವೈಷ್ಣವಲೋಕವನ್ನು ಹೊಂದಿದಳು. ದುರ್ಬುದ್ಧಿಯಾದ  ಅಂಬಿಕೆಯು ಇವರಿಬ್ಬರ ಹಾಗೆ ಈ ಹಂತದಲ್ಲಿ ಪರಮಗತಿಯನ್ನು ಹೊಂದಲಿಲ್ಲ!  ಹೀಗಾಗಲು ಕಾರಣವೇನು ಎನ್ನುವುದನ್ನು ಆಚಾರ್ಯರು ವಿವರಿಸುತ್ತಾ ಹೇಳುತ್ತಾರೆ: ‘ಸಾಧಕರು ಇಲ್ಲಿ ಹೇಗೆಹೇಗೆ ಭಗವಂತನನ್ನು ಉಪಾಸನೆ ಮಾಡುತ್ತಾರೋ, ಹಾಗೆಹಾಗೆ ಮುಂದಿನ ಗತಿಯನ್ನು ಹೊಂದುತ್ತಾರೆ’ ಎಂದು.
[ಅಂಬಿಕೆ ದುರ್ಬುದ್ಧಿಯಿಂದ ಮತ್ತು ವೇದವ್ಯಾಸರ ಮೇಲಿನ ಭಯದಿಂದ, ದಾಸಿಯನ್ನು ನಿಯಮಿಸಿದ್ದುದರಿಂದ ಈ ಹಂತದಲ್ಲಿ ಅವಳಿಗೆ ಪರಮಗತಿ ಪ್ರಾಪ್ತವಾಗಲಿಲ್ಲಾ]