ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, January 10, 2019

Mahabharata Tatparya Nirnaya Kannada 11.167-11.169


ಅಥಾಙ್ಗನಾರತ್ನಮವಾಪ್ಯ ತದ್ ದ್ವಯಂ ಪಾಣ್ಡುಸ್ತು ಭೋಗಾನ್ ಬುಭುಜೇ ಯಥೇಷ್ಟತಃ ।
ಅಪೀಪಲದ್ ಧರ್ಮ್ಮಸಮಾಶ್ರಯೋ ಮಹೀಂ ಜ್ಯೇಷ್ಠಾಪಚಾಯೀ ವಿದುರೋಕ್ತಮಾರ್ಗ್ಗತಃ ೧೧.೧೬೭

ಹೀಗೆ ಕುಂತೀ ಮತ್ತು ಮಾದ್ರೀ ಎನ್ನುವ ಇಬ್ಬರು ಶ್ರೇಷ್ಠರಾದ ಹೆಂಡಂದಿರನ್ನು ಹೊಂದಿದ ಪಾಂಡುವು, ಅವರೊಂದಿಗೆ ಸುಖ-ಭೋಗದಿಂದಿದ್ದನು. ಧರ್ಮವನ್ನು ಆಶ್ರಯಿಸಿಕೊಂಡಿರುವ ಅಣ್ಣ ದೃತರಾಷ್ಟ್ರನನ್ನು ಧನಿಕನನ್ನಾಗಿ ಮಾಡತಕ್ಕ  ಪಾಂಡುವು, ವಿದುರನಿಂದ ಹೇಳಲ್ಪಟ್ಟ ನೀತಿಮಾರ್ಗದಂತೆ ಭೂಮಿಯನ್ನು ಪರಿಪಾಲಿಸಿದನು.  

ಭೀಷ್ಮೋ ಹಿ ರಾಷ್ಟ್ರೇ ಧೃತರಾಷ್ಟ್ರಮೇವ ಸಂಸ್ಥಾಪ್ಯ ಪಾಣ್ಡುಂ ಯುವರಾಜಮೇವ ।
ಚಕ್ರೇ ತಥಾsಪ್ಯನ್ಧ ಇತಿ ಸ್ಮ ರಾಜ್ಯಂ ಚಕಾರ ನಾಸಾವಕರೋಚ್ಚ ಪಾಣ್ಡುಃ ॥೧೧.೧೬೮     

ಭೀಷ್ಮನು ಹಸ್ತಿನಾವತಿಯಲ್ಲಿ ದೃತರಾಷ್ಟ್ರನನ್ನೇ ಇರಿಸಿ (ಆತ ಕುರುಡನಾದ್ದರಿಂದ  ರಾಜ್ಯಭಾರವನ್ನು ಮಾಡುವಂತಿರಲಿಲ್ಲ. ಆದರೂ ಸಹೋದರರಲ್ಲಿ ಒಡಕುಂಟುಮಾಡಬಾರದು ಎಂದು ಆತನನ್ನೇ  ಮಹಾರಾಜನನ್ನಾಗಿ  ಮಾಡಿ), ಪಾಂಡುವನ್ನು ಯುವರಾಜನನ್ನಾಗಿ ಮಾಡಿದನು. ಯುವರಾಜನಾದರೂ ಕೂಡಾ, ಅಣ್ಣ ಕುರುಡನಾದ್ದರಿಂದ(ಕುರುಡ ಎನ್ನುವ ಕಾರಣದಿಂದ ರಾಜ್ಯವನ್ನು ಧೃತರಾಷ್ಟ್ರ ಪರಿಪಾಲಿಸಲಿಲ್ಲವಾದ್ದರಿಂದ)  ರಾಜ್ಯವನ್ನು ಪಾಂಡುವೇ ಪರಿಪಾಲಿಸಿದನು.

ಭೀಷ್ಮಾಮ್ಬಿಕೇಯೋಕ್ತಿಪರಃ ಸದೈವ ಪಾಣ್ಡುಃ ಶಶಾಸಾವನಿಮೇಕವೀರಃ ।    
ಅಥಾsಮ್ಬಿಕೇಯೋ ಬಹುಭಿಶ್ಚ ಯಜ್ಞೈರೀಜೇ ಸಪಾಣ್ಡುಶ್ಚ ಮಹಾಧನೌಘೈಃ ॥೧೧.೧೬೯   

ಪಾಂಡುವು ಭೀಷ್ಮಾಚಾರ್ಯರ ಮತ್ತು ದೃತರಾಷ್ಟ್ರನ ಮಾತನ್ನು ನಡೆಸುತ್ತಾ, ಭೂಮಿಯನ್ನು ಪಾಲಿಸಿಕೊಂಡಿದ್ದನು. ತದನಂತರ ದೃತರಾಷ್ಟ್ರನು ಬಹಳ ಯಜ್ಞಗಳಿಂದ ಭಗವಂತನನ್ನು ಆರಾಧಿಸಿದನು. ಪಾಂಡುವೂ ಕೂಡಾ, ದಿಗ್ವಿಜಯದಿಂದ ಗಳಿಸಿದ ಸಂಪತ್ತಿನಿಂದ ಯಜ್ಞಗಳನ್ನು ಮಾಡಿ, ಭಗವಂತನನ್ನು ಆರಾಧಿಸಿದನು.

No comments:

Post a Comment