ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, January 15, 2019

Mahabharata Tatparya Nirnaya Kannada 11.179-11.183


ಏತಸ್ಮಿನ್ನೇವ ಕಾಲೇ ಕಮಲಭವಶಿವಾಗ್ರೇಸರಾಃ ಶಕ್ರಪೂರ್ವಾ
ಭೂಮ್ಯಾ ಪಾಪಾತ್ಮದೈತ್ಯೈರ್ಭುವಿ ಕೃತನಿಲಯೈರಾಕ್ರಮಂ ಚಾಸಹನ್ತ್ಯಾ ।
ಈಯುರ್ದ್ದೇವಾದಿದೇವಂ ಶರಣಮಜಮುರುಂ ಪೂರ್ಣ್ಣಷಾಡ್ಗುಣ್ಯಮೂರ್ತ್ತಿಂ
ಕ್ಷೀರಾಬ್ಧೌ ನಾಗಭೋಗೇ ಶಯಿತಮನುಪಮಾನನ್ದಸನ್ದೋಹದೇಹಮ್೧೧.೧೭೯

ಇದೇ ಕಾಲದಲ್ಲಿ,  ಭೂಮಿಯಲ್ಲಿ ವಾಸಮಾಡುತ್ತಿರುವ ಪಾಪಿಷ್ಠರಾದ ದೈತ್ಯರ ಆಕ್ರಮಣವನ್ನು ಸಹಿಸಲಾಗದ ಭೂದೇವಿಯೊಂದಿಗೆ, ಬ್ರಹ್ಮ, ಶಿವ, ಇವರನ್ನೇ ಮುಂದಿಟ್ಟುಕೊಂಡ ಇಂದ್ರ ಮೊದಲಾದ ದೇವತೆಗಳು, ದೇವತೆಗಳಿಗೂ ದೇವನಾಗಿರುವ, ಗುಣಪೂರ್ಣನಾದ, ಷಡ್ಗುಣಗಳೇ ಮೈವೆತ್ತುಬಂದ, ಕ್ಷೀರಸಮುದ್ರದಲ್ಲಿ ಶೇಷಶಯ್ಯೆಯಲ್ಲಿರುವ, ಆನಂದವೇ ಮೈವೆತ್ತುಬಂದ ನಾರಾಯಣನನ್ನು ಮೊರೆಹೊಂದಿದರು.  (ಎಲ್ಲಾ ದೇವತೆಗಳು ಭೂದೇವಿಯೊಂದಿಗೆ ಕೂಡಿಕೊಂಡು ಕ್ಷೀರಸಮುದ್ರದಲ್ಲಿರುವ ನಾರಾಯಣನನ್ನು ಸ್ತೋತ್ರಮಾಡಿದರು)

ಊಚುಃ ಪರಂ ಪುರುಷಮೇನಮನನ್ತಶಕ್ತಿಂ ಸೂಕ್ತೇನ ತೇsಬ್ಜಜಮುಖಾ ಅಪಿ ಪೌರುಷೇಣ ।
ಸ್ತುತ್ವಾ ಧರಾsಸುರವರಾಕ್ರಮಣಾತ್ ಪರೇಶ ಖಿನ್ನಾ ಯತೋ ಹಿ ವಿಮುಖಾಸ್ತವ ತೇsತಿಪಾಪಾಃ ೧೧.೧೮೦

ಬ್ರಹ್ಮದೇವರೇ ಮೊದಲಾಗಿರುವ ಆ ದೇವತೆಗಳು, ಅನಂತಶಕ್ತಿಯುಳ್ಳ ಪರಮಪುರುಷನಾಗಿರುವ ನಾರಾಯಣನನ್ನು ಪುರುಷಸೂಕ್ತದಿಂದ ಸ್ತೋತ್ರಮಾಡುತ್ತಾ ಹೇಳುತ್ತಾರೆ: ‘ಉತ್ತಮರಿಗೂ ಈಶನಾದವನೇ, ಯಾವ ಕಾರಣದಿಂದ ದೈತ್ಯರು ನಿನ್ನಿಂದ ವಿಮುಖರಾಗಿ ಅತ್ಯಂತ ಪಾಪಿಷ್ಠರಾಗಿದ್ದಾರೋ. ಅಂಥಹ ದೈತ್ಯಶ್ರೇಷ್ಟರ ಆಕ್ರಮಣದಿಂದ ಭೂಮಿಯು ಕಥಿ(ದುಃಖ)ಗೊಂಡಿದ್ದಾಳೆ’ ಎಂದು.
[ಭಾಗವತದಲ್ಲಿ(೧೦.೧.೧೭;೧೯)ಈಕುರಿತ ವಿವರವನ್ನು ಕಾಣುತ್ತೇವೆ. ರಾಜರೆಂಬ ನೆಪದ ದೈತ್ಯರ ಆಕ್ರಮಣವನ್ನು ಸಹಿಸದ ಭೂದೇವಿ ಬ್ರಹ್ಮದೇವರಲ್ಲಿಗೆ ಹೋಗುತ್ತಾಳೆ.  ನಂತರ ಅವರು ತ್ರಿನಯನನಾದ ರುದ್ರನಿಂದ ಕೂಡಿಕೊಂಡು ಕ್ಷೀರಸಾಗರಕ್ಕೆ  ತೆರಳುತ್ತಾರೆ  ‘ಭೂಮಿರ್ದ್ದೃಪ್ತನೃಪವ್ಯಾಜದೈತ್ಯಾನೀಕಶತಾಯುತೈಃ  ಆಕ್ರಾಂತಾ ಭೂರಿಭಾರೇಣ ಬ್ರಹ್ಮಾಣಂ ಶರಣಂ ಯಯೌ ..... ಬ್ರಹ್ಮಾ ತದುಪಧಾರ್ಯಾಥ ಸಹ ದೇವೈಸ್ತಯಾ ಸಹ ಜಗಾಮ ಸತ್ರಿನಯನಸ್ತೀರಂ ಕ್ಷೀರಪಯೋನಿಧೇಃ’.   ಕ್ಷೀರಸಾಗರದಲ್ಲಿರುವ ಶೇಷಶಯನನನ್ನು ದೇವತೆಗಳು ಪುರುಷಸೂಕ್ತದಿಂದ ಸ್ತೋತ್ರಮಾಡುವುದನ್ನೂ ಭಾಗವತ (೧೦.೧.೨೦) ವಿವರಿಸುತ್ತದೆ:  ...  ‘ಪುರುಷಂ ಪುರುಷಸೂಕ್ತಾದ್ಯೈರೂಪತಸ್ಥೆ ಸಮಾಹಿತಃ’
ದೇವತೆಗಳು ಸ್ತೋತ್ರ ಮಾಡುತ್ತಾ ತಮ್ಮ ನಿವೇದನೆಯನ್ನು ಭಗವಂತನ ಮುಂದಿರಿಸಿದರು. ಅವರ ನಿವೇದನೆಯೂ ಸ್ತೋತ್ರಾತ್ಮಕವಾಗಿರುವುದನ್ನು ನಾವಿಲ್ಲಿ ಕಾಣುತ್ತೇವೆ].

ದುಸ್ಸಙ್ಗತಿರ್ಭವತಿ ಭಾರವದೇವ ದೇವ ನಿತ್ಯಂ ಸತಾಮಪಿ ಹಿ ನಃ ಶೃಣು ವಾಕ್ಯಮೀಶ
ಪೂರ್ವಂ ಹತಾ ದಿತಿಸುತಾ ಭವತಾ ರಣೇಷು  ಹ್ಯಸ್ಮತ್ಪ್ರಿಯಾರ್ತ್ಥಮಧುನಾ ಭುವಿ ತೇSಭಿಜಾತಾಃ ॥೧೧.೧೮೧

ದೇವನೇ, ಸಜ್ಜನರಿಗೆ ಯಾವಾಗಲೂ ದುರ್ಜನರ ಸಮಾಗಮವು ಭಾರವೇ ಆಗುತ್ತದೆ(ದುರ್ಜನರ ಸಂಗಮ ಸಜ್ಜನರಿಗೆ ವಿಪರೀತ ಕಷ್ಟದಾಯಕ). ಓ ಒಡೆಯನೇ, ನಮ್ಮ ವಾಕ್ಯವನ್ನು ಕೇಳು:  ಹಿಂದೆ ನಮಗಾಗಿ, ನಮ್ಮ ಪ್ರೀತಿಗಾಗಿ, ನಿನ್ನಿಂದ ಯುದ್ಧದಲ್ಲಿ ಯಾವ ದಿತಿಯಮಕ್ಕಳು (ದೈತ್ಯರು) ಕೊಲ್ಲಲ್ಪಟ್ಟಿದ್ದರೋ, ಈಗ ಅವರೆಲ್ಲರೂ ಕೂಡಾ ಭೂಮಿಯಲ್ಲಿ ಮತ್ತೆ ಹುಟ್ಟಿದ್ದಾರೆ. 

ಆಸೀತ್ ಪುರಾ ದಿತಿಸುತೈರಮರೋತ್ತಮಾನಾಂ ಸಙ್ಗ್ರಾಮ ಉತ್ತಮಗಜಾಶ್ವರಥದ್ವಿಪದ್ಭಿಃ ।
ಅಕ್ಷೋಹಿಣೀಶತಮಹೌಘಮಹೌಘಮೇವ ಸೈನ್ಯಂ ಸುರಾತ್ಮಕಮಭೂತ್ ಪರಮಾಸ್ತ್ರಯುಕ್ತಮ್ ೧೧.೧೮೨

ಹಿಂದೆ ದೈತ್ಯರಿಗೂ ಮತ್ತು ದೇವತಾಶ್ರೇಷ್ಠರಿಗೂ ಯುದ್ಧವಾಯಿತು. ಆಗ ಉತ್ಕೃಷ್ಟವಾದ ಆನೆ, ಕುದುರೆ, ರಥ, ಕಾಲಾಳುಗಳನ್ನೊಳಗೊಂಡ ನೂರಾರು ಅಕ್ಷೋಹಿಣಿ, ಮಹೌಘಗಳ^ ಮಹೌಘವುಳ್ಳ, ಉತ್ಕೃಷ್ಟವಾದ ಅಸ್ತ್ರದಿಂದ ಕೂಡಿದ ಸೈನ್ಯವು ದೇವತೆಗಳಲ್ಲಿತ್ತು.
[^ಮಹೌಘ ಎನ್ನುವ ಸಂಖ್ಯೆಯ ಕುರಿತಾದ ವಿವರಣೆಯನ್ನು ನಾವು ಈಗಾಗಲೇ ಅಧ್ಯಾಯ ಎಂಟರಲ್ಲಿ (೮.೧೭೯) ವಿವರವಾಗಿ ನೋಡಿದ್ದೇವೆ].

ತಸ್ಮಾನ್ಮಹೌಘಗುಣಮಾಸ ಮಹಾಸುರಾಣಾಂ ಸೈನ್ಯಂ ಶಿಲಾಗಿರಿಮಹಾಸ್ತ್ರಧರಂ ಸುಘೋರಮ್
ತೇಷಾಂ ರಥಾಶ್ಚ ಬಹುನಲ್ವಪರಿಪ್ರಮಾಣಾ ದೇವಾಸುರಪ್ರವರಕಾರ್ಮ್ಮುಕಬಾಣಪೂರ್ಣ್ಣಾಃ
ನಾನಾಮ್ಬರಾಭರಣವೇಷವರಾಯುಧಾಢ್ಯಾ ದೇವಾಸುರಾಃ ಸಸೃಪುರಾಶು ಪರಸ್ಪರಂ ತೇ೧೧.೧೮೩

ದೇವತೆಗಳ ಸೈನ್ಯ ಸಂಖ್ಯೆಗಿಂತ ಮಹೌಘದಿಂದ ಗುಣಿತವಾದ,  ಕಲ್ಲುಗಳು, ಬೆಟ್ಟಗಳು, ಅಸ್ತ್ರಗಳನ್ನು ಧರಿಸಿರುವ, ಅತ್ಯಂತ ಭಯಾನಕವಾಗಿರುವ ಸೈನ್ಯ ದೈತ್ಯರಲ್ಲಿತ್ತು.  ಅವರಲ್ಲಿ ಬಿಲ್ಲು-ಬಾಣಗಳಿಂದ ಕೂಡಿರುವ  ಬಹುನಲ್ವಪರಿಪ್ರಮಾಣವುಳ್ಳ ರಥಗಳಿದ್ದವು. ದೇವತೆಗಳಲ್ಲೂ ಕೂಡಾ ಅದೇರೀತಿಯ ರಥಗಳಿದ್ದವು. ತರತರದ ಬಟ್ಟೆಗಳನ್ನೂ, ಆಭರಣಗಳನ್ನೂ, ವೇಷಗಳನ್ನೂ, ಆಯುಧಗಳನ್ನೂ ಕೂಡಾ ಹೊಂದಿರುವ ದೇವಾಸುರರು ಒಬ್ಬರನೊಬ್ಬರು ಯುದ್ಧಕ್ಕಾಗಿ ಸೇರಿದರು.

No comments:

Post a Comment